ಫಾಲ್ಗುಣ ಪೂರ್ಣಿಮೆ (೩.೩.೨೦೨೬) ರಂದು ಸಂಭವಿಸುವ ಖಗ್ರಾಸ ಚಂದ್ರಗ್ರಹಣ (ಗ್ರಸ್ತೋದಿತ), ಗ್ರಹಣದ ಅವಧಿಯಲ್ಲಿ ಪಾಲಿಸಬೇಕಾದ ನಿಯಮಗಳು ಮತ್ತು ರಾಶಿಗಳ ಮೇಲಾಗುವ ಫಲಗಳು!

‘ಫಾಲ್ಗುಣ ಪೂರ್ಣಿಮೆ (೩.೩.೨೦೨೬, ಮಂಗಳವಾರ) ರಂದು ಸಂಭವಿಸುವ ಖಗ್ರಾಸ ಚಂದ್ರಗ್ರಹಣವು ಭಾರತದಲ್ಲಿ ಗ್ರಸ್ತೋದಿತವಾಗಿ ಕಾಣಿಸಲಿದೆ. ಗ್ರಸ್ತೋದಿತ ಎಂದರೆ ಗ್ರಹಣ ಹಿಡಿದ ಚಂದ್ರಬಿಂಬವು ಉದಯಿಸುವುದನ್ನು ಕಾಣಬಹುದು. ಭಾರತದಲ್ಲಿ ಎಲ್ಲಿಯೂ ಈ ಗ್ರಹಣದ ಸ್ಪರ್ಶ ಮತ್ತು ಮಧ್ಯಕಾಲ ಕಾಣಿಸುವುದಿಲ್ಲ. ಗುಜರಾತ್‌ನ ರಾಜ್‌ಕೋಟ್, ವೇರಾವಳ, ಪೋರಬಂದರ್, ಜಾಮನಗರ, ಜುನಾಗಢ್, ಗಾಂಧಿಧಾಮ್ ಈ ಪ್ರದೇಶಗಳಲ್ಲಿ ಸಂಜೆ ೬.೪೮ ರ ನಂತರ ಸೂರ್ಯಾಸ್ತವಾಗುವುದರಿಂದ ಈ ಪ್ರದೇಶಗಳಲ್ಲಿ ಈ ಗ್ರಹಣವು ಕಾಣಿಸುವುದಿಲ್ಲ. ಆ ಪ್ರದೇಶಗಳಲ್ಲಿ ವಾಸಿಸುವ ವ್ಯಕ್ತಿಗಳು ಗ್ರಹಣದ ಯಾವುದೇ ನಿಯಮಗಳನ್ನು ಪಾಲಿಸಬೇಕಾಗಿಲ್ಲ.

೧. ಗ್ರಹಣ ಕಾಣಿಸುವ ಪ್ರದೇಶಗಳು

‘ಭಾರತ ಸೇರಿದಂತೆ ಪೂರ್ವ ಏಷ್ಯಾ, ಜಪಾನ್, ರಷ್ಯಾದ ಮಧ್ಯ ಮತ್ತು ಪೂರ್ವ ಪ್ರದೇಶ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸಂಪೂರ್ಣ ಅಮೆರಿಕಾ, ಕೆನಡಾ, ಗ್ರೀನ್‌ಲ್ಯಾಂಡ್, ದಕ್ಷಿಣ ಅಮೆರಿಕಾ ಮತ್ತು ಅಂಟಾರ್ಟಿಕಾದ ಕೆಲವು ಪ್ರದೇಶಗಳಲ್ಲಿ’ ಈ ಚಂದ್ರಗ್ರಹಣವು ಕಾಣಿಸಲಿದೆ.

೨. ಗ್ರಹಣದ ವೇಧ (ಸೂತಕ) ಕಾಲ

೨ ಅ. ಅರ್ಥ: ಚಂದ್ರಗ್ರಹಣಕ್ಕೆ ಮೊದಲು ಚಂದ್ರನು ಸೂರ್ಯನ ಛಾಯೆಗೆ ಬರಲಾರಂಭಿಸುತ್ತಾನೆ. ಇದರಿಂದಾಗಿ ಅವನ ಪ್ರಕಾಶವು ನಿಧಾನವಾಗಿ ಕಡಿಮೆ ಆಗಲು ಪ್ರಾರಂಭವಾಗುತ್ತದೆ. ಇದನ್ನೇ ‘ಗ್ರಹಣದ ವೇಧ ಆರಂಭವಾಯಿತು’ ಎಂದು ಕರೆಯುತ್ತಾರೆ.

೨ ಆ. ಗ್ರಹಣ ವೇಧಾರಂಭ: ಈ ಗ್ರಹಣವು ಗ್ರಸ್ತೋದಿತವಾಗಿರುವುದರಿಂದ ಮಂಗಳವಾರ, ೩ ಮಾರ್ಚ್ ೨೦೨೬ ರಂದು ಸೂರ್ಯೋದಯದಿಂದ ಗ್ರಹಣ ಮೋಕ್ಷದವರೆಗೆ (ಸಂಜೆ ೬.೪೮ ರವರೆಗೆ) ಗ್ರಹಣದ ವೇಧವನ್ನು ಪಾಲಿಸಬೇಕು. ಮಕ್ಕಳು, ವೃದ್ಧರು, ರೋಗಿಗಳು, ಅಶಕ್ತ ವ್ಯಕ್ತಿಗಳು ಮತ್ತು ಗರ್ಭಿಣಿಯರು ಮಂಗಳವಾರ ಬೆಳಿಗ್ಗೆ ೧೧ ಗಂಟೆಯಿಂದ ಗ್ರಹಣ ಮೋಕ್ಷದವರೆಗೆ ವೇಧವನ್ನು ಪಾಲಿಸಬೇಕು. ವೇಧಕಾಲದಲ್ಲಿ ಸ್ನಾನ, ದೇವರಪೂಜೆ, ಜಪ, ಶ್ರಾದ್ಧ ಈ ಕರ್ಮಗಳನ್ನು ಮಾಡಬಹುದು. ವೇಧಕಾಲದಲ್ಲಿ ಭೋಜನ ಮಾಡುವುದು ನಿಷಿದ್ಧವಾಗಿದೆ; ಆದರೆ ವೇಧಕಾಲದಲ್ಲಿ ಇತರ ಅವಶ್ಯಕವಾದ ನೀರು ಕುಡಿಯುವುದು, ಮಲ-ಮೂತ್ರ ವಿಸರ್ಜನೆ, ನಿದ್ರೆ ಮಾಡುವುದು ಈ ಕಾರ್ಯಗಳನ್ನು ಮಾಡಬಹುದು. ಗ್ರಹಣ ಪರ್ವಕಾಲದಲ್ಲಿ (ಸೂತ್ರ ಸಂಖ್ಯೆ ‘೩ ಊ’ ದಲ್ಲಿ ಅರ್ಥ ನೀಡಲಾಗಿದೆ) ಅಂದರೆ ನಮ್ಮೂರಿನ ಸೂರ್ಯಾಸ್ತದಿಂದ ಗ್ರಹಣ ಮೋಕ್ಷದವರೆಗೆ (ಸಂಜೆ ೬.೪೮ ರವರೆಗೆ) ಈ ಅವಧಿಯಲ್ಲಿ ನೀರು ಕುಡಿಯುವುದು, ಮಲ-ಮೂತ್ರ ವಿಸರ್ಜನೆ ಮಾಡಬಾರದು.

೩. ಚಂದ್ರಗ್ರಹಣದ ಸಮಯ (ಭಾರತೀಯ ಪ್ರಮಾಣಿತ ಸಮಯದಂತೆ)

೩ ಅ. ಸ್ಪರ್ಶ (ಆರಂಭ): ಮಧ್ಯಾಹ್ನ ೩.೨೦ ಕ್ಕೆ

೩ ಆ. ಸಂಮೀಲನ (ಸಂಯೋಗ): ಸಂಜೆ ೪.೩೪ ಕ್ಕೆ

೩ ಇ. ಮಧ್ಯ: ಸಂಜೆ ೫.೦೪ ಕ್ಕೆ

೩ ಈ. ಉನ್ಮೀಲನ (ಬಿಡುಗಡೆ ಆರಂಭ): ಸಂಜೆ ೫.೩೩ ಕ್ಕೆ

೩ ಉ. ಮೋಕ್ಷ (ಅಂತ್ಯ): ಸಂಜೆ ೬.೪೮ ಕ್ಕೆ

೩ ಊ. ಗ್ರಹಣ ಪರ್ವ (ಟಿಪ್ಪಣಿ ೧) (ಗ್ರಹಣದ ಆರಂಭದಿಂದ ಮುಕ್ತಾಯದವರೆಗಿನ ಒಟ್ಟು ಅವಧಿ): ೩ ಗಂಟೆ ೨೮ ನಿಮಿಷಗಳು.

(ಮೇಲಿನ ಎಲ್ಲಾ ಸಮಯಗಳು ಇಡೀ ಭಾರತಕ್ಕೆ ಅನ್ವಯಿಸುತ್ತವೆ.)

ಟಿಪ್ಪಣಿ ೧: ಪರ್ವ ಎಂದರೆ ಪರ್ವಣಿ ಅಥವಾ ಪುಣ್ಯಕಾಲ ಎಂದರ್ಥ. ಗ್ರಹಣ ಸ್ಪರ್ಶದಿಂದ ಗ್ರಹಣ ಮೋಕ್ಷದವರೆಗಿನ ಕಾಲವು ಪುಣ್ಯಕಾಲವಾಗಿದೆ. ‘ಈ ಕಾಲದಲ್ಲಿ ಈಶ್ವರನ ಅನುಸಂಧಾನದಲ್ಲಿದ್ದರೆ ಆಧ್ಯಾತ್ಮಿಕ ಲಾಭವಾಗುತ್ತದೆ’ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

೪. ರಾಶಿಗಳ ಮೇಲಾಗುವ ಫಲಗಳು

೪ ಅ. ಶುಭ ಫಲ: ಮಿಥುನ, ತುಲಾ, ವೃಶ್ಚಿಕ ಮತ್ತು ಮೀನ

೪ ಆ. ಅಶುಭ ಫಲ: ವೃಷಭ, ಸಿಂಹ, ಕನ್ಯಾ ಮತ್ತು ಮಕರ

೪ ಇ. ಮಿಶ್ರ ಫಲ: ಮೇಷ, ಕರ್ಕ, ಧನು ಮತ್ತು ಕುಂಭ

ಯಾವ ರಾಶಿಗಳಿಗೆ ಅಶುಭ ಫಲವಿದೆಯೋ, ಅಂತಹ ವ್ಯಕ್ತಿಗಳು ಮತ್ತು ಗರ್ಭಿಣಿ ಮಹಿಳೆಯರು ಈ ಗ್ರಹಣವನ್ನು ನೋಡಬಾರದು. (ಕೃಪೆ: ದಾತೆ ಪಂಚಾಂಗ)

೫. ಗ್ರಹಣ ಕಾಲದಲ್ಲಿ ಯಾವ ಕರ್ಮಗಳನ್ನು ಮಾಡಬೇಕು?

ಅ. ಗ್ರಹಣ ಸ್ಪರ್ಶವಾಗುತ್ತಿದ್ದಂತೆ ಸ್ನಾನ ಮಾಡಬೇಕು.

ಆ. ಪರ್ವಕಾಲದಲ್ಲಿ ದೇವಪೂಜೆ, ತರ್ಪಣ, ಶ್ರಾದ್ಧ, ಜಪ, ಹೋಮ ಮತ್ತು ದಾನ ಮಾಡಬೇಕು.

ಇ. ಈ ಹಿಂದೆ ಯಾವುದೋ ಕಾರಣದಿಂದ ನಿಂತುಹೋದ ಮಂತ್ರದ ಪುರಶ್ಚರಣೆಯನ್ನು ಈ ಅವಧಿಯಲ್ಲಿ ಆರಂಭಿಸಿದರೆ ಅದರ ಫಲವು ಅನಂತ ಪಟ್ಟು ಸಿಗುತ್ತದೆ.

ಈ. ಗ್ರಹಣಕಾಲದಲ್ಲಿ (ಪರ್ವಕಾಲದಲ್ಲಿ) ನಿದ್ರೆ, ಮಲ-ಮೂತ್ರ ವಿಸರ್ಜನೆ, ಅಭ್ಯಂಜನ, ಭೋಜನ ಮತ್ತು ಸಂಭೋಗ ಮಾಡಬಾರದು.

೬. ಗ್ರಹಣ ಮೋಕ್ಷದ ನಂತರ (ಗ್ರಹಣ ಮುಗಿದ ನಂತರ) ಸ್ನಾನ ಮಾಡಬೇಕು.

ಯಾವುದೇ ವ್ಯಕ್ತಿಗೆ ಅಶೌಚ (ಸೂತಕ) ಇದ್ದರೂ ಗ್ರಹಣಕಾಲದಲ್ಲಿ ಸ್ನಾನ ಮತ್ತು ದಾನ ಮಾಡಲು ಅವರಿಗೆ ಶುದ್ಧಿ ಇರುತ್ತದೆ.

೭. ಗ್ರಹಣಕಾಲದಲ್ಲಿ ಯಾವುದನ್ನು ವರ್ಜಿಸಬೇಕು?

ಅ. ಗ್ರಹಣಕಾಲದಲ್ಲಿ ಭೋಜನ ಮಾಡುವುದು ನಿಷಿದ್ಧ; ಆದ್ದರಿಂದ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಗ್ರಹಣ ಹಿಡಿಯುವ ಮೊದಲು ಬೇಯಿಸಿದ ಅನ್ನವನ್ನು ನಂತರ ಬಳಸಬಾರದು; ಏಕೆಂದರೆ ಹಾನಿಕಾರಕ ಕಿರಣಗಳು ಆ ಆಹಾರದ ಮೂಲಕ ಹೀರಲ್ಪಡುವ ಸಾಧ್ಯತೆ ಇರುತ್ತದೆ.

ಆ. ಗ್ರಹಣಕಾಲವು ಸಾಧನೆಗೆ ಉತ್ತಮವಾಗಿರುವುದರಿಂದ, ಆ ಸಮಯದಲ್ಲಿ ನಿದ್ರೆ ಮಾಡಿ ತಮೋಗುಣವನ್ನು ಹೆಚ್ಚಿಸಿಕೊಳ್ಳುವ ಬದಲು ಸಾಧನೆ ಮಾಡಿ ಈ ಕಾಲದ ಲಾಭವನ್ನು ಪಡೆದುಕೊಳ್ಳಬೇಕು.

ಇ. ಗ್ರಹಣಕಾಲದಲ್ಲಿ ಮನೋರಂಜನೆ ಮತ್ತು ಐಷಾರಾಮಿ ವಿಷಯಗಳಲ್ಲಿ ಸಮಯ ವ್ಯರ್ಥ ಮಾಡಬಾರದು; ಏಕೆಂದರೆ ಸಾಧಕರಿಗೆ ಇದು ಅಮೂಲ್ಯವಾದ ಅವಕಾಶವಾಗಿದೆ. ಈ ಕಾಲದಲ್ಲಿ ಮಾಡಿದ ಸಾಧನೆಯ (ಜಪ, ಧ್ಯಾನ ಮತ್ತು ಪ್ರಾರ್ಥನೆ) ಫಲವು ಅನಂತ ಪಟ್ಟು ಸಿಗುತ್ತದೆ. ಇದಕ್ಕಾಗಿ ಈ ಸಮಯದಲ್ಲಿ ಉಪಾಸ್ಯ ದೇವತೆಯ ಅಥವಾ ಗುರುಗಳ ಸ್ಮರಣೆ ಮಾಡುತ್ತಾ ಏಕಾಗ್ರತೆಯಿಂದ ನಾಮಜಪ ಮಾಡಬೇಕು.

– ಸೌ. ಪ್ರಾಜಕ್ತಾ ಜೋಶಿ, ಜ್ಯೋತಿಷ್ಯ ಫಲಿತ ವಿಶಾರದ, ಕುಡಾಳ, ಸಿಂಧುದುರ್ಗ ಜಿಲ್ಲೆ. (24.೨.2026)