ಗಾಯನ, ವಾದನ, ನೃತ್ಯ ಮತ್ತು ನಾಟಕ ಕಲೆಗಳಿಂದ ‘ಈಶ್ವರಪ್ರಾಪ್ತಿಗಾಗಿ ಸಾಧನೆ’ಯ ಪ್ರಾಸ್ತಾವಿಕ ವಿವೇಚನೆ ! – (ಲೇಖನ ೧೩)

ಕಲೆಗಳ ಆಧ್ಯಾತ್ಮಿಕ ಇತಿಹಾಸದ ಪ್ರಾಸ್ತಾವಿಕ !

ಕಲೆಗಳ ಮಾಧ್ಯಮದಿಂದ ಈಶ್ವರಪ್ರಾಪ್ತಿಯ ಮಾರ್ಗವನ್ನು ಆಚರಣೆ ಮಾಡಿದ ಮಹಾನ ಭಾರತೀಯ ಸಂತರು !

ಈ ಹಿಂದಿನ ಲೇಖನಗಳಿಂದ ನಾವು ದೇವಿದೇವತೆಗಳಿಂದ ಹಿಡಿದು ಋಷಿಮುನಿಗಳ ವರೆಗೆ ಸಂಗೀತದ ದೈವೀ ಪರಂಪರೆಯ ಬಗ್ಗೆ ತಿಳಿದುಕೊಂಡೆವು. ಇದೇ ಪರಂಪರೆಯಲ್ಲಿನ ಮುಂದಿನ ಪುಷ್ಪವೆಂದರೆ ಈಶ್ವರನ ದೇಹಧಾರಿ ರೂಪವಾಗಿರುವ ಸಂತರು ! ಸಂತ ನಾಮದೇವ ಮಹಾರಾಜರು, ‘ಕೀರ್ತನೆಯಲ್ಲಿ ತಲ್ಲೀನರಾಗೋಣ ಮತ್ತು ಆ ಮಾಧ್ಯಮದಿಂದ ಸಂತರ ಉಪದೇಶವನ್ನು ಇಡೀ ಜಗದಾದ್ಯಂತ ತಲುಪಿಸೋಣ,’ ಎಂದು ಹೇಳುತ್ತಾರೆ. ಸಂತರ ಅಭಂಗ, ದ್ವಿಪದಿಗಳಂತಹ ಈಶ್ವರ ಭಕ್ತಿಯಲ್ಲಿ ಮುಳುಗಿಸುವಂತಹ ರಚನೆಗಳ ಮೇಲೆ ಸಮಾಜವಷ್ಟೆ ಅಲ್ಲ, ಈಶ್ವರನೂ ತಲೆದೂಗುತ್ತಾನೆ ಮತ್ತು ನರ್ತನ ಮಾಡುತ್ತಾನೆ ! ಇದು ಸಂತರು ರಚಿಸಿದ ಕಾವ್ಯಗಳ ಮತ್ತು ಗಾಯನ ಹಾಗೂ ನರ್ತನದ ಮಾಧ್ಯಮದಿಂದ ಈಶ್ವರನಿಗೆ ಮೊರೆಯಿಡುವ ಸಂತ ವಿಭೂತಿಗಳ ಮಹಿಮೆಯಾಗಿದೆ !

ಭಾರತವು ಸಂತರ ಭೂಮಿಯಾಗಿದೆ. ಸಂಗೀತದ ಮಾಧ್ಯಮವನ್ನು ಬಳಸಿ ಸಂತರು ಸ್ವತಃ ಈಶ್ವರನ ಆರಾಧನೆಯನ್ನು ಮಾಡಿದರು, ಅಲ್ಲದೇ ಅವರು ಸಂಗೀತ ಮತ್ತು ನೃತ್ಯ ಇವುಗಳ ಮಾಧ್ಯಮದಿಂದ ಸಮಾಜಕ್ಕೂ ಭಗವದ್‌ಭಕ್ತಿಯ ಮಾರ್ಗವನ್ನು ತೋರಿಸಿದರು. ಭಾರತದಲ್ಲಿ ಸಂಗೀತದಿಂದ ಈಶ್ವರಪ್ರಾಪ್ತಿ ಮಾಡಿಕೊಂಡ ಅನೇಕ ಸಂತರ ಸಮೂಹವೇ ಇದೆ, ಉದಾ. ಮಹಾರಾಷ್ಟ್ರದಲ್ಲಿನ ಸಂತ ತುಕಾರಾಮ ಮಹಾರಾಜರು, ಸಂತ ನಾಮದೇವರು, ಸಂತ ಕಾನ್ಹೋಪಾತ್ರ ಇತ್ಯಾದಿ, ರಾಜಸ್ಥಾನದಲ್ಲಿನ ಸಂತ ಮೀರಾಬಾಯಿ, ಉತ್ತರಪ್ರದೇಶದಲ್ಲಿನ ಸ್ವಾಮಿ ಹರಿದಾಸರು ಮತ್ತು ಸಂತ ಸೂರದಾಸರು; ಗುಜರಾತದಲ್ಲಿನ ಸಂತ ನರಸಿ ಮೇಹತಾ; ಬಂಗಾಲದಲ್ಲಿನ ಸಂತ ಚೈತನ್ಯ ಮಹಾಪ್ರಭುಗಳು ಮತ್ತು ಸ್ವಾಮೀ ವಿವೇಕಾನಂದರು, ಕರ್ನಾಟಕದಲ್ಲಿ ಸಂತ ಪುರಂದರದಾಸರು, ಹಾಗೆಯೇ ತಮಿಳುನಾಡಿನ ಸಂತ ತ್ಯಾಗರಾಜರು, ಸಂತ ಆಂಡಾಳ ಮೊದಲಾದವರು. ಈ ಲೇಖನದಿಂದ ನಾವು ಸಂತರು ಮಾಡಿದ ಸಂಗೀತ-ಸಾಧನೆಯ ಬಗ್ಗೆ ತಿಳಿದುಕೊಳ್ಳಲಿದ್ದೇವೆ. (ಭಾಗ ೧)

ಸೌ. ಭಕ್ತಿ ಕುಲಕರ್ಣಿ

೧. ಮಹಾರಾಷ್ಟ್ರದ ಸಂತರು

೧ ಅ. ಅಭಂಗಗಳಿಂದ ಭಗವದ್ಭಕ್ತಿಯಲ್ಲಿ ತಲ್ಲೀನರಾಗುವ ಸಂತ ತುಕಾರಾಮ ಮಹಾರಾಜರು ! : ಸಂತ ತುಕಾರಾಮ ಮಹಾರಾಜರು ಎಂದ ಕೂಡಲೇ, ನಮ್ಮ ಕಣ್ಣುಗಳ ಮುಂದೆ ಸಂಸಾರದಲ್ಲಿದ್ದು ವಿಠ್ಠಲನ ಭಕ್ತಿಯಲ್ಲಿ ಮಗ್ನರಾಗಿರುವ ಚೈತ್ಯಮಯ ಮೂರ್ತಿಯು ಕಾಣಿಸುತ್ತದೆ. ಸಂತ ತುಕಾರಾಮರು ತಮ್ಮ ಅಭಂಗ ಮತ್ತು ಕೀರ್ತನೆಗಳ ಮೂಲಕ ಈಶ್ವರಪ್ರಾಪ್ತಿಯ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಿದರು. ಅವರು ಅಭಂಗಗಳನ್ನು ಹಾಡತೊಡಗಿದರೆ, ಕೇಳುಗರು ಮೈಮರೆತು ಕುಣಿಯುತ್ತಿದ್ದರು. ಪ್ರತಿಯೊಬ್ಬ ಶ್ರೋತೃನು ತುಕಾರಾಮರ ಭಜನೆಯಲ್ಲಿ ಉನ್ನತವಾದ ಭಾವಾವಸ್ಥೆಯನ್ನು ಅನುಭವಿಸುತ್ತಿದ್ದನು. ಅವರ ರಚನೆ ಮತ್ತು ಗಾಯನದಲ್ಲಿ ಅಂತಹ ಅದ್ಭುತ ಸಾಮರ್ಥ್ಯವಿತ್ತು. ಅಷ್ಟೇ ಅಲ್ಲ, ಸಾಕ್ಷಾತ್‌ ಪಾಂಡುರಂಗನೇ ತುಕಾರಾಮ ಮಹಾರಾಜರ ಭಕ್ತಿಪೂರ್ಣ ಕೀರ್ತನೆಯಲ್ಲಿ ಮೈಮರೆತು ಕುಣಿಯುತ್ತಿದ್ದನು ! ಅವರಿಗೆ ಸಂಗೀತದ ಶಕ್ತಿಯ ಅರಿವಿತ್ತು. ಸಂಗೀತದ ಮಹಿಮೆಯನ್ನು ವರ್ಣಿಸುತ್ತಾ ಅವರು ಹೀಗೆ ಹೇಳುತ್ತಾರೆ, ಈ ಕಲಿಯುಗದಲ್ಲಿ ಸಂಸಾರ ಸಾಗರವನ್ನು ದಾಟಲು ಭಗವಂತನ ನಾಮಸ್ಮರಣೆ ಮಾಡುತ್ತಾ ಹಾಡುವುದು ಮತ್ತು ಕುಣಿಯುವುದಕ್ಕಿಂತ ಮಿಗಿಲಾದ ಸಾಧನ ಮತ್ತೊಂದಿಲ್ಲ. ಸಂಗೀತದ ಮೂಲಕ ಭಕ್ತಿರಸದಲ್ಲಿ ಮುಳುಗುವುದೇ ಶ್ರೇಷ್ಠವಾದ ಅಂತಿಮ ಶಸ್ತ್ರವಾಗಿದೆ.

೧ ಆ. ಇತರ ಸಂತರು : ಮಹಾರಾಷ್ಟ್ರದ ಸಂತ ಪರಂಪರೆಯಲ್ಲಿ ಸಂಗೀತದ ಮೂಲಕ ಈಶ್ವರನನ್ನು ಆರಾಧಿಸಿದ ಅನೇಕ ಸಂತರು ಆಗಿಹೋಗಿದ್ದಾರೆ. ಸಾಕ್ಷಾತ್‌ ವಿಠ್ಠಲನು ಯಾರ ಕೀರ್ತನೆಯಲ್ಲಿ ನರ್ತಿಸುತ್ತಿದ್ದನೋ ಅಂತಹ ಸಂತ ನಾಮದೇವ ಮಹಾರಾಜರಿರಲಿ, ನೃತ್ಯ ಮತ್ತು ಗಾಯನದ ಮೂಲಕ ವಿಠ್ಠಲನ ಸೇವೆ ಮಾಡಿದ ಸಂತ ಕಾನ್ಹೋಪಾತ್ರರಿರಲಿ ಅಥವಾ ಬೀಸುವ ಕಲ್ಲಿನಲ್ಲಿ ಧಾನ್ಯಗಳನ್ನು ಬೀಸುವಾಗ ಪಾಂಡುರಂಗನ ಭಕ್ತಿಪೂರ್ಣ ಪದಗಳನ್ನು ಹಾಡುತ್ತಿದ್ದ ಸಂತ ಜನಾಬಾಯಿ ಇರಲಿ, ಈ ಎಲ್ಲಾ ಸಂತರು ಭಗವಂತನನ್ನು ಒಲಿಸಿಕೊಳ್ಳಲು ಸಂಗೀತವನ್ನೇ ಮಾಧ್ಯಮವನ್ನಾಗಿ ಬಳಸಿಕೊಂಡರು. ಕಲೆಯ ಮೂಲಕ ಅವರು ತೋರಿದ ಭಕ್ತಿಯಿಂದಾಗಿ ಸಾಕ್ಷಾತ್‌ ಭಗವಂತನೇ ಅವರಿಗೆ ಅಧೀನನಾಗಿದ್ದನು ಎಂಬುದು ಅವರ ಚರಿತ್ರೆಯಿಂದ ನಮಗೆ ಕಲಿಯಲು ಸಿಗುತ್ತದೆ.

೨. ಭಜನೆಗಳ ಮೂಲಕ ಶ್ರೀಕೃಷ್ಣನನ್ನು ಆರ್ತತೆಯಿಂದ ಆರಾಧಿಸಿದ ಗುಜರಾತದ ಸಂತ ನರಸಿ ಮೆಹತಾ !

‘ವೈಷ್ಣವ ಜನ ತೋ ತೇನೇ ಕಹಿಯೇ ಜೆ…’ ಈ ಗೀತೆಯ ಜನಕ ಸಂತ ನರಸಿ ಮೆಹತಾ ಅವರು ಗುಜರಾತದ ಮಹಾನ್‌ ಕವಿ ಮತ್ತು ಕೃಷ್ಣ ಭಕ್ತರಾಗಿದ್ದರು. ಅವರು ಸುಮಾರು ೧೫ ನೇ ಶತಮಾನದಲ್ಲಿ ಜನಿಸಿದರು. ‘ಮಂದಿರದಲ್ಲಿ ಕೀರ್ತನೆ ಮತ್ತು ಭಜನೆಗಳ ಮೂಲಕ ದೇವರ ಭಕ್ತಿ ಮಾಡುವುದು, ಮೈಮರೆತು ಭಜನೆಗಳಲ್ಲಿ ದೇವರನ್ನು ಸ್ತುತಿಸುವುದು’ ಇವೇ ಅವರಿಗೆ ಬ್ರಹ್ಮಾನಂದ ನೀಡುತ್ತಿದ್ದವು. ಭಜನೆಗಳನ್ನು ಹಾಡುವಾಗ ಅವರು ‘ಕೇದಾರ’ರಾಗದಲ್ಲಿ ಲೀನವಾಗುತ್ತಿದ್ದರು. ಈ ಒಂದು ರಾಗದ ರಸಮೋಹಿನಿಯಿಂದ ಸಾಕ್ಷಾತ್‌ ಶ್ರೀಕೃಷ್ಣನೇ ಅವರಿಗೆ ಅಧೀನನಾಗಿದ್ದನು. ಅವರ ಕುರಿತಾದ ಒಂದು ಕಥೆ ಪ್ರಚಲಿತದವಿದೆ. ಒಬ್ಬ ಬಡ ಬ್ರಾಹ್ಮಣನ ಸಹಾಯಕ್ಕಾಗಿ ಸಂತ ನರಸಿ ಮೆಹತಾ ಅವರ ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯವಾಗಿದ್ದ ‘ಕೇದಾರ’ ರಾಗವನ್ನು ಸಾಹುಕಾರನ ಬಳಿ ಅಡವಿಟ್ಟಿದ್ದರು. ಕೇದಾರ ರಾಗವಿಲ್ಲದೆ ನರಸಿ ಮೆಹತಾ ಅವರ ಭಜನೆ ಮತ್ತು ಕೀರ್ತನೆಗಳು ನಡೆಯುತ್ತಿದ್ದವು; ಆದರೆ ಅವರಿಗೆ ಅದರಲ್ಲಿ ಮೊದಲಿನಂತೆ ಆನಂದ ಸಿಗುತ್ತಿರಲಿಲ್ಲ. ದೇವರ ಪ್ರತ್ಯಕ್ಷ ದರ್ಶನಕ್ಕಾಗಿ ಅವರ ಹೃದಯವು ವ್ಯಾಕುಲಗೊಂಡಿತ್ತು. ಆದರೆ ಹಣವಿಲ್ಲದ ಕಾರಣ ಸಾಹುಕಾರನ ಸಾಲ ತೀರಿಸಲು ಸಾಧ್ಯವಾಗುತ್ತಿರಲಿಲ್ಲ, ಹಾಗಾಗಿ ಭಗವಂತನಿಗಾಗಿ ‘ಕೇದಾರ’ ರಾಗವನ್ನು ಹಾಡಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಸಂತ ನರಸಿಯವರಿಗೆ ಇದರಿಂದ ಸಮಾಧಾನವೇ ಆಗುತ್ತಿರಲಿಲ್ಲ. ಇದೇ ಸಮಯದಲ್ಲಿ, ಒಬ್ಬ ನಿಂದಕನ ಮಾತನ್ನು ಕೇಳಿ ರಾಜನು ಸಂತ ನರಸಿ ಅವರ ಭಕ್ತಿಯನ್ನು ಪರೀಕ್ಷಿಸಲು ನಿರ್ಧರಿಸಿದನು. ಅರಮನೆಯ ಒಂದು ಕೋಣೆಯಲ್ಲಿ ಶ್ರೀಕೃಷ್ಣನ ಮೂರ್ತಿಯನ್ನಿಟ್ಟು, ಆ ಮೂರ್ತಿಯ ಕೈಯಲ್ಲಿ ಒಂದು ಹೂವಿನ ಹಾರವನ್ನು ನೀಡಲಾಯಿತು. ‘ಆ ಮೂರ್ತಿಯ ಮುಂದೆ ಸಂತ ನರಸಿ ಅವರು ತಮ್ಮ ಭಜನೆ ಮತ್ತು ಕೀರ್ತನೆಯನ್ನು ಮಾಡಬೇಕು ಮತ್ತು ಶ್ರೀಕೃಷ್ಣನು ಸ್ವತಃ ಚೈತನ್ಯಗೊಂಡು ನರಸಿ ಅವರ ಕೊರಳಿಗೆ ಹಾರವನ್ನು ಹಾಕಬೇಕು. ಒಂದು ವೇಳೆ ನಿಗದಿತ ಸಮಯದಲ್ಲಿ ಹೀಗೆ ಆಗದಿದ್ದರೆ, ಸಂತ ನರಸಿ ಅವರಿಗೆ ಶಿಕ್ಷೆ ವಿಧಿಸಲಾಗುವುದು’ ಎಂದು ರಾಜಾಜ್ಞೆಯನ್ನು ಹೊರಡಿಸಲಾಯಿತು. ಸಂತ ನರಸಿ ಅವರು ಇದನ್ನು ಪ್ರಭುವಿನ ಇಚ್ಛೆ ಎಂದು ಸ್ವೀಕರಿಸಿದರು. ಸಂತ ನರಸಿ ಇವರು ಶ್ರೀಕೃಷ್ಣನ ಮುಂದೆ ಭಜನೆಗಳನ್ನು ಹಾಡಲು ಪ್ರಾರಂಭಿಸಿದರು. ಭಜನೆಯಿಂದ ಶ್ರೀಕೃಷ್ಣನನ್ನು ಪ್ರಾರ್ಥಿಸುತ್ತಿರುವಾಗ ಸಂತ ನರಸಿ ಇವರ ರೂಪದಲ್ಲಿ ಸಾಕ್ಷಾತ್‌ ಭಗವಾನ ಶ್ರೀಕೃಷ್ಣನು ಸಾಹುಕಾರನ ಮನೆಗೆ ಬಂದು ಸಾಹುಕಾರನ ಸಾಲವನ್ನು ತೀರಿಸಿ ಹೋದನು ಮತ್ತು ಅವನು ಸಾಹುಕಾರನಿಗೆ ‘ಕೇದಾರ’ ಎಂಬ ರಾಗವು ಈಗ ಮುಕ್ತವಾಗಿದೆ’, ಎಂಬ ಪಾವತಿಯನ್ನು ಕೊಡಲು ಹೇಳಿದನು.

ಇತ್ತ ಭಜನೆ ಮಾಡುತ್ತಿರುವಾಗ ಸಂತ ನರಸಿಯವರು ಸಹಜವಾಗಿ ಕಣ್ಣುಗಳನ್ನು ತೆರೆದು ಕೃಷ್ಣನ ಮೂರ್ತಿಯ ಕಡೆಗೆ ನೋಡಿದರು. ಅಷ್ಟರಲ್ಲಿ ಒಂದು ಕಾಗದವು ಅವರ ಕಣ್ಣುಗಳ ಮುಂದೆ ಕಾಣಿಸಿತು. ಬಡ್ಡಿ ಮತ್ತು ಅಸಲು ತಲುಪಿದ ಬಗ್ಗೆ ಸಾಹುಕಾರನು ಸಹಿ ಮಾಡಿದ್ದ ಆ ಕರಾರುಪತ್ರವನ್ನು ನೋಡಿ ಶ್ರೀಕೃಷ್ಣನ ಅಗಾಧ ಲೀಲೆಯ ದರ್ಶನವಾಯಿತು. ‘ಅವರ ‘ಕೇದಾರ’ ಎಂಬ ರಾಗವು ಮುಕ್ತವಾಗಿತ್ತು. ಸಂತ ನರಸಿಯವರು ಕೇದಾರ ರಾಗದಲ್ಲಿ ಭಜನೆ ಮಾಡಲು ಆರಂಭಿಸಿದರು. ಅವರ ಭಕ್ತಿಪೂರ್ಣ ಕೇದಾರ ರಾಗದ ಸ್ವರ ಗಳಿಂದ ಒಂದು ದಿವ್ಯ ಸ್ವರಭಾವವಿಶ್ವ ನಿರ್ಮಾಣವಾಯಿತು. ಶ್ರೀಕೃಷ್ಣನ ಮೂರ್ತಿಯ ಸುತ್ತಲೂ ಒಂದು ತೇಜೋವಲಯ ತಯಾರಾಯಿತು. ಸಂತ ನರಸಿಯವರ ಕಣ್ಣುಗಳಿಂದ ಪ್ರೇಮಾಶ್ರು ಹರಿಯತೊಡಗಿದವು. ಅಚೇತನವಾಗಿರುವ ಶ್ರೀಕೃಷ್ಣನ ಮೂರ್ತಿಯು ಸಜೀವವಾಯಿತು ಮತ್ತು ಶ್ರೀಕೃಷ್ಣನ ಮೂರ್ತಿಗೆ ಹಾಕಿದ ಹೂವಿನ ಮಾಲೆಯು ಸಂತ ನರಸಿಯವರ ಕೊರಳಲ್ಲಿ ಬಿದ್ದಿತು. – ಸೌ. ಭಕ್ತಿ ಕುಲಕರ್ಣಿ

ಸಂತ ನರಸಿ ಮೆಹತಾರವರ ಭಕ್ತಿಪೂರ್ವಕ ಗಾಯನದಲ್ಲಿ ಅಷ್ಟೊಂದು ಸಾಮರ್ಥ್ಯವಿತ್ತು ! ಅವರ ಉದಾಹರಣೆಯು ಕಲಾವಿದರ ಮುಂದೆ ಆದರ್ಶವಾಗಿದೆ. ‘ನಮ್ಮ ಕಲೆಯ ಮಾಧ್ಯಮದಿಂದ ಸಂತ ನರಸಿ ಮೆಹತಾ ಇವರಂತೆ ಈಶ್ವರನಿಗೆ ಮೊರೆಯಿಟ್ಟರೆ, ಈಶ್ವರನು ನಮ್ಮಿಂದ ದೂರವಿಲ್ಲ’, ಇದು ಖಂಡಿತ !

೩. ಬಂಗಾಲದಲ್ಲಿನ ಸಂತರು

೩ ಅ. ಭಗವಂತನ ನಾಮಸಂಕೀರ್ತನೆ ಮಾಡುತ್ತ ಭಾವನೃತ್ಯದಿಂದ ಭಾವಸಮಾಧಿಯನ್ನು ಅನುಭವಿಸುವ ಸಂತ ಚೈತನ್ಯ ಮಹಾಪ್ರಭು ! : ಬಂಗಾಲದಲ್ಲಿ ಜನಿಸಿದ ಚೈತನ್ಯನಿಗೆ ಬಾಲ್ಯದಿಂದ ನೃತ್ಯದ ಆಸಕ್ತಿ ಇತ್ತು. ಹರಿನಾಮದ ಉಚ್ಚಾರ ಪ್ರಾರಂಭವಾದ ಕೂಡಲೇ ಅವರು ನೃತ್ಯವನ್ನು ಮಾಡುತ್ತಿದ್ದರು. ಅವರ ಆ ಬಾಲ್ಯನೃತ್ಯವು ಎಲ್ಲರಿಗೂ ಮನಮೋಹಕವಾಗಿ ಕಾಣುತ್ತಿತ್ತು. ಚೈತನ್ಯ ಇವರು ಯುವಕರಿದ್ದಾಗಲೇ ಗೃಹಸ್ಥಾಶ್ರಮವನ್ನು ತ್ಯಜಿಸಿ ಸನ್ಯಾಸ ದೀಕ್ಷೆಯನ್ನು ಪಡೆದರು. ಸನ್ಯಾಸ ಸ್ವೀಕರಿಸಿದ ನಂತರ ಅವರಿಗೆ ‘ಶ್ರೀಕೃಷ್ಣ ಚೈತನ್ಯ ಮಹಾಪ್ರಭು’, ಎಂಬ ಹೆಸರನ್ನು ನೀಡಲಾಯಿತು ಮತ್ತು ಆ ಹೆಸರಿನಿಂದಲೇ ಅವರು ಖ್ಯಾತರಾದರು. ಚೈತನ್ಯ ಮಹಾಪ್ರಭುಗಳು ಶ್ರೀಹರಿಯ ಧ್ಯಾನ ಮತ್ತು ಸ್ಮರಣೆ ಯನ್ನು ಮಾಡುತ್ತಾ ಅವರ ಭೇಟಿಗಾಗಿ ತಳಮಳಿಸತೊಡಗಿದರು. ‘ನನ್ನ ಕೃಷ್ಣನು ನನಗೆ ಭೇಟಿಯಾಗಬೇಕು’, ಎಂದು ಹೇಳುತ್ತ ಅವರು ಸುತ್ತಾಡತೊಡಗಿದರು. ಅದರಲ್ಲಿ ಅವರು ಹಸಿವು-ಬಾಯಾರಿಕೆಯನ್ನು ಮರೆತರು. ಚೈತನ್ಯ ಮಹಾಪ್ರಭುಗಳು ತಮ್ಮ ಅನುಯಾಯಿಗಳೊಂದಿಗೆ ಶ್ರೀಕೃಷ್ಣನ ನಾಮಸಂಕೀರ್ತನೆ ಮಾಡುತ್ತ ಕುಣಿಯತೊಡಗಿದರು. ೧೫೦೮ ರಲ್ಲಿ ಚೈತನ್ಯ ಮಹಾಪ್ರಭುಗಳಿಗೆ ಭಗವಾನ ಶ್ರೀಕೃಷ್ಣ ಸಾಕ್ಷಾತ್ಕಾರವಾಯಿತು. ಅವರು ಹರಿನಾಮ ಮತ್ತು ಭಕ್ತಿ-ಕೀರ್ತನೆಯ ಕೇವಲ ಬಂಗಾಲದಲ್ಲಿಯೇ ಅಲ್ಲ, ಸಂಪೂರ್ಣ ಉತ್ತರ ಭಾರತದಲ್ಲಿ ಪ್ರಚಾರ ಮಾಡಿದರು. ಅವರು ತಮ್ಮನ್ನು ರಾಧಾ (ಕೃಷ್ಣಭಕ್ತಿಯಲ್ಲಿ ತಲ್ಲೀನವಾಗಿರುವ) ಎಂದು ತಿಳಿಯುತ್ತಿದ್ದರು ಮತ್ತು ಕೃಷ್ಣನ ಭೇಟಿಗಾಗಿ ತಳಮಳಿಸುತ್ತ ಭಜನೆಗಳನ್ನು ಹಾಡುತ್ತಿದ್ದರು. ಅವರು ಭಗವಂತನ ನಾಮಸಂಕೀರ್ತನೆ ಮಾಡುತ್ತ ನೃತ್ಯದಲ್ಲಿ ತಮ್ಮ ದೇಹಬುದ್ಧಿಯನ್ನು ಮರೆತುಬಿಡುತ್ತಿದ್ದರು. ಅವರ ತಮ್ಮ ಭಗವದ್ಭಕ್ತಿಯಲ್ಲಿ ತಲ್ಲೀನರಾಗಿರುವ ಭಾವನೃತ್ಯವಾಗಿತ್ತು. ಈ ನೃತ್ಯದಿಂದ ಅವರು ಭಾವಸಮಾಧಿಯಲ್ಲಿಯೂ ಹೋಗುತ್ತಿದ್ದರು. ‘ಚೈತನ್ಯ ಮಹಾಪ್ರಭುಗಳಂತೆ ದೇವರ ನಿರಂತರ ಅನುಸಂಧಾನದಲ್ಲಿರುವ ಭಾವನೃತ್ಯ’, ಇದೇ ನಿಜವಾದ ಆಧ್ಯಾತ್ಮಿಕ ಸ್ತರದಲ್ಲಿನ ನೃತ್ಯವಾಗಿದೆ. ಇದೇ ನಿಜವಾದ ನೃತ್ಯಯೋಗ !ಚೈತನ್ಯ ಮಹಾಪ್ರಭುಗಳ ಭಾವನೃತ್ಯವು ಕಲಾವಿದರಿಗಾಗಿ ಪ್ರೇರಣಾದಾಯಕವಾಗಿದೆ.

೩ ಆ. ಭಗವದ್ಭಕ್ತಿಗಾಗಿ ಧೃಪದವನ್ನು ಹಾಡುವ ಸ್ವಾಮಿ ವಿವೇಕಾನಂದರು ! : ಬಂಗಾಲದ ಪರಂಪರೆಯಲ್ಲಿನ ಓರ್ವ ಮಹಾನ ಸಂತರೆಂದರೆ, ಮಹಾಕಾಳಿಯ ಭಕ್ತರಾದ ರಾಮಕೃಷ್ಣ ಪರಮಹಂಸರ ಪರಮ ಶಿಷ್ಯರಾದ ಸ್ವಾಮಿ ವಿವೇಕಾನಂದರು. ನಮಗೆ ಸ್ವಾಮಿ ವಿವೇಕಾನಂದರ ರಾಷ್ಟ್ರಭಕ್ತಿ ಮತ್ತು ಧರ್ಮಪ್ರೇಮದ ಬಗ್ಗೆ ಚೆನ್ನಾಗಿ ತಿಳಿದಿದೆ; ಆದರೆ ‘ಸಂಗೀತದಲ್ಲಿನ ತಜ್ಞರಾಗಿರುವುದು’ ಇದೂ ವಿವೇಕಾನಂದರ ವೈಶಿಷ್ಟ್ಯವಾಗಿತ್ತು. ಸ್ವಾಮಿ ವಿವೇಕಾನಂದರು ಸ್ವತಃ ದಕ್ಷ ಧೃಪದ ಗಾಯಕರು ಮತ್ತು ವಾದಕರೂ ಆಗಿದ್ದರು. ಅವರು ಭಗವದ್ಭಕ್ತಿಗಾಗಿ ಉಪಯುಕ್ತವಾದ ಹಲವು ಧೃಪದ ರಚನೆಗಳನ್ನೂ ರಚಿಸಿದ್ದಾರೆ. ಸ್ವಾಮಿ ವಿವೇಕಾನಂದರಿಗೆ ಅವರ ಗುರುಗಳಾದ ರಾಮಕೃಷ್ಣ ಪರಮಹಂಸರು ಹಾಡಲು ಹೇಳುತ್ತಿದ್ದರು. ‘ಸ್ವಾಮಿ ವಿವೇಕಾನಂದರು ಹಾಡು ಹೇಳಲು ಆರಂಭಿಸಿದ ಕೂಡಲೇ ರಾಮಕೃಷ್ಣ ಪರಮಹಂಸರು ಗಾಢ ಭಾವಸಮಾಧಿಯಲ್ಲಿ ಹೋಗುತ್ತಿದ್ದರು’, ಎಂಬ ಉಲ್ಲೇಖವು ವಿವಿಧ ಗ್ರಂಥಗಳಲ್ಲಿ ಕಂಡುಬರುತ್ತದೆ.

ಟಿಪ್ಪಣಿ – ಧೃಪದ : ಭಾರತೀಯ ಸಂಗೀತದಲ್ಲಿನ ಇದೊಂದು ಗಾಯನಶೈಲಿಯಾಗಿದೆ. ಧೃಪದದ ಕಾವ್ಯವು ವೀರ, ಶಾಂತ, ಹಾಗೆಯೇ ಭಕ್ತಿ ಈ ರಸಗಳಿಂದ ತುಂಬಿರುತ್ತದೆ. ‘ಕಲೆಯನ್ನು ಪ್ರಸ್ತುತ ಪಡಿಸುವಾಗ ದೇಹಬುದ್ಧಿಯನ್ನು ಮರೆತು ‘ತನ್ನನ್ನು ತಾನು ಮರೆಯುವುದು’, ಇದೇ ನಿಜವಾದ ಕಲೆಯಾಗಿದೆ. ಸಂತ ತುಕಾರಾಮ ಮಹಾರಾಜರಂತೆ ಅನೇಕ ಸಂತರು ಕರ್ತೃತ್ವವನ್ನು ದೇವರ ಚರಣಗಳಲ್ಲಿ ಅರ್ಪಿಸಿದರು. ಆದ್ದರಿಂದ ಅವರ ಅಭಂಗಗಳು ಕೇಳುವವರಿಗೆ ಉಚ್ಚ ಭಾವಾವಸ್ಥೆಯನ್ನು ಅನುಭವಿಸಲು ಸಾಧ್ಯವಾಗುತ್ತದೆ. ಕಲಾವಿದರು ಕರ್ತೃತ್ವವನ್ನು ಈಶ್ವರನ ಚರಣಗಳಲ್ಲಿ ಸಮರ್ಪಿಸಿದರೆ, ಕಲಾವಿದರು ಮತ್ತು ಕೇಳುವವರು ಈ ಇಬ್ಬರಿಗೂ ಕಲೆಯಲ್ಲಿನ ಆಧ್ಯಾತ್ಮಿಕ ಮಟ್ಟದಲ್ಲಿನ ಉಚ್ಚ ಅನುಭೂತಿಯನ್ನು ಪಡೆಯಬಹುದು.

ಮೇಲಿನ ಸಂತರ ಉದಾಹರಣೆಗಳಿಂದ ಗಮನಕ್ಕೆ ಬಂದಿರುವುದೇನೆಂದರೆ, ಸಂತರು ಸಾಧನೆಗಾಗಿಯೇ ಸಂಗೀತ ಮತ್ತು ನೃತ್ಯದಂತಹ ಮಾಧ್ಯಮಗಳನ್ನು ಬಳಸಿಕೊಂಡರು. ಕಲೆಯ ಮಾಧ್ಯಮದಿಂದ ಭಗವದ್ಭಕ್ತಿಯು ಕಲಾವಿದನಿಗೆ ಈಶ್ವರನ ಕಡೆಗೆ ಒಯ್ಯುತ್ತದೆ.’

– ಸೌ. ಭಕ್ತಿ ಕುಲಕರ್ಣಿ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಫೋಂಡಾ, ಗೋವಾ. (೮.೧.೨೦೨೬)

ಸಾಧಕರಿಗೆ ಸೂಚನೆ ಮತ್ತು ಹಿತಚಿಂತಕರಲ್ಲಿ ವಿನಂತಿ

ಈ ಲೇಖನದ ಬಗ್ಗೆ ಸಂದೇಹ ಅಥವಾ ಪ್ರಶ್ನೆಗಳಿದ್ದರೆ ಮುಂದಿನ ಕ್ರಮಾಂಕದಲ್ಲಿ ಸಂಪರ್ಕಿಸಿ. – ಸಂಗೀತ ವಿಭಾಗ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.

ಸಂಪರ್ಕಕ್ಕಾಗಿ ವಿಳಾಸ

ಶ್ರೀ. ಅಭಿಜಿತ ಸಾವಂತ, ಸಂಪರ್ಕ ಸಂಖ್ಯೆ : ೮೭೯೩೬೭೮೧೭೮

ವಿ-ಅಂಚೆ : [email protected]