ರಷ್ಯಾ-ಚೀನಾ ದೇಶಗಳು ಸ್ನೇಹದ ಸೋಗಿನಲ್ಲಿ ಭಾರತಕ್ಕೆ ‘ಆಯನಿ ಏರ್‌ಬೇಸ್’ ವಿಷಯದಲ್ಲಿ ಏಕೆ ದ್ರೋಹ ಬಗೆದವು ?

‘ಆಯನಿ ಏರ್‌ಬೇಸ್‌

ಮಧ್ಯ ಏಷ್ಯಾದಲ್ಲಿ ಏರಿಳಿತಗಳಿಂದ ಕೂಡಿದ ಪರ್ವತಶ್ರೇಣಿಗಳಲ್ಲಿ ಅಡಗಿರುವ ಒಂದು ಸ್ಥಳವು ಭಾರತಕ್ಕೆ ಬಹಳ ಮಹತ್ವದ್ದಾಗಿತ್ತು. ಪಾಕಿಸ್ತಾನ ಮತ್ತು ಚೀನಾ ವಿರುದ್ಧ ಭಾರತಕ್ಕೆ ಇದು ‘ಟ್ರಂಪ್‌ ಕಾರ್ಡ್‌’ ಆಗಿತ್ತು; ಆದರೆ ಈಗ ಈ ಸ್ಥಳವು ಭಾರತದ ಕೈತಪ್ಪಿಹೋಗಿದೆ. ಹೌದು, ಆ ಸ್ಥಳವೇ ತಜಕಿಸ್ತಾನದ ‘ಆಯನಿ ಏರ್‌ಬೇಸ್’ (ಸೇನಾ ವಿಮಾನ ನಿಲ್ದಾಣ). ಸುಮಾರು ೨ ದಶಕಗಳ ನಂತರ ಭಾರತವು ‘ಆಯನಿ ಏರ್‌ಬೇಸ್’ ಮೇಲಿನ ಹಿಡಿತವನ್ನು ಬಿಟ್ಟು, ಅದನ್ನು ತೆರವುಗೊಳಿಸಿದೆ. ವರದಿಗಳ ಪ್ರಕಾರ, ರಷ್ಯಾ ಮತ್ತು ಚೀನಾ ಒಟ್ಟಾಗಿ ತಜಕಿಸ್ತಾನದ ಮೇಲೆ ಒತ್ತಡ ಹೇರಿದ್ದರಿಂದ ಅದು ಭಾರತದಿಂದ ಈ ಏರ್‌ಬೇಸ್ನ್ನು ಹಿಂದಕ್ಕೆ ಪಡೆದುಕೊಂಡಿತು.

೧. ಭಾರತದ ಮೊದಲ ವಿದೇಶಿ ಏರ್‌ಬೇಸ್‌ ಮತ್ತು ‘ಆಯನಿ ಏರ್‌ಬೇಸ್‌’ನ ಆಯಕಟ್ಟಿನ ಮಹತ್ವ

ವರ್ಷ ೨೦೦೨ ರಲ್ಲಿ, ಭಾರತವು ತಜಕಿಸ್ತಾನದೊಂದಿಗೆ ಮಿಲಿಟರಿ ಸಹಕಾರವನ್ನು ಹೆಚ್ಚಿಸಿತು. ಭಾರತವು ಸುಮಾರು ೫೦೦ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ, ‘ರನ್‌ ವೇ’ಯನ್ನು ವಿಸ್ತರಿಸಿತು. ಇದು ಭಾರತದ ಮೊದಲ ವಿದೇಶಿ ಏರ್‌ಬೇಸ್‌ ಎಂದು ಹೇಳಲಾಗುತ್ತದೆ. ‘ಆಯನಿ ಏರ್‌ಬೇಸ್’ ಪಾಕಿಸ್ತಾನದ ನಿಯಂತ್ರಣದಲ್ಲಿರುವ ಕಾಶ್ಮೀರದಿಂದ ಕೇವಲ ೨೦ ಕಿಲೋಮೀಟರ್‌ ದೂರದಲ್ಲಿದೆ. ‘ಆಯನಿ ಏರ್‌ಬೇಸ್‌’ನಿಂದ ಭಾರತವು ‘ಸು-೩೦ ಎಂಕೆಐ’ನಂತಹ ಯುದ್ಧ ವಿಮಾನಗಳನ್ನು ಬಳಸಿ ಪೇಶಾವರ ಅಥವಾ ಇಸ್ಲಾಮಾಬಾದವರೆಗೂ ಗುರಿ ಇಡಬಹುದಿತ್ತು. ತಜಕಿಸ್ತಾನದ ಗಡಿ ಚೀನಾದ ಕ್ಸಿನ್‌ ಜಿಯಾಂಗ್‌ಗೆ ತಾಗಿಕೊಂಡಿದೆ. ಇದರಿಂದ ಚೀನಾಗೂ ಗುರಿ ಇಡಲು ಸಾಧ್ಯವಾಗುತ್ತಿತ್ತು.

೨. ತನ್ನ ನಾಗರಿಕರನ್ನು ರಕ್ಷಿಸಲು ಭಾರತವು ‘ಆಯನಿ ಏರ್‌ಬೇಸ್‌’ಅನ್ನು ಬಳಸಿದ್ದು !

೨೦೦೧ ರಲ್ಲಿ ತಾಲಿಬಾನ್‌ ಮತ್ತೆ ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದಾಗ, ಆ ಸಮಯದಲ್ಲಿ ಭಾರತವು ಇದೇ ‘ಆಯನಿ ಏರ್‌ಬೇಸ್‌’ಅನ್ನು ಬಳಸಿಕೊಂಡು ಭಾರತೀಯರನ್ನು ಸ್ಥಳಾಂತರಿಸಿತ್ತು. ಮಾನವೀಯ ಕಾರ್ಯಾಚರಣೆ ಮಾತ್ರವಲ್ಲದೆ, ಯುದ್ಧದ ಸಮಯದಲ್ಲಿ ಚೀನಾ-ಪಾಕಿಸ್ತಾನವನ್ನು ಗುರಿ ಮಾಡಲು ಈ ‘ಏರ್‌ಬೇಸ್’ ಭಾರತಕ್ಕೆ ಮಹತ್ವದ್ದಾಗಿತ್ತು.

೩. ತಜಕಿಸ್ತಾನದ ಗಡಿ ಯಾವೆಲ್ಲ ದೇಶಗಳಿಗೆ ತಾಗಿಕೊಂಡಿದೆ ?

ತಜಕಿಸ್ತಾನವು ಅಫ್ಘಾನಿಸ್ತಾನ, ಚೀನಾ, ಕಿರ್ಗಿಸ್ತಾನ್‌ ಮತ್ತು ಉಜ್ಬೇಕಿಸ್ತಾನ್‌ಗೆ ತಾಗಿಕೊಂಡಿದೆ. ಭಾರತದ ಈ ಹಿನ್ನಡೆಯು ಮಧ್ಯ ಏಷ್ಯಾ ಕ್ರಮೇಣ ಮತ್ತೆ ರಷ್ಯಾ ಮತ್ತು ಚೀನಾ ಪ್ರಭಾವಕ್ಕೆ ಒಳಗಾಗುತ್ತಿರುವ ಸಂಕೇತವಾಗಿದೆ.

೪. ರಷ್ಯಾದ ಮನಸ್ಸಿನಲ್ಲಿ ಯಾವ ಭಯವಿತ್ತು ?

‘ದ ಪ್ರಿಂಟ್’ ವರದಿಯ ಪ್ರಕಾರ, ರಷ್ಯಾ-ಚೀನಾದ ಒತ್ತಡವೇ ‘ಲೀಸ್’ ವಿಸ್ತರಿಸದಿರಲು ನಿಜವಾದ ಕಾರಣವಾಗಿದೆ. ಭಾರತವು ಪಾಶ್ಚಾತ್ಯ ದೇಶಗಳ ಕಡೆಗೆ ಒಲವು ಹೆಚ್ಚಿಸುತ್ತಿದೆ. ಇದರಿಂದ ಮಧ್ಯ ಏಷ್ಯಾದಲ್ಲಿ ಹೊರಗಿನ ಶಕ್ತಿಗಳ ಹಸ್ತಕ್ಷೇಪ ಹೆಚ್ಚಾಗುತ್ತದೆ ಎಂಬ ಭಯ ರಷ್ಯಾಕ್ಕೆ ಇತ್ತು.

೫. ರಷ್ಯಾ ದ್ರೋಹ ಬಗೆದಿದೆ !

ರಕ್ಷಣಾ ತಜ್ಞರು ಇದನ್ನು ‘ಸ್ನೇಹಪರ ದ್ರೋಹ’ ಎಂದು ಕರೆಯುತ್ತಿದ್ದಾರೆ. ರಷ್ಯಾವು ಪ್ರಾದೇಶಿಕ ಸಮತೋಲನಕ್ಕೆ ಆದ್ಯತೆ ನೀಡಿತು.

೬. ಭಾರತಕ್ಕಾದ ಹಾನಿ ಏನು ?

ತಜಕಿಸ್ತಾನದಿಂದ ಭಾರತದ ಸೇನಾ ಹಿಂತೆಗೆತದಿಂದಾಗಿ ಮಧ್ಯ ಏಷ್ಯಾದಲ್ಲಿ ರಷ್ಯಾ-ಚೀನಾದ ಪ್ರಭಾವ ಮತ್ತಷ್ಟು ಹೆಚ್ಚಾಗಲಿದೆ. ಭಾರತದ ಸೈನ್ಯದ ದಾಳಿಯ ಸಾಮರ್ಥ್ಯ ಮತ್ತು ಕಣ್ಗಾವಲು ಎರಡೂ ಕಡಿಮೆಯಾಗಲಿವೆ.

– ದಿನಾನಾಥ ಪರಬ (ಆಧಾರ : ‘ಟಿವಿ ೯’ ಜಾಲತಾಣ, ೩೦.೧೦.೨೦೨೫)

ಚೀನಾಗೆ ಭಾರತದ ‘ಆಯನಿ ಏರ್‌ಬೇಸ್‌’ನಿಂದ ಯಾವ ಅಪಾಯಗಳಿದ್ದವು ?

ಚೀನಾದ ‘ಬೆಲ್ಟ್ ಎಂಡ್‌ ರೋಡ್‌ ಇನಿಶಿಯೇಟಿವ್’ (‘ಬಿ.ಆರ್‌.ಐ’) ತಜಕಿಸ್ತಾನವನ್ನು ಸಾಲದ ಸುಳಿಗೆ ಸಿಲುಕಿಸಿದೆ. ಭಾರತದ ‘ಆಯನಿ ಏಯರ್‌ಬೇಸ್‌’ನಿಂದ ಚೀನಾದ ‘ಏಯರ್‌ಬೇಸ್’ ಕೆಲವೇ ಕಿಲೋಮೀಟರ್‌ ದೂರದಲ್ಲಿತ್ತು. ‘ಆಯನಿ ಏಯರ್‌ಬೇಸ್’ ಮೂಲಕ ಭಾರತವು ಕ್ಸಿನ್‌ಜಿಯಾಂಗ್‌ನಲ್ಲಿರುವ ಉಯಿಘರ್‌ ಬಂಡುಕೋರರಿಗೆ ಸಹಾಯ ಮಾಡುತ್ತದೆ ಎಂದು ಚೀನಾಕ್ಕೆ ಭಯವಿತ್ತು. ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಸಮೀಪದಲ್ಲಿ ಭಾರತದ ಉಪಸ್ಥಿತಿಯು ‘ಚೀನಾ-ಪಾಕಿಸ್ತಾನ ಎಕನಾಮಿಕ್‌ ಕಾರಿಡಾರ್‌’ಗೆ ಅಪಾಯಕಾರಿಯಾಗುತ್ತಿತ್ತು.