‘ಐ.ಎನ್.ಎಸ್.ವಿ.ಕೌಂಡಿಣ್ಯ’:ಭಾರತದ ಪ್ರಾಚೀನ ಸಮುದ್ರಯಾನ ಪರಂಪರೆಯ ಪುನರುಜ್ಜೀವನ !

‘ಐ.ಎನ್.ಎಸ್.ವಿ. ಕೌಂಡಿಣ್ಯ’ ಎನ್ನುವುದು ಕೇವಲ ಭಾರತೀಯ ನೌಕಾದಳಕ್ಕೆ ಸೇರ್ಪಡೆಯಾದ ಹೊಸ ನೌಕಾ ಯೋಜನೆಯಲ್ಲ, ಬದಲಿಗೆ ಇದು ಭಾರತದ ಪ್ರಾಚೀನ ಸಮುದ್ರಯಾನ ಪರಂಪರೆಯ ಜೀವಂತ ಸಾಕ್ಷಿಯಾಗಿದೆ. ಸಾವಿರಾರು ವರ್ಷಗಳ ಹಿಂದೆ ಭಾರತೀಯ ಉಪಖಂಡದ ಜನರು ಸಮುದ್ರವನ್ನು ಕೇವಲ ಒಂದು ಅಡೆತಡೆಯೆಂದು ಭಾವಿಸದೆ, ಅದನ್ನೊಂದು ಅವಕಾಶವನ್ನಾಗಿ ನೋಡಿದ್ದರು ಎಂಬುದಕ್ಕೆ ಇದೊಂದು ಭದ್ರ ಪುರಾವೆಯಾಗಿದೆ. ಈ ನೌಕೆಯ ವಿಶೇಷತೆಯೆಂದರೆ, ಅಜಂತಾ ಗುಹೆಗಳಲ್ಲಿನ ೫ ನೇ ಶತಮಾನದ ಭಿತ್ತಿಚಿತ್ರಗಳಲ್ಲಿ ಕಂಡುಬರುವ ನೌಕೆಗಳ ವಿನ್ಯಾಸವನ್ನು ವಿವರವಾಗಿ ಅಭ್ಯಾಸ ಮಾಡಿ ಇದನ್ನು ನಿರ್ಮಿಸಲಾಗಿದೆ. ಆ ಕಾಲದಲ್ಲಿ ಭಾರತವು ಆಗ್ನೇಯ ಏಷ್ಯಾ, ಅರಬ್ಬಿ ದ್ವೀಪಕಲ್ಪ ಮತ್ತು ಆಫ್ರಿಕಾದೊಂದಿಗೆ ಸಮುದ್ರ ವ್ಯಾಪಾರವನ್ನು ಹೊಂದಿತ್ತು ಎಂಬುದು ಅನೇಕ ಐತಿಹಾಸಿಕ ಸಂದರ್ಭಗಳಿಂದ ಸ್ಪಷ್ಟವಾಗುತ್ತದೆ. ಪ್ರಾಚೀನ ಭಾರತೀಯ ಹಡಗು ‘ಕೌಂಡಿಣ್ಯ’ವನ್ನು ಆಧರಿಸಿ, ನಿರ್ಮಿತವಾದ ಈ ‘ಐ.ಎನ್.ಎಸ್.ವಿ. ಕೌಂಡಿಣ್ಯ’ ನೌಕೆ ಭಾರತದಿಂದ ಸಮುದ್ರಮಾರ್ಗದ ಮೂಲಕ ಹೊರಹೊಮ್ಮಿದ ಸಾಂಸ್ಕೃತಿಕ, ಧಾರ್ಮಿಕ ಮತ್ತು ವ್ಯಾಪಾರಿ ಸಂಬಂಧಗಳನ್ನು ನೆನಪಿಸುತ್ತದೆ. ಆದ್ದರಿಂದ, ಈ ನೌಕೆಯು ಕೇವಲ ಭೂತಕಾಲದ ಸ್ಮಾರಕ ಮಾತ್ರವಲ್ಲ; ಭಾರತದ ಸಮುದ್ರಯಾನದ ಆತ್ಮವಿಶ್ವಾಸದ ಪ್ರತೀಕವಾಗಿದೆ.

ಐ.ಎನ್.ಎಸ್.ವಿ. ಕೌಂಡಿಣ್ಯ

೧. ‘ಐ.ಎನ್.ಎಸ್.ವಿ. ಕೌಂಡಿಣ್ಯ’ದ ವೈಶಿಷ್ಟ್ಯ

‘ಐ.ಎನ್.ಎಸ್.ವಿ. ಕೌಂಡಿಣ್ಯ’ದ ನಿಜವಾದ ವೈಶಿಷ್ಟ್ಯವು ಅದರ ನಿರ್ಮಾಣ ಪದ್ಧತಿಯಲ್ಲಿದೆ. ಆಧುನಿಕ ಕಬ್ಬಿಣ ಅಥವಾ ಸ್ಟೀಲ್ ನೌಕೆಗಳಂತೆ ಮೊಳೆಗಳನ್ನು ಹೊಡೆಯದೆ ಅಥವಾ ವೆಲ್ಡಿಂಗ್ ಮಾಡದೆ, ಈ ನೌಕೆಯನ್ನು ಸಂಪೂರ್ಣವಾಗಿ ಸಾಂಪ್ರದಾಯಿಕ ‘ಹೊಲಿಗೆ ಮಾಡಿದ ಹಡಗು’ ಅಂದರೆ ಹೊಲಿಗೆ ಪದ್ಧತಿಯಿಂದ ನಿರ್ಮಿಸಲಾಗಿದೆ. ಮರದ ಹಲಗೆಗಳನ್ನು ತೆಂಗಿನ ನಾರಿನ ಹಗ್ಗಗಳಿಂದ ಮತ್ತು ನೈಸರ್ಗಿಕ ಅಂಟಿನ ಸಹಾಯದಿಂದ ಪರಸ್ಪರ ಜೋಡಿಸಲಾಗಿದೆ. ಈ ಪದ್ಧತಿಯಿಂದಾಗಿ ನೌಕೆಯು ಸ್ಥಿತಿಸ್ಥಾಪಕತ್ವವನ್ನು ಹೊಂದಿರುತ್ತದೆ ಮತ್ತು ಸಮುದ್ರದ ಅಲೆಗಳ ಒತ್ತಡವನ್ನು ಸುಲಭವಾಗಿ ತಡೆದುಕೊಳ್ಳಬಲ್ಲದು. ಪ್ರಾಚೀನ ಕಾಲದ ದೀರ್ಘ ಸಮುದ್ರಯಾನಗಳಿಗೆ ಈ ನಮ್ಯತೆಯು ಅತ್ಯಂತ ಉಪಯುಕ್ತವಾಗಿತ್ತು. ಈ ತಂತ್ರಜ್ಞಾನದಿಂದ ದುರಸ್ತಿಯೂ ತುಲನಾತ್ಮಕವಾಗಿ ಸುಲಭವಾಗಿತ್ತು; ಏಕೆಂದರೆ ಸಂಪೂರ್ಣ ರಚನೆಯನ್ನು ಮುರಿಯುವ ಅಗತ್ಯವಿರಲಿಲ್ಲ. ಇಂದು ಈ ಪದ್ಧತಿಯನ್ನು ಪುನಃ ಬಳಕೆಗೆ ತಂದಿರುವುದರಿಂದ ಕೇರಳ ಸೇರಿದಂತೆ ಭಾರತದ ಕರಾವಳಿ ಭಾಗದ ಸಾಂಪ್ರದಾಯಿಕ ಬಡಗಿಗಳು ಮತ್ತು ಕುಶಲಕರ್ಮಿಗಳ ತಲೆಮಾರುಗಳ ಜ್ಞಾನಕ್ಕೆ ಹೊಸ ಮನ್ನಣೆ ಸಿಕ್ಕಂತಾಗಿದೆ.

ಕು. ಶಾಂಭವಿ ಥಿಟೆ

೨. ‘ಐ.ಎನ್.ಎಸ್.ವಿ.ಕೌಂಡಿಣ್ಯ’ ಭವಿಷ್ಯಕ್ಕಾಗಿ ಆತ್ಮವಿಶ್ವಾಸ ನೀಡುವ ಒಂದು ಮಹತ್ವದ ಹೆಜ್ಜೆ !

‘ಐ.ಎನ್.ಎಸ್.ವಿ. ಕೌಂಡಿಣ್ಯ’ದ ನಿರ್ಮಾಣವು ಪ್ರಾಚೀನ ಪರಂಪರೆ ಮತ್ತು ಆಧುನಿಕ ವಿಜ್ಞಾನದ ಸುಂದರ ಸಂಗಮವಾಗಿದೆ. ಈ ಯೋಜನೆಯನ್ನು ಭಾರತೀಯ ನೌಕಾದಳ, ಸಂಸ್ಕೃತಿ ಸಚಿವಾಲಯ, ಇತಿಹಾಸ ತಜ್ಞರು, ಅಭಿಯಂತರರು ಮತ್ತು ಸಾಂಪ್ರದಾಯಿಕ ನೌಕಾ ನಿರ್ಮಾಣಕಾರರು ಒಗ್ಗೂಡಿ ಸಾಕಾರಗೊಳಿಸಿದ್ದಾರೆ. ಅಜಂತಾದಲ್ಲಿನ ೨ಡಿ (ಆಯಾಮ)  ವರ್ಣಚಿತ್ರಗಳಿಂದ ನೌಕೆಯ ೩ಡಿ (ಆಯಾಮದ) ಆಕಾರವನ್ನು ನಿರ್ಧರಿಸುವುದು ದೊಡ್ಡ ಸವಾಲಾಗಿತ್ತು. ಅದಕ್ಕಾಗಿ ಆಧುನಿಕ ಹೈಡ್ರೋಡೈನಾಮಿಕ್ ಪರೀಕ್ಷೆಗಳು, ಸಂರಚನಾತ್ಮಕ ವಿಶ್ಲೇಷಣೆ ಮತ್ತು ಸುರಕ್ಷತೆಯ ಆಧುನಿಕ ಮಾನದಂಡಗಳನ್ನು ಬಳಸಲಾಗಿದೆ ಹಾಗೂ ಐತಿಹಾಸಿಕ ಸತ್ಯತೆಯನ್ನು ಕಾಪಾಡಿಕೊಳ್ಳಲಾಗಿದೆ. ಈ ನೌಕೆಯು ಪ್ರಾಚೀನ ಗುಜರಾತ-ಅರಬ ವ್ಯಾಪಾರ ಮಾರ್ಗವನ್ನು ಪುನಃ ಸಮುದ್ರದ ಮೂಲಕ ಕ್ರಮಿಸುತ್ತಿದೆ, ಈ ಅಭಿಯಾನವು ಬಹಳ ಸ್ಪೂರ್ತಿದಾಯಕವಾಗಿದೆ. ಇಂತಹ ಉಪಕ್ರಮಗಳಿಂದಾಗಿ ಭಾರತದ ಪ್ರಾಚೀನ ನೌಕಾ ನಿರ್ಮಾಣ ಪರಂಪರೆಯು ಕೇವಲ ಅಭ್ಯಾಸಕ್ಕೆ ಸೀಮಿತವಾಗದೆ ಪ್ರತ್ಯಕ್ಷ ಅನುಭವದ ಮಟ್ಟದಲ್ಲಿ ಅರ್ಥವಾಗಲಿದೆ. ಆದ್ದರಿಂದಲೇ ‘ಐ.ಎನ್.ಎಸ್.ವಿ. ಕೌಂಡಿಣ್ಯ’ ನೌಕೆಯು ಭೂತಕಾಲದ ಗೌರವವನ್ನು ಎತ್ತಿಹಿಡಿಯುತ್ತಾ ಭವಿಷ್ಯಕ್ಕಾಗಿ ಆತ್ಮ ವಿಶ್ವಾಸ ನೀಡುವ ಒಂದು ಮಹತ್ವದ ಹೆಜ್ಜೆಯಾಗಿದೆ.

– ಕು. ಶಾಂಭವಿ ಥಿಟೆ, ವಿದೇಶಾಂಗ ನೀತಿಗಳ ಅಭ್ಯಾಸಕಿ, ಜವಾಹರಲಾಲ ನೆಹರೂ ವಿಶ್ವವಿದ್ಯಾಲಯ, ದೆಹಲಿ. (೫.೧.೨೦೨೬)