ಯುಗಾದಿಯ ನಿಮಿತ್ತ ಭಾರತೀಯರು ‘ವಸುಧೈವ ಕುಟುಂಬಕಮ್’ (ಸಂಪೂರ್ಣ ಪೃಥ್ವಿ ಒಂದು ಕುಟುಂಬ) ಎಂಬ ಸಂಕಲ್ಪವನ್ನು ಮಾಡಬೇಕು !

ಹಿಂದೂ ಸಂಸ್ಕೃತಿಯಲ್ಲಿ  ಯುಗಾದಿಯಿಂದ ಹಿಡಿದು ಹೋಳಿ ಹುಣ್ಣಿಮೆಯ ವರೆಗೆ ವರ್ಷವಿಡೀ ವಿವಿಧ ಹಬ್ಬ-ಹರಿದಿನಗಳನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತದೆ. ವರ್ಷಾರಂಭದ ಮೊದಲ ಹಬ್ಬವೇ ಚೈತ್ರ ಶುಕ್ಲ ಪಾಡ್ಯದ ಯುಗಾದಿ ! ಈ ಹಬ್ಬದಿಂದಲೇ ನಮ್ಮ ಹೊಸ ವರ್ಷವು ಪ್ರಾರಂಭವಾಗುತ್ತದೆ ಮತ್ತು ಋತುಚಕ್ರದಂತೆ ವಸಂತ ಋತುವಿನ ಆಗಮನವಾಗಿರುತ್ತದೆ. ಅಶೋಕ, ಬಿಲ್ವಪತ್ರೆ, ಅಶ್ವತ್ಥ, ಮುತ್ತುಗ ಮತ್ತು ಇತರ ಮರಗಳಿಗೆ ಹೊಸ ಚಿಗುರು ಒಡೆಯತೊಡಗುತ್ತದೆ. ವಸಂತ ಋತುವಿನ ಆಗಮನದಿಂದ ಆನಂದಿತನಾದ ಹಣ್ಣುಗಳ ರಾಜ ಮಾವು, ತನ್ನ ಹೂವಿನ ಸುಹಾಸನೆಯಿಂದ ವಾತಾವರಣವನ್ನು ಸುಗಂಧಮಯಗೊಳಿಸುತ್ತಾನೆ. ಕೋಗಿಲೆಯು ವಸಂತನ ರಾಯಭಾರಿಯಂತೆ ಪ್ರಕೃತಿಗೆ ಅದರ ಆಗಮನದ ಸೂಚನೆ ನೀಡುತ್ತದೆ. ಜಾಜಿ, ಮಲ್ಲಿಗೆ, ಮೊಗ್ಗು, ಸೇವಂತಿಗೆ, ಸಂಪಿಗೆ ಮುಂತಾದ ಹೂವುಗಳ ಪರಿಮಳವು ಇಡೀ ವಾತಾವರಣದಲ್ಲಿ ತುಂಬಿ ಒಂದು ವಿಶಿಷ್ಟವಾದ ‘ಸುಗಂಧೋತ್ಸವ’ವೇ ನಡೆದಿರುತ್ತದೆ.

೧. ಸದ್ಯದ ಸ್ಥಿತಿ

ನಮ್ಮ ಪೃಥ್ವಿಯು ೨೩.೫ ಡಿಗ್ರಿ ಓರೆಯಾಗಿರುವುದರಿಂದ ಈ ಸೃಷ್ಟಿಯಲ್ಲಿ ಋತುಚಕ್ರವು ನಿರ್ಮಾಣವಾಗಿದೆ. ಈ ಸೃಷ್ಟಿಯಲ್ಲಿ ಪ್ರತಿಯೊಂದು ಋತುವು ಒಂದು ವಿಶಿಷ್ಟವಾದ ನಿಸರ್ಗದ ಸಂಭ್ರಮವೇ ಆಗಿರುತ್ತದೆ. ಪ್ರಾಚೀನ ಸಾಹಿತ್ಯದಲ್ಲಿನ ಈ ಋತು ಉತ್ಸವಗಳ ಸೊಗಸಾದ ವರ್ಣನೆಗಳನ್ನು ಓದುವಾಗ, ನಮ್ಮ ಪೂರ್ವಜರ ರಸಿಕತೆ ಮತ್ತು ನಿಸರ್ಗದ ಸೌಂದರ್ಯದ ಅರಿವಾಗುತ್ತದೆ. ಇಂದು ನಾವು ಪ್ರಕೃತಿ ಅಥವಾ ಪರಿಸರದಿಂದ ದೂರವಾಗುತ್ತಿರುವುದು ಕೂಡ ಇದರಿಂದ ಎದ್ದು ಕಾಣುತ್ತದೆ.

ಶ್ರೀ. ಅನಿಲ ಸಾಖರೆ

ಇಂದಿನ ನಮ್ಮ ಧಾವಂತದ ಜೀವನದಲ್ಲಿ ಋತುಗಳ ಈ ವೈಭವವನ್ನು ಅನುಭವಿಸಲು ಸಮಯವೇ ಸಿಗುವುದಿಲ್ಲ. ಹಗಲಿನಲ್ಲಿ ಸಿಮೆಂಟ್ ಕಾಡುಗಳಲ್ಲಿ ಮತ್ತು ರಾತ್ರಿಯಲ್ಲಿ ಮನೆಯ ಮುಚ್ಚಿದ ಬಾಗಿಲುಗಳ ಹಿಂದೆ ವಸಂತ ಕಾಲವು ಯಾವಾಗ ಬಂದು ಹೋಯಿತು ಎಂಬುದು ನಮಗೆ ತಿಳಿಯುವುದೇ ಇಲ್ಲ; ಅಷ್ಟೇ ಅಲ್ಲದೆ, ಕೋಗಿಲೆಯು ಸುಶ್ರಾವ್ಯವಾಗಿ ಹಾಡುವ ಹಾಡು ನಮ್ಮ ಕಿವಿಗಳ ವರೆಗೂ ತಲುಪುವುದೇ ಇಲ್ಲ.

೨. ಯುಗಾದಿಯ ದಿನದ ವಾತಾವರಣ

ಯುಗಾದಿಯ ಮತ್ತೊಂದು ವೈಶಿಷ್ಟ್ಯವೆಂದರೆ, ಸಾವಿರಾರು ವರ್ಷಗಳ ಹಿಂದೆ ಅಸುರೀ ಶಕ್ತಿಗಳನ್ನು ನಾಶ ಮಾಡಿ, ಲಂಕೆಯ ರಾವಣನನ್ನು ಸೋಲಿಸಿ ಪ್ರಭು ಶ್ರೀರಾಮಚಂದ್ರನು ಸೀತೆಯೊಂದಿಗೆ ಅಯೋಧ್ಯೆಗೆ ಮರಳಿದನು. ಪ್ರಭು ರಾಮಚಂದ್ರನ ಸ್ವಾಗತಕ್ಕಾಗಿ ವಿವಿಧ ರಂಗೋಲಿಗಳನ್ನು ಹಾಕುವುದರ ಜೊತೆಗೆ ಬಣ್ಣಬಣ್ಣದ ಪತಾಕೆಗಳನ್ನು ಮತ್ತು ವಿಜಯದ ಧ್ವಜಗಳನ್ನು ನಿಲ್ಲಿಸಲಾಗಿತ್ತು. ಇದರ ನಂತರ ಮತ್ತೊಮ್ಮೆ ಈ ಭಾರತ ವರ್ಷದಲ್ಲಿ ‘ರಾಮರಾಜ್ಯ’ವು ಉದಯಿಸಿತ್ತು.

ಚೈತ್ರ ಶುಕ್ಲ ಪಾಡ್ಯವನ್ನು ‘ಯುಗಾದಿ’ ಎಂದು ಕರೆಯಲಾಗುತ್ತದೆ. ಮನೆಮನೆಗಳಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಬೆಳಗ್ಗಿನಿಂದಲೇ  ಮಂಗಳವಾದ್ಯಗಳ ಸ್ವರಗಳು ಮೊಳಗುತ್ತಿರುತ್ತವೆ. ಮಹಿಳೆಯರು ಮನೆಯ ಮುಂದೆ ಸುಂದರ ರಂಗೋಲಿಗಳನ್ನು ಹಾಕುತ್ತಿದ್ದರೆ, ಪುರುಷರು ವಿಜಯ ಮತ್ತು ಮಂಗಲದ ಸಂಕೇತವಾದ ಬ್ರಹ್ಮಧ್ವಜವನ್ನು ನಿಲ್ಲಿಸುವಲ್ಲಿ ಮಗ್ನರಾಗಿರುತ್ತಾರೆ. ಆ ದಿನ ಹೊಸ ಕೋಲನ್ನು ತೆಗೆದುಕೊಂಡು ವಿಧಿವತ್ತಾಗಿ ಬ್ರಹ್ಮಪೂಜೆಯನ್ನು ಮಾಡಲಾಗುತ್ತದೆ. ಈ ದಿನ ಪ್ರಸಾದವೆಂದು ಬೇವಿನ ಎಲೆ ಮತ್ತು ಬೆಲ್ಲವನ್ನು ಎಲ್ಲರಿಗೂ ನೀಡಲಾಗುತ್ತದೆ. ಇದರಲ್ಲಿ ನಮ್ಮ ಋಷಿಮುನಿಗಳು ಆಯುರ್ವೇದದ ವಿಚಾರವನ್ನೂ ಮಾಡಿದ್ದಾರೆ. ಆಯುರ್ವೇದದಲ್ಲಿ ಬೇವು ಅನೇಕ ದೈಹಿಕ ಕಾಯಿಲೆಗಳಿಗೆ ರಾಮಬಾಣವಾಗಿದೆ. ಮುಂದೆ ಬರಲಿರುವ ಕಠಿಣ ಬೇಸಿಗೆಯಲ್ಲಿ ಮತ್ತು ಉಷ್ಣದ ತೊಂದರೆಗಳಿಗೆ ಬೇವಿನ ಎಲೆಗಳು ಬಹಳ ಉಪಯುಕ್ತ; ಆದ್ದರಿಂದ ಈ ದಿನ ಬೇವಿನ ಸೇವನೆ ಮಾಡುವ ಪದ್ಧತಿಯಿದೆ. ಭಾರತೀಯ ಕಾಲಗಣನೆಯಲ್ಲಿ ಚಂದ್ರ ಮತ್ತು ಸೂರ್ಯ ಇಬ್ಬರ ಸಂಚಾರ ಹಾಗೂ ಯೋಗಗಳ ಸುಂದರ ಸಮನ್ವಯ ಸಾಧಿಸಿ ತಿಥಿ, ವಾರ, ನಕ್ಷತ್ರ, ಕೃಷ್ಣ ಮತ್ತು ಶುಕ್ಲ ಪಕ್ಷಗಳೆಂಬ ಹದಿನೈದು ದಿನಗಳ ಅವಧಿ, ಅಮಾವಾಸ್ಯೆ ಹಾಗೂ ಹುಣ್ಣಿಮೆಯ ಸಮನ್ವಯದೊಂದಿಗೆ ಚೈತ್ರದಿಂದ ಫಾಲ್ಗುಣ ಮಾಸದ ವರೆಗೆ ನಿಸರ್ಗದೊಂದಿಗೆ ಬೆರೆತಿರುವ ಕಾಲಗಣನೆಯನ್ನು ಮಾಡಲಾಗಿದೆ. ಶಾಲಿವಾಹನ ಕಾಲಗಣನೆಯಲ್ಲಿ ಪ್ರತಿ ಸಂವತ್ಸರಕ್ಕೂ ವಿಭಿನ್ನ ಹೆಸರಿರುತ್ತದೆ ಮತ್ತು ಈ ವರ್ಷದ ಸಂವತ್ಸರದ ಹೆಸರು ‘ಪರಾಭವ ನಾಮ ಸಂವತ್ಸರ ಶಾಲಿವಾಹನ ಶಕೆ ೧೯೪೮.

೩. ಭಾರತೀಯರು ಮಾಡಬೇಕಾದ ಸಂಕಲ್ಪ

ಇಂದಿನ ಬಂಡವಾಳಶಾಹಿ ಮಾರುಕಟ್ಟೆಯ ಅರ್ಥಶಾಸ್ತ್ರದ ದೃಷ್ಟಿಯಿಂದ ನೋಡುವುದಾದರೆ, ಯುಗಾದಿಯು ಒಂದು ಬೃಹತ್ ಉತ್ಸವವಾಗಿ ಹೊರಹೊಮ್ಮುತ್ತದೆ. ಮೂರೂವರೆ ಮುಹೂರ್ತಗಳಲ್ಲಿ ಒಂದಾದ ಈ ಯುಗಾದಿಯ ಶುಭ ಸಂದರ್ಭದಲ್ಲಿ, ಹೊಸ ವಸ್ತುಗಳ ಖರೀದಿ ಮತ್ತು ಮಾರಾಟವು ಭಾರಿ ಪ್ರಮಾಣದಲ್ಲಿ ನಡೆಯುತ್ತದೆ. ಭೂಮಿ, ಚಿನ್ನ, ಬೆಳ್ಳಿ, ಮನೆ, ವಾಹನ, ಗೃಹಾಲಂಕಾರದ ವಸ್ತುಗಳು ಮತ್ತು ಮನೋರಂಜನೆಯ ಸಾಧನಗಳನ್ನು ಜನರು ಖರೀದಿಸುತ್ತಾರೆ; ಅಷ್ಟೇ ಅಲ್ಲದೆ, ಅನೇಕರು ಹೊಸ ಉದ್ಯಮ ಅಥವಾ ವ್ಯವಹಾರಗಳನ್ನು ಇದೇ ದಿನ ಪ್ರಾರಂಭಿಸುತ್ತಾರೆ. ಪ್ರಸ್ತುತ ಅನೇಕ ಕಡೆಗಳಲ್ಲಿ ಹೊಸ ವರ್ಷದ ಸ್ವಾಗತಕ್ಕಾಗಿ ಭವ್ಯ ಶೋಭಾಯಾತ್ರೆಗಳನ್ನು ಹಮ್ಮಿಕೊಳ್ಳಲಾಗುತ್ತದೆ, ಇದು ಸಮಾಜದಲ್ಲಿ ಒಂದು ವಿಶಿಷ್ಟವಾದ ಸಾಂಸ್ಕೃತಿಕ ವಾತಾವರಣವನ್ನು ನಿರ್ಮಿಸುತ್ತದೆ. ಸಾವಿರಾರು ವರ್ಷಗಳ ಪ್ರಾಚೀನ ಹಾಗೂ ಮಹಾನ್ ವೈದಿಕ ಸಂಸ್ಕೃತಿಯ ವಿಶಾಲ ಪರಂಪರೆಯನ್ನು ಹೊಂದಿರುವ ಭಾರತೀಯರು, ಈ ದಿನದಂದು ‘ವಸುಧೈವ ಕುಟುಂಬಕಮ್’ (ಸಂಪೂರ್ಣ ಪೃಥ್ವಿ ಒಂದು ಕುಟುಂಬ) ಎಂಬ ಉದಾತ್ತ ಸಂಕಲ್ಪವನ್ನು ಮಾಡಬೇಕು !

– ಶ್ರೀ. ಅನಿಲ ದತ್ತಾತ್ರೆಯ ಸಾಖರೆ, ಕೊಪರಿ, ಠಾಣೆ (ಪೂರ್ವ), ಮಹಾರಾಷ್ಟ್ರ (೨೪.೩.೨೦೨೫)