ಪುಣೆಯಲ್ಲಿ ನಡೆದ ‘ಸನ್‌ಬರ್ನ್ ಫೆಸ್ಟಿವಲ್’ನ ಸ್ಟ್ಯಾಂಪ್ ಡ್ಯೂಟಿ ವಸೂಲಿಯಾಗದಿದ್ದರೂ ಮುಂಬಯಿನಲ್ಲಿ ‘ಸನ್‌ಬರ್ನ್ ಫೆಸ್ಟಿವಲ್’ಗೆ ಅನುಮತಿ!

  • ನ್ಯಾಯಾಲಯದ ಆದೇಶದ ನಂತರವೂ ಆಡಳಿತದಿಂದ ೭ ವರ್ಷಗಳಿಂದ ವಸೂಲಿ ಇಲ್ಲ!

  • ದಂಡದ ಮೊತ್ತ ಒಂದು ಕೋಟಿ ರೂಪಾಯಿಗಳಿಗಿಂತ ಹೆಚ್ಚಾಗಿದ್ದರೂ ಕಂದಾಯ ಇಲಾಖೆ ನಿಷ್ಕ್ರಿಯ!

ಮುಂಬಯಿ, ನವೆಂಬರ್ ೨೯ (ವಾರ್ತೆ) – ೨೦೧೬ ರಲ್ಲಿ ಪುಣೆಯಲ್ಲಿ ನಡೆದ ‘ಸನ್‌ಬರ್ನ್ ಫೆಸ್ಟಿವಲ್’ನ ಸ್ಟ್ಯಾಂಪ್ ಡ್ಯೂಟಿಯನ್ನು ರಾಜ್ಯ ಸರಕಾರದ ಕಂದಾಯ ಇಲಾಖೆ ಸುಮಾರು ೭ ವರ್ಷಗಳಲ್ಲಿ ವಸೂಲಿ ಮಾಡಿಯೇ ಇಲ್ಲ. ಈ ಶುಲ್ಕವನ್ನು ರದ್ದುಗೊಳಿಸಲು ಆಯೋಜಕರು ೨೦೧೮ ಮತ್ತು ೨೦೧೯ ರಲ್ಲಿ ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದರು. ಈ ಎರಡೂ ಅರ್ಜಿಗಳನ್ನು ಮುಂಬಯಿ ನ್ಯಾಯಾಲಯ ವಜಾಗೊಳಿಸಿತು. ನಂತರ ಕಂದಾಯ ಇಲಾಖೆ ಸ್ಟ್ಯಾಂಪ್ ಡ್ಯೂಟಿಯನ್ನು ವಸೂಲಿ ಮಾಡಬೇಕಾಗಿತ್ತು. ‘ಸನ್‌ಬರ್ನ್ ಫೆಸ್ಟಿವಲ್’ನ ಆಯೋಜಕರು ಸರಕಾರದ ₹೪೨ ಲಕ್ಷದ ೯೨ ಸಾವಿರದ ೮೫ ಸ್ಟ್ಯಾಂಪ್ ಡ್ಯೂಟಿ ಪಾವತಿಸದ ಕಾರಣ, ಆಯೋಜಕರಿಗೆ ಇಲ್ಲಿಯವರೆಗೆ ₹೬೯ ಲಕ್ಷದ ೫೩ ಸಾವಿರದ ೧೨೧ ದಂಡವನ್ನು ವಿಧಿಸಲಾಗಿದೆ. ಸ್ಟ್ಯಾಂಪ್ ಡ್ಯೂಟಿ ಮತ್ತು ಅದರ ಮೇಲಿನ ದಂಡ ಸೇರಿದಂತೆ ಒಟ್ಟು ₹೧ ಕೋಟಿ ೧೨ ಲಕ್ಷದ ೪೫ ಸಾವಿರದ ೨೦೬ ವಸೂಲಿ ಮಾಡದೆಯೇ, ತೆರಿಗೆ ವಂಚಕ ‘ಸನ್‌ಬರ್ನ್ ಫೆಸ್ಟಿವಲ್’ಗೆ ಮುಂಬಯಿ ನಲ್ಲಿ ಮತ್ತೆ ಅನುಮತಿ ನೀಡಲಾಗಿದೆ. ‘ಸನಾತನ ಪ್ರಭಾತ’ದ ಪ್ರತಿನಿಧಿ ಶ್ರೀ. ಪ್ರೀತಮ ನಾಚಣಕರ್ ಅವರು ಪತ್ರದ ಮೂಲಕ ರಾಜ್ಯದ ಕಂದಾಯ ಇಲಾಖೆಯಿಂದ ಕೇಳಿದ ಮಾಹಿತಿಯಿಂದ ಈ ಗಂಭೀರ ವಿಷಯ ಬೆಳಕಿಗೆ ಬಂದಿದೆ.

ಶ್ರೀ ಪ್ರೀತಮ್ ನಾಚಂಕರ್

ಇದರ ಜೊತೆಗೆ, ಇದೇ ಫೆಸ್ಟಿವಲ್‌ನ ₹೬೦ ಲಕ್ಷದ ೫೫ ಸಾವಿರದ ೩೮೩ ಗೌಣ ಖನಿಜ ಗಣಿಗಾರಿಕೆಯ ಆದಾಯವನ್ನು ತಹಶೀಲ್ದಾರರು ವಿಧಿಸಿದ್ದರು. ‘೨೦೧೭ ರಲ್ಲಿ ಆಗಿನ ಕಂದಾಯ ಸಚಿವರು ವಿಧಾನಸಭೆಯಲ್ಲಿ ಈ ಆದಾಯವನ್ನು ವಸೂಲಿ ಮಾಡುತ್ತೇವೆ’ ಎಂದು ಭರವಸೆ ನೀಡಿದ್ದರು. ೨೦೧೯ ರಲ್ಲಿ ಆದಾಯವನ್ನು ರದ್ದುಗೊಳಿಸಲು ಆಯೋಜಕರು ಪ್ರಾಂತಾಧಿಕಾರಿಗಳ ಬಳಿಗೆ ಹೋದರು. ಪ್ರಾಂತಾಧಿಕಾರಿಗಳು ಕೇವಲ ೩ ದಿನಗಳಲ್ಲಿ ನಿರ್ಧಾರ ನೀಡಿ ಆದಾಯವನ್ನು ರದ್ದುಗೊಳಿಸಿದರು; ಆದರೆ ಆಡಳಿತವು ಅದರ ವಿರುದ್ಧ ಸೆಷನ್ಸ್ ನ್ಯಾಯಾಲಯಕ್ಕೆ ಹೋಗಲಿಲ್ಲ.

೨೦೧೬ ರಲ್ಲಿ ಪುಣೆಯಲ್ಲಿ ನಡೆದ ‘ಸನ್‌ಬರ್ನ್ ಫೆಸ್ಟಿವಲ್’ನ ಆಯೋಜನೆಗಾಗಿ ತಹಶೀಲ್ ಕಛೇರಿಯು ₹ ೪೨ ಲಕ್ಷದ ೯೨ ಸಾವಿರದ ೮೫ ಸ್ಟ್ಯಾಂಪ್ ಡ್ಯೂಟಿಯನ್ನು ವಿಧಿಸಿತ್ತು. ‘ಈ ಶುಲ್ಕವನ್ನು ರದ್ದುಗೊಳಿಸಬೇಕು’ ಎಂದು ‘ಸನ್‌ಬರ್ನ್ ಫೆಸ್ಟಿವಲ್’ನ ಆಯೋಜಕರು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ೨೦೧೮ ಮತ್ತು ೨೦೧೯ ರಲ್ಲಿ ನೀಡಿದ ನಿರ್ಣಯಗಳ ಪ್ರಕಾರ ‘ಸನ್‌ಬರ್ನ್ ಫೆಸ್ಟಿವಲ್’ನ ಆಯೋಜಕರಿಂದ ಸ್ಟ್ಯಾಂಪ್ ಡ್ಯೂಟಿ ವಸೂಲಿ ಮಾಡಲು ಆದೇಶಿಸಿತು; ಆದರೆ ನ್ಯಾಯಾಲಯದ ಈ ನಿರ್ಧಾರದ ನಂತರವೂ ಕಂದಾಯ ಇಲಾಖೆ ಇದುವರೆಗೆ ಸ್ಟ್ಯಾಂಪ್ ಡ್ಯೂಟಿಯನ್ನು ವಸೂಲಿ ಮಾಡಿಲ್ಲ. ನ್ಯಾಯಾಲಯದ ನಿರ್ಧಾರದ ನಂತರ ಸ್ಟ್ಯಾಂಪ್ ಡ್ಯೂಟಿಯ ಮೇಲೆ ಪ್ರತಿ ತಿಂಗಳು ೨% ರಷ್ಟು ದಂಡದ ಮೊತ್ತ ₹ ೬೯ ಲಕ್ಷದ ೫೩ ಸಾವಿರದ ೧೨೧ ಆಗಿದೆ. ದಂಡದ ಮೊತ್ತ ಲಕ್ಷಗಟ್ಟಲೆ ರೂಪಾಯಿ ಆಗಿದ್ದರೂ, ಸ್ಟ್ಯಾಂಪ್ ಡ್ಯೂಟಿ ಮತ್ತು ದಂಡ ವಸೂಲಿ ಮಾಡಲು ಕಂದಾಯ ಇಲಾಖೆ ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ.

ಗೋವಾ ಸರಕಾರದಂತೆಯೇ ಮಹಾರಾಷ್ಟ್ರ ಸರಕಾರಕ್ಕೂ ಚಳ್ಳೆ ಹಣ್ಣು ತಿನ್ನಿಸಿದ ‘ಸನ್‌ಬರ್ನ್ ಫೆಸ್ಟಿವಲ್’ !

೨೦೦೯, ೨೦೧೪ ಮತ್ತು ೨೦೨೦ ರಲ್ಲಿ ‘ಸನ್‌ಬರ್ನ್ ಫೆಸ್ಟಿವಲ್’ನ ಆಯೋಜಕರು ಗೋವಾ ರಾಜ್ಯದ ₹ ೬ ಕೋಟಿ ೨೯ ಲಕ್ಷದ ತೆರಿಗೆಯನ್ನು ತಪ್ಪಿಸಿದ್ದಾರೆ. ಈ ಬಗ್ಗೆ ಸೆಪ್ಟೆಂಬರ್ ೨೦೨೫ ರಲ್ಲಿ ಮುಂಬಯಿ ಉಚ್ಚ ನ್ಯಾಯಾಲಯ ‘ಸನ್‌ಬರ್ನ್ ಫೆಸ್ಟಿವಲ್’ನ ₹ ೧ ಕೋಟಿ ೧೦ ಲಕ್ಷದ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿತು. ಗೋವಾದಂತೆಯೇ ಮಹಾರಾಷ್ಟ್ರ ಸರಕಾರದ ತೆರಿಗೆಯನ್ನು ಸಹ ತಪ್ಪಿಸಿ, ಸನ್‌ಬರ್ನ್ ಆಯೋಜಕರು ನ್ಯಾಯಾಲಯದ ನಿರ್ಧಾರಕ್ಕೆ ನಿರ್ಲಕ್ಷ್ಯ ತೋರಿಸಿದ್ದಾರೆ; ಆದರೆ ಅದರ ನಂತರವೂ, ಮುಂಬಯಿನಲ್ಲಿ ಡಿಸೆಂಬರ್ ೧೯ ರಿಂದ ೨೧, ೨೦೨೫ ರ ಅವಧಿಯಲ್ಲಿ ನಡೆಯಲಿರುವ ‘ಸನ್‌ಬರ್ನ್ ಫೆಸ್ಟಿವಲ್’ಗೆ ರಾಜ್ಯ ಸರಕಾರದ ವಿವಿಧ ಇಲಾಖೆಗಳು ಅನುಮತಿ ನೀಡಿವೆ. (‘ಸನ್‌ಬರ್ನ್ ಫೆಸ್ಟಿವಲ್’ಗೆ ಆಡಳಿತವು ಒಪ್ಪಿಗೆ ನೀಡಿದ ಇಲಾಖೆಗಳು ಮತ್ತು ರಾಜ್ಯದ ಕಂದಾಯ ಸಚಿವ ಚಂದ್ರಶೇಖರ್ ಬಾವನಕುಳೆ ಅವರು ತಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸುವುದು ಅವಶ್ಯಕ ಎಂದು ಸಾಮಾನ್ಯ ಜನತೆಗೆ ಅನಿಸುತ್ತದೆ! – ಸಂಪಾದಕರು)

‘ಶುಲ್ಕವನ್ನು ಕಡ್ಡಾಯವಾಗಿ ವಸೂಲಿ ಮಾಡುತ್ತೇವೆ!’ (ಅಂತೆ) – ಸ್ಟ್ಯಾಂಪ್ ಡ್ಯೂಟಿ ಕಛೇರಿ

ಇದುವರೆಗೆ ಈ ಶುಲ್ಕವನ್ನು ಏಕೆ ವಸೂಲಿ ಮಾಡಿಲ್ಲ? ಇದರ ಉತ್ತರ ಮೊದಲು ಜನರಿಗೆ ಸಿಗಬೇಕು!

ಸ್ಟ್ಯಾಂಪ್ ಡ್ಯೂಟಿ ವಸೂಲಿಯ ಬಗ್ಗೆ ‘ಸನಾತನ ಪ್ರಭಾತ’ದ ಪ್ರತಿನಿಧಿ ಶ್ರೀ. ಪ್ರೀತಮ ನಾಚಣಕರ್ ಅವರು ಪುಣೆ ಇಲ್ಲಿನ ರಾಜ್ಯ ಸರಕಾರದ ನೋಂದಣಿ ಮಹಾನಿರೀಕ್ಷಕ ಮತ್ತು ಸ್ಟ್ಯಾಂಪ್ ನಿಯಂತ್ರಕ ಕಛೇರಿಗೆ ಪತ್ರ ಕಳುಹಿಸಿದರು. ಈ ಪತ್ರಕ್ಕೆ ‘ಮಹಾರಾಷ್ಟ್ರ ಸ್ಟ್ಯಾಂಪ್ ಅಧಿನಿಯಮದ ಸೆಕ್ಷನ್ ೪೬ ರ ಅಡಿಯಲ್ಲಿ ‘ಸನ್‌ಬರ್ನ್ ಫೆಸ್ಟಿವಲ್’ನ ಆಯೋಜಕರಿಂದ ಸ್ಟ್ಯಾಂಪ್ ಡ್ಯೂಟಿಯ ಕಡ್ಡಾಯ ವಸೂಲಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುತ್ತಿದೆ’ ಎಂದು ಉತ್ತರ ನೀಡಲಾಗಿದೆ. ಆದರೆ ವಾಸ್ತವದಲ್ಲಿ, ನ್ಯಾಯಾಲಯದ ನಿರ್ಧಾರಕ್ಕೆ ೭ ವರ್ಷಗಳಾದರೂ ಈ ವಸೂಲಿ ನಡೆದಿಲ್ಲ. (ಇಷ್ಟು ವರ್ಷ ವಸೂಲಿ ಮಾಡದವರು ಈಗ ಅದನ್ನು ಮಾಡುತ್ತಾರೆ ಎಂಬುದಕ್ಕೆ ಏನು ಖಾತ್ರಿ? – ಸಂಪಾದಕರು)

‘ಸನ್‌ಬರ್ನ್ ಫೆಸ್ಟಿವಲ್’ನ ವಿವಾದಾತ್ಮಕ ಹಿನ್ನೆಲೆ!

೧. ೨೦೦೯ ರಲ್ಲಿ ‘ಸನ್‌ಬರ್ನ್ ಫೆಸ್ಟಿವಲ್’ನಲ್ಲಿ ನೇಹಾ ಬಹುಗುಣ (ವಯಸ್ಸು ೨೩ ವರ್ಷ), ೨೦೧೪ ರಲ್ಲಿ ಇಶಾ ಮಂತ್ರಿ (ವಯಸ್ಸು ೨೭ ವರ್ಷ) ಮರಣ ಹೊಂದಿದ್ದರು.

೨. ೨೦೧೯ ರಲ್ಲಿ ‘ಸನ್‌ಬರ್ನ್ ಫೆಸ್ಟಿವಲ್’ನ ಹೊರ ಆವರಣದಲ್ಲಿ ಸಾಯಿಪ್ರಸಾದ್ ಮತ್ತು ವೆಂಕಟ್ ಸತ್ಯನಾರಾಯಣ, ಹಾಗೆಯೇ ಬೆಂಗಳೂರು ಮೂಲದ ಮತ್ತು ಸಂದೀಪ್ ಕೊಟ್ಟಾ ಅವರು ಅತಿಯಾದ ನಶೆಯಿಂದ ಮರಣ ಹೊಂದಿದ್ದಾರೆ ಎಂಬ ಆರೋಪವಿದೆ.

೩. ೨೦೨೪ ರಲ್ಲಿ ಕರಣ್ ಕಶ್ಯಪ್ (ವಯಸ್ಸು ೨೬ ವರ್ಷ) ಅವರು ಮಾದಕ ವಸ್ತುಗಳ ಅತಿಯಾದ ಸೇವನೆಯಿಂದ ಮರಣ ಹೊಂದಿದ್ದಾರೆ ಎಂಬ ಆರೋಪವಿದೆ.

೪. ೨೦೧೩ ರಲ್ಲಿ ‘ಸನ್‌ಬರ್ನ್ ಫೆಸ್ಟಿವಲ್’ನಲ್ಲಿ ಮಾದಕ ವಸ್ತು ನಿಗ್ರಹ ದಳವು ಸೌರಭ್ ಅಗರ್ವಾಲ್ ಎಂಬ ‘ಡ್ರಗ್ ಡೀಲರ್’ನನ್ನು ಹಿಡಿದರು. ಆ ಸಮಯದಲ್ಲಿ ವ್ಯಸನ ಮಾಡುತ್ತಿದ್ದ ೧ ಸಾವಿರಕ್ಕೂ ಹೆಚ್ಚು ಜನರಿಗೆ ಪೊಲೀಸರು ದಂಡ ವಿಧಿಸಿದರು.

೫. ೨೦೧೩ ರಲ್ಲಿ ‘ಸನ್‌ಬರ್ನ್ ಫೆಸ್ಟಿವಲ್’ನ ೨ ದಿನಗಳ ಮೊದಲು ಗೋವಾದಲ್ಲಿ ‘ರೇಪ್ ಡ್ರಗ್’ ಎಂದು ಕರೆಯಲ್ಪಡುವ ‘ಕೆಟಾಮಿನ್’ನ ೪೫೦ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಯಿತು. ಅವುಗಳನ್ನು ಈ ಕಾರ್ಯಕ್ರಮದಲ್ಲಿ ವಿತರಿಸಲು ಉದ್ದೇಶಿಸಲಾಗಿತ್ತು ಎಂಬ ಆರೋಪವಿತ್ತು.

ಸಂಪಾದಕೀಯ ನಿಲುವು

  • ಒಂದು ಕಡೆ ಯುವ ಪೀಳಿಗೆಯನ್ನು ಕೇವಲ ವ್ಯಸನಗಳಾಗಿ, ಮಾದಕ ವಸ್ತುಗಳ ಚಟಕ್ಕೆ ದೂಡುವ, ವ್ಯಭಿರಿಗಳನ್ನಾಗಿ ಮಾಡುವ, ಅಶ್ಲೀಲತೆ ಹರಡುವ ಮತ್ತು ಧ್ವನಿ ಮಾಲಿನ್ಯ ಮಾಡುವ ‘ಸನ್‌ಬರ್ನ್ ಫೆಸ್ಟಿವಲ್’ನ ಆಯೋಜಕರು ಇನ್ನೊಂದು ಕಡೆ ಸರಕಾರದ ಆದಾಯಕ್ಕೂ ವಂಚನೆ ಮಾಡುತ್ತಿದ್ದಾರೆ. ಹೀಗಿರುವಾಗ ಯಾವ ದೃಷ್ಟಿಯಿಂದ ಈ ‘ಸನ್‌ಬರ್ನ್ ಫೆಸ್ಟಿವಲ್’ ರಾಜ್ಯಕ್ಕೆ ಲಾಭದಾಯಕವಾಗಿದೆ? ಇದಕ್ಕೆ ಆಡಳಿತ ಉತ್ತರ ನೀಡಬೇಕು!
  • ಒಂದು ಕಡೆ ಪ್ರಧಾನ ಮಂತ್ರಿಗಳು ನಿರಂತರವಾಗಿ ಮೆಕಾಲೆ ಸೃಷ್ಟಿಸಿದ ಪಾಶ್ಚಾತ್ಯ ವಿಚಾರಧಾರೆಯನ್ನು ತ್ಯಜಿಸುವಂತೆ ಮತ್ತು ಭಾರತೀಯ ಸಂಸ್ಕೃತಿಯೊಂದಿಗೆ ಸ್ವದೇಶಿತ್ವವನ್ನು ಪ್ರೋತ್ಸಾಹಿಸುವಂತೆ ಕರೆ ನೀಡುತ್ತಿದ್ದರೆ, ಇನ್ನೊಂದು ಕಡೆ ಇಂತಹ ಪಾಶ್ಚಾತ್ಯ ವಿಕೃತಿಯ ಕಾರ್ಯಕ್ರಮಕ್ಕೆ ಮತ್ತೆ ಮತ್ತೆ ಅನುಮತಿ ನೀಡುವ ಮೂಲಕ ಆಡಳಿತ ಏನನ್ನು ಸಾಧಿಸಲು ನೋಡುತ್ತಿದೆ?
  • ಈ ಎಲ್ಲಾ ಪ್ರಕರಣಗಳಿಂದ ‘ಆಡಳಿತಾತ್ಮಕ ಅಧಿಕಾರಿಗಳು ಮತ್ತು ಸನ್‌ಬರ್ನ್ ಆಯೋಜಕರ ನಡುವೆ ಏನಾದರೂ ಸಂಬಂಧವಿದೆಯೇ?’ ಎಂಬ ಸಂಶಯ ಯಾರಿಗಾದರೂ ಬಂದರೆ ತಪ್ಪೇನು? ಇದರಲ್ಲಿ ಜವಾಬ್ದಾರಿಯುತ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು!