ಯುದ್ಧ ನಿಲ್ಲಿಸುವುದು ಆಕ್ರಮಣಕಾರರ ಕೈಯಲ್ಲಿದೆ! – ಇರಾನ್

  • ನಾವು ಆಕ್ರಮಣ ನಿಲ್ಲಿಸುವುದಿಲ್ಲ! – ಇಸ್ರೇಲ್ ಪ್ರತ್ಯುತ್ತರ

  • ಓಮನ್ ಬಳಿ ವ್ಯಾಪಾರಿ ನೌಕೆಯ ಮೇಲೆ ಇರಾನ್ ದಾಳಿ: ಮೂವರು ಭಾರತೀಯರ ಸಾವು

ತೆಹರಾನ್‌ನಲ್ಲಿ ದಾಳಿಯ ನಂತರ ನಾಶಗೊಂಡ ಕಟ್ಟಡ (ಸೌಜನ್ಯ : Majid Asgaripour/WANA/REUTERS)

ತೆಹ್ರಾನ್ (ಇರಾನ್) – ಅಮೆರಿಕ ಮತ್ತು ಇಸ್ರೇಲ್‌ನಿಂದ ಇರಾನ್ ಮೇಲೆ ಹಾಗೂ ಇರಾನ್‌ನಿಂದ ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಕುವೈತ್, ಕತಾರ್, ಓಮನ್, ಜೋರ್ಡಾನ್ ಮತ್ತು ಬಹ್ರೇನ್ ದೇಶಗಳಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳು ಹಾಗೂ ನಾಗರಿಕ ವಸತಿ ಪ್ರದೇಶಗಳ ಮೇಲೆ ದಾಳಿಗಳು ನಡೆಯುತ್ತಿವೆ. ಇರಾನ್ ಪರ ಹೋರಾಡುವ ಭಯೋತ್ಪಾದಕ ಸಂಘಟನೆಗಳೂ ಸಹ ಅಮೆರಿಕದ ರಾಯಭಾರ ಕಚೇರಿಗಳ ಮೇಲೆ ದಾಳಿ ನಡೆಸುತ್ತಿವೆ. ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ನೆಲೆಗಳ ಮೇಲೆ ಇಸ್ರೇಲ್ ದಾಳಿಗಳು ನಾಲ್ಕನೇ ದಿನವೂ ಮುಂದುವರಿದಿವೆ. ಈ ಯುದ್ಧ ಇನ್ನೂ ಅನೇಕ ದಿನಗಳ ಕಾಲ ನಡೆಯಲಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. ಈ ನಡುವೆ ಇರಾನ್, ‘ಯುದ್ಧ ನಿಲ್ಲಿಸುವುದು ಆಕ್ರಮಣಕಾರರ ಕೈಯಲ್ಲಿದೆ’ ಎಂದು ಹೇಳಿಕೆ ನೀಡಿದ್ದರೆ, ‘ನಾವು ಆಕ್ರಮಣ ನಿಲ್ಲಿಸುವ ಪ್ರಯತ್ನ ಮಾಡುತ್ತಿಲ್ಲ’ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ.

ಇದೇ ಸಮಯದಲ್ಲಿ ಓಮನ್ ಸಮುದ್ರ ವ್ಯಾಪ್ತಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಎರಡು ವ್ಯಾಪಾರಿ ನೌಕೆಗಳಿಗೆ ಬೆಂಕಿ ತಗುಲಿದ್ದು, ಕನಿಷ್ಠ ಮೂವರು ಭಾರತೀಯರು ಸಾವನ್ನಪ್ಪಿದ್ದಾರೆ ಮತ್ತು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಓಮನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಘಟನೆಯನ್ನು ಖಚಿತಪಡಿಸಿದ್ದು, ಸ್ಥಳೀಯ ಆಡಳಿತದ ಸಹಯೋಗದೊಂದಿಗೆ ಪರಿಹಾರ ಕಾರ್ಯ ನಡೆಯುತ್ತಿದೆ.

ಭಾರತೀಯ ರಾಯಭಾರ ಕಚೇರಿಯ ಮಾಹಿತಿಯ ಪ್ರಕಾರ, ‘ಮಾರ್ಷಲ್ ಐಲ್ಯಾಂಡ್ಸ್’ ಧ್ವಜ ಹೊಂದಿದ್ದ ‘ಎಂಕೆಡಿ ವ್ಯೋಮ್’ ಎಂಬ ತೈಲ ಟ್ಯಾಂಕರ್ ಮೇಲೆ ದಾಳಿ ನಡೆದು ಬೆಂಕಿ ಹೊತ್ತಿಕೊಂಡಿದೆ. ಈ ನೌಕೆಯು ಮಸ್ಕತ್‌ನಿಂದ ಸುಮಾರು 52 ನಾಟಿಕಲ್ ಮೈಲಿ ದೂರದಲ್ಲಿತ್ತು. ಇದರಲ್ಲಿ ಕೆಲಸ ಮಾಡುತ್ತಿದ್ದ ಮೂವರು ಭಾರತೀಯರು ಮೃತಪಟ್ಟಿದ್ದಾರೆ. ನೌಕೆಯಲ್ಲಿದ್ದ 21 ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, 16 ಭಾರತೀಯರು, 4 ಬಾಂಗ್ಲಾದೇಶದವರು ಮತ್ತು ಒಬ್ಬ ಉಕ್ರೇನ್ ಪ್ರಜೆಯನ್ನು ಕಾಪಾಡಲಾಗಿದೆ.

ಘಾಟನಾವಾಳಿ

  • ಇರಾನ್ ದಾಳಿ; ಸೌದಿ ಅರೇಬಿಯಾದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಬಂದ್.
  • ಇರಾನ್ ಸೇನೆಯ ಕಮಾಂಡ್ ಮತ್ತು ನಿಯಂತ್ರಣ ವ್ಯವಸ್ಥೆಯನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆಯ ದಾವೆ.
  • ಇರಾನ್‌ನ ಕನಿಷ್ಠ 787 ನಾಗರಿಕರ ಸಾವು, 900ಕ್ಕೂ ಹೆಚ್ಚು ಮಂದಿಗೆ ಗಾಯ.
  • ಅಮೆರಿಕದ ನಾಲ್ವರು ಸೈನಿಕರ ಸಾವು.

ಭಾರತೀಯರನ್ನು ಮರಳಿ ಕರೆತರುವ ಪ್ರಕ್ರಿಯೆ ಆರಂಭ

ಮಾರ್ಚ್ 2ರ ತಡರಾತ್ರಿ ಯುಎಇಯ ಅಬುಧಾಬಿಯಿಂದ ಭಾರತೀಯರನ್ನು ಹೊತ್ತ 4 ವಿಮಾನಗಳು ದೆಹಲಿ, ಮುಂಬಯಿ, ಬೆಂಗಳೂರು ಮತ್ತು ಚೆನ್ನೈ ತಲುಪಿವೆ. ಸೌದಿ ಅರೇಬಿಯಾದ ಜೆದ್ದಾದಿಂದ ದೆಹಲಿ, ಕರ್ಣಾವತಿ (ಅಹಮದಾಬಾದ್), ಮುಂಬಯಿ ಮತ್ತು ಭಾಗ್ಯನಗರಕ್ಕೆ (ಹೈದರಾಬಾದ್) 10 ವಿಶೇಷ ವಿಮಾನಗಳು ಹಾರಾಟ ನಡೆಸಲಿವೆ. ಇದರೊಂದಿಗೆ ದುಬೈನಿಂದಲೂ ಭಾರತೀಯರನ್ನು ವಿಮಾನದ ಮೂಲಕ ಕರೆತರಲಾಗುವುದು.

ರಷ್ಯಾದಿಂದ ಭಾರತಕ್ಕೆ 5 ‘ಎಸ್-400 ಸುದರ್ಶನ’ ರಕ್ಷಣಾ ವ್ಯವಸ್ಥೆ

‘ಆಪರೇಷನ್ ಸಿಂದೂರ್’ ಸಮಯದಲ್ಲಿ ‘ಎಸ್-400’ ವಾಯು ರಕ್ಷಣಾ ವ್ಯವಸ್ಥೆಯು ಪ್ರಮುಖ ಪಾತ್ರ ವಹಿಸಿತ್ತು ಮತ್ತು ಪಾಕಿಸ್ತಾನದ 5-6 ಯುದ್ಧ ವಿಮಾನಗಳನ್ನು ಹಾಗೂ ಒಂದು ಗೂಢಚಾರಿ ವಿಮಾನವನ್ನು 300 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದಲ್ಲೇ ಹೊಡೆದುರುಳಿಸಿತ್ತು. ಈಗ ಭಾರತವು ರಷ್ಯಾದಿಂದ ಇನ್ನಷ್ಟು 5 ‘ಎಸ್-400 ಸುದರ್ಶನ’ ವಾಯು ರಕ್ಷಣಾ ವ್ಯವಸ್ಥೆಗಳನ್ನು ಖರೀದಿಸಲಿದೆ. ರಕ್ಷಣಾ ಸಚಿವಾಲಯವು ಶೀಘ್ರದಲ್ಲೇ ಈ ಪ್ರಸ್ತಾವನೆಯನ್ನು ಅನುಮೋದನೆಗೆ ಕಳುಹಿಸಲಿದೆ. ಈ ವ್ಯವಸ್ಥೆಯನ್ನು ಚೀನಾ ಮತ್ತು ಪಾಕಿಸ್ತಾನ ಎರಡೂ ಗಡಿಗಳಲ್ಲಿ ನಿಯೋಜಿಸಲಾಗುವುದು.

ಇರಾನ್ ಬಳಿ 11 ಪರಮಾಣು ಬಾಂಬ್ ತಯಾರಿಸಲು ಬೇಕಾದಷ್ಟು ಯುರೇನಿಯಂ!

ಅಮೆರಿಕದ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಅವರು, ಇರಾನ್‌ನ ಪ್ರಮುಖ ಸಂಧಾನಕಾರರು ಮೊದಲ ಸುತ್ತಿನ ಮಾತುಕತೆಯಲ್ಲಿ ತಮ್ಮ ಬಳಿ 460 ಕಿಲೋಗ್ರಾಂನಷ್ಟು ಶೇ. 60% ರಷ್ಟು ಪುಷ್ಟೀಕರಿಸಿದ ಯುರೇನಿಯಂ ಇದೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಸಂಗ್ರಹದಿಂದ 11 ಪರಮಾಣು ಬಾಂಬ್‌ಗಳನ್ನು ತಯಾರಿಸಬಹುದೆಂಬ ಅರಿವು ಅವರಿಗಿದೆ.

ದುಬೈನಲ್ಲಿರುವ ಆಸ್ಟ್ರೇಲಿಯಾ ವಾಯುಪಡೆ ನೆಲೆಯ ಮೇಲೆ ದಾಳಿ

ದುಬೈನಲ್ಲಿರುವ ಆಸ್ಟ್ರೇಲಿಯಾದ ವಾಯುಪಡೆ ನೆಲೆಯನ್ನು ಇರಾನ್ ಗುರಿಯಾಗಿಸಿಕೊಂಡಿದೆ ಎಂದು ಆಸ್ಟ್ರೇಲಿಯಾದ ರಕ್ಷಣಾ ಸಚಿವ ರಿಚರ್ಡ್ ಮಾರ್ಲೆಸ್ ಮಾಹಿತಿ ನೀಡಿದ್ದಾರೆ. ಸಂಘರ್ಷದ ಮೊದಲ ರಾತ್ರಿಯೇ ಅಲ್ ಮಿನ್ಹಾದ್ ವಾಯುನೆಲೆಯ ಮೇಲೆ ದಾಳಿ ನಡೆದಿದ್ದು, ಅಲ್ಲಿ ನಿಯೋಜಿಸಲಾದ ಆಸ್ಟ್ರೇಲಿಯಾದ ಎಲ್ಲಾ ಸೈನಿಕರು ಸುರಕ್ಷಿತವಾಗಿದ್ದಾರೆಂದು ಅವರು ಸ್ಪಷ್ಟಪಡಿಸಿದ್ದಾರೆ. ಆಸ್ಟ್ರೇಲಿಯಾದ ಸುಮಾರು 100 ಸೈನಿಕರು ಮಧ್ಯಪ್ರಾಚ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದು, ಹೆಚ್ಚಿನವರು ಯುಎಇಯಲ್ಲಿದ್ದಾರೆ.

ಬಹ್ರೇನ್‌ನಲ್ಲಿ ಶಿಯಾ ಬೆಂಬಲಿಗರ ಹಿಂಸಾಚಾರ, ಅಮೆರಿಕ ನೆಲೆಯ ಮೇಲೆ ದಾಳಿ

ಇರಾನ್ ಸೇನೆಯು ಬಹ್ರೇನ್‌ನ ಶೇಖ್ ಈಸಾ ಪ್ರದೇಶದಲ್ಲಿರುವ ಅಮೆರಿಕದ ವಾಯುನೆಲೆಯ ಮೇಲೆ ದೊಡ್ಡ ದಾಳಿ ನಡೆಸಿದೆ. ಈ ದಾಳಿಯಲ್ಲಿ 20 ಡ್ರೋನ್ ಮತ್ತು 3 ಕ್ಷಿಪಣಿಗಳನ್ನು ಬಳಸಲಾಯಿತು. ಅಮೆರಿಕದ ಪ್ರಮುಖ ಕಮಾಂಡ್ ಮತ್ತು ಕೇಂದ್ರ ಕಚೇರಿಯ ಕಟ್ಟಡವನ್ನು ಗುರಿಯಾಗಿಸಲಾಗಿದೆ ಎಂದು ಹೇಳಲಾಗಿದೆ. ಒಂದು ಇಂಧನ ಟ್ಯಾಂಕರ್‌ಗೆ ಬೆಂಕಿ ಹೊತ್ತಿಕೊಂಡಿದೆ. ಬಹ್ರೇನ್ ಈ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಬಹ್ರೇನ್‌ನ ರಸ್ತೆಗಳಲ್ಲಿ ತೀವ್ರ ಹಿಂಸಾಚಾರ ನಡೆಯುತ್ತಿದ್ದು, ಶಿಯಾ ಬೆಂಬಲಿಗರು ವ್ಯಾಪಕವಾಗಿ ಆಸ್ತಿ-ಪಾಸ್ತಿ ನಾಶಮಾಡುತ್ತಿದ್ದಾರೆ. ಸಹಾಯಕ್ಕಾಗಿ ಸೌದಿ ಅರೇಬಿಯಾ ಭದ್ರತಾ ಪಡೆಗಳನ್ನು ಕಳುಹಿಸಿದೆ ಎಂದು ವರದಿಯಾಗಿದೆ.

ಲಾಹೋರ್‌ನಲ್ಲಿ ಅಮೆರಿಕ ರಾಯಭಾರ ಕಚೇರಿ ಮೇಲೆ ಮುಸ್ಲಿಮರಿಂದ ದಾಳಿ

ಎರಡು ದಿನಗಳ ಹಿಂದೆ ಕರಾಚಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮೇಲೆ ಸ್ಥಳೀಯ ಮುಸ್ಲಿಮರು ದಾಳಿ ನಡೆಸಿ ಬೆಂಕಿ ಹಚ್ಚಿದ್ದರು. ಆಗ ಅಮೆರಿಕ ಸೈನಿಕರು ನಡೆಸಿದ ಗುಂಡಿನ ದಾಳಿಯಲ್ಲಿ 23 ಮಂದಿ ಸಾವನ್ನಪ್ಪಿದ್ದರು. ಈಗ ಪಾಕಿಸ್ತಾನದ ಲಾಹೋರ್‌ನಲ್ಲಿ ಸ್ಥಳೀಯ ಮುಸ್ಲಿಮರು ಅಮೆರಿಕ ರಾಯಭಾರ ಕಚೇರಿಯ ಮೇಲೆ ದೊಡ್ಡ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆಸಿದ್ದು, ಕಚೇರಿಯ ಆವರಣಕ್ಕೆ ಬೆಂಕಿ ಹಚ್ಚಿದ್ದಾರೆ.

ಅಮೆರಿಕ ಸುದೀರ್ಘ ಕಾಲ ಯುದ್ಧ ಮಾಡಬಲ್ಲದು! – ಟ್ರಂಪ್

ಇರಾನ್ ವಿರುದ್ಧದ ಯುದ್ಧವು ದೀರ್ಘಕಾಲ ಮುಂದುವರಿಯಬಹುದೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಮೆರಿಕ ಸೇನೆಯ ಬಳಿ ಅಗತ್ಯ ಶಸ್ತ್ರಾಸ್ತ್ರ ಸಂಗ್ರಹವಿದ್ದು, ನಾವು ವಿಜಯಕ್ಕಾಗಿ ಸನ್ನದ್ಧರಾಗಿದ್ದೇವೆ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದರು.

ಇರಾನ್ ಗೆ ಚೀನಾದ ಬಹಿರಂಗ ಬೆಂಬಲ

ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅಘಾರ್ಚಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಇರಾನ್‌ನ ಸಾರ್ವಭೌಮತ್ವ, ಭದ್ರತೆ, ಭೌಗೋಳಿಕ ಸಮಗ್ರತೆ ಮತ್ತು ರಾಷ್ಟ್ರೀಯ ಘನತೆಯನ್ನು ರಕ್ಷಿಸುವ ಪ್ರಯತ್ನಗಳಿಗೆ ಚೀನಾ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ನಮ್ಮ ನೆರೆಯ ಇಸ್ಲಾಮಿಕ್ ರಾಷ್ಟ್ರಗಳೊಂದಿಗೆ ನಮಗೆ ಶತ್ರುತ್ವವಿಲ್ಲ! – ಇರಾನ್ ಸೇನೆ

“ನಮ್ಮ ನೆರೆಯ ಇಸ್ಲಾಮಿಕ್ ರಾಷ್ಟ್ರಗಳೊಂದಿಗೆ ನಮಗೆ ಯಾವುದೇ ಶತ್ರುತ್ವವಿಲ್ಲ. ನಮ್ಮ ಗುರಿ ಕೇವಲ ಅಮೆರಿಕ ಮತ್ತು ಇಸ್ರೇಲ್ ಮಾತ್ರ. ಈ ಎರಡು ದೇಶಗಳೊಂದಿಗೆ ಮಾತ್ರ ನಮಗೆ ಶತ್ರುತ್ವವಿದೆ. ನಾವು ಅವರ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡಿದ್ದೇವೆ,” ಎಂದು ಇರಾನ್‌ನ ಸಶಸ್ತ್ರ ಪಡೆ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ ಸ್ಪಷ್ಟಪಡಿಸಿದೆ. ಇರಾನ್ ಸೇನೆಯು ನೆರೆಯ ರಾಷ್ಟ್ರಗಳಾದ ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಕುವೈತ್, ಕತಾರ್, ಓಮನ್, ಜೋರ್ಡಾನ್ ಮತ್ತು ಬಹ್ರೇನ್‌ನಂತಹ ಇಸ್ಲಾಮಿಕ್ ದೇಶಗಳಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಹಾಗೂ ನಾಗರಿಕ ವಸತಿ ಪ್ರದೇಶಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಇರಾನ್ ಸೇನೆಯು ಈ ಸ್ಪಷ್ಟನೆಯನ್ನು ನೀಡಿದೆ.