ಹಿಂದೂ ಸಮಾಜದ ಹಿತವೇ ಪರಮೋಚ್ಚ !

ಭಾರತ ಮತ್ತು ಯುರೋಪಿಯನ್ ಯೂನಿಯನ್ ನಡುವೆ ಏರ್ಪಟ್ಟ ಮುಕ್ತ ವ್ಯಾಪಾರ ಒಪ್ಪಂದವನ್ನು ಅಮೆರಿಕದಿಂದ ಆಸ್ಟ್ರೇಲಿಯಾದ ವರೆಗೆ ಎಲ್ಲಾ ಮಾಧ್ಯಮಗಳು ಶ್ಲಾಘಿಸಿವೆ. ಅಮೆರಿಕಕ್ಕೆ ಸವಾಲೆಸೆಯುವ ಈ ಹೆಜ್ಜೆಯು ಜಾಗತಿಕ ಮಟ್ಟದಲ್ಲಿ ಭಾರತದ ಮುನ್ನಡೆಯನ್ನು ಜಗತ್ತೇ ಬೆರಗಾಗುವಂತೆ ಮಾಡುತ್ತಿದೆ. ಭಾರತದ ಈ ‘ವಿಕಾಸ ಪಥ’ವು ಏಕೀಕೃತ ಭಾರತೀಯ ಸಮಾಜವಿಲ್ಲದೆ ಮುಂದುವರಿಯುವುದು ಕಷ್ಟಕರ. ಋಗ್ವೇದವು ಹೇಳುತ್ತದೆ, ‘ಸಂಗಚ್ಛಧ್ವಂ ಸಂವದಧ್ವಂ ಸಂ ವೋ ಮನಾಂಸಿ ಜಾನತಾಮ್ |’ ಅಂದರೆ ‘ನಾವೆಲ್ಲರೂ ಒಗ್ಗಟ್ಟಾಗಿ ನಡೆಯೋಣ, ಒಂದೇ ಧ್ವನಿಯಲ್ಲಿ ಮಾತನಾಡೋಣ ಮತ್ತು ನಮ್ಮೆಲ್ಲ ಜ್ಞಾನಿ ಜನರ ಮನಸ್ಸುಗಳು ಒಂದಾಗಲಿ.’ ಸನಾತನ ಹಿಂದೂ ಧರ್ಮವು ಸಮಾಜಕ್ಕೆ ಒಗ್ಗಟ್ಟಾಗಿ ವಿವೇಕಯುತವಾಗಿ ಕಾರ್ಯನಿರ್ವಹಿಸಲು ಕಲಿಸಿದೆ. ಸಮಾಜದ ಏಕತೆಯನ್ನು ಸಾಧಿಸುವುದರಿಂದ ಮಾತ್ರ ‘ವಿಕಸಿತ ಭಾರತ’ದ ಕನಸು ನನಸಾಗಲು ಸಾಧ್ಯ, ಇಲ್ಲದಿದ್ದರೆ ಸಮಾಜದ ವಿಘಟನೆಯಿಂದ ಬಾಹ್ಯ ಶಕ್ತಿಗಳಿಗೆ ದೇಶದ ಮೇಲೆ ಆಕ್ರಮಣ ಮಾಡುವುದು ಸುಲಭವಾಗುತ್ತದೆ ಎಂಬುದು ಸಾರ್ವಕಾಲಿಕ ಸತ್ಯ. ಪ್ರಸ್ತುತ ದೇಶದಲ್ಲಿ ಅಂತಹ ವಾತಾವರಣವನ್ನು ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ.

ಇದಕ್ಕೆ ಮೂಲ ಕಾರಣ ‘ಯುಜಿಸಿ’ಯ (ಯುನಿವರ್ಸಿಟಿ ಗ್ರಾಂಟ್ ಕಮಿಶನ್ – ವಿಶ್ವವಿದ್ಯಾಲಯ ಅನುದಾನ ಆಯೋಗ) ಹೊಸ ನಿಯಮಗಳು ! ‘ಯುಜಿಸಿ’ಯು ಜನವರಿ ೧೩ ರಂದು ಹೊಸ ನಿಯಮಗಳನ್ನು ಅಧಿಸೂಚಿಸಿತು. ಇದಕ್ಕೆ ‘ಪ್ರಮೋಶನ್ ಆಫ್ ಇಕ್ವಿಟಿ ಇನ್ ಹೈಯರ್ ಎಜ್ಯುಕೇಶನ್ ಇಸ್‌ಸ್ಟಿಟ್ಯೂಶನ್ ರೆಗ್ಯೂಲೇಶನ್ಸ್, ೨೦೨೬’ ಎಂದು ಹೆಸರಿಸಲಾಗಿದೆ. ಇದರ ಅಡಿಯಲ್ಲಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶೇಷ ಸಮಿತಿಗಳು, ಸಹಾಯ ವಾಣಿ ಮತ್ತು ಮೇಲ್ವಿಚಾರಣಾ ತಂಡಗಳನ್ನು ಸ್ಥಾಪಿಸಲು ಸೂಚನೆ ನೀಡಲಾಗಿದೆ. ‘ವಿಶೇಷವಾಗಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಮೇಲೆ ಮಾತ್ರ ತಾರತಮ್ಯ ನಡೆಯುತ್ತದೆ’ ಎಂದು ಹೇಳುತ್ತಾ, ಈ ತಂಡಕ್ಕೆ ತಾರತಮ್ಯ ಮಾಡುವ ಶಕ್ತಿಗಳನ್ನು ಹತ್ತಿಕ್ಕುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಿಷ್ಪಕ್ಷಪಾತ ಮತ್ತು ಹೊಣೆಗಾರಿಕೆಯನ್ನು ತರಲು ಈ ಬದಲಾವಣೆಗಳನ್ನು ಮಾಡಲಾಗಿದೆ ಎಂಬುದು ಯುಜಿಸಿಯ ವಾದವಾಗಿತ್ತು.

‘ಇಕ್ವಿಟಿ’ ಮೊದಲ ಬಾರಿ !

ಈ ನಿಯಮಗಳ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾದವು. ಇದರ ಮೇಲೆ ಜನವರಿ ೨೯ ರ ಮಧ್ಯಾಹ್ನ ನಡೆದ ಆಲಿಕೆಯಲ್ಲಿ ನ್ಯಾಯಾಲಯವು ಈ ನಿಯಮಗಳು ‘ಸಂಪೂರ್ಣವಾಗಿ ಅಸ್ಪಷ್ಟ’ (ಕಂಪ್ಲೀಟಲೀ ವೇಗ್) ಎಂದು ಹೇಳಿ ಅವುಗಳಿಗೆ ತಡೆಯಾಜ್ಞೆ ನೀಡಿತು. ಮಾರ್ಚ್ ೧೯ ರೊಳಗೆ, ಅಂದರೆ ಸುಮಾರು ೫೦ ದಿನಗಳಲ್ಲಿ ಯುಜಿಸಿ ಮತ್ತು ಕೇಂದ್ರ ಸರಕಾರಕ್ಕೆ ನಿಯಮಗಳಲ್ಲಿ ಸ್ಪಷ್ಟತೆ ತರಲು ನಿರ್ದೇಶನ ನೀಡಲಾಗಿದೆ. ನ್ಯಾಯಾಲಯದ ಈ ಕ್ರಮವನ್ನು ಎಲ್ಲೆಡೆ ಸ್ವಾಗತಿಸಲಾಗುತ್ತಿದೆ ಮತ್ತು ಅದು ಆಗಲೇ ಬೇಕು. ಇದರ ಹಿಂದಿನ ಕಾರಣಗಳ ವಿಶ್ಲೇಷಣೆ ಅಗತ್ಯವಾಗಿದೆ. ತಡೆ ನೀಡಲಾದ ಈ ಹೊಸ ನಿಯಮಗಳ ಹೆಸರಿನಲ್ಲಿ ಒಂದು ವಿಶೇಷ ಪದವನ್ನು ಸೇರಿಸಲಾಗಿತ್ತು – ‘ಇಕ್ವಿಟಿ’ ! ನಾವು ‘ಇಕ್ವಾಲಿಟಿ’ ಬಗ್ಗೆ ಅನೇಕ ಬಾರಿ ಕೇಳಿದ್ದೇವೆ – ಸಮಾನತೆ – ಎಲ್ಲರಿಗೂ ಸಮಾನ ನ್ಯಾಯ, ಸಮಾನ ಕಾನೂನು, ಸಮಾನ ಅವಕಾಶ ಇತ್ಯಾದಿ. ‘ಇಕ್ವಿಟಿ’ ಎಂಬ ಪದವು ವಿಶೇಷವಾಗಿ ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿದ್ದು, ಸಾಮಾಜಿಕ ಕ್ಷೇತ್ರದಲ್ಲಿ ಇದರ ಬಳಕೆ ಆಧುನಿಕ ಭಾರತದಲ್ಲಿ ಇದೇ ಮೊದಲು. ‘ಇಕ್ವಿಟಿ’ ಎಂದರೆ ಕೇವಲ ಸಮಾನತೆಯಲ್ಲ, ಬದಲಿಗೆ ಯಾವ ವರ್ಗಕ್ಕೆ ಏನು ಅಗತ್ಯವಿದೆಯೋ ಅದನ್ನು ನೀಡಲು ಪ್ರಯತ್ನಿಸುವುದು. ವ್ಯಕ್ತಿಯ ಗುರುತಿನ ಆಧಾರದ ಮೇಲೆ ನೀತಿಯನ್ನು ನಿರ್ಧರಿಸುವುದು ಎಂದರ್ಥ. ಮೀಸಲಾತಿ, ‘ಅಟ್ರಾಸಿಟಿ ಆಕ್ಟ್ ೧೯೮೯’ ಇತ್ಯಾದಿಗಳನ್ನು ಗಮನಿಸಿದರೆ, ಅವು ಸಾಮಾಜಿಕ ನ್ಯಾಯ, ಸಮಾನತೆ, ಕಲ್ಯಾಣ ಮತ್ತು ಸಬಲೀಕರಣದ ಉದ್ದೇಶದಿಂದ ಬಂದ ಕಾನೂನುಗಳು.  ಈ ಕಾನೂನು ಭಾರತದಲ್ಲಿನ ಹಿಂದುಳಿದವರ್ಗಗಳ ಹಿತಕ್ಕಾಗಿ ಮಾಡಲಾಗಿದೆ ಎಂದು ಪ್ರಾರೂಪದಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿತ್ತು. ಆದರೆ ಯುಜಿಸಿ ನಿಯಮಗಳ ಬಗ್ಗೆ ಭಯ ಹೆಚ್ಚಾಗಲು ಕಾರಣವೆಂದರೆ ‘ತಾರತಮ್ಯದ ವ್ಯಾಖ್ಯಾನವನ್ನು ಸ್ಪಷ್ಟಪಡಿಸದಿರುವುದು.’ ಸಾಮಾನ್ಯ ವರ್ಗದ (ಸವರ್ಣ) ವಿದ್ಯಾರ್ಥಿಗಳ ಪ್ರಕಾರ, ಈ ಹೊಸ ನಿಯಮಗಳಿಂದ ಕಾಲೇಜು ಅಥವಾ ಮಹಾವಿದ್ಯಾಲಯದ ಆವರಣದಲ್ಲಿ ಅವರ ವಿರುದ್ಧ ತಾರತಮ್ಯಕ್ಕೆ ಪ್ರೇರಣೆ ಸಿಗಬಹುದು ಮತ್ತು ಅರಾಜಕತೆ ಸೃಷ್ಟಿಯಾಗಬಹುದು.

ಈ ನಿಯಮಗಳ ವಿರುದ್ಧ ಅರ್ಜಿ ಸಲ್ಲಿಸಿದ ನ್ಯಾಯವಾದಿ ವಿನೀತ ಜಿಂದಾಲ್ ಅವರು ಇಂತಹ ನಿಯಮಗಳನ್ನು ರೂಪಿಸುವ ಯುಜಿಸಿಯ ಸಾಂವಿಧಾನಿಕ ಅರ್ಹತೆಯನ್ನೇ ಪ್ರಶ್ನಿಸಿದರು. ಈ ನಿಯಮಗಳ ೩(ಸಿ) ನಿಯಮವು ಜಾತಿ ತಾರತಮ್ಯದತ್ತ ಬೆರಳು ಮಾಡುತ್ತದೆ ಎಂದು ಅವರು ಹೇಳಿದರು. ನ್ಯಾಯಾಲಯವು ಈ ಅಂಶವನ್ನು ಗುರುತಿಸಿ ನಿಯಮಗಳಿಗೆ ತಡೆ ನೀಡಿದೆ ಮತ್ತು ಈ ನಿಯಮಗಳ ದುರುಪಯೋಗವಾಗುವ ಸಾಧ್ಯತೆಯಿದೆ ಎಂದು ಸ್ಪಷ್ಟವಾಗಿ ಹೇಳಿದೆ.

ವಿಭಜನಕಾರಿ ಕಥಾನಕ !

ನ್ಯಾಯಾಲಯವು ಈ ನಿಯಮಗಳನ್ನು ತಡೆಹಿಡಿದಿದ್ದರೂ, ಭಾರತವಿರೋಧಿ ಶಕ್ತಿಗಳು ಈ ನಿಯಮಗಳನ್ನು ಬಳಸಿಕೊಂಡು ವಿಭಜನಾಕಾರಿ ಕಥಾನಕವನ್ನು ಹೇಗೆ ಹೆಣೆಯುತ್ತಿವೆ ಎಂಬುದನ್ನು ರಾಷ್ಟ್ರಪ್ರೇಮಿಗಳು ಅಭ್ಯಾಸ ಮಾಡಬೇಕು. ಸಾಮ್ಯವಾದಿ ಶಕ್ತಿಗಳು ಪದಗಳನ್ನು ಮತ್ತು ಅಂಕಿಅಂಶಗಳನ್ನು ಅಸ್ತ್ರವಾಗಿ ಬಳಸುತ್ತವೆ. ‘ದ ವೈರ್’ ನಂತಹ ಕೆಲವು ಮಾಧ್ಯಮಗಳು ಯುಜಿಸಿಯ ಹೊಸ ನಿಯಮಗಳನ್ನು ಸಮರ್ಥಿಸಲು ‘ಹಿಂದುಳಿದ ವಿದ್ಯಾರ್ಥಿಗಳ ಮೇಲಿನ ತಾರತಮ್ಯದ ಪ್ರಕರಣಗಳಲ್ಲಿ ಶೇ. ೧೧೮ ರಷ್ಟು ಏರಿಕೆ !’ಎಂದು ಸುಳ್ಳು ಸುದ್ದಿ ಹಬ್ಬಿಸಲು ಶುರು ಮಾಡಿದವು. ಈ ಅಂಕಿಅಂಶದ ಮೂಲಕ್ಕೆ ಹೋದರೆ, ದೇಶದ ಒಟ್ಟು ೭೦೪ ವಿಶ್ವವಿದ್ಯಾಲಯಗಳು ಮತ್ತು ೧ ಸಾವಿರದ ೫೫೩ ಕಾಲೇಜುಗಳಲ್ಲಿ ೨೦೧೯-೨೦ ರಲ್ಲಿ ೧೭೩ ತಾರತಮ್ಯದ ಪ್ರಕರಣಗಳು ದಾಖಲಾಗಿದ್ದವು, ಅವು ೨೦೨೩-೨೪ ರಲ್ಲಿ ೩೭೮ ಕ್ಕೆ ಏರಿವೆ. ಇದು ಶೇ. ೧೧೮ ರಷ್ಟು ಹೆಚ್ಚಳ. ಈ ಅಂಕಿಅಂಶಗಳಿಂದ ಎರಡು ವಿಷಯಗಳು ಸ್ಪಷ್ಟವಾಗುತ್ತವೆ. ಒಂದು, ಇಷ್ಟು ದೊಡ್ಡ ವ್ಯವಸ್ಥೆಯಲ್ಲಿ ೩೭೮ ಎಂಬ ಸಂಖ್ಯೆಯು ಜಾತಿ ತಾರತಮ್ಯದ ನಗಣ್ಯತೆಯನ್ನು ತೋರಿಸುತ್ತದೆ. ಎರಡನೆಯದಾಗಿ, ಕಳೆದ ಕೆಲವು ವರ್ಷಗಳಲ್ಲಿ ಜಾತಿ ತಾರತಮ್ಯಕ್ಕಾಗಿ ನಿರ್ಧರಿಸಿದ ನಿಯಮಗಳ ಬಗ್ಗೆ ಜಾಗೃತಿ ಹೆಚ್ಚಾದ ಕಾರಣ ದೂರುಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಜಾತಿವಾದ ದೊಡ್ಡ ಮಟ್ಟದಲ್ಲಿ ಬೆಳೆದಿದೆ ಎಂಬ ಸುಳ್ಳು ವಾದದ ಗಾಳಿ ಸಂಪೂರ್ಣವಾಗಿ ಇಳಿದುಹೋಗುತ್ತದೆ.

ತಮಿಳನಾಡು ಮುಖ್ಯಮಂತ್ರಿ ಎಮ್‌.ಕೆ.ಸ್ಟಾಲಿನ್

ಇದರೊಂದಿಗೆ, ಸನಾತನ ಧರ್ಮವನ್ನು ಮಲೇರಿಯಾಕ್ಕೆ ಹೋಲಿಸಿದ ಉದಯನಿಧಿ ಸ್ಟಾಲಿನ್ ಅವರ ತಂದೆ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಯುಜಿಸಿ ನಿಯಮಗಳನ್ನು ಬೆಂಬಲಿಸುವ ನೆಪದಲ್ಲಿ ‘ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ಆಳವಾಗಿ ಬೇರೂರಿದೆ ಮತ್ತು ಈ ಹೊಸ ನಿಯಮಗಳು ದಕ್ಷಿಣ ಭಾರತೀಯರು, ಕಾಶ್ಮೀರಿಗಳು ಮತ್ತು ಅಲ್ಪಸಂಖ್ಯಾತರಿಗೆ ಮರುಜೀವ ನೀಡಲಿವೆ’ ಎಂದರು. ಇದು ದೇಶದಲ್ಲಿ ಪ್ರತ್ಯೇಕತಾವಾದವನ್ನು ಪ್ರಚೋದಿಸುವಂತಿವೆ. ಇಂತಹ ಅಸ್ಪಷ್ಟ ನಿಯಮಗಳನ್ನು ಬೆಂಬಲಿಸಿ ಹಿಂದುಳಿದ ಸಮಾಜದ ಮನಸ್ಸಿನಲ್ಲಿ ಸವರ್ಣೀಯರ ಬಗ್ಗೆ ಮತ್ತೆ ವಿಷ ಬಿತ್ತುವ ಈ ಪ್ರಯತ್ನ ಖಂಡನೀಯ. ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರವು ಈ ಅಯೋಗ್ಯ ನಿಯಮಗಳ ಬಗ್ಗೆ ಸುಧಾರಿತ ನಿಲುವನ್ನು ತಳೆಯುತ್ತದೆ ಎಂಬಲ್ಲಿ ಸಂಶಯವಿಲ್ಲ; ಆದರೆ ಹಿಂದೂಗಳಲ್ಲಿ ಒಡಕು ಮೂಡಿಸಲು ಪ್ರಯತ್ನಿಸುವ ಶಕ್ತಿಗಳ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳುವುದು ಅತ್ಯಗತ್ಯ. ‘ಹಿಂದೂ ಸಮಾಜದ ಹಿತವೇ ಪರಮೋಚ್ಚ’ ಎಂಬುದನ್ನು ಮರೆಯಬಾರದು !