ಸೃಷ್ಟಿಯ ನಿರ್ಮಿತಿ ಮತ್ತು ಆಯಾ ಯುಗಗಳಲ್ಲಿನ ಸಪ್ತರ್ಷಿಗಳು !

ಸಪ್ತರ್ಷಿ : ವೈದಿಕ ಧರ್ಮದ ಸಂರಕ್ಷಕರು !

 

ಮನು, ಮನುಪುತ್ರ, ಸಪ್ತರ್ಷಿ, ಇಂದ್ರ ಮತ್ತು ದೇವತೆಗಳು ಎಲ್ಲರೂ ಭಗವಂತನ ಆಜ್ಞೆಗೆ ಒಳಪಟ್ಟಿರುತ್ತಾರೆ. ಭಗವಂತನ ಪ್ರೇರಣೆಯಿಂದಲೇ ಇವರು ವಿಶ್ವದ ವ್ಯವಹಾರಗಳನ್ನು ನಡೆಸುತ್ತಾರೆ. ನಾಲ್ಕೂ ಯುಗಗಳ ಅಂತ್ಯದಲ್ಲಿ ಕಾಲವು ವೇದಗಳನ್ನು ನುಂಗಿದಾಗ, ಋಷಿಗಳೇ ತಪೋಬಲದಿಂದ ಮತ್ತೊಮ್ಮೆ ಅವುಗಳ ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾರೆ ! ಅವರಿಂದಲೇ ಸನಾತನ ಧರ್ಮದ ರಕ್ಷಣೆಯಾಗುತ್ತದೆ. ಹಾಗಾಗಿ ವೇದಗಳಲ್ಲಿ ಈ ೭ ಋಷಿಗಳನ್ನು ವೈದಿಕ ಧರ್ಮದ ಸಂರಕ್ಷಕರು ಎನ್ನಲಾಗುತ್ತದೆ.

ಭಗವಂತನು ನಿರ್ಮಿಸಿದ ಕಾಲ !

ಭಗವಂತನು ಕಾಲವನ್ನು ನಿರ್ಮಿಸಿದನು, ಯುಗಗಳನ್ನು ನಿರ್ಮಿಸಿದನು. ಆ ಕಾಲವನ್ನು ನಮಗೆ ಗುರುತಿಸಲು ಸಾಧ್ಯವಾಗಲಿ ಎಂಬುದಕ್ಕಾಗಿ ಅದಕ್ಕೆ ವಿವಿಧ ಸಂಜ್ಞೆಗಳನ್ನು ನೀಡಿದನು. ಪಳೆ, ಘಟಿಕಾ, ಪ್ರಹರ, ಹಗಲು, ರಾತ್ರಿ, ವರ್ಷ, ತಪ, ಯುಗ, ಮಹಾಯುಗ, ಮನ್ವಂತರ ಇವು ಮತ್ತು ಈ ರೀತಿಯ ಸಂಜ್ಞೆಗಳಲ್ಲಿ ಕಾಲವನ್ನು ಅಳೆಯಲಾಗುತ್ತದೆ.

ಯುಗ : ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ ಹೀಗೆ ಪ್ರತಿಯೊಂದು ಯುಗವು ಲಕ್ಷಾಂತರ ವರ್ಷಗಳದ್ದಾಗಿರುತ್ತದೆ.

ಮಹಾಯುಗ (‘ಚತುರ್ಯುಗ’) : ೪ ಯುಗಗಳು ಸೇರಿ ೧ ಮಹಾಯುಗವಾಗುತ್ತದೆ. ಅದರ ಒಟ್ಟು ವರ್ಷಗಳು ೪೩ ಲಕ್ಷದ ೨೦ ಸಾವಿರದಷ್ಟಾಗುತ್ತವೆ.

ಮನ್ವಂತರ : ಇಂತಹ ೭೧ ಮಹಾಯುಗಗಳು ಸೇರಿ ೧ ಮನ್ವಂತರವಾಗುತ್ತದೆ.

ಕಲ್ಪ : ಇಂತಹ ೧೪ ಮನ್ವಂತರಗಳೆಂದರೆ ಒಂದು ಕಲ್ಪ. ಒಂದು ಕಲ್ಪ ಎಂದರೆ ಬ್ರಹ್ಮದೇವನ ಒಂದು ಹಗಲು ಮತ್ತು ಒಂದು ರಾತ್ರಿ.

ಪ್ರತಿಯೊಂದು ಮನ್ವಂತರದ ಸಪ್ತರ್ಷಿಗಳು ಬೇರೆ !

ಪ್ರತಿಯೊಂದು ಮನ್ವಂತರದಲ್ಲಿ ಸಪ್ತರ್ಷಿಗಳು ಬೇರೆ ಇರುತ್ತಾರೆ. ೧೪ ಮನ್ವಂತರಗಳ ಒಟ್ಟು ೯೮ ಋಷಿಗಳನ್ನು ಒಪ್ಪಿಕೊಳ್ಳಲಾಗಿದೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಅಂಗಿರಸ ಎಂದರೆ ಭೃಗು, ಅತ್ರಿ, ಕ್ರತು, ಪುಲಸ್ತ್ಯ, ಪುಲಹ, ಮರೀಚಿ ಮತ್ತು ವಸಿಷ್ಠ ಇವರು ‘ಸ್ವಾಯಂಭುವ’ ಹೆಸರಿನ ಮೊದಲ ಮನ್ವಂತರದ ಸಪ್ತರ್ಷಿಗಳಾಗಿದ್ದರು. ಪ್ರಸ್ತುತ ನಡೆಯುತ್ತಿರುವ ಮನ್ವಂತರವು ೭ನೇ ಮನ್ವಂತರವಾಗಿದೆ. ಅದನ್ನು ‘ವೈವಸ್ವತ’ ಮನ್ವಂತರ ಎಂದು ಗುರುತಿಸಲಾಗುತ್ತದೆ. ಈ ಮನ್ವಂತರದ ಸಪ್ತರ್ಷಿಗಳೆಂದರೆ ಮಹರ್ಷಿ ಕಶ್ಯಪ, ಅತ್ರಿ, ವಸಿಷ್ಠ, ವಿಶ್ವಾಮಿತ್ರ, ಗೌತಮ, ಜಮದಗ್ನಿ ಮತ್ತು ಭರದ್ವಾಜ !

ಸಪ್ತರ್ಷಿಗಳ ೭ ಗುಣಗಳು !

೧. ಅವರ ಆಯುಷ್ಯವು ತುಂಬಾ ಸುದೀರ್ಘವಾಗಿದೆ.

೨. ಅವರು ಮಂತ್ರಗಳನ್ನು ಪ್ರಕಟಗೊಳಿಸಿದ್ದಾರೆ.

೩. ಅವರು ಐಶ್ವರ್ಯ ಸಂಪನ್ನರಾಗಿದ್ದಾರೆ.

೪. ಭಗವಂತನ ಕೃಪೆಯಿಂದ ಅವರಿಗೆ ದಿವ್ಯದೃಷ್ಟಿ ಪ್ರಾಪ್ತವಾಗಿದೆ.

೫. ಅವರು ಗುಣ ಮತ್ತು ವಿದ್ಯೆಯಿಂದ ಯುಕ್ತರಾಗಿದ್ದಾರೆ.

೬. ಅವರು ಧರ್ಮವನ್ನು ವೃದ್ಧಿಪಡಿಸಲು ಸತತವಾಗಿ ಪ್ರಯತ್ನಿಸುತ್ತಿರುತ್ತಾರೆ.

೭. ಅವರು ಗೋತ್ರಗಳ ಪ್ರವರ್ತಕರಾಗಿದ್ದಾರೆ.

ಇಂತಹ ಗುಣಗಳಿಂದ ಯುಕ್ತರಾದ ಸಪ್ತರ್ಷಿಗಳು ಭಗವಂತನ ಅಂಶವಾಗಿದ್ದಾರೆ. (ಸಂದರ್ಭ : ಭಕ್ತಿಸತ್ಸಂಗ, ಸನಾತನ ಸಂಸ್ಥೆ)