ಮೂಲತಃ ಸಾತ್ತ್ವಿಕವಾಗಿದ್ದು ಆತ್ಮರಂಜನೆಯಿಂದ ವಿಕೃತಿಯತ್ತ ಸಾಗುತ್ತಿರುವ ಭಾರತೀಯ ಕಲೆಗಳು !

ಗಾಯನ, ವಾದನ, ನೃತ್ಯ ಮತ್ತು ನಾಟಕ ಕಲೆಗಳಿಂದ ‘ಈಶ್ವರಪ್ರಾಪ್ತಿಗಾಗಿ ಸಾಧನೆ’ಯ ಪ್ರಾಸ್ತಾವಿಕ ವಿವೇಚನೆ !

ಕಲೆಗಳ ಆಧ್ಯಾತ್ಮಿಕ ಇತಿಹಾಸದ ಪ್ರಾಸ್ತಾವಿಕ !

ಈ ಹಿಂದಿನ ಲೇಖನಮಾಲೆಯಲ್ಲಿ ನಾವು ‘ಗಾಯನ, ವಾದನ ನೃತ್ಯ ಮತ್ತು ನಾಟ್ಯ’ ಇದರ ಆಧ್ಯಾತ್ಮಿಕ ಇತಿಹಾಸವನ್ನು ನೋಡುತ್ತಿದ್ದೇವೆ. ಭಗವದ್ಭಕ್ತಿಯ ಮಾಧ್ಯಮವಾಗಿದ್ದ ಮತ್ತು ಮಂದಿರ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದ್ದ ಈ ಕಲೆಗಳ ಪ್ರದರ್ಶನದ ಉದ್ದೇಶವು ಕಾಲದ ಪ್ರಭಾವದಿಂದ ಬದಲಾಗುತ್ತಿದೆ                                                (ಲೇಖನ ೧೪-ಭಾಗ-೩)

ಈ ಹಿಂದಿನ ಲೇಖನ ಓದಲು ಇಲ್ಲಿ ಲಿಂಕ್‌ಮೇಲೆ ಕ್ಲಿಕ್‌ ಮಾಡಿ : https://sanatanprabhat.org/kannada/178297.html

ಹಿಂದಿನ ಕಾಲದ ಕಲಾವಿದರು ಕಲೆಯ ಮಾಧ್ಯಮದಿಂದ ಸಾಧನೆಯ ಕಡೆಗೆ ಹೆಚ್ಚಿನ ಗಮನ ನೀಡುತ್ತಿದ್ದರು. ಆದ್ದರಿಂದ ಅವರಲ್ಲಿ ತಮ್ಮ ಸ್ವಂತದ ವಿಭಿನ್ನ ಅಸ್ತಿತ್ವವನ್ನು ತೋರಿಸಿಕೊಳ್ಳುವ ಪ್ರಮಾಣ ಬಹಳ ಕಡಿಮೆ ಇತ್ತು; ಆದರೆ ಈಗ ಕಾಲಕ್ಕೆ ತಕ್ಕಂತೆ ಕಲೆಯಲ್ಲಿ ಅಂತರ್ಮುಖತೆಯನ್ನು ಸಾಧಿಸುವ ಬದಲಾಗಿ, ಕಲೆಯನ್ನು ಪ್ರದರ್ಶಿಸುವಾಗ ಹೆಚ್ಚಿನ ಕಲಾವಿದರು ತಮ್ಮ ಸ್ವಂತದ ಭಿನ್ನ ಅಸ್ತಿತ್ವವನ್ನು ತೋರಿಸಿಕೊಳ್ಳುವ ಕಡೆಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ‘ಈ ಮಾನಸಿಕತೆಯಿಂದಾಗಿ ಏನಾದರೂ ವಿಭಿನ್ನ ಮಾಡುವ ಭರದಲ್ಲಿ ಕಲಾವಿದರು ಕಲೆಯನ್ನು ವಿಕೃತಿಯತ್ತ ಕೊಂಡೊಯ್ಯುತ್ತಿದ್ದಾರೆ’, ಇದು ಅವರ ಗಮನಕ್ಕೂ ಬರುತ್ತಿಲ್ಲ. ಇಂದಿನ ಯುವ ಪೀಳಿಗೆಯು ಅವರನ್ನೇ ಅನುಕರಿಸುತ್ತಿರುವುದು ಕಂಡುಬರುತ್ತಿದೆ.

ಹಿಂದಿನ ಲೇಖನದಲ್ಲಿ ನಾವು ‘ರಿಯಾಲಿಟಿ ಶೋಗಳು’ ಹಾಗೆಯೇ ‘ಟ್ಯಾಲೆಂಟ್ ಶೋಗಳು’, ಚಲನಚಿತ್ರಗಳು ಮುಂತಾದವುಗಳ ಮಾಧ್ಯಮದಿಂದ ಕಲೆಯು ವಿಕೃತಿಯತ್ತ ಸಾಗಿರುವ ಪ್ರಯಾಣ’ವನ್ನು ತಿಳಿದುಕೊಂಡೆವು. ಈ ವಾರದ ಲೇಖನದಲ್ಲಿ ನಾವು ‘ಫ್ಯೂಷನ್’ ಮಾಧ್ಯಮದ ಮೂಲಕ ಕಲೆಗಳ ಅಸಾತ್ತ್ವಿಕ ಪ್ರಸ್ತುತೀಕರಣ’, ‘ಇತರರ ಗಮನ ಸೆಳೆಯಲು ಇಂದಿನ ಕಲಾವಿದರು ಮಾಡುತ್ತಿರುವ ವೇಷಭೂಷಣ, ಕೇಶರಚನೆ’, ಹಾಗೆಯೇ ‘ಮಂತ್ರ ಮತ್ತು ಸ್ತೋತ್ರಗಳ ಮೂಲಕ ಆಗುತ್ತಿರುವ ದೇವತೆಗಳ ವಿಡಂಬನೆ’ಯನ್ನು ತಿಳಿದುಕೊಳ್ಳಲಿದ್ದೇವೆ.

ಲೇಖನದಲ್ಲಿನ ಕೆಲವು ಶಬ್ದಗಳ ಅರ್ಥ

೧. ಡ್ರಮ್ ಬೀಟ್ಸ್‌ಗಳನ್ನು ನೀಡುವುದು : ‘ಡ್ರಮ್’ ಎಂಬ ಪಾಶ್ಚಾತ್ಯ ವಾದ್ಯವನ್ನು ನುಡಿಸುವುದು.

೨. ಗಾಯಕನ ಧ್ವನಿಯನ್ನು ‘ಮೆಟಾಲಿಕ್’ ಮಾಡುವುದು : ಆಧುನಿಕ ಯಂತ್ರಗಳ ಮೂಲಕ ಗಾಯಕನ ಮೂಲ ಧ್ವನಿಯನ್ನು ತೀಕ್ಷ್ಣವಾಗಿ ಮತ್ತು ಕೃತಕವಾಗಿ ಬದಲಾಯಿಸುವುದು.

೩. ಜ್ಯಾಝ್ : ಅಮೆರಿಕಾದಲ್ಲಿ ಉಗಮವಾದ ಪಾಶ್ಚಾತ್ಯ ಸಂಗೀತದ ಒಂದು ವಿಶಿಷ್ಟ ಶೈಲಿ

೪. ಶುದ್ಧ ನೃತ್ತ : ಭಾವ ಮತ್ತು ಅಭಿನಯವಿಲ್ಲದ ನೃತ್ಯವನ್ನು ‘ನೃತ್ತ’ ಎನ್ನುತ್ತಾರೆ. ಇದರಲ್ಲಿ ಕೇವಲ ‘ತಾಳ, ಲಯ, ಪದನ್ಯಾಸ ಮತ್ತು ದೇಹದ ಚಲನೆಗಳು’ ಮಾತ್ರ ಒಳಗೊಂಡಿರುತ್ತವೆ.

೫. ತರಾನಾ : ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಒಂದು ಪ್ರಕಾರ. ಇದರಲ್ಲಿ ಅರ್ಥಪೂರ್ಣ ಪದಗಳಿರುವ ಕವಿತೆಗಳನ್ನು ಬಳಸುವ ಬದಲಾಗಿ ‘ನಾದಿರ್’, ‘ತನ್’, ‘ದಿಮ್’, ‘ತೋಮ್’ ನಂತಹ ನಾದಮಧುರವಾದ, ಆದರೆ ಅರ್ಥವಿಲ್ಲದ ಶಬ್ದಗಳನ್ನು ಬಳಸಲಾಗುತ್ತದೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಇದಕ್ಕೆ ಸಮಾನವಾದ ರಚನೆಯನ್ನು ‘ತಿಲ್ಲಾನ’ ಎಂದು ಕರೆಯುತ್ತಾರೆ.

೬. ‘ರಾಕ್’, ‘ಹಿಪ್-ಹಾಪ್’, ‘ರ‍್ಯಾಪ್’ ವರ್ಜನ್ : ರಾಕ್, ಹಿಪ್-ಹಾಪ್ ಮತ್ತು ರ್ಯಾಪ್ ಇವೆಲ್ಲವೂ ವಿದೇಶಿ ಸಂಗೀತದ ಶೈಲಿಗಳಾಗಿವೆ. ಇಂತಹ ಶೈಲಿಗಳಲ್ಲಿ ಸ್ತೋತ್ರ, ಮಂತ್ರ ಮುಂತಾದವುಗಳನ್ನು ಪ್ರಸ್ತುತಪಡಿಸುವುದು.

೭. ರಿಯಾಲಿಟಿ ಶೋಗಳು : ವಾಸ್ತವಿಕ ಅಥವಾ ಸತ್ಯ ಘಟನೆಗಳ ಮೇಲೆ ಆಧಾರಿತ ಕಾರ್ಯಕ್ರಮಗಳು

೧. ಭಾರತೀಯ ಕಲೆಗಳಲ್ಲಿ ‘ಫ್ಯೂಷನ್’ ಒಳಗೊಂಡಿರುವುದರಿಂದ ಕಲೆಗಳಲ್ಲಿ ಆಗುವ ಅಸಾತ್ತ್ವಿಕ ಪ್ರಸ್ತುತೀಕರಣ !

ಎ.ಐ.ನಿರ್ಮಿತ ಪ್ರಾತಿನಿಧಿಕ ಚಿತ್ರ

‘ಮೂಲ ಶಾಸ್ತ್ರೀಯ ಗಾಯನ, ವಾದನ ಮತ್ತು ನೃತ್ಯ ಇವುಗಳಲ್ಲಿ ಪಾಶ್ಚಾತ್ಯ ಸಂಗೀತವನ್ನು ಮಿಶ್ರಣ ಮಾಡುವುದಕ್ಕೆ’ ‘ಫ್ಯೂಷನ್’ ಎಂದು ಕರೆಯಲಾಗುತ್ತದೆ. ಇಂದು ಅನೇಕ ಕಲಾವಿದರು ಏನಾದರೂ ಒಂದು ಬೇರೆ ಮಾಡುವ ಹವ್ಯಾಸದಲ್ಲಿ ಭಾರತೀಯ ಶಾಸ್ತ್ರೀಯ ಕಲೆಯೊಂದಿಗೆ ಈ ಮಿಶ್ರಣವನ್ನು ಮಾಡುತ್ತಿರುವುದು ಕಂಡುಬರುತ್ತಿದೆ. ಇದರಿಂದಾಗಿ ಆ ಸಂಗೀತವು ಕಿವಿಗೆ ಸ್ವಲ್ಪ ಸಮಯದ ವರೆಗೆ ತಾತ್ಕಾಲಿಕ ಸುಖವನ್ನು ನೀಡಬಹುದು, ಆದರೆ ಹಲವು ಬಾರಿ ಅದನ್ನು ಕೇಳಲು ಇಷ್ಟವಾಗುವುದೇ ಇಲ್ಲ.

ಭಾರತೀಯ ಕಲೆಗಳಲ್ಲಿ ಮೂಲತಃ ಸಾತ್ತ್ವಿಕತೆ ಇದೆ. ಅದರಲ್ಲಿ ಇಂತಹ ಸಂಗೀತದ ಮಿಶ್ರಣ ಮಾಡಿದಾಗ ಕಲೆಯಲ್ಲಿದ್ದ ಸಾತ್ತ್ವಿಕ ಸ್ಪಂದನಗಳು ನಾಶವಾಗಿ ರಜ-ತಮಪ್ರಧಾನ ಸ್ಪಂದನಗಳು ಕಾರ್ಯರೂಪಕ್ಕೆ ಬರುತ್ತವೆ. ಇದರಿಂದಾಗಿ ಕಲಾವಿದರು, ಪ್ರೇಕ್ಷಕರು ಹಾಗೂ ಕೇಳುವವರ ಮೇಲೆಯೂ ರಜ-ತಮದ ಪರಿಣಾಮ ಆಗುತ್ತದೆ. ಇಂದಿನ ಯುವ ಪೀಳಿಗೆಗೆ ಸರಿಯಾದ ದಿಕ್ಕು ಇಲ್ಲದಿರುವುದರಿಂದ ಅವರು ಕಲೆಗಳ ಅಸಾತ್ತ್ವಿಕ ಪ್ರಸ್ತುತಿಯನ್ನು ವೈಭವೀಕರಿಸುತ್ತಿರುವುದು ಕಂಡುಬರುತ್ತಿದೆ. ಅದರ ಉದಾಹರಣೆಗಳು ಈ ಕೆಳಗಿನಂತಿವೆ

ಅ. ಶಾಸ್ತ್ರೀಯ ಸಂಗೀತವನ್ನು ಹಾಡುವಾಗ ಅದರಲ್ಲಿ ‘ಗಿಟಾರ್ ನುಡಿಸುವುದು’, ‘ಡ್ರಮ್ಸ್ ಬೀಟ್ಸ್ ನೀಡುವುದು’ ಅಥವಾ ‘ಗಾಯಕನ ಧ್ವನಿಯನ್ನು ಮೆಟಾಲಿಕ್ ಮಾಡುವುದು’ ಕಂಡುಬರುತ್ತಿದೆ. ಇದರಿಂದಾಗಿ ಭಾರತೀಯ ಕಲೆಯ ಮೂಲ ಶುದ್ಧ ಸ್ವರೂಪವು ‘ಫ್ಯೂಷನ್’ಗೆ ಬಲಿಯಾಗಿ ವಿಕೃತಿಯತ್ತ ಸಾಗುತ್ತಿದೆ.

ಆ. ಭಾರತೀಯ ವಾದ್ಯಗಳ ಮೂಲ ಧ್ವನಿಯನ್ನು ವಿದ್ಯುತ್ ಉಪಕರಣಗಳ ಮೂಲಕ ಮಾರ್ಪಡಿಸಲಾಗುತ್ತಿದೆ. ಶಾಸ್ತ್ರೀಯ ಸಂಗೀತದಲ್ಲಿ ‘ಜಾಝ್’, ‘ಎಲೆಕ್ಟ್ರಿಕ್ ಗಿಟಾರ್’ ಮತ್ತು ‘ಡ್ರಮ್’ ಬೀಟ್ಸ್‌ಗಳೊಂದಿಗೆ ಫ್ಯೂಷನ್ ಮಾಡಿ ವಿವಿಧ ಹಾಡುಗಳನ್ನು ಹಾಡಲಾಗುತ್ತಿದೆ. ಜನರು ತಮ್ಮ ಕೌಶಲ್ಯದ ಅತಿರೇಕವನ್ನು ಪ್ರದರ್ಶಿಸಲು ‘ಹಿಪ್-ಹಾಪ್’ ಬೀಟ್ಸ್‌ಗಳ ಮೇಲೆ ತಬಲಾ, ಸಿತಾರ್ ಮುಂತಾದ ವಾದ್ಯಗಳನ್ನು ಬಳಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅನೇಕ ಕಡೆ ತಬಲಾ ಮತ್ತು ಡ್ರಮ್ ನಡುವಿನ ಜುಗಲ್ಬಂದಿಯನ್ನು ಪ್ರಸ್ತುತ ಪಡಿಸಲಾಗುತ್ತದೆ. ತಬಲಾದ ಮೂಲ ನಾದದಲ್ಲಿರುವ ಸೌಮ್ಯತೆ ಮತ್ತು ಮಾಧುರ್ಯವು ಡ್ರಮ್‌ನ ಕರ್ಕಶ ಧ್ವನಿಯಿಂದಾಗಿ ಕಣ್ಮರೆಯಾಗುತ್ತಿದೆ.

ಇ. ಇತ್ತೀಚಿನ ದಿನಗಳಲ್ಲಿ ಶಾಸ್ತ್ರೀಯ ನೃತ್ಯದಲ್ಲಿ ಇ.ಡಿ.ಎಮ್.ನ (Electronic Dance Music) ಬಳಕೆ ಹೆಚ್ಚಿನ ಪ್ರಮಾಣದಲ್ಲಿ ಆಗುವುದು ಕಂಡುಬರುತ್ತಿದೆ. ಇದರಲ್ಲಿ ಎಲೆಕ್ಟ್ರಾನಿಕ್ಸ್ ರಿದಮ್ ಸಹಾಯದಿಂದ ಕೆಲವೊಮ್ಮೆ ಮೂಲ ಶಾಸ್ತ್ರೀಯ ಗೀತೆಗಳ ರಾಗ ವನ್ನೇ ಬದಲಾಯಿಸಲಾಗುತ್ತದೆ. ಶಾಸ್ತ್ರೀಯ ಗಾಯನದಲ್ಲಿ ಹಾಗೂ ಶುದ್ಧ ನೃತ್ತದ ಪ್ರಕಾರಗಳಾದ ಉದಾಹರಣೆಗೆ ‘ತರಾನಾ’ ಅಥವಾ ‘ತಿಲ್ಲಾನಾ’ಗಳಲ್ಲಿಯೂ ಇಂತಹ ಫ್ಯೂಷನ್ ಮಾಡುವ ಮೂಲಕ ಶಾಸ್ತ್ರೀಯ ಸಂಗೀತವನ್ನು ಪಾಶ್ಚಾತ್ಯೀಕರಣಗೊಳಿಸಲಾಗುತ್ತಿದೆ. ಇಂತಹ ಗೀತೆಗಳಿಗೆ ನೃತ್ಯ ಮಾಡುವಾಗ ಕಲಾವಿದರು ಪ್ರೇಕ್ಷಕರ ಗಮನ ಸೆಳೆಯಲು ಶಾಸ್ತ್ರೀಯ ನೃತ್ಯದಲ್ಲಿ ವಿವಿಧ ‘ಸ್ಟಂಟ್’ಗಳನ್ನು (ಇತರರ ಗಮನ ಸೆಳೆಯುವಂತಹ ಕೃತ್ಯಗಳು) ಮಾಡುತ್ತಾರೆ. ನೃತ್ಯ ಮಾಡುವಾಗ ಕಲಾವಿದರು ಮಧ್ಯದಲ್ಲಿಯೇ ತಲೆಕೆಳಗಾಗಿ ಪಲ್ಟಿ ಹೊಡೆಯುತ್ತಾರೆ. ಶರೀರವನ್ನು ವಿವಿಧ ರೀತಿಯಲ್ಲಿ ಬಗ್ಗಿಸಿ ತಮ್ಮ ದೇಹದ ಕೋಮಲತೆಯನ್ನು ಪ್ರದರ್ಶಿಸುತ್ತಾರೆ.

ಸಾಮಾಜಿಕ ಮಾಧ್ಯಮಗಳಲ್ಲಿನ ಒಂದು ಪ್ರಸಿದ್ಧ ಡಾನ್ಸ್ ಗ್ರೂಪ್ ‘ಕಥಕ್’ ಎಂಬ ಭಾರತೀಯ ಶಾಸ್ತ್ರೀಯ ನೃತ್ಯಕ್ಕೆ ಪಾಶ್ಚಾತ್ಯ ಮತ್ತು ಬಾಲಿವುಡ್ ಗೀತೆಗಳನ್ನು ಅಳವಡಿಸಿ ನೃತ್ಯ ಮಾಡಿದರು. ಕೆಲವರು ಬಾಲಿವುಡ್ ಹಾಡುಗಳಲ್ಲಿ ಕಥಕ್ ನೃತ್ಯದ ಹೆಜ್ಜೆಗುರುತುಗಳ ಶಬ್ದಗಳನ್ನು ಸೇರಿಸಿ ಪ್ರಸ್ತುತಪಡಿಸುತ್ತಾರೆ. ಅವರ ಇಂತಹ ಅಸಾತ್ತ್ವಿಕ ಫ್ಯೂಷನ್ ನೃತ್ಯಕ್ಕೆ ಸಮಾಜದ ಜನರು ಬಹಳ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಈ. ಇಂದು ಕಲಾವಿದರು ಶಾಸ್ತ್ರೀಯ ಅಡಿಪಾಯವಿರುವ ಸಾತ್ತ್ವಿಕ ಭಾರತೀಯ ಕಲೆಗಳನ್ನು ಇಂತಹದೇ ವಿಕೃತ ಸ್ವರೂಪದಲ್ಲಿ ಇತರ ದೇಶಗಳಲ್ಲಿಯೂ ಪ್ರಸ್ತುತಪಡಿಸುತ್ತಿದ್ದಾರೆ. ಇದರಿಂದಾಗಿ ದುರದೃಷ್ಟವಶಾತ್ ನಮ್ಮ ಭಾರತೀಯ ಶಾಸ್ತ್ರೀಯ ಕಲೆಗಳಲ್ಲಿರುವ ಆಧ್ಯಾತ್ಮಿಕ ಶಕ್ತಿ ಮತ್ತು ಕಲೆಯ ಮೂಲ ಶಾಸ್ತ್ರೀಯ ಶೈಲಿಯ ದಿವ್ಯತೆಯನ್ನು ವಿದೇಶಗಳಿಗೆ ತಲುಪಿಸುವಲ್ಲಿ ನಾವು ವಿಫಲರಾಗುತ್ತಿದ್ದೇವೆ.

೨. ದೇವತೆಗಳ ಮಂತ್ರ, ಶ್ಲೋಕ ಮತು ಸ್ತೋತ್ರಗಳ ‘ಫ್ಯೂಷನ್’ನಿಂದ ಕಲೆಯ ಮೂಲಕ ಆಗುತ್ತಿರುವ ದೇವತೆಗಳ ವಿಡಂಬನೆ !

‘ಯೂಟ್ಯೂಬ್’, ‘ಇನ್‌ಸ್ಟಾಗ್ರಾಮ್’ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ದೇವ-ದೇವತೆಗಳ ಸಂಸ್ಕೃತ ಶ್ಲೋಕಗಳನ್ನು, ಉದಾಹರಣೆಗೆ ‘ಶಿವಪಂಚಾಕ್ಷರ ಸ್ತೋತ್ರ’, ‘ಮಹಿಷಾಸುರಮರ್ದಿನಿ ಸ್ತೋತ್ರ’, ‘ಶಿವ ತಾಂಡವ ಸ್ತೋತ್ರ’ ಇತ್ಯಾದಿಗಳನ್ನು ಹಾಗೂ ವಿವಿಧ ದೇವತೆಗಳ ಮಂತ್ರಗಳನ್ನು ‘ರಾಕ್ ವರ್ಷನ್’, ‘ಹಿಪ್-ಹಾಪ್ ವರ್ಷನ್’, ‘ರ್ಯಾಪ್ ವರ್ಷನ್’ಗಳಲ್ಲಿ ಫ್ಯೂಷನ್ ಮಾಡಿ ಹಾಡಲಾಗುತ್ತದೆ. ಇದನ್ನು ಹಾಡುವಾಗ ಕಲಾವಿದನ ಮುಖಭಾವಗಳು ವಿಕಾರವಾಗಿರುತ್ತವೆ.

ಅವನು ತನ್ನ ತಲೆಯನ್ನು ಅನಗತ್ಯವಾಗಿ ಜೋರಾಗಿ ಆಡಿಸುತ್ತಿರುತ್ತಾನೆ. ಅವನ ವೇಷಭೂಷಣವೂ ಸಾತ್ತ್ವಿಕವಾಗಿರುವುದಿಲ್ಲ. ಮುಂದೆ ಇದೇ ಹಾಡುಗಳು ಹೆಚ್ಚು ಪ್ರಸಿದ್ಧಿಯಾಗುತ್ತವೆ ಮತ್ತು ನೃತ್ಯ ಕಲಾವಿದರು ಆ ಹಾಡುಗಳಿಗೆ ಶಾಸ್ತ್ರೀಯ ನೃತ್ಯ ಮಾಡುತ್ತಾರೆ. ಕೆಲವು ಬಾರಿ ಇವು ಅಸಹ್ಯ ಅನಿಸುತ್ತದೆ. ಇದರಿಂದ ಮಂತ್ರ, ಶ್ಲೋಕ ಮತ್ತು ಸ್ತೋತ್ರಗಳಿಂದ ಸಿಗಬೇಕಾದ ದೈವೀ ಲಾಭವು ಕೇಳುಗರಿಗೆ ಸಿಗುವುದಿಲ್ಲ. ಬದಲಾಗಿ, ಇಂತಹ ಫ್ಯೂಜನ್‌ನಿಂದಾಗಿ ಕೇಳುವವರು ಮತ್ತು ನೋಡುವವರಿಂದ ನಕಾರಾತ್ಮಕ ಸ್ಪಂದನಗಳೇ ಗ್ರಹಿಸಲ್ಪಡುತ್ತವೆ.

ಸುಶ್ರೀ ತೇಜಲ ಪಾತ್ರೀಕರ

ಕು. ಶರ್ವರಿ ಕಾನಸ್ಕರ

೩. ಶಾಸ್ತ್ರೀಯ ಕಲಾ ಪ್ರಸ್ತುತಿಯಲ್ಲಿನ ಅಸಾತ್ತ್ವಿಕ ಉಡುಪು, ಆಭರಣಗಳು ಮತ್ತು ಕೇಶರಚನೆ !

ಹಿಂದಿನ ಕಾಲದಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತದ ಕಚೇರಿಗಳು ಅಥವಾ ಕಾರ್ಯಕ್ರಮಗಳಲ್ಲಿ ಕಲಾವಿದರು ಮತ್ತು ಗುರುಗಳು ಸೀರೆ, ಧೋತರ, ಜುಬ್ಬಾ-ಪೈಜಾಮ ಮುಂತಾದ ಭಾರತೀಯ ಸಾಂಪ್ರದಾಯಕ ಉಡುಪುಗಳನ್ನು ಧರಿಸುತ್ತಿದ್ದರು. ಮಹಿಳೆಯರೂ ‘ಹಣೆಗೆ ಕುಂಕುಮ, ಕೈಯಲ್ಲಿ ಬಳೆ, ಹೆಗಲ ಮೇಲೆ ಅಥವಾ ತಲೆಯ ಮೇಲೆ ಸೆರಗು’ ಮುಂತಾದ ಧರ್ಮಾ ಚರಣೆಯ ಕೃತಿಗಳನ್ನು ಮಾಡುತ್ತಿದ್ದರು. ಇದರಿಂದಾಗಿ ಮೂಲ ಸಾತ್ತ್ವಿಕ ಕಲೆಯ ಮೂಲಕ ಹೆಚ್ಚು ಸಾತ್ತ್ವಿಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತಿದ್ದವು. ಭಾರತೀಯ ಉಡುಪುಗಳಲ್ಲಿ ಅತಿಯಾದ ಆಡಂಬರ ಇಲ್ಲದ ಕಾರಣ ಪ್ರೇಕ್ಷಕರ ಗಮನ ಕಲಾವಿದನ ಬಾಹ್ಯ ನೋಟದತ್ತ ಹೋಗದೆ, ಅವರ ಕಲೆಯ ಮೂಲಕ ಪ್ರೇಕ್ಷಕರು ಸುಲಭವಾಗಿ ಅಂತರಂಗವನ್ನು ಪ್ರವೇಶಿಸಲು ಸಾಧ್ಯವಾಗುತ್ತಿತ್ತು; ಆದರೆ ‘ಈಗಿನ ಕಾಲದಲ್ಲಿ ಕಲಾವಿದರು ಬಾಹ್ಯ ನೋಟಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ’ ಎಂಬುದು ಗಮನಕ್ಕೆ ಬಂದಿದೆ. ಇದರ ಕೆಲವು ಉದಾಹರಣೆಗಳನ್ನು ಮುಂದೆ ನೀಡಲಾಗಿದೆ

೩ ಅ. ಉಡುಪು : ಕಲಾವಿದರು ಕಲೆಯ ಪ್ರಸ್ತುತಿಗೆ ಒಪ್ಪದ ಉಡುಪುಗಳನ್ನು ಅಂದರೆ ಮಹಿಳೆಯರು ಅತ್ಯಂತ ಚಿಕ್ಕ (ಅರೆಬರೆ) ಬಟ್ಟೆಗಳನ್ನು ಧರಿಸುತ್ತಾರೆ. ಇದರಿಂದ ಪ್ರೇಕ್ಷಕರ ಗಮನ ಕಲೆಗಿಂತ ಕಲಾವಿದರ ಬಾಹ್ಯ ವಿಷಯಗಳತ್ತ ಹೆಚ್ಚು ಆಕರ್ಷಿತವಾಗುತ್ತದೆ.

೩ ಆ. ಆಭರಣಗಳು : ಕೆಲವು ಕಲಾವಿದರು ಕಲೆಯ ಪ್ರಸ್ತುತಿಯ ಸಮಯದಲ್ಲಿ ಅತಿಯಾದ ಮತ್ತು ವಿಚಿತ್ರವಾದ ಆಭರಣಗಳನ್ನು ಧರಿಸುತ್ತಾರೆ. ಇದರಿಂದಾಗಿ ಅವರ ಕಲೆಯತ್ತ ಗಮನ ಹರಿಸುವುದಕ್ಕಿಂತ ಆ ವ್ಯಕ್ತಿಯ ಆಭರಣಗಳತ್ತಲೇ ಹೆಚ್ಚು ಗಮನ ಸೆಳೆಯಲ್ಪಡುತ್ತದೆ.

೩ ಇ. ಕೇಶರಚನೆ : ಕಲಾವಿದರು ಗಾಯನ, ವಾದನ, ನೃತ್ಯ ಮತ್ತು ನಾಟಕಗಳಲ್ಲಿ ಕೇಶವಿನ್ಯಾಸಕ್ಕೂ ಹೆಚ್ಚಿನ ಮಹತ್ವವನ್ನು ನೀಡಲು ಪ್ರಾರಂಭಿಸಿದ್ದಾರೆ. ಪುರುಷ ಕಲಾವಿದರ ಹೆಗಲವರೆಗೆ ಬೆಳೆಸಿದ ಕೂದಲು, ಪದೇ ಪದೇ ಕಣ್ಣಿನ ಮೇಲೆ ಬರುವ ಕೂದಲು, ಕೂದಲಿನಿಂದ ಮುಖ ಮುಚ್ಚಿ ಹೋಗುವುದು ಮುಂತಾದ ಕೇಶವಿನ್ಯಾಸಗಳಿಂದಾಗಿ ಪ್ರೇಕ್ಷಕರ ಗಮನ ಕಲೆಗಿಂತ ಹೆಚ್ಚಾಗಿ ಆ ಕಲಾವಿದರ ಕೇಶವಿನ್ಯಾಸದತ್ತಲೇ ಹೋಗುತ್ತದೆ.

೪. ತ್ವರಿತ ಪ್ರಸಿದ್ಧಿಗಾಗಿ ಕಲೆಯ ಪ್ರಸ್ತುತೀಕರಣದಲ್ಲಿ ವಿಕೃತಿ ಹೆಚ್ಚಾಗುವುದು

ಅ. ನೃತ್ಯದಲ್ಲಿಯೂ ಅತಿಯಾದ ರಂಗುರಂಗಿನ ಉಡುಪುಗಳು ಮತ್ತು ಅಸಾತ್ತ್ವಿಕ ಕೇಶವಿನ್ಯಾಸಗಳಿಂದಾಗಿ ಮೂಲ ಕಲೆಯತ್ತ ಗಮನ ಹೋಗುವ ಬದಲಾಗಿ, ಕಲಾವಿದರು ತಮ್ಮತ್ತಲೇ ಗಮನ ಸೆಳೆಯುವ ಪ್ರಯತ್ನ ಹೆಚ್ಚಾಗಿ ನಡೆಯುತ್ತಿರುವುದು ಕಂಡು ಬರುತ್ತಿದೆ. ‘ರಿಯಾಲಿಟಿ ಶೋಗಳು’, ‘ಸೋಷಿಯಲ್ ಮೀಡಿಯಾ ಶೋಗಳನ್ನು’ ನೋಡಿದಾಗ ತಿಳಿಯುವುದೇನೆಂದರೆ, ಕೆಲವು ಬಾರಿ ಇಂದಿನ ತೀರ್ಪುಗಾರರೇ ಮುಂದಿನ ಪೀಳಿಗೆಗೆ ಇಂತಹ ದಿಕ್ಕನ್ನು ತೋರಿಸುತ್ತಿದ್ದಾರೆ.

ಆ. ಒಬ್ಬ ಯುವ ಕಲಾವಿದನು ತನ್ನ ಸಂದರ್ಶನವೊಂದರಲ್ಲಿ, “ಜನರಿಗೆ ಆಕರ್ಷಣೆ ಅನಿಸಲಿ ಮತ್ತು ನನ್ನದೇ ಆದ ವಿಭಿನ್ನತೆ ಕಾಣಿಸಲಿ ಎಂಬ ಕಾರಣಕ್ಕಾಗಿ ನಾನು ಸ್ವತಃ ವಿವಿಧ ರೀತಿಯ ಬಟ್ಟೆಗಳನ್ನು ‘ಡಿಸೈನ್’ ಮಾಡಿಸಿಕೊಳ್ಳುತ್ತೇನೆ” ಎಂದು ಹೇಳಿದ್ದಾನೆ. ಕಲಾವಿದರ ಇಂತಹ ಹೊಸ ಹೊಸ ‘ಸ್ಟೈಲ್’ಗಳನ್ನು ನೋಡಿ, ಅವರನ್ನು ಆದರ್ಶವಾಗಿಟ್ಟುಕೊಂಡು ಭಾರತೀಯ ಯುವ ಪೀಳಿಗೆಯು ಅವರನ್ನೇ ಅನುಸರಿಸಲು ಆರಂಭಿಸಿರುವುದು ಗಮನಕ್ಕೆ ಬರುತ್ತಿದೆ.

ಇ. ಇದರಲ್ಲಿನ ಮಹತ್ವದ ಭಾಗವೆಂದರೆ, ಪ್ರಸ್ತುತ ಕಲಾಕ್ಷೇತ್ರದ ಕೆಲವು ಗುರುಗಳೇ ಈ ರೀತಿಯಾಗಿ ವರ್ತಿಸುತ್ತಿರುವುದರಿಂದ ಅವರ ಶಿಷ್ಯವರ್ಗವೂ ಅವರನ್ನೇ ಅನುಸರಿಸುತ್ತಿರುವುದು ಕಂಡುಬರುತ್ತಿದೆ. ವಿದ್ಯಾರ್ಥಿ ವರ್ಗವು ಗುರುಗಳಿಂದ ಕಲೆಯನ್ನು ಅಂತರ್ಮುಖಿಯಾಗಿ ಕಲಿಯುತ್ತಿಲ್ಲ, ಬದಲಾಗಿ ಅವರು ಗುರುಗಳ ಬಾಹ್ಯ ನೋಟವನ್ನೇ ಹೆಚ್ಚು ಅನುಕರಿಸುತ್ತಿದ್ದಾರೆ. ಇಂದು ತ್ವರಿತ ಪ್ರಸಿದ್ಧಿಗಾಗಿ ಕಲೆಯ ಪ್ರಸ್ತುತಿಯಲ್ಲಿ ಯಾವುದೇ ಹಂತದ ವಿಕೃತಿಯನ್ನು ಮಾಡಲು ಸಮಾಜವು ಮುಂದಾಗುತ್ತಿರುವುದು ಕಂಡುಬರುತ್ತಿದೆ.

ಮೇಲಿನ ಎಲ್ಲಾ ಉದಾಹರಣೆಗಳಿಂದ ತಿಳಿದು ಬರುವುದು ಏನೆಂದರೆ, ಇಂದಿನ ಕಲಾವಿದರ ಪೀಳಿಗೆಯು ಕಲೆಯನ್ನು ‘ಈಶ್ವರನ ಆರಾಧನೆ ಅಥವಾ ಆತ್ಮರಂಜನೆ’ ಎಂದು ನೋಡುವ ದೃಷ್ಟಿಕೋನದಿಂದ ಬಹಳ ದೂರ ಹೋಗುತ್ತಿದೆ. ಮುಂದಿನ ಪೀಳಿಗೆಗೆ ಕಲೆಯಲ್ಲಿನ ನಿಜವಾದ ಆನಂದ ಮತ್ತು ಸಾತ್ತ್ವಿಕತೆಯ ಅನುಭೂತಿಯನ್ನು ಪಡೆಯಲು ಕಲಾವಿದನು ಸ್ವತಃ ಸಾಧನೆ ಮಾಡುವುದು ಅತ್ಯಗತ್ಯವಾಗಿದೆ. ಕಲಾವಿದನು ಯಾವಾಗ ಸ್ವತಃ ಸಾತ್ತ್ವಿಕನಾಗುತ್ತಾನೋ, ಆಗ ಅವನ ವಿಚಾರಗಳು ಶುದ್ಧವಾಗಿ ಅವನು ಕಲೆಯಲ್ಲಿನ ಆಧ್ಯಾತ್ಮಿಕ ಆನಂದವನ್ನು ಅನುಭವಿಸಲು ಸಾಧ್ಯವಾಗುತ್ತದೆ. ಇದೇ ಮಾರ್ಗದರ್ಶನವನ್ನು ಇಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಮಾಧ್ಯಮದ ಮೂಲಕ ನೀಡಲಾಗುತ್ತಿದೆ.

ಸಂಗ್ರಹಕಾರರು : ಕು. ಶರ್ವರಿ ಕಾನಸ್ಕರ (ಆಧ್ಯಾತ್ಮಿಕ ಮಟ್ಟ ಶೇ. ೬೦, ವಯಸ್ಸು ೧೯ ವರ್ಷ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಫೋಂಡಾ, ಗೋವಾ ಮತ್ತು ಸುಶ್ರೀ ತೇಜಲ ಪಾತ್ರೀಕರ (ಆಧ್ಯಾತ್ಮಿಕ ಮಟ್ಟ ಶೇ. ೬೦, ಸಂಗೀತ ವಿಶಾರದೆ), ಸಂಗೀತ ಸಮನ್ವಯಕ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೭.೨.೨೦೨೬)