‘ಬೇಸಿಗೆಯ ತೊಂದರೆಗಳನ್ನು ತಪ್ಪಿಸಲು’, ಈ ಮುನ್ನೆಚ್ಚರಿಕೆ ವಹಿಸಿ !

ಬೇಸಿಗೆಯಲ್ಲಿ ಉಂಟಾಗುವ ವಿವಿಧ ಅನಾರೋಗ್ಯ ಸಮಸ್ಯೆಗಳಿಂದ ದೂರವಿರಲು ಪ್ರತಿಯೊಬ್ಬರೂ ಈ ಕೆಳಗಿನ ಜಾಗರೂಕತೆ ವಹಿಸುವುದು ಆವಶ್ಯಕವಾಗಿದೆ.

೧. ದಿನವಿಡೀ ಆವಶ್ಯಕವಿರುವಷ್ಟು ನೀರು ಅಥವಾ ಅಂತಹ ಪಾನೀಯಗಳನ್ನು ಕುಡಿಯಬೇಕು. ಮೂತ್ರವು ಗಾಢ ಬಣ್ಣದಲ್ಲಿದ್ದರೆ ‘ಹೆಚ್ಚು ನೀರು ಕುಡಿಯಬೇಕು’ ಎಂಬುದನ್ನು ಗಮನದಲ್ಲಿಡಬೇಕು. ನೀರು ಕುಡಿಯಲು ಬಾಯಾರಿಕೆಯಾಗುವವರೆಗೆ ಕಾಯಬೇಡಿ. ಫ್ರಿಜ್‌ನಲ್ಲಿನ ಅತಿಯಾದ ತಣ್ಣನೆಯ ನೀರನ್ನು ಕುಡಿಯುವುದನ್ನು ತಪ್ಪಿಸಿ. ಬೆಳಗ್ಗೆ ಮನೆಯಿಂದ ಹೊರಡುವ ಮೊದಲು ಒಂದು ಲೋಟ ನೀರು ಕುಡಿಯಿರಿ. ಹೊರಗೆ ಹೋಗುವಾಗ ನಿಮ್ಮ ಸ್ವಂತ ನೀರಿನ ಬಾಟಲಿಯನ್ನು ಜೊತೆಯಲ್ಲಿಟ್ಟುಕೊಳ್ಳಿ.

೨. ನೀರನ್ನು ಒಂದೇ ಬಾರಿಗೆ ಅತಿಯಾಗಿ ಕುಡಿಯುವ ಬದಲು, ನಿಧಾನವಾಗಿ ಗುಟುಕು-ಗುಟುಕಾಗಿ ಕುಡಿಯಿರಿ. ಬಿಸಿಲಿನಿಂದ ಬಂದ ತಕ್ಷಣ ನೀರು ಕುಡಿಯದೇ ೫ ರಿಂದ ೧೦ ನಿಮಿಷಗಳ ಕಾಲ ವಿಶ್ರಾಂತಿ ಪಡೆದು ನಂತರ ನೀರು ಕುಡಿಯಿರಿ.

೩. ಸಕ್ಕರೆ ಇರುವ ಪಾನೀಯಗಳನ್ನು ಕುಡಿಯಬಹುದು; ಆದರೆ ಅತಿಯಾದ ಸಕ್ಕರೆ ಇರುವ ಪಾನೀಯಗಳು ಜೀರ್ಣಿಸಿಕೊಳ್ಳಲು ಜಡವಾಗಿರುವುದರಿಂದ ಸಾಧ್ಯವಾದಷ್ಟು ಅವುಗಳನ್ನು ಕುಡಿಯಬಾರದು. ಸಾಧ್ಯವಾದರೆ ದೈನಂದಿನ ಆಹಾರದಲ್ಲಿ ಮಜ್ಜಿಗೆ ಅಥವಾ ಪಾನಕವನ್ನು ಸೇರಿಸಿ. ಮಣ್ಣಿನ ಮಡಕೆಯ ತಣ್ಣನೆಯ ನೀರಿನಲ್ಲಿ ತಯಾರಿಸಿದ ಶರಬತ್ತುಗಳು ಅಥವಾ ಲಾವಂಚ, ಗುಲಾಬಿ, ಪಾರಿಜಾತ ಮುಂತಾದ ಸುಗಂಧದ್ರವ್ಯಗಳನ್ನು ಹಾಕಿದ ಮಡಕೆಯಲ್ಲಿನ ತಣ್ಣನೆಯ ನೀರನ್ನು ಕುಡಿಯಿರಿ.

೪. ಹೊರಗಿನ ಆಹಾರ ಪದಾರ್ಥಗಳನ್ನು ತಿನ್ನುವುದನ್ನು ತಪ್ಪಿಸಿ. ಒಗರು, ಖಾರ, ಕಹಿ ಮತ್ತು ಅತಿಯಾದ ಹುಳಿ ರುಚಿಯ ಪದಾರ್ಥಗಳನ್ನು ಹೆಚ್ಚು ಸೇವಿಸಬೇಡಿ.

೫. ಸಡಿಲವಾದ, ತಿಳಿ ಬಣ್ಣದ ಮತ್ತು ಹಗುರವಾದ (ಸಾಧ್ಯವಾದರೆ ಹತ್ತಿ ಬಟ್ಟೆ) ಉಡುಪುಗಳನ್ನು ಧರಿಸಿ.

ವೈದ್ಯೆ (ಸೌ.) ಶರ್ವರಿ ಜೋಶಿ

೬. ಬಿಸಿಲು ಹೆಚ್ಚಿರುವಾಗ ಮನೆಯಲ್ಲಿ ಅಥವಾ ನೆರಳಿರುವ ಸ್ಥಳದಲ್ಲಿ ಇರಿ.

೭. ಸಾಧ್ಯವಾದಷ್ಟು ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೪ ರವರೆಗೆ ಮನೆಯಿಂದ ಹೊರಗೆ ಹೋಗಬೇಡಿ. ‘ಬಿಸಿಲಿನ ಶಾಖ ತಗಲಬಾರದೆಂದು’, ಹೊರಗೆ ಹೋಗುವಾಗ ಕಪ್ಪು ಕನ್ನಡಕ (sunglass) ಧರಿಸಿ. ಛತ್ರಿ ಅಥವಾ ‘ಸಂಪೂರ್ಣ ತಲೆಯನ್ನು ಮುಚ್ಚುವ ಟೊಪ್ಪಿಗೆಯನ್ನು ಬಳಸಿ. ಟೋಪಿ ಲಭ್ಯವಿಲ್ಲದಿದ್ದರೆ ತಲೆ ಮತ್ತು ಕಿವಿಗಳಿಗೆ ದೊಡ್ಡ ಬಿಳಿ ರುಮಾಲನ್ನು ಕಟ್ಟಿಕೊಳ್ಳಿ.

೮. ಕೆಲವರು ಅಧ್ಯಾತ್ಮ ಪ್ರಸಾರದ ಸೇವೆ ಅಥವಾ ಇತರ ಕಾರಣಗಳಿಗಾಗಿ ಹೊರಗೆ ಹೋಗಬೇಕಾಗುತ್ತದೆ ಅಥವಾ ಪ್ರಯಾಣಿಸಬೇಕಾಗುತ್ತದೆ. ಅಂತಹವರು ‘ಬಿಸಿಲಿನ ತೊಂದರೆ ಯಾಗಬಾರದು’, ಎಂಬುದಕ್ಕಾಗಿ ಪುರುಷರು ಜೇಬಿನಲ್ಲಿ ಮತ್ತು ಮಹಿಳೆಯರು ತಮ್ಮ ಪರ್ಸ್‌ನಲ್ಲಿ ಒಂದು ಈರುಳ್ಳಿಯನ್ನು ಇಟ್ಟುಕೊಳ್ಳಬೇಕು. ಈರುಳ್ಳಿಯು ದೇಹದ ಉಷ್ಣತೆಯನ್ನು ಹೀರಿ ಕೊಳ್ಳುವುದರಿಂದ ೩-೪ ದಿನಗಳಲ್ಲಿ ಅದು ಒಣಗುತ್ತದೆ. ಒಣಗಿದ ಈರುಳ್ಳಿಯನ್ನು ಎಸೆದು ಹೊಸ ಈರುಳ್ಳಿಯನ್ನು ಜೊತೆಯಲ್ಲಿ ಇಟ್ಟುಕೊಳ್ಳಬೇಕು.

೯. ವಾತಾವರಣದಲ್ಲಿ ತಂಪು ಇರಲು ಕೂಲರ್‌ನ (ವಾಯುಶೀತಲೀಕರಣ ಯಂತ್ರ) ವ್ಯವಸ್ಥೆ ಇದ್ದರೆ, ದಿನದ ಕೆಲವು ಗಂಟೆಗಳ ಕಾಲ ಅದನ್ನು ಬಳಸಿ.

೧೦. ರಾತ್ರಿ ಜಾಗರಣೆ ಮಾಡುವುದರಿಂದ ದೇಹದಲ್ಲಿ ಪಿತ್ತ ಮತ್ತು ವಾತ ದೋಷಗಳು ಹೆಚ್ಚಾಗುತ್ತವೆ. ಆದ್ದರಿಂದ ಅತಿಯಾದ ಜಾಗರಣೆಯನ್ನು ತಪ್ಪಿಸಿ. (ಈ ಮುನ್ನೆಚ್ಚರಿಕೆಯನ್ನು ಎಲ್ಲಾ ಋತುಗಳಲ್ಲೂ ಪಾಲಿಸುವುದು ಆವಶ್ಯಕವಾಗಿದೆ.)

೧೧. ಈ ದಿನಗಳಲ್ಲಿ ಹೆಚ್ಚು ಬೆವರು ಬರುವುದರಿಂದ ಬೇಗನೆ ಸುಸ್ತಾಗುತ್ತದೆ. ಆದ್ದರಿಂದ ವ್ಯಾಯಾಮವನ್ನು ಸ್ವಲ್ಪ ಕಡಿಮೆ ಮಾಡಬೇಕು.

೧೨. ೧ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಹಾಗೆಯೇ ೬೫ ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳ ಬಗ್ಗೆ ಮೇಲಿನ ಅಂಶಗಳ ಆಧಾರದ ಮೇಲೆ ವಿಶೇಷ ಕಾಳಜಿ ವಹಿಸುವುದು ಆವಶ್ಯಕವಾಗಿದೆ.’ (೪.೨.೨೦೨೬)

– ವೈದ್ಯೆ (ಸೌ.) ಶರ್ವರಿ ಅಮೋಘ ಜೋಶಿ, ವಾಳಪಯೀ, ಸತ್ತರಿ, ಗೋವಾ.