ಸಾಧಕರೇ, ನಿಮ್ಮಲ್ಲಿ ವಿಚಾರಿಸುವವೃತ್ತಿ ಬೆಳೆಯಲು ಇರುವ ಅಡೆತಡೆಗಳನ್ನು ಅರಿತುಕೊಳ್ಳಿ ಮತ್ತು ಅವುಗಳನ್ನು ನಿವಾರಿಸಿಕೊಂಡು ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಾಧನೆಯ ಪಂಚಸೂತ್ರಗಳಲ್ಲಿ ಮೊದಲನೆಯ ಸೂತ್ರವಾದ ‘ವಿಚಾರಿಸುವ ವೃತ್ತಿ’, ಈ ಸಂದರ್ಭದಲ್ಲಿ ಭಕ್ತಿಸತ್ಸಂಗದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಮಾಡಿದ ಮಾರ್ಗದರ್ಶನ !

ಸಾಧನೆಯೆಂದರೆ ಈಶ್ವರಪ್ರಾಪ್ತಿಗಾಗಿ ನಿರಂತರ ಮಾಡುವ ಪ್ರಯತ್ನ ! ಸಾಧನೆಯೆಂದರೆ ಈಶ್ವರನೊಂದಿಗೆ ಜೋಡಿಸಲ್ಪಡುವ ನಿರಂತರ ಪ್ರಕ್ರಿಯೆ ! ಅನೇಕ ಬಾರಿ ಗಮನಕ್ಕೆ ಬರುವ ವಿಷಯವೆಂದರೆ, ಅನೇಕ ವರ್ಷಗಳಿಂದ ಸಾಧನೆ ಮಾಡುತ್ತಿದ್ದರೂ ಸಾಧನೆಯಲ್ಲಿ ಮೇಲಿಂದ ಮೇಲೆ ಬರುವ ಅಡೆತಡೆಗಳಿಂದಾಗಿ ಸಾಧಕರು ಒಂದೇ ಹಂತದಲ್ಲಿ ಸಿಲುಕಿರುತ್ತಾರೆ. ಮುಂದೆ ಹೋಗುವ ಮಾರ್ಗವನ್ನು ಭಗವಂತನು ನಮಗೆ ಆಗಾಗ ತೋರಿಸುತ್ತಿದ್ದರೂ ಅದು ಕೆಲವೊಮ್ಮೆ ನಮ್ಮ ಗಮನಕ್ಕೆ ಬರುವುದಿಲ್ಲ. ‘ಸಾಧನೆಯಲ್ಲಿ ಮುಂದೆ ಹೋಗಲು ನಿರ್ದಿಷ್ಟವಾಗಿ ಯಾವ ಪ್ರಯತ್ನ ಮಾಡುವುದು ಅಪೇಕ್ಷಿತವಿದೆ ?’, ಎಂದು ಹೊಳೆಯುವುದಿಲ್ಲ. ಆ ಸಮಯದಲ್ಲಿ ಸಾಧಕರು ‘ಸಾಧನೆಯಲ್ಲಿ ಮುಂದೆ ಹೋಗಲು ಬಯಸಿದರೂ ನಾವು ಒಂದೇ ಹಂತದಲ್ಲಿ ಏಕೆ ಸಿಲುಕಿಕೊಂಡಿದ್ದೇವೆ ?’, ಎಂಬ ಬಗ್ಗೆ ಚಿಂತನೆ ಮಾಡಿ ಪ್ರಯತ್ನಿಸುವುದು ಅಪೇಕ್ಷಿತವಿರುತ್ತದೆ. ‘ಸಾಧನೆಯಲ್ಲಿ ಪ್ರಗತಿ ಮಾಡಿಕೊಳ್ಳಲು ಯಾವ ಅಡಚಣೆಗಳು ಇರಬಹುದು ? ಮತ್ತು ಆ ಅಡಚಣೆಗಳನ್ನು ದೂರ ಮಾಡಲು ಏನು ಮಾಡಬೇಕು ?’, ಈ ಬಗೆಗಿನ ಮಾರ್ಗದರ್ಶನವನ್ನು ಪ್ರತಿ ಗುರುವಾರದಂದು ನಡೆಯುವ ಭಕ್ತಿಸತ್ಸಂಗದ ಅಂತರ್ಗತ ‘ವಿಶೇಷ ಭಕ್ತಿಸತ್ಸಂಗ ಶೃಂಖಲೆಯ’ ಮೂಲಕ ಮಾಡಲಾಗುತ್ತಿದೆ. ‘ಈ ಹೊಸ ಭಕ್ತಿಸತ್ಸಂಗ ಶೃಂಖಲೆಯಿಂದ ಸಾಧಕರಿಗೆ ಮತ್ತು ವಾಚಕರಿಗೆ ಹೆಚ್ಚೆಚ್ಚು ಲಾಭ ಆಗಬೇಕೆಂದು ಅದರಲ್ಲಿನ ಅಂಶಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ.

೨೭/೧೨ ರ ಸಂಚಿಕೆಯಲ್ಲಿ ‘ವಿಚಾರಿಸದಿರುವುದರ ಹಿಂದಿನ ಅಯೋಗ್ಯ ಮಾನಸಿಕತೆಯಿಂದ ಸಾಧನೆಯಲ್ಲಿ ಬರುವ ಅಡೆತಡೆಗಳು ಮತ್ತು ಅದಕ್ಕೆ ಉಪಾಯಯೋಜನೆ’, ಇದರ ಬಗ್ಗೆ ಅರಿತುಕೊಂಡೆವು. ಈ ವಾರದ ಲೇಖನದಲ್ಲಿ ನಾವು ಅದರ ಮುಂದಿನ ವಿಷಯವನ್ನು ತಿಳಿದುಕೊಳ್ಳಲಿದ್ದೇವೆ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

‘ಸಾಧಕರ ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಸದ್ಯ ಕಾಲಾನುಸಾರ ಸಾಕ್ಷಾತ್‌ ಭಗವಂತನ ಇಚ್ಛೆ ಮತ್ತು ಸಚ್ಚಿದಾನಂದ ಪರಬ್ರಹ್ಮ ಗುರುದೇವ ಡಾ. ಆಠವಲೆಯವರ ಕೃಪೆಯಿಂದ ವಿಶೇಷ ಭಕ್ತಿಸತ್ಸಂಗ ಶೃಂಖಲೆಯ ಮೂಲಕ ಸಾಧಕರಿಗೆ ಮಾರ್ಗದರ್ಶನ ಸಿಗುತ್ತಿದೆ. ಈ ಮಾರ್ಗದರ್ಶನ ಸಾಧಕರಿಗಾಗಿ ಅತ್ಯಂತ ಅಮೂಲ್ಯ ಮತ್ತು ಮಹತ್ವಪೂರ್ಣವಾಗಿದೆ. ‘ಭಕ್ತಿಸತ್ಸಂಗದ ಈ ವಿಷಯದಿಂದಾಗಿ ಎಲ್ಲೆಡೆಯ ಸಾಧಕರ ಶುದ್ಧಿಯಾಗಬೇಕು, ಹಾಗೆಯೇ ಅವರ ಅಂತಃಕರಣದಲ್ಲಿನ ಸ್ವಭಾವದೋಷಗಳ ಮಲೀನತೆ ನಾಶವಾಗಿ ಅವರು ಶುದ್ಧ ಮತ್ತು ಪವಿತ್ರರಾಗಬೇಕು’, ಎಂಬುದಕ್ಕಾಗಿ ಇದು ಭಕ್ತಿಯಜ್ಞವೇ ಆಗಿದೆ. ಸಾಧಕರು ಈ ಲೇಖನವನ್ನು ತಮ್ಮ ಬಳಿ ಸಂಗ್ರಹದಲ್ಲಿಟ್ಟುಕೊಳ್ಳಬೇಕು, ಹಾಗೆಯೇ ಈ ಅಂಶಗಳಿಗನುಸಾರ ತಳಮಳದಿಂದ ಪ್ರಯತ್ನಿಸಿ ತಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಅದರ ಹೆಚ್ಚೆಚ್ಚು ಲಾಭ ಪಡೆದುಕೊಳ್ಳಬೇಕು !’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

೭. ಕೇಳಿಕೊಳ್ಳದಿರುವುದರ ಹಿಂದಿನ ಅಯೋಗ್ಯ ಮಾನಸಿಕತೆ ಮತ್ತು ಅದಕ್ಕೆ ಯೋಗ್ಯ ದೃಷ್ಟಿಕೋನ ಮತ್ತು ಉಪಾಯಯೋಜನೆ ! 

೭ ಟ. ‘ಮೊದಲೇ ಕೇಳಬೇಕಾಗಿತ್ತು’ ಎಂದು ತಪ್ಪಾದ ನಂತರ ಅರಿವಾಗುವುದು : ‘ಹೆಚ್ಚಿನ ಬಾರಿ ಸೇವೆ ಮಾಡುವಾಗ ‘ಇಂತಹ ಒಂದು ವಿಷಯವನ್ನು ಕೇಳಬೇಕೆಂದು’ ನಮ್ಮ ಗಮನಕ್ಕೆ ಬರುವುದಿಲ್ಲ. ನಂತರ ಸೇವೆಯಲ್ಲಿ ಏನಾದರೂ ತಪ್ಪಾದಾಗ ಮತ್ತು ಅದನ್ನು ನಮ್ಮ ಗಮನಕ್ಕೆ ತಂದಾಗ, ‘ನಾವು ಮೊದಲೇ ಕೇಳಬೇಕಾಗಿತ್ತು’ ಎಂದು ಅನಿಸುತ್ತದೆ.

ಕೆಲವೊಮ್ಮೆ ನಾವು ಒಂದು ವಿಷಯದ ಬಗ್ಗೆ ಸಹಸಾಧಕರೊಂದಿಗೆ ಚರ್ಚಿಸಿ ಅದನ್ನು ನಿರ್ಧರಿಸುತ್ತೇವೆ. ಚರ್ಚೆಯಾದ ನಂತರ, ‘ನಿರ್ಧರಿಸಿದ್ದು ಸರಿಯಿದೆಯೇ ? ನಾವು ಹೀಗೆ ಮಾಡಬಹುದೇ ?’ ಎಂದು ಜವಾಬ್ದಾರ ಸಾಧಕರಲ್ಲಿ ಕೇಳುವುದಿಲ್ಲ. ಇಲ್ಲಿ ‘ನಾವು ಇದನ್ನು ಒಬ್ಬರೇ ನಿರ್ಧರಿಸಿಲ್ಲ. ಸಹಸಾಧಕರೊಂದಿಗೆ ಮಾತನಾಡಿ ಅವರ ಅಭಿಪ್ರಾಯವನ್ನು ಪಡೆದಿದ್ದೇವೆ’ ಎಂಬ ಅಯೋಗ್ಯ ವಿಚಾರಪ್ರಕ್ರಿಯೆ ಇರುತ್ತದೆ. ಆದ್ದರಿಂದ ಕೇಳುವುದಿಲ್ಲ. ನಂತರ ಇದೇ ಪ್ರಸಂಗದಲ್ಲಿ ಒಂದು ತಪ್ಪು ತಿಳಿದುಬಂದಾಗ ಅಥವಾ ಹೇಳಿದಾಗ, ‘ನಾವು ಮೊದಲೇ ಕೇಳಬೇಕಾಗಿತ್ತು’ ಎಂಬ ಅರಿವಾಗುತ್ತದೆ.

೭ ಟ ೧. ಉಪಾಯಯೋಜನೆ / ಯೋಗ್ಯ ದೃಷ್ಟಿಕೋನ : ನಾವು ಮಾಡಿದ ತಪ್ಪಿನಿಂದ ಸೇವೆಯ ಮೇಲೆ ಪರಿಣಾಮವಾದ ನಂತರ ನಮಗೆ ಅದರ ಅರಿವಾಗುತ್ತದೆ. ನಿಜವಾಗಿ ಇಲ್ಲಿ ಮೊದಲು ಕೇಳುವುದು ಅಪೇಕ್ಷಿತವಾಗಿದೆ. ನಮ್ಮ ಸಹಸಾಧಕರೊಂದಿಗೆ ಆದ ಚರ್ಚೆಯನ್ನು ಜವಾಬ್ದಾರ ಸಾಧಕರಿಗೆ ಹೇಳಿ ಅವರಿಂದ ಮಾರ್ಗದರ್ಶನ ಪಡೆಯಬೇಕು. ಆಗಲೇ ನಮಗೆ ಸರಿಯಾದ ದಿಕ್ಕು ದೊರೆಯುತ್ತದೆ ಮತ್ತು ಮೊದಲೇ ಕೇಳಿ ಕೃತಿ ಮಾಡಿದರೆ ಅಪೇಕ್ಷಿತ ಫಲಶೃತಿ ದೊರೆಯುತ್ತದೆ. ಸಹಸಾಧಕರೊಂದಿಗೆ ಮಾತನಾಡಿ ಅವರ ಅಭಿಪ್ರಾಯವನ್ನು ಅವಶ್ಯಕವಾಗಿ ತೆಗೆದುಕೊಳ್ಳಬೇಕು; ಆದರೆ ನಾವು ಜವಾಬ್ದಾರ ಸಾಧಕರಿಗೆ ಕೇಳುವುದು ದೇವರಿಗೆ ಅಪೇಕ್ಷಿತವಾಗಿದೆ. ಕೇಳದೆ ಕೃತಿ ಮಾಡುವುದರಿಂದಾಗುವ ಪರಿಣಾಮಗಳ ಅರಿವನ್ನಿಟ್ಟುಕೊಂಡು ನಾವು ಯೋಗ್ಯ ಸಮಯದಲ್ಲಿ ಕೇಳುವ ಅಭ್ಯಾಸವನ್ನು ಮಾಡೋಣ. ಈ ಬಗ್ಗೆ ಮುಂದಿನ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಅ. ಪ್ರತಿಯೊಂದು ಪ್ರಸಂಗದಲ್ಲಿ ಯಾರು ಕೇಳುತ್ತಾರೆಯೋ, ಅವರು ಮಾರ್ಗದರ್ಶನ ಪಡೆಯುತ್ತಾರೆ.

ಆ. ಸೇವೆಯ ಪ್ರತಿಯೊಂದು ಹಂತದಲ್ಲಿ ಯಾರು ಮಾರ್ಗದರ್ಶನ ಪಡೆಯುತ್ತಾರೆಯೋ, ಅವರು ಅನೇಕ ತಪ್ಪುಗಳನ್ನು ತಪ್ಪಿಸುತ್ತಾರೆ.

ಇ. ಯಾರು ಅನೇಕ ತಪ್ಪುಗಳನ್ನು ತಪ್ಪಿಸುತ್ತಾರೆಯೋ, ಅವರು ಸಾಧನೆಯ ಹಾನಿ ತಡೆಗಟ್ಟಿ ಆಧ್ಯಾತ್ಮಿಕ ಉನ್ನತಿ ಸಾಧಿಸುತ್ತಾರೆ.

ಈ. ಅಂದರೆ, ಯಾರು ಕೇಳುತ್ತಾರೆಯೋ, ಅವರು ಸಾಧನೆಯಲ್ಲಿ ನಿಜವಾದ ಅರ್ಥದಲ್ಲಿ ಯಶಸ್ವಿಯಾಗುತ್ತಾರೆ.

೭ ಠ. ತಪ್ಪುಗಳ ಭಯ : ಈ ಬಗ್ಗೆ ವಿವಿಧ ರೀತಿಯ ವಿಚಾರ ಪ್ರಕ್ರಿಯೆ ಇರುತ್ತದೆ. ಆದ್ದರಿಂದ ಕೇಳಲು ಮನಸ್ಸಿನ ಸಂಘರ್ಷವಾಗುತ್ತದೆ.

೭ ಠ ೧. ಕೇಳಲು ವಿಳಂಬವಾದರೆ ಅದರ ಬಗ್ಗೆ ತಪ್ಪು ಹೇಳಬಹುದು ಎಂದು ಕೇಳುವುದನ್ನು ತಪ್ಪಿಸುವುದು : ಕೆಲವು ಕಡೆಗಳಲ್ಲಿ ನಾವು ಸಮಯಕ್ಕೆ ಸರಿಯಾಗಿ ವಿಷಯವನ್ನು ಕೇಳಿರುವುದಿಲ್ಲ. ಕೇಳಲು ವಿಳಂಬವಾಗಿರುತ್ತದೆ. ಆಗ ಅನಿಸುತ್ತದೆ, ‘ಈಗ ಕೇಳಿದರೆ, ವಿಳಂಬವಾಗಿ ಕೇಳಿದ್ದಕ್ಕೆ ನನ್ನದೇ ತಪ್ಪನ್ನು ನನಗೆ ಹೇಳಬಹುದು’. ಮನಸ್ಸಿಗೆ ಸಂಘರ್ಷ ಬೇಡವಾಗಿರುತ್ತದೆ, ಅಂದರೆ ಅದರಿಂದ ಆಗುವ ಸಂಘರ್ಷಕ್ಕಾಗಿ ಮನಸ್ಸಿನ ಸಿದ್ಧತೆ ಇರುವುದಿಲ್ಲ. ಆದ್ದರಿಂದ ಕೇಳುವುದನ್ನು ತಪ್ಪಿಸಲಾಗುತ್ತದೆ.

೭ ಠ ೧ ಅ. ಉಪಾಯಯೋಜನೆ /ಯೋಗ್ಯ ದೃಷ್ಟಿಕೋನ : ‘ಮೊದಲು ಕೇಳಲಿಲ್ಲ’ ಎಂಬುದು ತಪ್ಪಾಯಿತು; ಆದರೆ ಭಗವಂತನ ಕೃಪೆಯಿಂದ ಅರಿವಾದ ಮೇಲಾದರೂ ಕೇಳಬೇಕು. ಕೇಳಲು ವಿಳಂಬವಾಯಿತು ಎಂದು ನಿಲ್ಲುವುದು ಮತ್ತು ಕೇಳದಿರುವುದು ಇನ್ನಷ್ಟು ದೊಡ್ಡ ತಪ್ಪಾಗುತ್ತದೆ. ‘ಅರಿವಾದ ತಕ್ಷಣ ಕೇಳುವುದು’ ಇದು ಮುಂದೆ ದೊಡ್ಡ ಪ್ರಮಾಣದಲ್ಲಿ ಆಗುವ ಹಾನಿಯನ್ನು ತಪ್ಪಿಸುವ ಅವಕಾಶವಾಗಿದೆ. ಆದ್ದರಿಂದ ‘ಮೊದಲು ಕೇಳಲಿಲ್ಲ’ ಎಂಬ ನಮ್ಮ ತಪ್ಪನ್ನು ಹೇಳಿ ನಾವು ಆ ವಿಷಯವನ್ನು ಕೇಳಬೇಕು.

೭ ಠ ೨. ‘ಅಧ್ಯಯನಪೂರ್ವಕವಾಗಿ ಕೇಳಲಿಲ್ಲ’ ಎಂಬ ತಪ್ಪು ಹೇಳಬಹುದು’ ಎಂಬ ವಿಚಾರದಿಂದ ಕೇಳುವುದನ್ನು ತಪ್ಪಿಸುವುದು : ತಪ್ಪುಗಳ ಭಯದ ಹಿಂದೆ ‘ನನಗೆ ಸರಿಯಾಗಿ ವಿಷಯವನ್ನು ಕೇಳಲು ಸಾಧ್ಯವಾಗದಿದ್ದರೆ ?’ ಎಂಬ ವಿಚಾರವೂ ಇರುತ್ತದೆ. ‘ಪೂರ್ಣ ವಿಚಾರ ಮಾಡಿ ಮತ್ತು ಅಧ್ಯಯನಪೂರ್ವಕವಾಗಿ ಕೇಳಲಿಲ್ಲ’, ಎಂಬ ತಪ್ಪು ಹೇಳಬಹುದು’, ಎಂಬ ವಿಚಾರದಿಂದ ನಮ್ಮ ಮನಸ್ಸಿನಲ್ಲಿ ಒತ್ತಡ ಬರುತ್ತದೆ. ಈ ಸಂಘರ್ಷಮಯ ವಿಚಾರದಿಂದಾಗಿ ಕೇಳುವುದಿಲ್ಲ ಅಥವಾ ತಡವಾಗಿ ಕೇಳಲಾಗುತ್ತದೆ.

೭ ಠ ೨ ಅ. ಉಪಾಯಯೋಜನೆ / ಯೋಗ್ಯ ದೃಷ್ಟಿಕೋನ : ‘ಕೇಳಿ ಮಾಡುವುದರಿಂದಲೇ ವಿಷಯಗಳನ್ನು ಅಧ್ಯಯನಪೂರ್ವಕವಾಗಿ ಹೇಗೆ ಕೇಳಬೇಕು ?’ ಎಂಬುದನ್ನು ನಾವು ಕಲಿಯಲು ಸಾಧ್ಯವಾಗುತ್ತದೆ ಎಂಬುದನ್ನು ಗಮನದಲ್ಲಿಡೋಣ. ನೀರಿನಲ್ಲಿ ಇಳಿಯದೆ ಈಜಲು ಬರುವುದಿಲ್ಲ, ಹಾಗೆಯೇ ಕೇಳುವ ಕೃತಿಯನ್ನು ಮಾಡದೆ ‘ಸರಿಯಾಗಿ ಹೇಗೆ ಕೇಳಬೇಕು ?’ ಎಂಬುದನ್ನು ಕಲಿಯಲು ಸಾಧ್ಯವಾಗುವುದಿಲ್ಲ. ನಾವು ಒಂದು ವಿಷಯವನ್ನು ಕೇಳಿದಾಗ, ಜವಾಬ್ದಾರ ಸಾಧಕರು ಅದರ ಬಗ್ಗೆ ನಮಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ಅದರಿಂದ ನಮಗೆ ‘ಆ ವಿಷಯದ ಅಧ್ಯಯನದಲ್ಲಿ ಇನ್ನೇನು ಅಪೇಕ್ಷಿತವಾಗಿದೆ ?’, ಎಂಬುದು ತಿಳಿಯುತ್ತದೆ, ಹಾಗೆಯೇ ‘ಯಾವ ರೀತಿಯಲ್ಲಿ ಕೇಳಬೇಕು’ ಎಂಬುದನ್ನೂ ಕಲಿಯಲು ಸಾಧ್ಯವಾಗುತ್ತದೆ. ಆದ್ದರಿಂದ ಸಾಧಕರು ಜವಾಬ್ದಾರ ಸಾಧಕರಿಗೆ ವಿಷಯಗಳನ್ನು ಕೇಳಬೇಕು ಮತ್ತು ಈ ಪ್ರಕ್ರಿಯೆಯಿಂದ ಕಲಿಯಲು ಸಿಕ್ಕಿರುವ ಎಲ್ಲ ವಿಷಯಗಳನ್ನು ಬರೆದಿಟ್ಟುಕೊಳ್ಳಬೇಕು, ಅಂದರೆ ಅದರ ಬಗ್ಗೆ ಚಿಂತನೆ ಮಾಡಿ ಮುಂದಿನ ಬಾರಿ ಇನ್ನಷ್ಟು ಅಧ್ಯಯನಪೂರ್ವಕವಾಗಿ ಕೇಳಲು ಸಾಧ್ಯವಾಗುತ್ತದೆ.

೭ ಠ ೩. ‘ಅನಾವಶ್ಯಕ ಪ್ರಶ್ನೆ ಕೇಳಿದೆ’ ಎಂದು ತಪ್ಪು ಹೇಳಿದರೆಂದು ಮುಂದಿನ ಸಲ ಕೇಳದಿರುವುದು : ಕೇಳುವ ಬಗ್ಗೆ ಕೆಲವೊಮ್ಮೆ ಸ್ವಭಾವ ದೋಷವೂ ಕಾರ್ಯನಿರತವಾಗಿರುತ್ತವೆ. ಆದ್ದರಿಂದ ಜವಾಬ್ದಾರ ಸಾಧಕರೇ ಹೇಳಿದ ಅಥವಾ ನಿರ್ಧರಿಸಿದ ಸೇವೆಗಳ ಬಗ್ಗೆಯೂ ಪುನಃ ಪುನಃ ಕೇಳಲಾಗುತ್ತದೆ. ಕೆಲವು ಬಾರಿ ಅನಾವಶ್ಯಕ ಪ್ರಶ್ನೆಗಳು, ಹಾಗೆಯೇ ಚಿಕ್ಕ ಚಿಕ್ಕ ವಿಷಯಗಳನ್ನು ಕೇಳಲಾಗುತ್ತದೆ; ಆದರೆ ಅವಶ್ಯಕವಾದ ಪ್ರಶ್ನೆಗಳನ್ನು, ಮಹತ್ವದ ವಿಷಯಗಳನ್ನು ಕೇಳುವುದಿಲ್ಲ, ಹಾಗೆಯೇ ಮಹತ್ವದ ನಿರ್ಣಯ ಗಳನ್ನು ಕೇಳದೇ ಮನಸ್ಸಿನಿಂದಲೇ ನಿರ್ಣಯಿಸಲಾಗುತ್ತದೆ.

ಹೆಚ್ಚಿನ ಬಾರಿ ಕೆಲವು ವಿಷಯಗಳನ್ನು ತನ್ನ ಸ್ತರದಲ್ಲಿ ನಿರ್ಧರಿಸಿ ಮಾಡುವಂತಹವುಗಳಿದ್ದರೂ, ಅದರ ಬಗ್ಗೆ ಕೇಳಲಾಗುತ್ತದೆ. ಇಂತಹ ಸಮಯದಲ್ಲಿ ಜವಾಬ್ದಾರ ಸಾಧಕರು ತಪ್ಪನ್ನು ಗಮನಕ್ಕೆ ತಂದರೆ, ಮುಂದೆ ಕೇಳುವ ಕೃತಿಯನ್ನೇ ಬಿಡಲಾಗುತ್ತದೆ. ಆದ್ದರಿಂದ ಇನ್ನಷ್ಟು ಮುಂದಿನ ತಪ್ಪಾಗುತ್ತದೆ. ‘ಇನ್ನು ಮುಂದೆ ಯಾವುದೇ ವಿಷಯವನ್ನು ಕೇಳುವ ಬದಲು ನಾವು ಕೇವಲ ಹೇಳಿದ್ದಷ್ಟನ್ನೇ ಮಾಡೋಣ’ ಎಂಬ ತೀವ್ರ ವಿಚಾರಗಳನ್ನೂ ಮಾಡಲಾಗುತ್ತದೆ. ಇದರಲ್ಲಿ ನಮ್ಮ ಅಹಂಕಾರ ಮತ್ತು ನಕಾರಾತ್ಮಕ ವಿಚಾರ ಪ್ರಕ್ರಿಯೆ ಇರುವುದರಿಂದ ಕೇಳುವುದನ್ನು ತಪ್ಪಿಸಲಾಗುತ್ತದೆ.

೭ ಠ ೩ ಅ. ಉಪಾಯಯೋಜನೆ / ಯೋಗ್ಯ ದೃಷ್ಟಿಕೋನ : ‘ಏನನ್ನು ಕೇಳಬೇಕು ಮತ್ತು ಏನನ್ನು ಕೇಳಬಾರದು’ ಎಂಬುದನ್ನು ಕಲಿಯುವುದೇ ನಮ್ಮ ಸಾಧನೆಯಾಗಿದೆ. ಇಂತಹ ಸಮಯದಲ್ಲಿ ‘ತೀವ್ರ ನಿಲುವು ತೆಗೆದುಕೊಂಡು ‘ಕೇಳುವುದನ್ನು’ ನಿಲ್ಲಿಸುವುದಲ್ಲ, ಬದಲಿಗೆ ಸರಿಯಾದುದನ್ನು ಕೇಳುವ ದೃಷ್ಟಿಕೋನವನ್ನು ರೂಢಿಸಿಕೊಳ್ಳುವುದು’ ಇದೇ ಆತ್ಮೋನ್ನತಿಯ ನಿಜವಾದ ಮಾರ್ಗವಾಗಿದೆ ಎಂಬುದನ್ನು ಅಂತರ್ಮನದಲ್ಲಿ ಅಂಕಿತ ಮಾಡಿಕೊಳ್ಳಬೇಕು.

ಎರಡನೆಯದಾಗಿ, ಚಿಕ್ಕ ಚಿಕ್ಕ ವಿಷಯಗಳನ್ನು ಕೇಳಬೇಕು, ಅಂದರೆ ಎಲ್ಲವನ್ನೂ ಕೇಳಬೇಕು ಎಂದಲ್ಲ, ಉದಾ. ಜವಾಬ್ದಾರ ಸಾಧಕರೇ ನಮಗೆ ನಮ್ಮ ನಿತ್ಯದ ಸೇವೆಯ ಕಾರ್ಯಪದ್ಧತಿಯನ್ನು ನಿರ್ಧರಿಸಿರುತ್ತಾರೆ. ಆದ್ದರಿಂದ ಆ ಸೇವೆಯನ್ನು ಮಾಡುವಾಗ ಪ್ರತಿದಿನ ಮತ್ತು ಪ್ರತಿಯೊಂದು ವಿಷಯವನ್ನು ಕೇಳುವ ಅವಶ್ಯಕತೆ ಇರುವುದಿಲ್ಲ. ಅದರಲ್ಲಿ ಏನಾದರೂ ಬದಲಾವಣೆ ಇದ್ದರೆ ಅಥವಾ ತೊಂದರೆ ಇದ್ದರೆ ಅವಶ್ಯಕವಾಗಿ ಕೇಳಬೇಕು. ಕೇಳುವುದರ ಬಗ್ಗೆ ಈ ವಿವೇಚನೆಯನ್ನು ಕಲಿಯಬೇಕು. ‘ಯಾವ ವಿಷಯಗಳನ್ನು ಕೇಳಬಾರದು ?’ ಎಂಬುದರ ಬಗ್ಗೆ ಏನಾದರೂ ಸಂದೇಹವಿದ್ದರೆ ಜವಾಬ್ದಾರ ಸಾಧಕರೊಂದಿಗೆ ಮಾತನಾಡಿ ಸ್ಪಷ್ಟಪಡಿಸಿಕೊಳ್ಳಬೇಕು.

೭ ಡ. ಮೊದಲು ನೀಡಿದ ನಿರ್ಣಯದಂತೆಯೇ ದೀರ್ಘಕಾಲ ಸೇವೆ /ಸಾಧನೆ ಮಾಡುತ್ತಿರುವುದು : ನಾವು ಸಾಧನೆ ಅಥವಾ ಸೇವೆಯ ಬಗ್ಗೆ ಒಂದು ವಿಷಯವನ್ನು ಮೊದಲು ಯಾವಾಗಲೋ ಕೇಳಿರುತ್ತೇವೆ. ಅದೇ ವಿಷಯವನ್ನು ಅನ್ವಯಿಸಿಕೊಂಡು ನಾವು ಬಹಳ ವರ್ಷಗಳ ವರೆಗೆ ಸೇವೆ ಅಥವಾ ಸಾಧನೆ ಮಾಡುತ್ತಿರುತ್ತೇವೆ. ಆಯಾ ಸಮಯದಲ್ಲಿ ವರ್ತಮಾನಸ್ಥಿತಿಯ ಅಧ್ಯಯನ ಮಾಡಿ ಅದರ ಬಗ್ಗೆ ಪುನಃ ಕೇಳುವುದಿಲ್ಲ.

೭ ಡ ೧. ಉಪಾಯಯೋಜನೆ / ಯೋಗ್ಯ ದೃಷ್ಟಿಕೋನ : ಕಾಲ ಮತ್ತು ಪರಿಸ್ಥಿತಿಯ ಅನುಸಾರ ಸೇವೆಗಳ ನೀತಿ ಮತ್ತು ಪದ್ಧತಿಗಳಲ್ಲಿ ಬದಲಾವಣೆ ಆಗುತ್ತಿರುತ್ತದೆ ಅಥವಾ ಬದಲಾವಣೆ ಮಾಡುವುದು ಅವಶ್ಯಕವಾಗಿರುತ್ತದೆ. ಆ ಸಮಯದ ಸ್ಥಿತಿಗನುಸಾರ ಅಧ್ಯಯನ ಮಾಡದೆ ಮತ್ತು ಕೇಳದೆ ಮೊದಲಿನ ಪದ್ಧತಿಯಂತೆಯೇ ಸೇವೆ ಮಾಡುತ್ತಿದ್ದರೆ ಸೇವೆಯ ನಿರೀಕ್ಷಿತ ಫಲ ದೊರೆಯುವುದಿಲ್ಲ. ‘ಈಗಿನ ಸ್ಥಿತಿಗನುಸಾರ ಸೇವೆ ಅಥವಾ ಸೇವೆಯ ಪದ್ಧತಿಯಲ್ಲಿ ಏನಾದರೂ ಬದಲಾವಣೆ ನಿರೀಕ್ಷಿತವಿದೆಯೇ ?’ ಎಂಬುದರ ಅಧ್ಯಯನ ಮಾಡಿ ‘ಕೇಳಿ ಕೃತಿ ಮಾಡುವುದು’ ಇದೇ ನಮ್ಮ ಸಾಧನೆಯಾಗಿದೆ. ಆಯಾ ಸಮಯದಲ್ಲಿ ಕೇಳುವುದರಿಂದ ನಮ್ಮ ಸೇವೆ ಅಥವಾ ಸಾಧನೆಯ ಫಲಶೃತಿ ಹೆಚ್ಚಾಗುತ್ತದೆ.

ಸಾಧನೆಯ ಪ್ರಯತ್ನಗಳ ಬಗ್ಗೆಯೂ ಹೀಗೆಯೇ ಆಗುತ್ತದೆ. ಆದ್ದರಿಂದ ಸಾಧನೆಗೆ ಸಂಬಂಧಿಸಿದ ಪ್ರಶ್ನೆಗಳ ಬಗ್ಗೆಯೂ ‘ಹಿಂದೆ ಕೇಳಿದ ಒಂದು ಪ್ರಶ್ನೆಯ ಉತ್ತರ ಕಾಲಾಂತರದಲ್ಲಿ ಮೊದಲಿನ ಉತ್ತರಕ್ಕಿಂತ ಬೇರೆಯಾಗಿರಬಹುದು’ ಎಂಬ ದೃಷ್ಟಿಕೋನವನ್ನು ಇಡಬೇಕು. ಇದರ ಕಾರಣವೆಂದರೆ ಕಾಲ ಮತ್ತು ಸಾಧಕರ ಆಂತರಿಕ ಸ್ಥಿತಿ ಬದಲಾದಾಗ, ಅವಶ್ಯಕತೆಗನುಗುಣವಾಗಿ ಉತ್ತರವೂ ಬದಲಾಗಬಹುದು. ಆದ್ದರಿಂದ ಸ್ವಲ್ಪ ಸ್ವಲ್ಪ ಕಾಲದ ನಂತರ ಸ್ವಂತದ ಸ್ಥಿತಿಯ ಅಧ್ಯಯನವನ್ನು ಜವಾಬ್ದಾರ ಸಾಧಕರಿಗೆ ಹೇಳಿ ಸಾಧನೆಯ ಬಗ್ಗೆ ದಿಶೆಯನ್ನು ತೆಗೆದುಕೊಳ್ಳಬೇಕು.

೭ ಢ. ‘ವ್ಯಾವಹಾರಿಕ ವಿಷಯಗಳನ್ನು ಕೇಳಲು ಇತರರ ಸಮಯವನ್ನು ಏಕೆ ತೆಗೆದುಕೊಳ್ಳಬೇಕು ?’ ಎಂದು ಅನಿಸುವುದು : ಕೆಲವು ಬಾರಿ ಸಾಧಕರಿಗೆ ವೈಯಕ್ತಿಕ ವಿಷಯಗಳು ಮತ್ತು ನಿರ್ಣಯಗಳಲ್ಲಿ ತೊಂದರೆಗಳಿರುತ್ತವೆ. ಆ ಸಮಯದಲ್ಲಿ ‘ವ್ಯಾವಹಾರಿಕ ವಿಷಯ ಗಳನ್ನು ಕೇಳಲು ಸಂತರು ಅಥವಾ ಜವಾಬ್ದಾರ ಸಾಧಕರ ಸಮಯವನ್ನು ಏಕೆ ತೆಗೆದುಕೊಳ್ಳಬೇಕು ?’ ಎಂಬುದು ಅವರ ವಿಚಾರವಾಗಿರುತ್ತದೆ. ಆದ್ದರಿಂದ ಕೇಳುವುದಿಲ್ಲ.

೭ ಢ ೧. ಉಪಾಯಯೋಜನೆ / ಯೋಗ್ಯ ದೃಷ್ಟಿಕೋನ : ವೈಯಕ್ತಿಕ ಅಥವಾ ವ್ಯಾವಹಾರಿಕ ನಿರ್ಣಯಗಳನ್ನು ನಾವು ನಮ್ಮ ಮನೆಯವರೊಂದಿಗೆ ಚರ್ಚಿಸಿ ತೆಗೆದುಕೊಳ್ಳಬಹುದು; ಆದರೆ ಕೆಲವು ಬಾರಿ ವೈಯಕ್ತಿಕ ಮತ್ತು ವ್ಯಾವಹಾರಿಕ ನಿರ್ಣಯವು ನಮ್ಮ ಸಾಧನೆಯ ಮೇಲೆ ಪರಿಣಾಮವಾಗಿ ನಮ್ಮ ಸಾಧನೆಯು ವ್ಯರ್ಥವಾಗಬಹುದು. ಇಂತಹ ಸಮಯದಲ್ಲಿ ‘ಸಾಧನೆಯ ದೃಷ್ಟಿಯಿಂದ ಏನು ಮಾಡಬೇಕು ?’ ಎಂಬುದರ ಬಗ್ಗೆ ಮಾರ್ಗದರ್ಶನವನ್ನು ನಾವು ಜವಾಬ್ದಾರ ಸಾಧಕರು ಅಥವಾ ಸಂತರಿಂದ ತೆಗೆದುಕೊಳ್ಳಬಹುದು.

೭ ಣ. ‘ನಮ್ಮ ವಿಷಯಗಳಿಗಾಗಿ ಇತರರ ಸಮಯವನ್ನು ತೆಗೆದುಕೊಳ್ಳಬಾರದು’ ಎಂದು ಅನಿಸುವುದು : ಕೆಲವು ಸಾಧಕರಿಗೆ ಅನಿಸುತ್ತದೆ, ‘ನಮ್ಮ ವಿಷಯಗಳನ್ನು ಕೇಳಲು ಜವಾಬ್ದಾರ ಸಾಧಕರ ಸಮಯವನ್ನು ತೆಗೆದುಕೊಳ್ಳಬಾರದು ಅಥವಾ ಸಾಧನೆಯಲ್ಲಿನ ತೊಂದರೆಗಳನ್ನು ಹೇಳಲು ವರದಿ ಸೇವಕರ ಸಮಯವನ್ನು ತೆಗೆದುಕೊಳ್ಳಬಾರದು’. ‘ಕೇಳುವುದರಲ್ಲಿ ಸಮಯ ವ್ಯರ್ಥವಾಗುತ್ತದೆ’ ಎಂಬುದು ಕೆಲವರ ಅಯೋಗ್ಯ ದೃಷ್ಟಿಕೋನವಾಗಿರುತ್ತದೆ.

೭ ಣ ೧. ಉಪಾಯಯೋಜನೆ / ಯೋಗ್ಯ ದೃಷ್ಟಿಕೋನ : ‘ನಮ್ಮ ತೊಂದರೆಗಳನ್ನು ನಿವಾರಿಸುವುದು ಮತ್ತು ನಮಗೆ ಸಾಧನೆಯ ದೃಷ್ಟಿಯಿಂದ ಮಾರ್ಗದರ್ಶನ ನೀಡುವುದು’ ಇದೇ ಜವಾಬ್ದಾರ ಸಾಧಕರು ಅಥವಾ ವರದಿ ಸೇವಕರ ಸೇವೆಯಾಗಿದೆ. ಈಶ್ವರನೇ ಆ ಮಾಧ್ಯಮಗಳನ್ನು ನಮಗಾಗಿ ನಿರ್ಮಿಸಿದ್ದಾನೆ. ಆದ್ದರಿಂದ ಕೇಳುವುದು ಎಂದರೆ ಅವರ ಸಮಯವನ್ನು ತೆಗೆದುಕೊಳ್ಳುವುದಲ್ಲ, ಬದಲಿಗೆ ಅವರಲ್ಲಿ ಕಾರ್ಯನಿರತವಾಗಿರುವ ಈಶ್ವರಿ ತತ್ತ್ವದ ಲಾಭವನ್ನು ಪಡೆಯುವುದಾಗಿದೆ. ‘ಕೇಳುವುದರಲ್ಲಿ ಸಮಯ ವ್ಯರ್ಥವಾಗುವುದಿಲ್ಲ, ಬದಲಿಗೆ ಆ ಸಮಯವನ್ನು ಸರಿಯಾದ ದಿಕ್ಕು ದೊರೆಯಲು ಉಪಯೋಗಿಸಲಾಗುತ್ತದೆ’ ಎಂಬ ದೃಷ್ಟಿಕೋನವನ್ನು ಇಟ್ಟುಕೊಂಡು ಸಾಧಕರು ಕೇಳುವ ಕೃತಿಯನ್ನು ಮಾಡಬೇಕು.

೭ ತ. ಇತರ ಸಾಧಕರಿಗೆ ಹೇಳಿದ ವಿಷಯವನ್ನು ಯಾರಲ್ಲಿಯೂ ಕೇಳದೆ ಸ್ವತಃ ಅನ್ವಯಿಸಿಕೊಳ್ಳುವುದು : ಕೆಲವು ಬಾರಿ ಸೇವೆ ಅಥವಾ ಸಾಧನೆಯ ಪ್ರಯತ್ನಗಳ ಬಗ್ಗೆ ಜವಾಬ್ದಾರ ಸಾಧಕರು ಅಥವಾ ಸಂತರು ಬೇರೆ ಒಬ್ಬ ಸಾಧಕನಿಗೆ ಕೆಲವು ವಿಷಯಗಳನ್ನು ಹೇಳಿರುತ್ತಾರೆ. ಅದು ನಮಗೆ ತಿಳಿಯಿತು ಮತ್ತು ನಮಗೂ ಅದೇ ತೊಂದರೆಯಿದ್ದರೆ, ಸ್ವಂತದ ಸ್ಥಿತಿಯ ಅಧ್ಯಯನ ಮಾಡದೆ ಮತ್ತು ಕೇಳದೆ ಆ ವಿಷಯವನ್ನು ಸ್ವತಃ ಅನ್ವಯಿಸಿಕೊಂಡು ಅದರಂತೆ ಕೃತಿ ಮಾಡಲಾಗುತ್ತದೆ.

೭ ತ ೧. ಉಪಾಯಯೋಜನೆ / ಯೋಗ್ಯ ದೃಷ್ಟಿಕೋನ : ಪ್ರತಿಯೊಬ್ಬರ ಸ್ಥಿತಿ ಮತ್ತು ಅವರ ಸಾಧನೆಯ ಅವಶ್ಯಕತೆ ಬೇರೆ ಬೇರೆಯಾಗಿರುತ್ತದೆ. ತೊಂದರೆ ಮೇಲ್ನೋಟಕ್ಕೆ ಒಂದೇ ರೀತಿಯಿದ್ದರೂ, ಇನ್ನೊಬ್ಬ ಸಾಧಕನಿಗೆ ಹೇಳಿದ ವಿಷಯವು ನಮಗೆ ಅನ್ವಯವಾಗುತ್ತದೆ ಎಂದೇನಿಲ್ಲ. ಸ್ಥಳ, ಕಾಲ, ಪರಿಸ್ಥಿತಿ, ವ್ಯಕ್ತಿಯ ಪ್ರಕೃತಿ, ತೊಂದರೆ, ತಾತ್ಕಾಲಿಕ ಸ್ಥಿತಿ ಮತ್ತು ನೀತಿಗನುಸಾರ ಪ್ರತಿಯೊಬ್ಬರಿಗಾಗಿನ ನಿರ್ಣಯ ಅಥವಾ ಉತ್ತರ ಬೇರೆ ಬೇರೆಯಾಗಿರಬಹುದು. ಆದ್ದರಿಂದ ಇತರರಿಗೆ ನೀಡಿದ ನಿರ್ಣಯವನ್ನು ಸ್ವತಃ ಅನ್ವಯಿಸಿಕೊಳ್ಳದೆ ನಮ್ಮ ಸ್ಥಿತಿಯ ಅಧ್ಯಯನ ಮಾಡಿ ಅದರ ಬಗ್ಗೆ ಕೇಳುವುದು ಅವಶ್ಯಕವಾಗಿರುತ್ತದೆ.

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ