ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್‌ಶಾಸ್ತ್ರಿ ದವೆ : Declare Cow Mother of Nation

'ಈಕ್ವಲ್ ರೈಟ್ ಫಾರ್ ಹಿಂದೂಸ್' ವತಿಯಿಂದ ಸಭೆಯ ಆಯೋಜನೆ

ಎಡದಿಂದ ಶ್ರೀ. ರಾಜಕುಮಾರ್ ಜಾಜು, ಮಾತನಾಡುತ್ತಿರುವ ಪೂ. ಕಿಶೋರ್‌ಶಾಸ್ತ್ರಿ ದವೆ, ಶ್ರೀ. ಎಂ. ನಾಗೇಶ್ವರ ರಾವ್ ಮತ್ತು ಅಧಿವಕ್ತ ಶಿಲ್ಪನ್ ಗಾವ್ಕರ್

ಮುಂಬಯಿ – ಇದುವರೆಗೆ ಹಸುವಿನ ಮೇಲೆ ಅನೇಕ ಬಾರಿ ಸಂಶೋಧನೆಗಳು ನಡೆದಿವೆ ಮತ್ತು ಮುಂದೆಯೂ ನಡೆಯುತ್ತಿರುತ್ತವೆ. ದೇವತೆಗಳು ಮತ್ತು ಋಷಿ-ಮುನಿಗಳೂ ಹಸುವಿನ ಮಹಿಮೆಯನ್ನು ಬಣ್ಣಿಸಿದ್ದಾರೆ. ಬ್ರಿಟಿಷರು ಹಸುವಿನ ಕೊಬ್ಬನ್ನು ಕಾರ್ಟ್ರಿಜ್‌ಗಳಲ್ಲಿ (ಗುಂಡುಗಳಲ್ಲಿ) ಬಳಸಲಿದ್ದರು; ಅದಕ್ಕಾಗಿ ಕ್ರಾಂತಿಕಾರಿ ಮಂಗಲ ಪಾಂಡೆ ಅವರು ಬಲಿದಾನ ನೀಡಿದರು. 1966 ರಲ್ಲಿ ಪ. ಪೂ. ಕರಪಾತ್ರಿ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಗೋರಕ್ಷಾ ಆಂದೋಲನದಲ್ಲಿ ಅನೇಕ ಸಂತರು ಮತ್ತು ಗೋರಕ್ಷಕರು ಬಲಿದಾನ ನೀಡಿದರು. ‘ಹಸುವಿನ ಹತ್ಯೆ ಮಾಡುವವರ ಜೊತೆಗೆ ಅದನ್ನು ಬೆಂಬಲಿಸುವವರಿಗೂ ಪಾಪ ತಗಲುತ್ತದೆ’ ಎಂದು ವೇದಗಳಲ್ಲಿ ಹೇಳಲಾಗಿದೆ; ಆದರೆ ಇಂದು ದಿನಕ್ಕೆ 70 ರಿಂದ 80 ಸಾವಿರ ಹಸುಗಳ ಹತ್ಯೆಯಾಗುತ್ತಿದೆ. 2014 ರಲ್ಲಿ ಗೋಮಾಂಸ ರಫ್ತಿನಲ್ಲಿ ಭಾರತ 9ನೇ ಸ್ಥಾನದಲ್ಲಿತ್ತು. ಈಗ ಬ್ರೆಜಿಲ್ ನಂತರ ಎರಡನೇ ಸ್ಥಾನದಲ್ಲಿದೆ. ಆದ್ದರಿಂದ ಕೂಡಲೇ ಹಸುವನ್ನು ‘ರಾಷ್ಟ್ರಮಾತೆ’ ಎಂದು ಘೋಷಿಸಿ, ಹಾಗೆಯೇ ಗೋಹತ್ಯಾ ನಿಷೇಧ, ಗೋಸಂರಕ್ಷಣೆ ಮತ್ತು ಗೋಪ್ರತಿಷ್ಠೆಯನ್ನು ಮಾಡಿ ಎಂದು ಪೂ. ಕಿಶೋರ್‌ಶಾಸ್ತ್ರಿ ದವೆ ಕರೆ ನೀಡಿದರು.

ಅವರು ಬೊರಿವಲಿಯಲ್ಲಿ ‘ಈಕ್ವಲ್ ರೈಟ್ ಫಾರ್ ಹಿಂದೂಸ್’ (Equal Right for Hindus) ವತಿಯಿಂದ ಇತ್ತೀಚೆಗೆ ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಕೇಂದ್ರ ತನಿಖಾ ದಳದ (ಸಿಬಿಐ) ಮಾಜಿ ನಿರ್ದೇಶಕ ಶ್ರೀ. ಎಂ. ನಾಗೇಶ್ವರ ರಾವ್, ‘ಸ್ವಸ್ತಿಶ್ರೀ ತ್ರಿವೇಣಿ ಫೌಂಡೇಶನ್’ನ ಶ್ರೀ. ರಾಜಕುಮಾರ್ ಜಾಜು ಮತ್ತು ನ್ಯಾಯವಾದಿ ಶಿಲ್ಪನ್ ಗಾವಂಕರ್ ಅವರು ಸಹ ಉಪಸ್ಥಿತರನ್ನು ಉದ್ದೇಶಿಸಿ ಮಾತನಾಡಿದರು. ಲೇಖಕಿ ಮತ್ತು ‘ಈಕ್ವಲ್ ರೈಟ್ ಫಾರ್ ಹಿಂದೂಸ್’ನ ಸಂಸ್ಥಾಪಕಿ ಸೌ. ರತಿ ಹೆಗ್ಡೆ ಅವರೊಂದಿಗೆ ಅವರ ಸಹೋದ್ಯೋಗಿಗಳು ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಗೋರಕ್ಷಕರು ಮತ್ತು ಹಿಂದೂ ಧರ್ಮಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಹಿಂದೂಗಳ ದೇವಾಲಯಗಳು ಸರಕಾರಮುಕ್ತವಾಗಬೇಕು! – ಎಂ. ನಾಗೇಶ್ವರ ರಾವ್, ಮಾಜಿ ನಿರ್ದೇಶಕ, ಸಿಬಿಐ

‘ಸಿಬಿಐ’ನ ಮಾಜಿ ನಿರ್ದೇಶಕ ಎಂ. ನಾಗೇಶ್ವರ ರಾವ್ ಅವರು ಸತ್ಯಶೋಧನಾ ವರದಿಯನ್ನು ಮಂಡಿಸಿದರು. ಅವರು, “ಭಾರತ ದೇಶವು ಮಾಂಸ ರಫ್ತಿನಲ್ಲಿ ಮುಂಚೂಣಿಗೆ ಬರುತ್ತಿದ್ದು, ಹೊರಗಿನವರಿಗೆ ಮಾಂಸ ತಿನ್ನಿಸುವುದೇ ಸರಕಾರದ ಉದ್ದೇಶ ಎಂದು ಕಾಣಿಸುತ್ತಿದೆ. ಪ್ರಸ್ತುತ ದೇಶಾದ್ಯಂತ 2 ಲಕ್ಷ ದೇವಾಲಯಗಳು ಸರಕಾರದ ವಶದಲ್ಲಿವೆ; ಆದರೆ ಚರ್ಚ್ ಮತ್ತು ಮಸೀದಿಗಳನ್ನು ಸರಕಾರ ವಶಕ್ಕೆ ತೆಗೆದುಕೊಂಡಿಲ್ಲ. ನಮ್ಮ ದೇವಾಲಯಗಳು ಮುಕ್ತವಾಗಬೇಕು” ಎಂದರು.

ಗೋರಕ್ಷಣೆಗಾಗಿ ಎಲ್ಲರೂ ಮುಂದಾಗಬೇಕು! – ರಾಜಕುಮಾರ್ ಜಾಜು, ಸ್ವಸ್ತಿಶ್ರೀ ತ್ರಿವೇಣಿ ಫೌಂಡೇಶನ್

ಸನಾತನ ಧರ್ಮವು ಪ್ರಾಚೀನವಾದುದು. ಸನಾತನ ಧರ್ಮದ ಮೇಲೆ ಮೊಘಲರು, ಬ್ರಿಟಿಷರು ಮುಂತಾದ ಎಲ್ಲರೂ ಅನೇಕ ಆಕ್ರಮಣಗಳನ್ನು ಮಾಡಿದರು; ಆದರೆ ಸನಾತನ ಧರ್ಮವು ಇಂದಿಗೂ ಉಳಿದುಕೊಂಡಿದೆ. ಬ್ರಿಟಿಷರು ಜಾತಿಭೇದವನ್ನು ನಿರ್ಮಿಸಿ ವಿಭಜನೆ ಮಾಡಿದರು. ಹಿಂದೆ ಋಷಿ-ಮುನಿಗಳಿಗೆ ರಾಜಾಶ್ರಯವಿತ್ತು. ಹಿಂದಿನ ಯುಗದಲ್ಲಿ ರಾಜರ ಬಳಿ ಹಸುಗಳ ಹಿಂಡುಗಳಿದ್ದವು. ಈಗ ಗೋಮಾತೆಯು ಸಂಕಟದಲ್ಲಿದೆ, ಗೋರಕ್ಷಣೆಗಾಗಿ ಎಲ್ಲರೂ ಮುಂದೆ ಬರಬೇಕು.

‘ಮಹಾರಾಷ್ಟ್ರ ದೇವಸ್ಥಾನ ಇನಾಮ್ ನಿರ್ಮೂಲನ ಕರಡನ್ನು’ ವಿರೋಧಿಸಿ! – ನ್ಯಾಯವಾದಿ ಶಿಲ್ಪನ್ ಗಾವಂಕರ್

ಮಹಾರಾಷ್ಟ್ರ ಸರಕಾರವು ಪ್ರಸ್ತಾಪಿಸಿದ್ದ ‘ಮಹಾರಾಷ್ಟ್ರ ದೇವಸ್ಥಾನ ಇನಾಮ್ ನಿರ್ಮೂಲನ ಕರಡು 2026’ ಅನ್ನು ಇತ್ತೀಚೆಗೆ ಮುಂದೂಡಲಾಗಿದೆ. ಈ ಕಾನೂನಿಗೆ ದೇವಾಲಯದ ಟ್ರಸ್ಟಿಗಳು ಮತ್ತು ದೇವಾಲಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಂದ ವಿರೋಧ ವ್ಯಕ್ತವಾದ ಕಾರಣ ಸರಕಾರ ಈ ನಿರ್ಧಾರ ತೆಗೆದುಕೊಂಡಿತು. ಕೇವಲ ಹಿಂದೂಗಳ ದೇವಸ್ಥಾನಗಳ ನಾಲ್ಕೂವರೆ ಲಕ್ಷ ಹೆಕ್ಟೇರ್ ಇನಾಮ್ ಭೂಮಿಯನ್ನು ವಶಪಡಿಸಿಕೊಳ್ಳುವುದು ಸರಕಾರದ ಉದ್ದೇಶವಾಗಿತ್ತು; ಇತರ ಧರ್ಮೀಯರನ್ನು ಈ ಕಾನೂನಿನಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲಾಗಿತ್ತು. ಭವಿಷ್ಯದಲ್ಲಿಯೂ ಸರಕಾರ ಈ ಕಾನೂನಿನ ಕರಡನ್ನು ತರಬಹುದು. ದೇವಾಲಯದ ಟ್ರಸ್ಟಿಗಳು ಮತ್ತು ಹಿಂದೂ ಸಂಘಟನೆಗಳು ಜಾಗರೂಕರಾಗಿರಬೇಕು ಮತ್ತು ಪ್ರಸ್ತಾಪಿತ ಕಾನೂನು ದೇವಾಲಯಗಳ ಜಾಗವನ್ನು ಕಬಳಿಸುವಂತಿದ್ದರೆ ತೀವ್ರ ವಿರೋಧ ವ್ಯಕ್ತಪಡಿಸಬೇಕು.