ಪಾಕಿಸ್ತಾನದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ವಿಶ್ವಸಂಸ್ಥೆಯಲ್ಲಿ ಜಪಾನ್‌ನಿಂದ ತೀವ್ರ ಖಂಡನೆ!

ಜಿನೀವಾ (ಸ್ವಿಟ್ಜರ್ಲೆಂಡ್) – ಇಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ೬೧ ನೇ ಅಧಿವೇಶನದಲ್ಲಿ ಪಾಕಿಸ್ತಾನವನ್ನು ತೀವ್ರವಾಗಿ ಟೀಕಿಸಲಾಯಿತು. ಈ ಸಂದರ್ಭದಲ್ಲಿ ಆರ್ಥಿಕ ಅಭಿವೃದ್ಧಿ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ವಿಷಯಗಳ ಕುರಿತು ಚರ್ಚೆ ನಡೆಯಿತು. ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ನಡೆಸಿದ ದಾಳಿಯಲ್ಲಿ ಮುಗ್ಧ ಅಫ್ಘಾನ್ ನಾಗರಿಕರ ಸಾವಿನ ಬಗ್ಗೆ ಜಪಾನ್ ಗಂಭೀರ ಕಳವಳ ವ್ಯಕ್ತಪಡಿಸಿದೆ; ಹಾಗೆಯೇ ಒಟ್ಟಾರೆಯಾಗಿ ಪಾಕಿಸ್ತಾನದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತೀವ್ರವಾಗಿ ಖಂಡಿಸಿದೆ.

ಜಪಾನಿನ ಮಾನವ ಹಕ್ಕುಗಳ ಕಾರ್ಯಕರ್ತ ಶುನ್ ಫುಜಿಕಿ ಅವರು, ಸುಮಾರು ೨೭ ಜಾಗತಿಕ ಮಾನವ ಹಕ್ಕುಗಳ ಒಪ್ಪಂದಗಳ ಬದ್ಧತೆಯಿದ್ದರೂ ಪಾಕಿಸ್ತಾನದಲ್ಲಿ ಅವುಗಳ ಗಂಭೀರ ಉಲ್ಲಂಘನೆ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು. ಪಾಕಿಸ್ತಾನದಲ್ಲಿ ಬಲವಂತವಾಗಿ ನಾಪತ್ತೆ ಮಾಡುವುದು, ಕಿರುಕುಳ ಮತ್ತು ಕೊಲೆಗಳ ಪ್ರಕರಣಗಳು ದೊಡ್ಡ ಪ್ರಮಾಣದಲ್ಲಿ ದಾಖಲಾಗಿವೆ ಎಂದು ಅವರು ಉಲ್ಲೇಖಿಸಿದರು. ಅನೇಕ ನಾಗರಿಕರು ಪಾಕಿಸ್ತಾನವನ್ನು ತೊರೆದು ಪಲಾಯನ ಮಾಡುತ್ತಿದ್ದಾರೆ ಅಥವಾ ಭಯದಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಭಾರತದ ಅಂತರ್ಗತ ದೃಷ್ಟಿಕೋನದ ಕುರಿತು ಮೆಚ್ಚುಗೆ!

ಅಧಿವೇಶನದಲ್ಲಿ ‘ಸಂಭಲಿ ಟ್ರಸ್ಟ್’ನ ಅಧ್ಯಕ್ಷ ವೀರೇಂದ್ರ ಸಿಂಗ್ ಚೌಹಾಣ್ ಅವರು ವರ್ಣಭೇದ ನೀತಿ, ತಾರತಮ್ಯ ಮತ್ತು ಅಸಹಿಷ್ಣುತೆಯಂತಹ ಜಾಗತಿಕ ಸವಾಲುಗಳತ್ತ ಗಮನಸೆಳೆಯುತ್ತಾ, ಎಲ್ಲರನ್ನೂ ಒಳಗೊಳ್ಳುವ (ಸಮಾವೇಶಕ) ವಿಷಯದಲ್ಲಿ ಭಾರತದ ಸಕ್ರಿಯ ಪಾತ್ರದ ಮೇಲೆ ಬೆಳಕು ಚೆಲ್ಲಿದರು. ಭಾರತದ ಸಾಂವಿಧಾನಿಕ ಚೌಕಟ್ಟಿನಲ್ಲಿರುವ ರಕ್ಷಣಾತ್ಮಕ ಕ್ರಮಗಳು ಸಮಾನತೆಯನ್ನು ಉತ್ತೇಜಿಸುತ್ತವೆ ಮತ್ತು ನಾಗರಿಕರನ್ನು ತಾರತಮ್ಯದಿಂದ ರಕ್ಷಿಸುತ್ತವೆ ಎಂದು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.

ಬಾಂಗ್ಲಾದೇಶಕ್ಕೂ ಎಚ್ಚರಿಕೆ!

ಬಾಂಗ್ಲಾದೇಶದ ಮಾಜಿ ಸಂಸದ ಡಾ. ಮಹಮ್ಮದ್ ಹಬೀಬೆ ಮಿಲ್ಲತ್ ಅವರು, ಬಾಂಗ್ಲಾದೇಶವು ಸುಸ್ಥಿರ ಆರ್ಥಿಕ ಅಭಿವೃದ್ಧಿಗಾಗಿ ಪ್ರಯತ್ನಿಸುವಾಗ ಎಲ್ಲಾ ಧರ್ಮಗಳಿಗೂ ಸಮಾನ ಪ್ರಾಮುಖ್ಯತೆ ನೀಡುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ಕೇವಲ ಖಂಡಿಸಿದರೆ ಈಗ ಪ್ರಯೋಜನವಿಲ್ಲ. ಬದಲಾಗಿ, ಅದರ ಆರ್ಥಿಕ ಮೂಲಗಳನ್ನು ಹತ್ತಿಕ್ಕಿ ಅದರ ಮೇಲೆ ಬಹಿಷ್ಕಾರ ಹಾಕುವುದು ಜಾಗತಿಕ ಹಿತದೃಷ್ಟಿಯಿಂದ ಅಗತ್ಯವಾಗಿದೆ. ಇದನ್ನು ವಿಶ್ವಸಂಸ್ಥೆ ಯಾವಾಗ ಅರಿತುಕೊಳ್ಳುತ್ತದೆ?