ಕುಟುಂಬವ್ಯವಸ್ಥೆಗೆ ಧರ್ಮಾಚರಣೆಯೇ ಆಧಾರ !

ಈಗ ವಿವಾಹಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಮಹಿಳೆಯರಿಗಿಂತ ಪುರುಷರ ಸಂಖ್ಯೆ ಹೆಚ್ಚಾಗುತ್ತಿದೆ. ಅನೇಕ ವರ್ಷಗಳಲ್ಲಿ ಮೊದಲನೇ ಬಾರಿಗೆ ಇಂತಹ ಅಂಕಿಅಂಶಗಳು ಕಂಡುಬಂದಿವೆ. ‘ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ’ದ ಇತ್ತೀಚಿನ ಅಂಕಿಅಂಶಗಳ ಪ್ರಕಾರ ದೇಶದ ಸಾಮಾಜಿಕ ಮತ್ತು ಮಾನಸಿಕ ಆರೋಗ್ಯ ವೇಗವಾದ ಮತ್ತು ಮಹತ್ವಪೂರ್ಣ ಬದಲಾವಣೆ ಆಗಿರುವುದು ಕಂಡು ಬರುತ್ತಿದೆ. ಬ್ಯುರೋದ ೨೦೨೩ ರ ವರದಿಯಲ್ಲಿ ಕಂಡುಬಂದ ಅಂಶವೆಂದರೆ, ವೈವಾಹಿಕ ಒತ್ತಡದಿಂದ ೪ ಸಾವಿರದ ೮೬೩ ಜನ ಪುರುಷರು ಆತ್ಮಹತ್ಯೆ ಮಾಡಿಕೊಂಡು ತಮ್ಮ ಜೀವನವನ್ನು ಕೊನೆಗಾಣಿಸಿದ್ದಾರೆ. ಇದು ಕೇವಲ ಸಾಮಾಜಿಕ ಅಂಕಿಅಂಶಗಳಲ್ಲ, ಭಾರತೀಯ ಸಮಾಜದ ಬದಲಾಗುತ್ತಿರುವ ಮಾನಸಿಕತೆ ಮತ್ತು ಸಾಂಸ್ಕೃತಿಕ ಅವನತಿಯ ಸಂಕೇತವಾಗಿದೆ. ಯಾವ ವಿವಾಹವ್ಯವಸ್ಥೆಯು ಸಹಿಷ್ಣುತೆ, ಪ್ರೇಮ, ತ್ಯಾಗವನ್ನು ಕಲಿಸಬೇಕಿತ್ತೋ, ಆ ಜಾಗದಲ್ಲಿ ಇಂದು ಅಹಂಕಾರ, ಸಂಶಯ, ಅಸಹಿಷ್ಣುತೆ ನೆಲೆಗೊಂಡಿದೆ.

ಇಂದು ಪಾಶ್ಚಾತ್ಯ ವಿಕೃತಿಯ ಪ್ರಭಾವಕ್ಕೆ ಒಳಗಾದ ಸಮಾಜದಲ್ಲಿ, ವಿವಾಹ ವ್ಯವಸ್ಥೆಯು ‘ಸಹಜೀವನ’ ಎಂಬ ಆಧ್ಯಾತ್ಮಿಕ ದೃಷ್ಟಿಕೋನಕ್ಕಿಂತ ಹೆಚ್ಚಾಗಿ ‘ಸ್ವಾರ್ಥ ಈಡೇರಿಕೆಯ ವ್ಯವಹಾರ’ವಾಗಿ ಮಾರ್ಪಟ್ಟಿದೆ. ವಿಚ್ಛೇದನೆ, ಸುಳ್ಳು ಆರೋಪಗಳು, ನ್ಯಾಯಾಲಯದ ಸಂಘರ್ಷಗಳಂತಹ ಪ್ರಕ್ರಿಯೆಗಳಿಂದಾಗಿ ಪುರುಷರು ಅನ್ಯಾಯದ ಕಿರುಕುಳವನ್ನು ಸಹಿಸಿಕೊಳ್ಳಬೇಕಾಗಿದೆ.

ಕಾನೂನಿನಲ್ಲಿ ಮಹಿಳೆಯರಿಗಾಗಿ ಅನೇಕ ಏರ್ಪಾಡು ಗಳಿವೆÉ (ಸೌಲಭ್ಯಗಳಿವೆ); ಆದರೆ ಮಹಿಳೆಯರಿಂದಾಗುವ ಅನ್ಯಾಯದ ವಿರುದ್ಧ ಪುರುಷರಿಗೆ ಹೆಚ್ಚಿನ ರಕ್ಷಣೆ ಇಲ್ಲ. ಆದ್ದರಿಂದ, ಹತಾಶೆ ಮತ್ತು ಮಾನಸಿಕ ಒತ್ತಡಗಳು ಹೆಚ್ಚುತ್ತಿವೆ. ಇಂತಹ ಬದಲಾವಣೆಗಳು ಕೇವಲ ಅಂಕಿ-ಅಂಶಗಳಲ್ಲಿ ಇಲ್ಲ, ಬದಲಿಗೆ ಸಾಮಾಜಿಕ ಸ್ವಾಸ್ಥ್ಯ, ಕುಟುಂಬದ ಸಮತೋಲನ ಮತ್ತು ಭವಿಷ್ಯದ ಪೀಳಿಗೆಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಮಹತ್ವದ ಸಮಸ್ಯೆಗಳನ್ನು ಹುಟ್ಟುಹಾಕುತ್ತವೆ. ಭಾರತೀಯ ಸಂಸ್ಕೃತಿಯಲ್ಲಿ ವಿವಾಹವು ಕೇವಲ ಎರಡು ವ್ಯಕ್ತಿಗಳಲ್ಲ, ಅದು ಎರಡು ಕುಟುಂಬಗಳು, ಎರಡು ವಿಚಾರಗಳು ಮತ್ತು ಸಂಪ್ರದಾಯಗಳ ಸುಂದರ ಸಂಗಮವೆಂದು ಪರಿಗಣಿಸಲಾಗುತ್ತದೆ. ಕುಟುಂಬ ವ್ಯವಸ್ಥೆಯ ಮೂಲಭೂತ ರಚನೆಯಲ್ಲಿ ವಿವಾಹವು ಕೇಂದ್ರಬಿಂದುವಾಗಿದೆ; ಆದರೆ ಇಂದಿನ ವೇಗವಾದ, ಸ್ಪರ್ಧಾತ್ಮಕ ಮತ್ತು ಆಧುನಿಕತೆಯ ಯುಗದಲ್ಲಿ ವಿವಾಹ ವ್ಯವಸ್ಥೆಯು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಪಾಶ್ಚಾತ್ಯರ ಅಂಧಾನುಕರಣೆಯಿಂದಾಗಿ ‘ಲಿವ್‌-ಇನ್‌ ರಿಲೇಶನ್‌ಶಿಪ್‌’, ‘ಸಲಿಂಗ ಸಂಬಂಧಗಳು’, ವಿವಾಹೇತರ ಸಂಬಂಧಗಳಂತಹ ವಿಕೃತಿಗಳು ಭಾರತೀಯ ಸಮಾಜಕ್ಕೆ ದೊಡ್ಡ ಆಘಾತವನ್ನು ನೀಡುತ್ತಿವೆ. ಸಮಾಜವನ್ನು ಈ ಮಾನಸಿಕ ಮತ್ತು ನೈತಿಕ ಅವನತಿಯಿಂದ ಹೊರತರಲು ಧರ್ಮವನ್ನು ಆಧರಿಸಿದ ಕುಟುಂಬ ವ್ಯವಸ್ಥೆಯು ಅಗತ್ಯವಾಗಿದೆ. ಇಂದು ವಿವಾಹ ವನ್ನು ಕೇವಲ ದೈಹಿಕ ಸಂಬಂಧ ಅಥವಾ ಸಾಮಾಜಿಕ ಸುರಕ್ಷತೆಯ ಮಾರ್ಗ ಎಂದು ಮಾತ್ರ ನೋಡಲಾಗುತ್ತಿದೆ. ಈ ಪರಿಸ್ಥಿತಿಯು ಧರ್ಮಾಧಾರಿತ ಕುಟುಂಬ ವ್ಯವಸ್ಥೆಯಿಂದ ದೂರ ಹೋಗಿ, ವಿವಾಹದ ಆಧ್ಯಾತ್ಮಿಕ ಮೌಲ್ಯವನ್ನು ಮರೆಯುವುದರ ದುಷ್ಪರಿಣಾಮವಾಗಿದೆ. ಪತಿ-ಪತ್ನಿಯರು ಧರ್ಮಕರ್ತವ್ಯವನ್ನು ಅರಿತು ಧರ್ಮಾಚರಣೆ ಮಾಡಿದರೆ ಮತ್ತು ಪರಸ್ಪರ ಅರ್ಥ ಮಾಡಿಕೊಂಡು ನಡೆದರೆ, ಇಂತಹ ಭೀಕರ ಘಟನೆಗಳ ಪುನರಾವರ್ತನೆಯನ್ನು ತಡೆಯಬಹುದು. ಸಾವಿತ್ರಿಯು ಸತ್ಯವಾನನನ್ನು ಯಮರಾಜನಿಂದ ಮರಳಿ ಪಡೆದಳು, ಇದು ಹಿಂದೂ ಸಂಸ್ಕೃತಿಯಾಗಿದೆ. ಈಶ್ವರಕೇಂದ್ರಿತ ಜೀವನ ವ್ಯವಸ್ಥೆ ಮತ್ತೆ ನೆಲೆಗೊಂಡರೆ ಮಾತ್ರ ಆತ್ಮಹತ್ಯೆಯ ಪ್ರವೃತ್ತಿಗೆ ಕಡಿವಾಣ ಹಾಕಲು ಸಾಧ್ಯ !

– ಅಪರ್ಣಾ ಜಗತಾಪ, ಪುಣೆ