‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ

ಮುಸಲ್ಮಾನರಿಗೆ ಸಂಬಂಧಿಸಿದ್ದರಿಂದ ಶಾಸಕಿ ಸನಾ ಮಲಿಕರಿಂದ ಆಕ್ಷೇಪ !

ಮುಂಬಯಿ, ಜೂನ್ 23 (ವಾರ್ತೆ) – ಭಾಜಪದ ನಾಸಿಕದ ಶಾಸಕಿಯಾದ ಸೌ. ದೇವಯಾನಿ ಫರಾಂದೆಯವರು ‘ರಾಜ್ಯದಲ್ಲಿ ತ್ರಿವಳಿ ತಲಾಖ ಮತ್ತು ಬಹುಪತ್ನಿತ್ವ ಪ್ರಕರಣಗಳಿಂದ ಮುಸ್ಲಿಂ ಮಹಿಳೆಯರ ಮೇಲಾಗುತ್ತಿರುವ ಅನ್ಯಾಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂಬ ವಿಷಯದ ಕುರಿತು ವಿಧಾನಸಭೆಯಲ್ಲಿ ಗಮನಸೆಳೆಯುವ ಸೂಚನೆಯನ್ನು ಮಂಡಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರವಾದಿ ಕಾಂಗ್ರೆಸ್ಸಿನ ಅಜಿತ್ ಪವಾರ್ ಬಣದ ಶಾಸಕಿಯಾದ ಸನಾ ಮಲಿಕರವರು ಮಾತನಾಡಿ, ತ್ರಿವಳಿ ತಲಾಖ ಮತ್ತು ಬಹುಪತ್ನಿತ್ವದ ತೊಂದರೆ ಕೇವಲ ಮುಸ್ಲಿಂ ಮಹಿಳೆಯರಿಗಷ್ಟೇ ಅಲ್ಲ, ಇತರ ಧರ್ಮಗಳ ಮಹಿಳೆಯರಿಗೂ ಆಗುತ್ತಿದೆ ಎಂದರು. ಇದಕ್ಕೆ ಮೈತ್ರಿಕೂಟದ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರೆ, ಕಾಂಗ್ರೆಸ್ ಮತ್ತು ಶರದ ಪವಾರ ಬಣದ ಶಾಸಕರು ಸನಾ ಮಲಿಕ ರವರ ಮಾತನ್ನು ಬೆಂಬಲಿಸಿ, ಅವರಿಗೆ ಮಾತನಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಇದರಿಂದಾಗಿ ಸದನದಲ್ಲಿ ಭಾರಿ ಗದ್ದಲ ಉಂಟಾಯಿತು.

1. ಗಮನಸೆಳೆಯುವ ಸೂಚನೆಯಲ್ಲಿ ಶಾಸಕಿ ಸೌ. ದೇವಯಾನಿ ಫರಾಂದೆಯವರು ಮಾತನಾಡಿ, ನಾಸಿಕ್‌ ನ ಶಬಾನಾ ಶಬುದ್ದೀನ್ ಖಾನ್ ಎಂಬ ಮಹಿಳೆಗೆ ತಲಾಖ್ ನೀಡಲು ಆಕೆಯ ಪತಿ ಕೊಲೆ ಬೆದರಿಕೆ ಹಾಕಿರುವ ಘಟನೆಯನ್ನು ಸದನದ ಗಮನಕ್ಕೆ ತಂದರು.

2. ‘ಪಾಕಿಸ್ತಾನದಂತಹ ಇಸ್ಲಾಮಿಕ್ ರಾಷ್ಟ್ರದಲ್ಲೇ ಬಹುಪತ್ನಿತ್ವದ ಮೇಲೆ ನಿರ್ಬಂಧವಿರುವಾಗ, ಇಂತಹ ಆಚರಣೆಗಳು ಭಾರತದಲ್ಲಿ ಹೇಗೆ ನಡೆಯುತ್ತಿವೆ?’ ಎಂದು ಅವರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸನಾ ಮಲಿಕ್, ಪಾಕಿಸ್ತಾನವು ಕುರಾನ್‌ ನಲ್ಲಿ ಹೇಳಿರುವಂತೆ ಕ್ರಮ ಕೈಗೊಂಡಿದೆ. ಭಾರತದಲ್ಲೂ ಕುರಾನ್ ಪ್ರಕಾರವೇ ಕ್ರಮ ಕೈಗೊಳ್ಳಬೇಕು ಎಂದರು.

3. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಭಾಜಪ ಶಾಸಕರಾದ ಅತುಲ ಭಾತಖಳಕರ, ಸದನದಲ್ಲಿ ಕುರಾನ್ ಬಗ್ಗೆ ಮಾಹಿತಿ ನೀಡುವ ಅಗತ್ಯವಿಲ್ಲ. ದೇಶವು ಸಂವಿಧಾನದ ಅನುಸಾರ ನಡೆಯುತ್ತದೆ ಎಂದರು. ಭಾಜಪ ಸಚಿವರಾದ ನಿತೇಶ ರಾಣೆಯವರು, ಕುರಾನ್ ಪ್ರಕಾರವೇ ನಡೆಯಬೇಕೆಂದಿದ್ದರೆ ಪಾಕಿಸ್ತಾನಕ್ಕೆ ಹೋಗಿ ಎಂದು ಕಠಿಣ ಶಬ್ದಗಳಲ್ಲಿ ತರಾಟೆಗೆ ತೆಗೆದುಕೊಂಡರು.

ತ್ರಿವಳಿ ತಲಾಖ್ ಪ್ರಕರಣಗಳು ಮುಸಲ್ಮಾನರಿಗೆ ಸಂಬಂಧಿಸಿದೆ!

2024 ರಲ್ಲಿ ಮಹಾರಾಷ್ಟ್ರದಲ್ಲಿ ತ್ರಿವಳಿ ತಲಾಖ ವಿಷಯವಾಗಿ 42 ಪ್ರಕರಣಗಳು ದಾಖಲಾಗಿದ್ದು, ಇವೆಲ್ಲವೂ ತನಿಖೆಯಲ್ಲಿ ಸತ್ಯ ಎಂದು ಕಂಡುಬಂದಿದೆ. ಈ ಪ್ರಕರಣಗಳಲ್ಲಿ 152 ಜನರನ್ನು ಬಂಧಿಸಲಾಗಿದೆ. 2025 ರಲ್ಲಿ 39 ಪ್ರಕರಣಗಳು ದಾಖಲಾಗಿದ್ದು, 95 ಜನರನ್ನು ಬಂಧಿಸಲಾಗಿದೆ. ತ್ರಿವಳಿ ತಲಾಖ ಪ್ರಕರಣಗಳು ಇತರ ಧರ್ಮಗಳಲ್ಲಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ ಶಾಸಕ ಯೋಗೇಶ ಕದಮ, ದಾಖಲಾಗಿರುವ ಎಲ್ಲಾ ಪ್ರಕರಣಗಳು ಮುಸಲ್ಮಾನರಿಗೆ ಸಂಬಂಧಪಟ್ಟವು ಎಂಬುದನ್ನು ಅಂಕಿ-ಅಂಶಗಳ ಸಹಿತ ವಿವರಿಸಿದರು.

ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧದ ಕ್ರಮವನ್ನು ಧರ್ಮಕ್ಕೆ ಜೋಡಿಸಬೇಡಿ ! – ಶಾಸಕ ಸುಧೀರ ಮುನಗಂಟಿವಾರ, ಭಾಜಪ

ಛತ್ರಪತಿ ಶಿವಾಜಿ ಮಹಾರಾಜರು ನಮಗೆ ಎಲ್ಲಾ ಧರ್ಮಗಳ ಮಹಿಳೆಯರನ್ನು ಗೌರವಿಸಲು ಕಲಿಸಿದ್ದಾರೆ. ಆದ್ದರಿಂದ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವ ಕ್ರಮವನ್ನು ಧರ್ಮದೊಂದಿಗೆ ಜೋಡಿಸಬೇಡಿ. ಸನಾ ಮಲಿಕ ರವರ ಈ ಹೇಳಿಕೆಯನ್ನು ಸದನದ ಕಲಾಪದಿಂದ ತೆಗೆದುಹಾಕಬೇಕು. ಹಿಂದೂ ಧರ್ಮದಲ್ಲೂ ಮಹಿಳೆಯರ ಮೇಲೆ ದೌರ್ಜನ್ಯವಾದರೆ ಶಿಕ್ಷೆಯಾಗಲೇಬೇಕು ಎಂದು ಶಾಸಕ ಸುಧೀರ ಮುನಗಂಟಿವಾರ ರವರು ಸನಾ ಮಲಿಕರವರ ಹೇಳಿಕೆಯನ್ನು ಖಂಡಿಸಿದರು.
ಚರ್ಚೆಯ ಕೊನೆಯಲ್ಲಿ ರಾಜ್ಯ ಗೃಹ ಸಚಿವರಾದ ಯೋಗೇಶ ಕದಮರವರು ಮಾತನಾಡಿ, ನಾವು ಯಾವುದೇ ಧರ್ಮವನ್ನು ದ್ವೇಷಿಸುವುದಿಲ್ಲ. ಛತ್ರಪತಿ ಶಿವಾಜಿ ಮಹಾರಾಜರು ನಮಗೆ ಎಲ್ಲಾ ಧರ್ಮಗಳನ್ನು ಗೌರವಿಸಲು ಕಲಿಸಿದ್ದಾರೆ. ಆದರೆ ಮಹಿಳೆಯರ ಹಕ್ಕುಗಳ ರಕ್ಷಣೆಗೆ ಸರಕಾರ ಬದ್ಧವಾಗಿದೆ ಎಂದು ಹೇಳಿದರು.