ಯುದ್ಧಕಾಲದಲ್ಲಿ ನಾಗರಿಕರ ಕರ್ತವ್ಯಗಳು ಮತ್ತು ಜವಾಬ್ದಾರಿ !

ಸದ್ಯ ಪಾಕಿಸ್ತಾನ-ಅಫ್ಘಾನಿಸ್ತಾನ, ಇರಾನ್-ಅಮೇರಿಕಾ ಮತ್ತು ಇಸ್ರೈಲ್, ರಶಿಯಾ-ಉಕ್ರೇನ್ ಇವುಗಳ ನಡುವೆ ಯುದ್ಧದ ಕಿಡಿ ಹೊತ್ತಿದೆ. ಒಟ್ಟಾರೆ ಪರಿಸ್ಥಿತಿಯನ್ನು ನೋಡಿದರೆ, ಭಾರತವೂ ಈ ಯುದ್ಧದಲ್ಲಿ ಯಾವಾಗ ಬೇಕಾದರೂ ಧುಮುಕಬೇಕಾಗಬಹುದು ಅಥವಾ ಕನಿಷ್ಠ ಸ್ವರಕ್ಷಣೆಗಾಗಿಯಾದರೂ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳಬೇಕಾಗಬಹುದು. ಇಂತಹ ಸಂದರ್ಭದಲ್ಲಿ ರಾಷ್ಟ್ರದ ನಾಗರಿಕರಾಗಿ ಕೆಲವು ಪ್ರಮುಖ ವಿಷಯಗಳನ್ನು ಪಾಲಿಸುವ ಮೂಲಕ ನಾವು ನಮ್ಮ ಸರಕಾರದ ಬೆನ್ನಿಗೆ ದಿಟ್ಟವಾಗಿ ನಿಲ್ಲುವುದು ಅತ್ಯಗತ್ಯವಾಗಿದೆ. ಆ ಪ್ರಯತ್ನಗಳೆಂದರೆ ನಿಖರವಾಗಿ ಏನು ಮಾಡಬೇಕು ಎನ್ನುವುದನ್ನು ಕಳೆದ ವಾರದ ನೋಡಿದೆವು. ಈ ವಾರದಲ್ಲಿ ಕೊನೆಯ ಭಾಗವನ್ನು ನೋಡೋಣ.                        (ಭಾಗ ೨)

ಹಿಂದಿನ ಲೇಖನದ ಭಾಗ ೧ ಓದಲು ಇಲ್ಲಿ ಈ ಲಿಂಕ್ ಮೇಲೆ ಕ್ಲಿಕ್‌ ಮಾಡಿ :  https://sanatanprabhat.org/kannada/176461.html

ಅಧರ್ಮವನ್ನು ತ್ಯಜಿಸಿ !

ಯುದ್ಧಕಾಲದಲ್ಲಿ ಅಗತ್ಯಕ್ಕಿಂತ ಹೆಚ್ಚು ವಸ್ತುಗಳನ್ನು ಸಂಗ್ರಹಿಸಿಟ್ಟು ಕೊಳ್ಳದಿರುವುದು, ಇನ್ನೊಬ್ಬರ ಪಾಲಿನ ಆಹಾರ ಅಥವಾ ಸಂಪನ್ಮೂಲಗಳನ್ನು ಕಸಿದುಕೊಳ್ಳದಿರುವುದು, ಇದು ಸಾಮಾನ್ಯ ಮಾನವನ ಧರ್ಮವಾಗಿದೆ. ಸಂಕಟದ ಸಮಯದಲ್ಲಿ ಸ್ವಾರ್ಥಕ್ಕಾಗಿ ದಾಸ್ತ್ತಾನು ಮಾಡುವುದು ಅಥವಾ ಬೆಲೆ ಏರಿಕೆ ಮಾಡುವುದು ‘ಅಧರ್ಮ’ದ ಲಕ್ಷಣವೆಂದು ಪರಿಗಣಿಸಲಾಗಿದೆ. ಆದ್ದರಿಂದ ಇಂತಹ ಸಮಯದಲ್ಲಿ  ನಾಗರಿಕರು ಇವುಗಳನ್ನು ಮಾಡದೇ ನೀತಿವಂತರಾಗಿರುವುದು ಅತ್ಯಗತ್ಯ. ಇಂತಹ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಗಾಳಿಸುದ್ದಿಗಳನ್ನು ಹರಡಲಾಗುತ್ತದೆ. ಹಾಗಾಗಿ ಅದರತ್ತ ಕಿವಿಗೊಡಬಾರದು.

ನಿಜವಾದ ಧರ್ಮಪಾಲನೆಯನ್ನು ಅರ್ಥಮಾಡಿಕೊಳ್ಳಬೇಕು

ಒಂದು ಪ್ರಸಂಗದಲ್ಲಿ ಸುಲ್ತಾನರ ಆಕ್ರಮಣವಾದಾಗ ನಾನಾಸಾಹೇಬ ಪೇಶ್ವೆಯವರು ದೇವರಪೂಜೆ ಮಾಡುತ್ತಿದ್ದರು. ಅವರ ಸೇನಾಪತಿ ಮಲ್ಹಾರರಾವ್ ಹೋಳ್ಕರ ಅವರು ಕಾಲದ ಆವಶ್ಯಕತೆಯೆಂದು ತಕ್ಷಣವೇ ದೇವರಪೂಜೆಯನ್ನು ಬದಿಗಿಟ್ಟು ತಲವಾರು ಹಿಡಿಯಲು ವಿನಂತಿಸಿದರು. ಆಗ ಮರಾಠ ಸಾಮ್ರಾಜ್ಯದ ರಕ್ಷಣೆಗಾಗಿ ಪೇಶ್ವೆಯವರು ಮುಂದೆ ಬಂದು ಅಭಿಯಾನದ ನೇತೃತ್ವ ವಹಿಸುವ ಆವಶ್ಯಕತೆ ಇತ್ತು. ಅದರಂತೆ ‘ಸಮಯವು ಸಾಮಾನ್ಯವಾಗಿರದೆ ಯುದ್ಧದಂತಹ ದೊಡ್ಡ ಸಂಕಟ ಬಂದಾಗ ತನ್ನ ದೈನಂದಿನ ನಿಯಮಗಳನ್ನು ಬದಿಗಿಟ್ಟು ದೇಶ ಮತ್ತು ಸಮಾಜದ ರಕ್ಷಣೆ ಮಾಡುವುದು. ಇದೇ ಸರ್ವೋಚ್ಚ ಕರ್ತವ್ಯವಾಗಿರುತ್ತದೆ. ತನ್ನ ಮತ್ತು ಇತರರ ಪ್ರಾಣ ರಕ್ಷಿಸಲು ಸಂದರ್ಭಕ್ಕೆ ತಕ್ಕಂತೆ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಧರ್ಮವೆಂದು ಪರಿಗಣಿಸಲಾಗುತ್ತದೆ. ಮಾತೃಭೂಮಿಯು ಸಂಕಟ ದಲ್ಲಿದ್ದಾಗ ಅವಳನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ಧರ್ಮಮಾರ್ಗವಾಗಿದೆ.

ನಾಗರಿಕರು ಆಡಳಿತಕ್ಕೆ ಪೂರ್ಣ ಸಹಕಾರ ನೀಡಬೇಕು

ಮಹಾಭಾರತದಲ್ಲಿ ಪಿತಾಮಹ ಭೀಷ್ಮರು ಯುಧಿಷ್ಠಿರನಿಗೆ ಸಂಕಟ ಕಾಲದಲ್ಲಿ ನಾಗರಿಕರ ವಿವಿಧ ಜವಾಬ್ದಾರಿಗಳನ್ನು ತಿಳಿಸಿದ್ದಾರೆ. ದೇಶವು ಸಂಕಟದಲ್ಲಿದ್ದಾಗ ನಾಗರಿಕರು ತಮ್ಮ ನೇತೃತ್ವದ ಮೇಲೆ ಅಂದರೆ ರಾಜರು ಅಥವಾ ಸರಕಾರದ ಮೇಲೆ ವಿಶ್ವಾಸವಿಟ್ಟು, ಅವರಿಗೆ ಸಂಪೂರ್ಣ ಸಹಕಾರ ನೀಡಬೇಕು. ಇಂತಹ ಸಮಯದಲ್ಲಿ ಸಮಾಜದಲ್ಲಿ ಅರಾಜಕತೆ ಹರಡದಂತೆ ನಾಗರಿಕರು ಸ್ವತಃ ಶಿಸ್ತನ್ನು ಪಾಲಿಸಬೇಕು. ಶ್ರೀಲಂಕಾ, ಪಾಕಿಸ್ತಾನದಂತಹ ದೇಶಗಳಲ್ಲಿ ಹಿಂದೆ ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ತುರ್ತು ಸಹಾಯ ತಲುಪಿದಾಗ ಅಲ್ಲಿ ಜನರ ದೊಡ್ಡ ನೂಕು ನುಗ್ಗಲು ಉಂಟಾಯಿತು. ಕೆಲವು ಜನರು ಅಶಿಸ್ತಿನಿಂದ ವರ್ತಿಸಿದರು. ಇದು ನಮ್ಮ ದೇಶದಲ್ಲಿ  ಆಗದಂತೆ ನೋಡಿಕೊಳ್ಳಬೇಕು ಬದಲಾಗಿ ನಮ್ಮ ಸರಕಾರವು ಯುದ್ಧದ ಪರಿಸ್ಥಿತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಕಾರ್ಯ ನಿರತವಾಗಿರುವುದರಿಂದ ಅಗತ್ಯವಿರುವ ನಾಗರಿಕರು ಮತ್ತು ಸೈನಿಕರಿಗಾಗಿ ರಕ್ತದಾನ ಮಾಡುವುದು; ಆಹಾರ, ಔಷಧಿ ಮತ್ತು ಇತರ ಸಹಾಯಗಳನ್ನು ನೀಡುವುದು ಪ್ರತಿಯೊಬ್ಬ ಭಾರತೀಯ ನಾಗರಿಕನ ಕರ್ತವ್ಯವಾಗಿದೆ.

ಸರಕಾರದ ಆದೇಶ ಪಾಲಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ

ಯುದ್ಧಕಾಲದಲ್ಲಿ ಸರಕಾರವು ಕಾಲಕಾಲಕ್ಕೆ ಕೆಲವು ನಿಯಮಗಳನ್ನು ಅಥವಾ ಆದೇಶಗಳನ್ನು ಹೊರಡಿಸುತ್ತಿರುತ್ತದೆ.  ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು. ಕಾಶ್ಮೀರದ ಪಹಲ್ಗಾಮ್ ಮೇಲಿನ ದಾಳಿಯ ನಂತರ ಭಾರತವು ‘ಆಪರೇಷನ್ ಸಿಂದೂರ’ ಪ್ರಾರಂಭಿಸಿದಾಗ ಪಾಕಿಸ್ತಾನ ಮಾಡಿದ ದಾಳಿಯಲ್ಲಿ ವೃತ್ತಿಯಲ್ಲಿ ವೈದ್ಯರಾಗಿದ್ದ ಒಬ್ಬ ಭಾರತೀಯ ನಾಗರಿಕ ಸಾವನ್ನಪ್ಪಿದ್ದನು. ಹೊರಗೆ ಬರಬೇಡಿ ಎಂಬ ಸೂಚನೆ ಇದ್ದರೂ ಅವನು ಮನೆಯ ಅಂಗಳಕ್ಕೆ ಬಂದು ಮೊಬೈಲ್ ನಲ್ಲಿ ಯಾರನ್ನೋ ಸಂಪರ್ಕಿಸಿದನು ಮತ್ತು ಇದೇ ಸಮಯವನ್ನು ಸಾಧಿಸಿ ಶತ್ರುಗಳು ಅವನ ಹತ್ಯೆ ಮಾಡಿದರು. ಯುದ್ಧಕಾಲದಲ್ಲಿ ಇಂತಹ ನಿರ್ಲಕ್ಷ್ಯವು ಪ್ರಾಣಘಾತುಕವಾಗಬಹುದು ಎಂಬುದನ್ನು ಈ ಉದಾಹರಣೆಯಿಂದ ಗಮನಿಸಬೇಕು.

ಹಿಂದೂ ಧರ್ಮಶಾಸ್ತ್ರದ ಪ್ರಕಾರ ‘ರಾಷ್ಟ್ರವು’ ಕೇವಲ ಒಂದು ಭೂಭಾಗವಲ್ಲ. ಬದಲಾಗಿ ಒಂದು ದೈವ ಆಗಿದೆ. ಈ ದೃಷ್ಟಿಯಿಂದ ದೇಶದ ಮೇಲೆ ಯುದ್ಧದ ಸಂಕಟ ಬಂದರೆ ಅದು ನಮ್ಮ ದೈವದ ಮೇಲೆ ಸಂಕಟ ಬಂದಂತೆ. ಇಂತಹ ಸಮಯದಲ್ಲಿ ಸ್ವಾರ್ಥವನ್ನು ತ್ಯಜಿಸಿ ಪೂರ್ಣಶಕ್ತಿಯೊಂದಿಗೆ ರಾಷ್ಟ್ರದ ಬೆನ್ನಿಗೆ ನಿಲ್ಲುವುದು ನಾಗರಿಕರ ಆದ್ಯ ಕರ್ತವ್ಯವಾಗಿದೆ. ‘ಧರ್ಮ ಏವ ಹತೋ ಹಂತಿ ಧರ್ಮೋ ರಕ್ಷತಿ ರಕ್ಷಿತಃ’ ಎಂಬ ಶಾಸ್ತ್ರ ವಚನವಿದೆ. ಇದರ ಅರ್ಥ ಯಾರು ಅಧರ್ಮದಿಂದ ನಡೆದುಕೊಳ್ಳುತ್ತಾರೆಯೋ, ಅವರು ನಾಶವಾಗುತ್ತಾರೆ, ಆದರೆ ಯಾರು ಧರ್ಮವನ್ನು ರಕ್ಷಿಸುತ್ತಾರೆಯೋ ಅವರನ್ನು ಧರ್ಮವು (ಈಶ್ವರನು) ರಕ್ಷಿಸುತ್ತಾನೆ. ಸಮಾಜ ವ್ಯವಸ್ಥೆಯು ಸುಗಮವಾಗಿರಲು ಸರಕಾರವು ಹಾಕಿಕೊಟ್ಟ ನಿಯಮಾವಳಿಗಳನ್ನು ಧರ್ಮಪಾಲನೆ ಎಂದು ಆಚರಣೆಗೆ ತಂದರೆ ಆ ಶಿಸ್ತೇ ಯುದ್ಧ ಕಾಲದಲ್ಲಿ ದೇಶದ ಪರ್ಯಾಯವಾಗಿ ತನ್ನ ರಕ್ಷಣೆ ಖಂಡಿತವಾಗಿಯೂ ಮಾಡುತ್ತದೆ.

ನಾಗರಿಕರು ಶಿಸ್ತು ಪಾಲಿಸುವುದು ಅತ್ಯಗತ್ಯ !

ಭಾರತೀಯ  ಪರಂಪರೆಯಲ್ಲಿ ಶಿಸ್ತು ಎಂದರೆ ಕಾನೂನಿನ ಪಾಲನೆ ಮಾತ್ರವಲ್ಲ; ಧರ್ಮಶಾಸ್ತ್ರದಲ್ಲಿ ಇದನ್ನು ಸಾಮಾನ್ಯ ಧರ್ಮ ಎಂದು ಕರೆಯಲಾಗಿದೆ. ನಾಗರಿಕ ಶಿಸ್ತಿನ ಮೊದಲ ನಿಯಮವೆಂದರೆ ಸ್ವಯಂಶಿಸ್ತು. ಸರಕಾರವು ಯುದ್ಧಕಾಲದಲ್ಲಿ ಸಂಚಾರನಿಷೇಧ ಹೇರಿದಾಗ ಆ ನಿಯಮಗಳನ್ನು ಪಾಲಿಸಬೇಕು. ಈ ನಿಯಮಗಳನ್ನು ಮುರಿಯುವುದೆಂದರೆ ಕಾನೂನು ಭಂಗ  ಹಾಗೂ ಸಮಾಜದ ಸುರಕ್ಷತೆಗೆ ಮಾಡಿದ ದ್ರೋಹವಾಗಿದೆ. ನೀರು, ವಿದ್ಯುತ್‌ನಂತಹ ಸಾರ್ವಜನಿಕ ಆಸ್ತಿಯನ್ನು ಮಿತವಾಗಿ ಬಳಸುವುದು ಅವುಗಳಿಗೆ ಹಾನಿ ಮಾಡದಿರುವುದು ನಾಗರಿಕರ ಕರ್ತವ್ಯವಾಗಿದೆ. ಸರಕಾರವು ಯಾವುದಾದರೂ ಸುರಕ್ಷಿತ ಸ್ಥಳಕ್ಕೆ ನಾಗರಿಕರನ್ನು ಸ್ಥಳಾಂತರಿಸಿದಾಗ ‘ಆಹಾರ, ವಸ್ತ್ರಗಳನ್ನು ನೀಡಿದಾಗ ಸರತಿಯ ಸಾಲಿನಲ್ಲಿ ನಿಂತು ಪಡೆಯುವುದು; ವೃದ್ಧರು, ರೋಗಿಗಳು ಮುಂತಾದವರಿಗೆ ಮೊದಲ ಆದ್ಯತೆ’ ಎಂಬ ಮಾನವೀಯತೆ ಪಾಲಿಸುವುದು ನಾಗರಿಕರ ಕರ್ತವ್ಯವಾಗಿದೆ.

ಯುದ್ಧಕಾಲದಲ್ಲಿ ಏನು ಮಾಡಬೇಕು ?

‘ನಾವೆಲ್ಲರೂ ಭಾರತೀಯರು ಎಂದು ಒಂದಾಗುವುದು ಆವಶ್ಯಕ. ನೀರು, ವಿದ್ಯುತ್, ಆಹಾರವನ್ನು ಮಿತವಾಗಿ ಬಳಸಬೇಕು ರಕ್ತದಾನ ಮಾಡಿ, ಹಾಗೆಯೇ ಆಹಾರ, ಔಷಧಿ ಮತ್ತು ಇತರ ಸಹಾಯವನ್ನು ನೀಡಿರಿ ಸರಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರಿ. ರಾಷ್ಟ್ರಹಿತಕ್ಕಾಗಿ ವೈಯಕ್ತಿಕ ವಿಷಯಗಳನ್ನು ತ್ಯಾಗ ಮಾಡಿರಿ.

ಯುದ್ಧಕಾಲದಲ್ಲಿ ಏನು ಮಾಡಬಾರದು ?

ಸಮಾಜದಲ್ಲಿ ಒಡಕು ಉಂಟಾಗುವ ಯಾವುದೇ ಕೃತ್ಯವನ್ನು ಮಾಡಬಾರದು ! ವದಂತಿಗಳನ್ನು ಹರಡಬೇಡಿರಿ. ಆಹಾರ ಧಾನ್ಯಗಳನ್ನು ಮನೆಯಲ್ಲಿ ತುಂಬಾ ಸಂಗ್ರಹಿಸಬೇಡಿ ! ತುರ್ತು ಪರಿಸ್ಥಿತಿಯಲ್ಲಿ ಅನಗತ್ಯವಾಗಿ ಜನಸಂದಣಿಯನ್ನು ಮಾಡಬೇಡಿ. ಕಾನೂನು ಭಂಗ ಮಾಡಿ ಸಮಾಜದ್ರೋಹ ಮಾಡಬೇಡಿ.

ರಾಷ್ಟ್ರಕ್ಕಾಗಿ ಸ್ವಂತ ಸುಖ-ಸೌಲಭ್ಯ ಅಥವಾ ಸಂಪತ್ತಿನ ತ್ಯಾಗ

ದೇಶದ ಮೇಲೆ ಬಾಹ್ಯ ದಾಳಿ ಅಥವಾ ನೈಸರ್ಗಿಕ ಸಂಕಟ ಬಂದಾಗ ನಾಗರಿಕರು ಸಂತೋಷದಿಂದ ತ್ಯಾಗ ಮಾಡಲು ಸಿದ್ಧ ರಿರಬೇಕು. ಇದರಲ್ಲಿ ಆರ್ಥಿಕ ಸಹಾಯ ಅಥವಾ ಶಾರೀರಿಕ ಶ್ರಮವೂ ಒಳಗೊಂಡಿದೆ. ಈ ಬಗ್ಗೆ ಒಂದು ಪ್ರಸಿದ್ಧ ಶ್ಲೋಕವಿದೆ.

ತ್ಯಜೇದೇಕಂ ಕುಲಸ್ಯಾರ್ಥೇ ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್

ಗ್ರಾಮಂ ಜನಪದಸ್ಯಾರ್ಥೇ ಆತ್ಮಾರ್ಥೇ ಪೃಥಿವೀಂ ತ್ಯಜೇತ್ – ಮಹಾಭಾರತ, ಪರ್ವ ೧ ಅಧ್ಯಾಯ ೧೦೭, ಶ್ಲೋಕ ೩೨

ಅರ್ಥ : ಇಡೀ ಕುಲದ ಕಲ್ಯಾಣಕ್ಕಾಗಿ ಒಬ್ಬ ಪುತ್ರನನ್ನು ತ್ಯಾಗ ಮಾಡಬೇಕಾಗಿ ಬಂದರೆ ಮಾಡಬೇಕು. ಒಂದು ಹಳ್ಳಿಯನ್ನು ಉಳಿಸಲು ಅದರಲ್ಲಿರುವ ಒಂದು ಕುಲವನ್ನು ಬಿಡಬೇಕಾದ ಸಂದರ್ಭ ಬಂದರೆ ಸಂತೋಷದಿಂದ ಬಿಡಬೇಕು.

ರಾಷ್ಟ್ರಕ್ಕಾಗಿ ಅವಶ್ಯಕತೆಗೆ ತಕ್ಕಂತೆ ಗ್ರಾಮವನ್ನೂ ತ್ಯಾಗ ಮಾಡಬೇಕು ಮತ್ತು ಆತ್ಮ ಕಲ್ಯಾಣಕ್ಕಾಗಿ ಭೂಮಿಯನ್ನೂ (ಸ್ವಂತ ಪ್ರಾಣವನ್ನೂ) ತ್ಯಾಗ ಮಾಡಬೇಕಾಗಿ ಬಂದರೂ ಅದನ್ನು ಅವಶ್ಯವಾಗಿ ಮಾಡಬೇಕು. ಇದರಿಂದ ರಾಷ್ಟ್ರಹಿತಕ್ಕಾಗಿ ವೈಯಕ್ತಿಕ ವಿಷಯಗಳನ್ನು ತ್ಯಾಗ ಮಾಡಬೇಕು ಎಂಬುದು ಧರ್ಮದ ಬೋಧನೆಯಾಗಿದೆ ಎನ್ನುವುದು  ಸ್ಪಷ್ಟವಾಗುತ್ತದೆ.

ಅ. ಹಳದಿಘಾಟ ಯುದ್ಧದ ನಂತರ ಅರಾವಳಿಯ ಅರಣ್ಯದಲ್ಲಿ ಇದ್ದಾಗ ಮಹಾರಾಣಾ ಪ್ರತಾಪರ ಬಳಿ ಸೈನ್ಯಕ್ಕೆ ವೇತನ ನೀಡಲು ಹಣವಿರಲಿಲ್ಲ ಮತ್ತು ಆಹಾರದ ಕೊರತೆಯೂ ಇತ್ತು. ಅಂತಹ ಸಮಯದಲ್ಲಿ ಮೇವಾಡದ ಅಸ್ತಿತ್ವವೇ ಅಪಾಯದಲ್ಲಿತ್ತು. ಆ ಸಮಯದಲ್ಲಿ ಅವರ ಮಂತ್ರಿ ಭಾಮಾಶಾಹ ಅವರು ತಮ್ಮ ತಲೆತಲಾಂತರಗಳಿಂದ ಗಳಿಸಿದ್ದ ಎಲ್ಲ ಸಂಪತ್ತನ್ನು ಮಹಾರಾಣಾ ಪ್ರತಾಪರಿಗೆ ಅರ್ಪಿಸಿದರು.

ಆ. ಛತ್ರಪತಿ ಶಿವಾಜಿ ಮಹಾರಾಜರ ಕಾಲದಲ್ಲಿ ‘ಕೊಂಡಾಣಾ’ ಕೋಟೆಯನ್ನು ಗೆಲ್ಲುವುದು ಸ್ವರಾಜ್ಯಕ್ಕೆ ಅನಿವಾರ್ಯವಾದಾಗ ತಾನಾಜಿ ಮಾಲುಸರೆ ಅವರ ಮನೆಯಲ್ಲಿ ಅವರ ಮಗ ರಾಯಬಾನ  ವಿವಾಹವಿತ್ತು; ಆದರೆ ಅವರಿಗೆ ಛತ್ರಪತಿ ಶಿವಾಜಿ ಮಹಾರಾಜರು ಕೊಂಡಾಣಾ ಮೇಲೆ ದಾಳಿ ಮಾಡಲಿದ್ದಾರೆ ಎಂದು ತಿಳಿದಾಗ, ಅವರು ಎಲ್ಲಾ ಕೌಟುಂಬಿಕ ಸುಖಗಳನ್ನು ಬದಿಗಿಟ್ಟು, ‘ಮೊದಲು ಕೊಂಡಾಣಾದ ಮದುವೆ, ನಂತರ ನನ್ನ ರಾಯಬಾನ ಮದುವೆ’ ಎನ್ನುತ್ತಾ ತಾನಾಜಿ ಮಾಲುಸರೆ ಅವರೂ ಸಹ ರಾಷ್ಟ್ರ ಧರ್ಮಕ್ಕೆ ಪ್ರಥಮ ಸ್ಥಾನ ನೀಡಿದರು.

ಇ. ಬಾಜಿಪ್ರಭು ದೇಶಪಾಂಡೆಯವರು ತಮ್ಮ ದೇಹವನ್ನೇ ಛತ್ರಪತಿ ಶಿವಾಜಿ ಮಹಾರಾಜರ ರಕ್ಷಣೆಗಾಗಿ ಪಾವನಖಿಂಡಿಯಲ್ಲಿ ಅರ್ಪಿಸಿದರು.

ಇಂತಹ ಎಷ್ಟೋ ಉದಾಹರಣೆಗಳು ನಮ್ಮ ಇತಿಹಾಸದಲ್ಲಿ ಸಿಗುತ್ತವೆ. ಆದ್ದರಿಂದ ಯುದ್ಧ ಕಾಲದಲ್ಲಿ ತನು-ಮನ- ಧನದ ತ್ಯಾಗದ ಸಿದ್ಧತೆಯನ್ನು ಪ್ರತಿಯೊಬ್ಬ ನಾಗರಿಕನು ಮಾಡಬೇಕು.

– ಶ್ರೀ. ಯೋಗೇಶ ಜಲತಾರೆ, ಸಂಪಾದಕರು ‘ಸನಾತನ ಪ್ರಭಾತ’ ಪ್ರಸಾರ ಮಾಧ್ಯಮ ಸಮೂಹ (೫.೩.೨೦೨೬) (ಮುಕ್ತಾಯ)