ಸಂವಿಧಾನದಿಂದ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ತೆಗೆದುಹಾಕಲು ರಾಜ್ಯಸಭೆಯಲ್ಲಿ ಖಾಸಗಿ ವಿಧೇಯಕ ಮಂಡನೆ

ಮುಂದಿನ ಅಧಿವೇಶನದಲ್ಲಿ ಚರ್ಚೆ

ನವದೆಹಲಿ – ಬಿಜೆಪಿ ರಾಜ್ಯಸಭಾ ಸಂಸದ ಡಾ. ಭೀಮ ಸಿಂಗ್ ಅವರು ರಾಜ್ಯಸಭೆಯಲ್ಲಿ ಎರಡು ಖಾಸಗಿ ವಿಧೇಯಕಗಳನ್ನು ಮಂಡಿಸಿದ್ದಾರೆ. ಒಂದು ವಿಧೇಯಕದಲ್ಲಿ, ಅವರು ಯೋಜಿತ ನಗರ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಪ್ರಾಧಿಕಾರವನ್ನು ಸ್ಥಾಪಿಸಲು ಬೇಡಿಕೆ ಇಟ್ಟಿದ್ದಾರೆ, ಮತ್ತು ಇನ್ನೊಂದು ವಿಧೇಯಕದಲ್ಲಿ ಭಾರತದ ಸಂವಿಧಾನದಿಂದ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ತೆಗೆದುಹಾಕಬೇಕೆಂದು ಕೋರಿದ್ದಾರೆ. ಈ ಖಾಸಗಿ ವಿಧೇಯಕಕ್ಕೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಈ ಕುರಿತು ಡಾ. ಭೀಮ ಸಿಂಹ ಅವರು ಮುಂದಿನಂತೆ ಹೇಳಿದರು,

೧. ಭಾರತದ ಸಂವಿಧಾನವನ್ನು ನವೆಂಬರ್ ೨೬, ೧೯೪೯ ರಂದು ಅಂಗೀಕರಿಸಲಾಯಿತು ಮತ್ತು ಜನವರಿ ೨೬, ೧೯೫೦ ರಿಂದ ಜಾರಿಗೆ ತರಲಾಯಿತು. ಮೂಲ ಸಂವಿಧಾನದಲ್ಲಿ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಎಂಬ ಈ ಎರಡು ಪದಗಳು ಇರಲಿಲ್ಲ. ಈ ಪದಗಳನ್ನು ೧೯೭೬ ರಲ್ಲಿ, ಆಗಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿಯ ಸಮಯದಲ್ಲಿ ೪೨ನೇ ಸಂವಿಧಾನ ತಿದ್ದುಪಡಿ ಮೂಲಕ ಸೇರಿಸಿದರು, ಇದು ಸಂಪೂರ್ಣವಾಗಿ ಅನಗತ್ಯವಾಗಿತ್ತು. ಇಂದಿರಾ ಗಾಂಧಿಯವರು ಈ ಎರಡು ಪದಗಳನ್ನು ವಿದೇಶಿ ಪ್ರಭಾವ ಮತ್ತು ಮುಸಲ್ಮಾನರ ತುಷ್ಟೀಕರಣಕ್ಕಾಗಿ ಸೇರಿಸಿದರು.

೨. ಸಂವಿಧಾನ ರಚನಾಕಾರರು ಯೋಚಿಸಿ ನಿರ್ಧಾರ ಕೈಗೊಂಡಿದ್ದರು. ಅವರಿಗೆ ಈ ಪದಗಳು ತಿಳಿದಿರಲಿಲ್ಲ ಎಂದೇನಿಲ್ಲ. ಅವರು ಪೀಠಿಕೆಯಲ್ಲಿ ಈ ಪದಗಳನ್ನು ಸೇರಿಸುವ ಬಗ್ಗೆ ಅಥವಾ ಬಿಡುವ ಬಗ್ಗೆ ಆಳವಾದ ಚರ್ಚೆ ನಡೆಸಿದರು ಮತ್ತು ಈ ಪದಗಳನ್ನು ಸೇರಿಸುವುದು ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದರು. ಡಾ. ಅಂಬೇಡ್ಕರ್ ಅವರೇ ಹೇಳಿದ್ದರು, “ಭಾರತವು ಅನಾದಿ ಕಾಲದಿಂದಲೂ ಸರ್ವಧರ್ಮ ಸಮಭಾವ ತತ್ವವನ್ನು ಅನುಸರಿಸುತ್ತಾ ಬಂದಿದೆ ಮತ್ತು ಜಾತ್ಯತೀತತೆಯು ಭಾರತದ ಸ್ವಭಾವವಾಗಿದೆ.” ಸಮಾಜವಾದಿ ಪದದ ಬಗ್ಗೆ ಡಾ. ಅಂಬೇಡ್ಕರ್ ಅವರು, “ನಾವು ಬರುವ ಪೀಳಿಗೆಗಳಿಗೆ ಯಾವುದೇ ನಿರ್ದಿಷ್ಟ ಆರ್ಥಿಕ ತತ್ವವನ್ನು ಅಳವಡಿಸಿಕೊಳ್ಳುವ ಬಗ್ಗೆ ಕಡ್ಡಾಯಗೊಳಿಸಲು ಸಾಧ್ಯವಿಲ್ಲ” ಎಂದೂ ಹೇಳಿದ್ದರು.

೩. ಸಂವಿಧಾನದಲ್ಲಿ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳನ್ನು ಸೇರಿಸುವ ಅಗತ್ಯವಿಲ್ಲ. ನಮ್ಮ ರಾಷ್ಟ್ರ ರೂವಾರಿಗಳು ‘ಸವಿಸ್ತಾರ ಚರ್ಚೆಯ ನಂತರ ಈ ಪದಗಳನ್ನು ಸೇರಿಸುವುದು ಸೂಕ್ತವಲ್ಲ’ ಎಂದು ನಿರ್ಧರಿಸಿದಾಗ, ಅವುಗಳನ್ನು ನಂತರ ಸೇರಿಸಿದ್ದು ಸರಿಯಾಗಿರಲಿಲ್ಲ ಮತ್ತು ಇಂದಿಗೂ ಅವುಗಳನ್ನು ಉಳಿಸಿಕೊಂಡಿರುವುದು ತಪ್ಪಾಗಿದೆ. ಆದ್ದರಿಂದ, ಈ ಎರಡು ಪದಗಳನ್ನು ತೆಗೆದುಹಾಕುವ ಉದ್ದೇಶದಿಂದ ವಿಧೇಯಕವನ್ನು ಮಂಡಿಸಲಾಗಿದೆ, ಅದನ್ನು ಸದನವು ಒಪ್ಪಿಕೊಂಡಿದೆ. ಮುಂದಿನ ಅಧಿವೇಶನದಲ್ಲಿ ಇದರ ಬಗ್ಗೆ ಚರ್ಚೆ ನಡೆದು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು.

ಸಂಪಾದಕೀಯ ನಿಲುವು

ಈ ಪದಗಳನ್ನು ತೆಗೆದುಹಾಕಿದ ನಂತರ ಅಲ್ಲಿ ‘ಹಿಂದೂ ರಾಷ್ಟ್ರ’ ಎಂಬ ಪದವನ್ನು ಸೇರಿಸಲು ಸಹ ತಿದ್ದುಪಡಿ ಮಾಡಬೇಕು!