ವರ್ಷ ೨೦೨೬ ರಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಹೇಳಿದ ಭಗವಾನ ಶ್ರೀರಾಮನ ಉಪಾಸನೆಯ ಕಾಲಾನುಸಾರ ಮಹತ್ವ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

’ವರ್ಷ ೨೦೨೬ ರ ಮಹಾಶಿವರಾತ್ರಿಯಿಂದ, ಅಂದರೆ ೧೫.೨.೨೦೨೬ ರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಶ್ರೀರಾಮನ ಉಪಾಸನೆ (ನಾಮಜಪ, ಸ್ತೋತ್ರಪಠಣ ಇತ್ಯಾದಿ) ಮಾಡಲು ಹೇಳಿದ್ದಾರೆ. ಈ ಕುರಿತು ಸೂಕ್ಷ  ಜ್ಞಾನದಿಂದ ಲಭಿಸಿದ ಮಾಹಿತಿಯನ್ನು ಮುಂದೆ ನೀಡಲಾಗಿದೆ.’

೧. ದೊಡ್ಡ ಕೆಟ್ಟ ಶಕ್ತಿಗಳೊಂದಿಗೆ ಯುದ್ಧ ಮಾಡಲು ಶ್ರೀಕೃಷ್ಣನ ಉಪಾಸನೆ ಹಾಗೂ ಸಮಷ್ಟಿ ಪ್ರಾರಬ್ಧವನ್ನು ಅನುಭವಿಸಲು ಶ್ರೀರಾಮನ ಉಪಾಸನೆಯು ಪೂರಕವಾಗಿರುವುದು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಉನ್ನತ ಆಧ್ಯಾತ್ಮಿಕ ಮಟ್ಟದ ಸಮಷ್ಟಿ ಸಂತರಾಗಿದ್ದಾರೆ. ಸಮಷ್ಟಿ ಸಂತರು ಸಾಧನೆ ಮಾಡುವ ಸಮಾಜಕ್ಕೆ ಕಾಲಕ್ಕನುಸಾರ ಸಾಧನೆಯ ಮಾರ್ಗದರ್ಶನ ನೀಡುತ್ತಾರೆ.

೧ ಅ. ವರ್ಷ ೨೦೦೧ ರಿಂದ ೨೦೨೫ ರ ವರೆಗೆ ದೊಡ್ಡ ಕೆಟ್ಟ ಶಕ್ತಿಗಳ ವಿರುದ್ಧ ಹೋರಾಡುವುದು ಆದ್ಯತೆಯಾಗಿದ್ದರಿಂದ ಶ್ರೀಕೃಷ್ಣನ ಉಪಾಸನೆ ಅಗತ್ಯವಾಗಿತ್ತು : ಹಿಂದೂ ರಾಷ್ಟ್ರದ (ರಾಮರಾಜ್ಯದ) ಸ್ಥಾಪನೆಯ ಕಾರ್ಯದಲ್ಲಿ ೨೦೦೧ ರಿಂದ ೨೦೨೫ ರ ವರೆಗೆ ಎದುರಾಗುವ ವಿವಿಧ ಅಡೆತಡೆಗಳಲ್ಲಿ ದೊಡ್ಡ ಕೆಟ್ಟ ಶಕ್ತಿಗಳ ತೊಂದರೆಗಳಿಂದ ನಿರ್ಮಾಣವಾಗುವ ಅಡೆತಡೆಗಳಲ್ಲಿ ಶೇ. ೬೫ ರಷ್ಟಿದ್ದರೆ, ಸಮಷ್ಟಿ ಪ್ರಾರಬ್ಧದ ಅಡೆತಡೆಗಳು ಶೇ. ೩೫ ರಷ್ಟಿದ್ದವು. ಆದ್ದರಿಂದ ಆ ಕಾಲದಲ್ಲಿ ಸೂಕ್ಷ್ಮಲೋಕದ ಮಾಯಾವಿ ಕೆಟ್ಟ ಶಕ್ತಿಗಳೊಂದಿಗೆ ಹೋರಾಡಲು ಶೇ. ೧೦೦ ರಷ್ಟು ಪ್ರಕಟ ಶಕ್ತಿ ಮತ್ತು ಶೇ. ೧೦೦ ರಷ್ಟು ಅಪ್ರಕಟ ಶಕ್ತಿಯಿರುವ ಭಗವಾನ ಶ್ರೀಕೃಷ್ಣನ ಉಪಾಸನೆ ಅತ್ಯಗತ್ಯವಾಗಿತ್ತು.

೧ ಆ. ಸಾಧಕರು ಭಗವಾನ ಶ್ರೀಕೃಷ್ಣನ ಭಾವಪೂರ್ಣ ಉಪಾಸನೆ ಮಾಡಿದ್ದರಿಂದ ಅವರ ಆಧ್ಯಾತ್ಮಿಕ ಹಾನಿಯಾಗದಿರುವುದು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಮಾಜದಲ್ಲಿ ಸಾತ್ತಿ ಕತೆ ನಿರ್ಮಾಣವಾಗುವುದು : ೨೦೦೭ ರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಮಾರ್ಗದರ್ಶನದಲ್ಲಿ ಸಾಧಕರು ಶ್ರೀಕೃಷ್ಣನ ಉಪಾಸನೆಯನ್ನು ಆರಂಭಿಸಿದರು. ಇದರಿಂದ ವ್ಯಷ್ಟಿ ಸ್ತರದಲ್ಲಿ ಸಾಧಕರು ಅನಿಷ್ಟ ಶಕ್ತಿಗಳ ತೀವ್ರ ಆಕ್ರಮಣದಿಂದ ರಕ್ಷಿಸಲ್ಪಟ್ಟರು ಮತ್ತು ಸರಿಸುಮಾರು ಶೇ. ೯೦ ರಷ್ಟು ಸಾಧಕರ ಆಧ್ಯಾತ್ಮಿಕ ಹಾನಿಯಾಗಲಿಲ್ಲ. ಸಮಷ್ಟಿ ಸ್ತರದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸಮಾಜದಲ್ಲಿ ರಜ-ತಮವನ್ನು ನಾಶಪಡಿಸಿ ಸಾತ್ತ್ವಿಕತೆಯನ್ನು ನಿರ್ಮಿಸುವ ಕಾರ್ಯ ನಿರಂತರವಾಗಿ ನಡೆಯಿತು.

೧ ಇ. ಕಾಲಕ್ಕನುಸಾರ ಸಮಷ್ಟಿ ಪ್ರಾರಬ್ಧದ ಪ್ರಮಾಣ ಹೆಚ್ಚಿರುವು ದರಿಂದ ತೀವ್ರ ಪ್ರಾರಬ್ಧದಲ್ಲೂ ಸಾಧನೆಗೆ ಶಕ್ತಿ ನೀಡುವ ಶ್ರೀರಾಮನ ಉಪಾಸನೆ ಅಗತ್ಯವಾಗಿದೆ : ೨೦೨೨ ರಿಂದ ಹಿಂದೂ ರಾಷ್ಟ್ರದ (ರಾಮರಾಜ್ಯದ) ಸ್ಥಾಪನೆಯ ಕಾರ್ಯದಲ್ಲಿ ಎದುರಾಗುವ ವಿವಿಧ ಅಡೆತಡೆಗಳಲ್ಲಿ, ದೊಡ್ಡ ಅನಿಷ್ಟ ಶಕ್ತಿಗಳ ತೊಂದರೆಯಿಂದ ಉಂಟಾಗುವ ಅಡೆತಡೆಗಳ ಪ್ರಮಾಣವು ಕಡಿಮೆಯಾಗುತ್ತಾ ಬಂದು, ಸಮಷ್ಟಿ ಪ್ರಾರಬ್ಧದಿಂದ ಉಂಟಾಗುವ ಅಡೆತಡೆಗಳ ಪ್ರಮಾಣದಲ್ಲಿ ವೃದ್ಧಿಯಾಗಿದೆ. ೨೦೨೬ ರ ಸಾಲಿನಲ್ಲಿ ಬಲಿಷ್ಠ ಅನಿಷ್ಟ ಶಕ್ತಿಗಳ ತೊಂದರೆಯಿಂದ ನಿರ್ಮಾಣವಾಗುವ ಅಡೆ ತಡೆಗಳ ಪ್ರಮಾಣವು ಶೇ. ೪೦ ರಷ್ಟಿದ್ದರೆ, ಸಮಷ್ಟಿ ಪ್ರಾರಬ್ಧದಿಂದ ನಿರ್ಮಾಣವಾಗುವ ಅಡೆತಡೆಗಳ ಪ್ರಮಾಣವು ಶೇ. ೬೦ ಕ್ಕೆ ತಲುಪಿದೆ.

ವ್ಯಷ್ಟಿ ಅಥವಾ ಸಮಷ್ಟಿ ಪ್ರಾರಬ್ಧವನ್ನು ಎಲ್ಲರೂ ಅನುಭವಿಸಲೇ ಬೇಕಾಗುತ್ತದೆ; ಆದರೆ ಸಾಧನೆಯ ಮೂಲಕ ಅದರ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಇದೇ ಗುರಿಯನ್ನು ಬೇಗನೇ ಸಾಧಿಸಲು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಸಾಧನೆ ಮಾಡುವ ಸಮಷ್ಟಿಗೆ ಭಗವಾನ ಶ್ರೀರಾಮನ ಉಪಾಸನೆಯನ್ನು ಮಾಡಲು ಹೇಳಿದ್ದಾರೆ.

೧ ಈ. ಕೆಟ್ಟ ಶಕ್ತಿಗಳ ತೊಂದರೆ ಮತ್ತು ಸಮಷ್ಟಿ ಪ್ರಾರಬ್ಧವನ್ನು ಭೋಗಿಸಲು ಭಗವಾನ ಶ್ರೀಕೃಷ್ಣ ಮತ್ತು ಭಗವಾನ ಶ್ರೀರಾಮನ ಉಪಾಸನೆಯ ಉಪಯುಕ್ತತೆ

ಟಿಪ್ಪಣಿ : ಕೆಟ್ಟ ಶಕ್ತಿಗಳು ವ್ಯಕ್ತಿಯ ಮೇಲೆ ಆಕ್ರಮಣ ಮಾಡಿ ಶಕ್ತಿಹೀನರನ್ನಾಗಿ ಮಾಡುತ್ತವೆ. ಇದರಿಂದ ವ್ಯಕ್ತಿಯು ತಪ್ಪು ಕರ್ಮಗಳನ್ನು ಮಾಡುತ್ತಾನೆ ಅಥವಾ ಕರ್ಮ ಮಾಡದಂತೆ ತಡೆಯುತ್ತವೆ. ಆದರೆ ಸಮಷ್ಟಿ ಪ್ರಾರಬ್ಧದಿಂದಾಗಿ ವ್ಯಕ್ತಿಗೆ ಕರ್ಮ ಮಾಡುವುದು ಅಸಾಧ್ಯವಾಗುತ್ತದೆ ಮತ್ತು ಕ್ರಿಯಮಾಣ ಶಕ್ತಿ ಕುಂದುತ್ತದೆ.

೧ ಉ. ಯುದ್ಧಕ್ಕಾಗಿ ಶ್ರೀಕೃಷ್ಣ ಮತ್ತು ಪ್ರಾರಬ್ಧಭೋಗಗಳನ್ನು ಅನುಭವಿಸಿ ಸಾಧನೆ ಮಾಡಲು ಶ್ರೀರಾಮನು ಉತ್ತಮವಾಗಿರುವುದು : ಶ್ರೀಕೃಷ್ಣನ ಸಂಪೂರ್ಣ ಜೀವನವು (ಜನನದಿಂದ ಮರಣದ ವರೆಗೆ) ಯುದ್ಧಮಯವಾಗಿಯೇ ಇತ್ತು. ಇದಕ್ಕೆ ವಿರುದ್ಧವಾಗಿ, ಶ್ರೀರಾಮನ ಸಂಪೂರ್ಣ ಜೀವನವು ಪ್ರಾರಬ್ಧಮಯವಾಗಿದ್ದರೂ (ಒಳ್ಳೆಯದು ಮತ್ತು ಕೆಟ್ಟದು), ಅದರಲ್ಲಿ ಆತನು ಧರ್ಮಾಚರಣೆ ಮತ್ತು ಸಾಧನೆಯ ಆದರ್ಶವನ್ನು ನಿರ್ಮಿಸಿದ್ದಾನೆ. ಆದ್ದರಿಂದಲೇ ಹೀಗೆ ಹೇಳಲಾಗಿದೆ,

ರಾಮೋ ವಿಗ್ರಹವಾನ್ ಧರ್ಮಸ್ಸಾಧುಸ್ಸತ್ಯಪರಾಕ್ರಮಃ |        

ರಾಜಾ ಸರ್ವಸ್ಯ ಲೋಕಸ್ಯ ದೇವಾನಾಂ ಮಘವಾನಿವ || – ವಾಲ್ಮೀಕಿ ರಾಮಾಯಣ, ಅರಣ್ಯಕಾಂಡ, ಸರ್ಗ ೩೭, ಶ್ಲೋಕ ೧೩

ಅರ್ಥ : ಭಗವಾನ ಶ್ರೀರಾಮನು ಧರ್ಮದ ಸಾಕಾರರೂಪವಾಗಿದ್ದಾನೆ. ಅವನು ಸಾಧು ಮತ್ತು ಸತ್ಯಪರಾಕ್ರಮಿಯಾಗಿದ್ದಾನೆ. ಯಾವ ರೀತಿ ಇಂದ್ರನು ದೇವತೆಗಳ ರಾಜನಾಗಿದ್ದಾನೋ, ಅದೇ ರೀತಿ ಶ್ರೀರಾಮನು ಎಲ್ಲರ ರಾಜನಾಗಿದ್ದಾನೆ.

’ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳಿಗೆ ಸಂಬಂಧಿಸಿದ ಶಕ್ತಿ ಒಟ್ಟಾಗಿರುತ್ತವೆ’, ಎಂಬುದು ಅಧ್ಯಾತ್ಮದಲ್ಲಿನ ಸಿದ್ಧಾಂತವಾಗಿದೆ. ಈ ಕಾರಣದಿಂದಾಗಿ ಶ್ರೀಕೃಷ್ಣನ ಉಪಾಸನೆ ಮಾಡುವವರಿಗೂ ವಿವಿಧ ರೀತಿಯ ಸಂಘರ್ಷಗಳು, ಹಾಗೆಯೇ ಕಠಿಣ ಕಾಲದಲ್ಲಿನ ಹೋರಾಟ ಅಂದರೆ ಯುದ್ಧ ಮಾಡುವ ಶಕ್ತಿಯು ಲಭಿಸುತ್ತದೆ. ಇದಕ್ಕೆ ವಿರುದ್ಧವಾಗಿ, ಶ್ರೀರಾಮನ ಉಪಾಸನೆ ಮಾಡುವವರಿಗೆ ತೀವ್ರ ಪ್ರಾರಬ್ಧದ ಕಾಲದಲ್ಲಿಯೂ ತಮ್ಮ ಆಧ್ಯಾತ್ಮಿಕ ಸ್ಥಿತಿಗೆ ಹಾನಿಯಾಗದಂತೆ ಮತ್ತು ಹತಾಶನಾಗದೆ ತನ್ನ ಸಾಧನೆಯನ್ನು ಮುಂದುವರಿಸುತ್ತಾ ಕಾಲದ ಪರಿಣಾಮವನ್ನು ಸಹಜವಾಗಿ ಅನುಭವಿಸಲು ಸಾಧ್ಯವಾಗುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ೨೦೨೬ ರ ಸಾಲಿನಿಂದ ಸಾಧಕರಿಗೆ ಶ್ರೀರಾಮನ ಉಪಾಸನೆಯನ್ನು ಮಾಡಲು ಮಾರ್ಗದರ್ಶನ ನೀಡಿರುವುದರ ಹಿಂದಿರುವ ಅನೇಕ ಕಾರಣಗಳಲ್ಲಿ ಇದು ಕೂಡ ಒಂದಾಗಿದೆ.

೨. ಕಾಲಚಕ್ರದಲ್ಲಿ ಲಯತತ್ತ್ವ ಹೆಚ್ಚಾಗಿದ್ದು, ಶ್ರೀರಾಮನು ಅಧಿಕವಾಗಿ ಸ್ಥಿತಿತತ್ತ್ವ್ವಕ್ಕೆ ಸಂಬಂಧಪಟ್ಟಿರುವುದರಿಂದ ಶ್ರೀರಾಮನ ಉಪಾಸನೆಯಿಂದ ಸಾಧಕರ ರಕ್ಷಣೆಯಾಗಲಿದೆ

ಹವಾಮಾನದಲ್ಲಿ ಬದಲಾವಣೆಯಾಗಿ ಬೇಸಿಗೆ ಕಾಲ ಬಂದಾಗ ವ್ಯಕ್ತಿಯ ದೇಹದಲ್ಲಿಯೂ ಉಷ್ಣತೆ ಹೆಚ್ಚಾಗುತ್ತದೆ ಮತ್ತು ಆ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಲು ಆತ ಹೆಚ್ಚು ನೀರು ಕುಡಿಯುವುದು, ತಣ್ಣೀರಿನಲ್ಲಿ ಸ್ನಾನ ಮಾಡುವುದು ಮುಂತಾದ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಅದೇ ರೀತಿ, ಯಾವುದಾದರೊಂದು ಕಾಲದಲ್ಲಿ ಲಯತತ್ತ್ವವು ಹೆಚ್ಚಾದಾಗ ಸಮಾಜದ ಸಾಮಾನ್ಯ ವ್ಯಕ್ತಿಯ ಮೇಲೆಯೂ ಅದರ ಪರಿಣಾಮ ಉಂಟಾಗಿ, ಆತನ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳು ಹೆಚ್ಚಾಗುತ್ತವೆ. ಕಾಲದ ಈ ಪರಿಣಾಮಗಳನ್ನು ತಗ್ಗಿಸಲು ಜೀವಕ್ಕೆ ಉತ್ಪತ್ತಿ ಅಥವಾ ಸ್ಥಿತಿ ತತ್ತ್ವವು ಹೆಚ್ಚಿರುವ ದೇವತೆಯ ಉಪಾಸನೆ ಮಾಡುವುದು ಅತ್ಯಗತ್ಯವಾಗಿರುತ್ತದೆ; ಏಕೆಂದರೆ ಅಂತಹ ಉಪಾಸನೆಯಿಂದ ಆತನ ಮೇಲೆ ಕಾಲಕ್ಕನುಸಾರ ಹೆಚ್ಚಾದ ಲಯತತ್ತ್ವದ ಪ್ರಭಾವ ಬೀರುವುದಿಲ್ಲ ಅಥವಾ ಅತ್ಯಲ್ಪ ಪ್ರಮಾಣದಲ್ಲಿ ಬೀರುತ್ತದೆ.

ಶ್ರೀ. ನಿಷಾದ ದೇಶಮುಖ

ಭಗವಾನ ಶ್ರೀರಾಮನು ಶ್ರೀವಿಷ್ಣುವಿನ ಅವತಾರವಾಗಿರುವುದರಿಂದ ಆತನಲ್ಲಿ ’ಸ್ಥಿತಿ’ ತತ್ತವು ಹೆಚ್ಚಿನ ಪ್ರಮಾಣದಲ್ಲಿದೆ. ಅದೇ ರೀತಿ, ಆತನು ಆದರ್ಶಪ್ರಾಯವಾದ ರಾಮರಾಜ್ಯವನ್ನು ಸ್ಥಾಪಿಸಿರುವುದರಿಂದ, ಆತನಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗೆ ಅಗತ್ಯವಿರುವ ’ಉತ್ಪತ್ತಿ’ ತತ್ತ್ವವೂ ಅಡಗಿದೆ. ಇದರಿಂದಾಗಿ ಪ್ರಸ್ತುತ ಕಾಲಘಟ್ಟದಲ್ಲಿ ಭಗವಾನ ಶ್ರೀರಾಮನ ಉಪಾಸನೆ ಮಾಡುವುದರಿಂದ ಸಾಧಕನಿಗೆ ಅಗತ್ಯವಿರುವ ಉತ್ಪತ್ತಿ ಮತ್ತು ಸ್ಥಿತಿ ತತ್ತ್ವಗಳು ಲಭಿಸುತ್ತವೆ. ಇದರ ಪರಿಣಾಮವಾಗಿ ಕಾಲದ ಲಯತತ್ತ್ವದ ಪ್ರಭಾವವು ಆತನ ಮೇಲೆ ಬಹಳ ಅಲ್ಪವಾಗಿರುತ್ತದೆ ಅಥವಾ ಆಗುವುದೇ ಇಲ್ಲ. ಆದುದರಿಂದಲೇ, ಪ್ರಸ್ತುತ ಸಮಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹೇಳಿದಂತೆ ಸಾಧಕರು ಭಾವಪೂರ್ಣವಾಗಿ ಭಗವಾನ ಶ್ರೀರಾಮನ ನಾಮಜಪ ಮಾಡಿದರೆ ಆಪತ್ಕಾಲದಲ್ಲಿ ಅವರಿಗೆ ರಕ್ಷಣೆ ದೊರೆಯಲಿದೆ. ಅಲ್ಲದೆ, ಭಾವಪೂರ್ಣ ಉಪಾಸನೆಯಿಂದ ಭಗವಾನ ಶ್ರೀರಾಮನ ತತ್ತ್ವವು ಸಾಧಕರಲ್ಲಿ ಜಾಗೃತಗೊಂಡಾಗ, ಅವರು ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ.

೩. ಗುರುಗಳ ಆಜ್ಞಾಪಾಲನೆಯಿಂದ ಶಿಷ್ಯನ ರಕ್ಷಣೆಯಾಗುತ್ತದೆ

ಅಧ್ಯಾತ್ಮದಲ್ಲಿ ಗುರುಮಂತ್ರಕ್ಕಿಂತ ’ಗುರುಗಳ ಆಜ್ಞಾಪಾಲನೆ’ ಮಾಡುವುದು ಹೆಚ್ಚು ಮಹತ್ವದ್ದಾಗಿದೆ. ಗುರುಗಳು ಶಿಷ್ಯನಿಗೆ ’ಕಲ್ಲು’ ಎಂದು ಜಪಿಸಲು ಹೇಳಿದರೂ ಗುರುಗಳ ಸಂಕಲ್ಪದಲ್ಲಿ ಎಷ್ಟು ಸಾಮರ್ಥ್ಯವಿರುತ್ತದೆ ಎಂದರೆ, ಅದರಿಂದ ಶಿಷ್ಯನ ಎಲ್ಲಾ ಸಂಕಟಗಳಿಂದ ರಕ್ಷಣೆಯಾಗಿ ಆತನ ಆಧ್ಯಾತ್ಮಿಕ ಉನ್ನತಿಯಾಗಲು ಸಾಧ್ಯವಿದೆ. ಹೀಗಿದ್ದರೂ ಶಿಷ್ಯನ ಮನಸ್ಸಿನಲ್ಲಿ ಗುರುಮಂತ್ರದ ಕುರಿತು ಯಾವುದೇ ಸಂಶಯ ಅಥವಾ ವಿಕಲ್ಪಗಳು ಇರಬಾರದು ಎಂಬ ಕಾರಣಕ್ಕೆ, ಗುರುಗಳು ಶಿಷ್ಯನಿಗೆ ವಿವಿಧ ದೇವತೆಗಳ ಮಂತ್ರ ಅಥವಾ ಸಿದ್ಧಮಂತ್ರಗಳನ್ನು ನೀಡುತ್ತಾರೆ. ವಾಸ್ತವದಲ್ಲಿ ಶಿಷ್ಯನು ಮಾಡುತ್ತಿರುವ ಪ್ರಯತ್ನಗಳಿಂದಲ್ಲ, ಬದಲಾಗಿ ಗುರುಗಳ ಕೃಪೆಯಿಂದಲೇ ದೇವತೆಗಳು ಶಿಷ್ಯನ ಮೇಲೆ ಪ್ರಸನ್ನರಾಗುತ್ತಾರೆ. ಇದೇ ಅಂಶವು ಸಮಷ್ಟಿ ಸಾಧನೆಯ ವಿಷಯಕ್ಕೂ ಅನ್ವಯಿಸುತ್ತದೆ. ’ಸಮಷ್ಟಿ ಗುರುಗಳು ಹೇಳುತ್ತಿರುವ ಸಾಧನೆಯ ಕುರಿತು ಶಿಷ್ಯರ ಮನಸ್ಸಿನಲ್ಲಿರುವ ಸಂದೇಹಗಳು ದೂರವಾಗಿ, ಅವರು ಪೂರ್ಣ ಭಕ್ತಿಭಾವದಿಂದ ಗುರುಗಳ ಆಜ್ಞಾಪಾಲನೆಯನ್ನು ಮಾಡಲಿ’ ಎಂಬ ಉದ್ದೇಶದಿಂದಲೇ ದೇವರು ಈ ರೀತಿಯ ಜ್ಞಾನವನ್ನು ನೀಡುತ್ತಾನೆ.

– ಶ್ರೀ. ನಿಷಾದ ದೇಶಮುಖ (ಸೂಕ್ಷ್ಮ ಜ್ಞಾನ ಪ್ರಾಪ್ತಕರ್ತ ಸಾಧಕ, ಆಧ್ಯಾತ್ಮಿಕ ಮಟ್ಟ ಶೇ. ೬೩), ಸನಾತನ ಆಶ್ರಮ, ರಾಮನಾಥಿ, ಗೋವಾ. (ಜ್ಞಾನ ಲಭಿಸಿದ ದಿನಾಂಕ: ೧೫.೨.೨೦೨೬)

  • ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.
  • ಸೂಕ್ಷ್ಮ-ಪರೀಕ್ಷಣೆ : ಯಾವುದಾದರೂ ಘಟನೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅನಿಸುತ್ತದೆಯೋ, ಅದನ್ನು ‘ಸೂಕ್ಷ್ಮ-ಪರೀಕ್ಷಣೆ’ ಎನ್ನುತ್ತಾರೆ.