ಚರ್ಮ, ಕೂದಲು ಮತ್ತು ಕಣ್ಣುಗಳ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ?

ನಮ್ಮ ಮೂಗು, ಕಣ್ಣು, ದೇಹದ ರಚನೆ ಹೇಗಿರಬೇಕು ಎಂಬುದು ನಮ್ಮ ಕೈಯಲ್ಲಿ ಇರುವುದಿಲ್ಲ, ಅದು ದೇವರ ಕೈಯಲ್ಲಿ ಇರುತ್ತದೆ. ಅದು ಅನುವಂಶಿಕ ಮತ್ತು ಹುಟ್ಟುವಾಗಿನ ಪ್ರಕೃತಿಯನ್ನು ಅವಲಂಬಿಸಿರುತ್ತದೆ. ಆ ಮೇಲೆ ಮಾತ್ರ ನಾವು ಅದನ್ನು ಹೇಗೆ ಇಡುತ್ತೇವೋ, ಹಾಗೆ ಇರುತ್ತದೆ, ಅದು ನಮ್ಮ ನಿಯಂತ್ರಣದಲ್ಲಿರುತ್ತದೆ. ನಿಮ್ಮ ಸ್ವಚ್ಛ ಕಣ್ಣುಗಳು, ಆರೋಗ್ಯಕರ ಕೂದಲು, ತೆಳುವಾದ ಚರ್ಮ, ಗಟ್ಟಿ ಹಲ್ಲುಗಳಿಂದ ನಿಮ್ಮ ಆರೋಗ್ಯವು ಚೆನ್ನಾಗಿದೆ ಎಂದು ತಿಳಿಯುತ್ತದೆ. ಬೇಸರದಿಂದ ಕೂಡಿದ ಮುಖ, ಇಷ್ಟಪಡುವುದನ್ನೆಲ್ಲ ತಿನ್ನುವುದು, ವ್ಯಾಯಾಮದ ಕೊರತೆಯಿಂದಾಗಿ ರಾತ್ರಿ ಸರಿಯಾಗಿ ನಿದ್ರೆ ಬರದಿರುವುದರಿಂದ ಮತ್ತು ಅದರಿಂದ ಚರ್ಮದ ಮೇಲೆ ಕಾಣಿಸಿ ಕೊಳ್ಳುವ ದುಷ್ಪರಿಣಾಮಗಳು ಒಳ್ಳೆಯದಲ್ಲ. ಕೆಲವರ ತೂಕ ಬೇಗ ಹೆಚ್ಚಾಗುತ್ತದೆ, ಕೆಲವರ ಚರ್ಮವು ಬೇಗನೇ ಹಾಳಾಗುತ್ತದೆ. ಇದೆಲ್ಲ ಹೇಳುವುದರ ಹಿಂದೆ ‘ಬಾಡಿ ಶೇಮಿಂಗ್’ (ದೇಹದ ರಚನೆಯ ಬಗ್ಗೆ ತಮಾಷೆ ಮಾಡುವುದು) ಅಥವಾ ಇತರ ಯಾವ ಉದ್ದೇಶವಿಲ್ಲ.ಆರೋಗ್ಯದ ಪ್ರತಿಬಿಂಬವಾಗಿರುವ ನಮ್ಮ ಶರೀರವು ಕೊನೆ ವರೆಗೂ ಚೆನ್ನಾಗಿಟ್ಟುಕೊಳ್ಳಲು ಸಾಧ್ಯವಾಗಬೇಕು, ಅದಕ್ಕಾಗಿ ವಿವಿಧ ವಿಧಾನಗ ಳನ್ನು ಹೇಳಲು ಪ್ರಯತ್ನಿಸುತ್ತಿದ್ದೇನೆ. ಈ ವಿಷಯದಲ್ಲಿ ಹೆಚ್ಚಿನದ್ದನ್ನು ನಂತರ ನಿಯಂತ್ರಿಸುವುದಕ್ಕಿಂತ ಮೊದಲೇ ತಪ್ಪಿಸುವುದು ಉತ್ತಮ ! ‘ರೂಪ ನೋಡಲು ಹೇಗಿದ್ದರೆ ಏನು ?’, ಈ ವಾಕ್ಯ ಬರೆಯಲು ಅತ್ಯಂತ ಸುಂದರವಾಗಿದ್ದರೂ, ಒಂದು ವೇಳೆ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಊರ್ಜೆ (ಶಕ್ತಿ) ಚೆನ್ನಾಗಿರುತ್ತದೆ. ಆ ಊರ್ಜೆಯು ನಿಮ್ಮ ಕೆಲಸದ ಅಥವಾ ವ್ಯವಸಾಯದ ಸ್ಥಳದಲ್ಲಿ ನೀವು ನೋಡಲು ಹೇಗೆ ಕಾಣಿಸುತ್ತೀರಿ ಅದರ ಮೇಲೆ ಪ್ರಕಟವಾಗುತ್ತದೆ. ಇದರಿಂದ ನಿಮ್ಮ ಉತ್ಸಾಹ, ನಿಮ್ಮ ಊರ್ಜೆ ಮತ್ತು ಬುದ್ಧಿ ಚೆನ್ನಾಗಿದೆ, ಎಂದು ಇತರರಿಗೆ ತಿಳಿಯುತ್ತದೆ.

ವೈದ್ಯೆ (ಸೌ.) ಸ್ವರಾಲಿ ಶೇಂಡ್ಯೆ

೧. ಆಹಾರದಲ್ಲಿ ಹುಳಿ, ಉಪ್ಪು, ಖಾರ ಮತ್ತು ತಂಗಳು ಪದಾರ್ಥಗಳು ಸಾಧ್ಯವಾದಷ್ಟು ಕಡಿಮೆಯಾಗಿರಬೇಕು. ಇದರಲ್ಲಿ ಉಪ್ಪಿನಕಾಯಿ, ಹಸಿಮೆಣಸಿನಕಾಯಿ, ಹಸಿಮೆಣಸಿನಕಾಯಿಯ ಚಟ್ನಿ, ಶೇಂಗಾಕಾಳಿನ ಚಟ್ನಿ, ಮಸಾಲೆಯುಕ್ತ ಮತ್ತು ಜಿಡ್ಡಿನ ಪಲ್ಯಗಳು, ಟೊಮೆಟೊ, ಹುಣಸೆಹಣ್ಣು ಇಂತಹ ಪದಾರ್ಥಗಳು ಬರುತ್ತವೆ.

೨. ತೀಕ್ಷ್ಣ ಮತ್ತು ಉಷ್ಣ ವಿಷಯಗಳನ್ನು ತಪ್ಪಿಸಬೇಕು. ಇದರಲ್ಲಿ ತುಂಬಾ ಬಿಸಿ ನೀರಿನಿಂದ ಸ್ನಾನ ಮಾಡುವುದು ಅಥವಾ ಬಿಸಿ ನೀರಿನಿಂದ ತುಂಬಾ ಸಮಯದವರೆಗೆ ಸ್ನಾನ ಮಾಡುವುದನ್ನು ತಪ್ಪಿಸಬೇಕು. ಪ್ರತಿದಿನ ಬಿಸಿಲಿನಲ್ಲಿ ಹೋಗಬೇಕಾಗಿದ್ದರೆ ಗಾಗಲ್, ಸ್ಕಾರ್ಫ್ (ತಲೆಯನ್ನು ಮುಚ್ಚುವ ಬಟ್ಟೆ) ಆವಶ್ಯ ಧರಿಸಬೇಕು. ನಿಮ್ಮ ಸುತ್ತಮುತ್ತಲಿನ ಮತ್ತು ಮನೆಯ ವಾತಾವರಣವನ್ನು ಉತ್ತಮವಾಗಿಡಲು ಪ್ರಯತ್ನಿಸಬೇಕು. ಸಿಡಿಮಿಡಿಗೊಳ್ಳುವ ವ್ಯಕ್ತಿಗಳಿಂದ ದೂರವಿರಬೇಕು.

೩. ಮನಸ್ಸಿಗೆ ಶಾಂತಿ ಮುಖ್ಯವಾಗಿರುತ್ತದೆ. ನಾಮಸ್ಮರಣೆ, ಧ್ಯಾನ ಇವುಗಳಿಂದ ಮನಸ್ಸನ್ನು ಕೆರಳಿಸುವ ಸಣ್ಣ ಸಣ್ಣ ವಿಷಯಗಳ ಕಡೆಗೆ ದುರ್ಲಕ್ಷಿಸಲು ಸಹಾಯವಾಗುತ್ತದೆ.

೪. ‘ನೀರನ್ನು ಕಡಿಮೆ ಕುಡಿಯಿರಿ, ಅಗತ್ಯವಿದ್ದಷ್ಟೇ ಕುಡಿಯಿರಿ’, ಎಂದು ಹೇಳುವಾಗ ಬಾಯಾರಿಕೆಯಾದಾಗ ಕೆಲಸದಲ್ಲಿ ಮಗ್ನರಾಗಿ ಮತ್ತು ಹವಾನಿಯಂತ್ರಣ (‘ಎಸಿ’ಯಿಂದ) ದಿಂದ ಕುಡಿಯಲು ಮರೆಯುತ್ತಿಲ್ಲವಲ್ಲ, ಎಂಬುದರತ್ತ ಗಮನ ಕೊಡಬೇಕು. ಹವಾನಿಯಂತ್ರಣ ಯಂತ್ರವು ಗಾಳಿಯಲ್ಲಿನ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದರಿಂದ ದೇಹದಲ್ಲಿನ ನೀರು ನಿಧಾನವಾಗಿ ಕಡಿಮೆಯಾಗುತ್ತ ಹೋಗುತ್ತದೆ, ಅದು ಚಳಿಯಿಂದ ನಮಗೆ ತಿಳಿಯುವುದಿಲ್ಲ. ಹೊರಗಿನ ತಂಪು ವಾತಾವರಣದಿಂದ ನೀರು ಕುಡಿಯುವ ಅವಶ್ಯಕತೆಯೂ ಕಡಿಮೆಯಾಗುತ್ತದೆ. ಇದರಿಂದ ಕಡಿಮೆ ನೀರನ್ನು ಕುಡಿಯಲಾಗುತ್ತದೆ. ಅನೇಕಬಾರಿ ವ್ಯವಸಾಯಿಕ ಕಂಪನಿಗಳಲ್ಲಿ ಚಹಾ-ಕಾಫಿಯನ್ನು ತಯಾರಿಸುವ ಯಂತ್ರ ಗಳಿಂದ ಈ ಪಾನೀಯಗಳನ್ನು ಹೆಚ್ಚು ಪ್ರಮಾಣದಲ್ಲಿ ಕುಡಿಯುತ್ತಾರೆ. ಈ ಎಲ್ಲದರಿಂದ ದೇಹದಲ್ಲಿ ಶುಷ್ಕತೆ ಹೆಚ್ಚಾಗತೊಡಗುತ್ತದೆ ಮತ್ತು ಅದರ ಪರಿಣಾಮವು ಕೂದಲು ಮತ್ತು ಚರ್ಮದ ಮೇಲೆ ಮೊದಲು ಕಾಣಿಸಿಕೊಳ್ಳುತ್ತದೆ. ಇದನ್ನು ತಪ್ಪಿಸಲು ‘ಹ್ಯುಮಿಡಿಫೈರ್’ (ತೇವಾಂಶವನ್ನು ಹೆಚ್ಚಿಸುವ ಉಪಕರಣ)ವನ್ನು ಹಚ್ಚುವುದು, ಅಗತ್ಯವಿಲ್ಲದಿದ್ದರೆ ‘ಎಸಿ’ ಹಚ್ಚದಿರುವುದು, ಪ್ರತಿದಿನ ದೇಹಕ್ಕೆ ಎಣ್ಣೆಯನ್ನು ಹಚ್ಚಿಕೊಳ್ಳುವುದು (ಅಭ್ಯಂಗ) ಇಂತಹ ಕೆಲವು ಉಪಾಯಗಳನ್ನು ಮಾಡ ಬಹುದು.

೫. ಕೂದಲು, ಚರ್ಮ ಮತ್ತು ಕಣ್ಣುಗಳಿಗಾಗಿ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಎಣ್ಣೆಯ ಅಂಶವಿರುವುದು ಮಹತ್ವದ್ದಾಗಿದೆ. ಅದಕ್ಕಾಗಿ ಸೇವಿಸಿದ ಆಹಾರದಲ್ಲಿನ ಎಣ್ಣೆಯು ಸರಿಯಾದ ಸ್ಥಳದಲ್ಲಿ ತಲುಪುವುದು ಮಹತ್ವದ್ದಾಗಿದೆ. ಇಲ್ಲದಿದ್ದರೆ ಅದು ಕೇವಲ ಕೊಬ್ಬಿನಲ್ಲಿ ರೂಪಾಂತರವಾಗುತ್ತದೆ. ಇದೆಲ್ಲದಕ್ಕೂ ವ್ಯಾಯಾಮ ಅತ್ಯವಶ್ಯಕವಾಗಿದೆ.

೬. ದೇಹಕ್ಕೆ ‘ಲೋಶನ್’ (ಚರ್ಮಕ್ಕೆ ಬಳಸಲಾಗುವ ಔಷಧಿಯ ಮಿಶ್ರಣ) ಹಚ್ಚದೇ ಚಿಕ್ಕ ಬಾಟಲಿಯಲ್ಲಿ ಕೊಬ್ಬರಿಎಣ್ಣೆಯನ್ನಿಟ್ಟು ಅದನ್ನು ಪ್ರತಿದಿನ ಕೈಗೆ ಮತ್ತು ಕಾಲಿಗೆ ಹಚ್ಚಿದರೆ ಚಳಿಗಾಲದಲ್ಲಿಯೂ ಚರ್ಮವು ಮೃದುವಾಗಿರುತ್ತದೆ, ಇದು ನಮ್ಮ ಅನುಭವದ ವಿಷಯವಾಗಿದೆ.

೭. ಒಣ ಕಪ್ಪು ದ್ರಾಕ್ಷಿ, ಅರಳು, ಮಖಾನ, ದಾಳಿಂಬೆಹಣ್ಣು, ಹಣ್ಣುಗಳು, ಹಾಲು, ತುಪ್ಪ, ಬೆಣ್ಣೆ, ತಾಜಾ ರುಚಿಕರ ಮತ್ತು ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಇವೆಲ್ಲವೂ ನಮಗೆ ಗೊತ್ತಿದೆ; ಆದರೆ ಮಾಡಲಾಗದ ಉಪಾಯಗಳೇ ನಿಜವಾಗಿ ಆವಶ್ಯಕವಾಗಿದೆ.

೮. ವಾರ್ಷಿಕ ತಪಾಸಣೆ ಮಾಡಿಸಿ ತೂಕ ಹೆಚ್ಚಳ, ಚರ್ಮ ಮತ್ತು ಕೂದಲಿನ ಅನಾರೋಗ್ಯಕ್ಕೆ ಇತರ ಕಾರಣವಿಲ್ಲವಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹಿಮೋಗ್ಲೋಬಿನ್‌ ಕಡಿಮೆಯಾದಾಗ ಕೂದಲು ಉದುರುವುದು, ಥೈರಾಯ್ಡ್ ಮತ್ತು ಮುಟ್ಟಿನ ಸಮಸ್ಯೆಗಳಿಂದ ತೂಕ ಹೆಚ್ಚಾಗುವುದು ಮತ್ತು ಮಧುಮೇಹದಿಂದ ಹಲ್ಲುಗಳಲ್ಲಿ ಕೊಳೆ ಸಂಗ್ರಹವಾಗಿ ಹಾಳಾಗುವುದು, ಇಂತಹ ರೋಗಲಕ್ಷಣಗಳು ಸಾಮಾನ್ಯವಾಗಿ ಕಂಡುಬರುತ್ತವೆ.

೯. ಕೊನೆಯದಾಗಿ ಮತ್ತು ಮಹತ್ವದೆಂದರೆ, ಈ ಎಲ್ಲಾ ಸಮಸ್ಯೆಗಳಿಗೆ ಮತ್ತು ನಿರ್ದಿಷ್ಟ ಅಂಗಗಳ ಆರೋಗ್ಯಕ್ಕೆ ಉಪಯುಕ್ತ ಅನೇಕ ಔಷಧಗಳು ಮತ್ತು ವನಸ್ಪತಿಗಳು ಆಯುರ್ವೇದದಲ್ಲಿವೆ. ಮೂಲ ಪ್ರಕೃತಿಯ ಕಾರಣದಿಂದ ಕೂದಲು ಮತ್ತು ಚರ್ಮದ ಆರೋಗ್ಯ ದುರ್ಬಲವಾಗಿದ್ದರೆ, ವೈದ್ಯರ ಸಲಹೆಯಿಂದ ಔಷಧಗಳನ್ನು ಪ್ರಾರಂಭಿಸಿದರೆ ಖಂಡಿತಾ ಲಾಭವಾಗುತ್ತದೆ.

 – ವೈದ್ಯೆ (ಸೌ.) ಸ್ವರಾಲಿ ಶೇಂಡ್ಯೆ, ಯಶಪ್ರಭಾ ಆಯುರ್ವೇದ, ಪುಣೆ.