ಶ್ರೀ ದತ್ತಾತ್ರೇಯರ ಗುಣವೈಶಿಷ್ಟ್ಯಗಳು!


೧. ಜ್ಞಾನ, ವಾತ್ಸಲ್ಯ ಮತ್ತು ವೈರಾಗ್ಯದ ಸಂಗಮ

‘ಭಗವಾನ ದತ್ತಾತ್ರೇಯ ಎಂದರೆ ‘ಬ್ರಹ್ಮ, ವಿಷ್ಣು ಮತ್ತು ಮಹೇಶ’ ಈ ತ್ರಿಮೂರ್ತಿಗಳ ರೂಪ. ಬ್ರಹ್ಮದೇವ ಜ್ಞಾನಸ್ವರೂಪ, ಶ್ರೀವಿಷ್ಣು ವಾತ್ಸಲ್ಯಸ್ವರೂಪ ಮತ್ತು ಶಿವನು ವೈರಾಗ್ಯಸ್ವರೂಪ ಇಂತಹ ತ್ರಿಮೂರ್ತಿಗಳ ಸಂಗಮದ ರೂಪವಾಗಿರುವ ದತ್ತಾತ್ರೇಯರಲ್ಲಿ ಜ್ಞಾನ, ವಾತ್ಸಲ್ಯ ಮತ್ತು ವೈರಾಗ್ಯದ ಸುಂದರ ಸಂಗಮವಿದೆ.

೨. ವೈರಾಗ್ಯ ಮತ್ತು ಸಂನ್ಯಸ್ಥ

ದತ್ತಾತ್ರೇಯರಲ್ಲಿ ವೈರಾಗ್ಯ ಇರುವುದರಿಂದ ಅವರು ಸಂನ್ಯಸ್ಥ (ಸನ್ಯಾಸಿ) ಜೀವನವನ್ನು ನಡೆಸುತ್ತಾರೆ. ಮೇರುಶಿಖರದ ಮೇಲೆ ಅವರ ವಾಸ್ತವ್ಯವಿರುತ್ತದೆ. ಸಂಧ್ಯಾ ಮತ್ತು ಇತರ ದಿನಕ್ರಮಗಳನ್ನು ಅವರು ಇತರ ಸ್ಥಳಗಳಲ್ಲಿ ಪೂರ್ಣಗೊಳಿಸುತ್ತಾರೆ. ಅವರಲ್ಲಿ ವೈರಾಗ್ಯವೃತ್ತಿಯು ಪ್ರಬಲವಾಗಿರುವುದರಿಂದ ಅವರಿಗೆ ಯಾವುದೇ ಸ್ಥಳದ ಮೋಹಬಂಧನವಿಲ್ಲ. ಅವರು **’ಸ್ವೇಚ್ಛಾವಿಹಾರಿ’**ಯಾಗಿದ್ದಾರೆ. ಅವರು ಜೀವನ್ಮುಕ್ತರಾಗಿರುವುದರಿಂದ ಸಂಪೂರ್ಣ ಬ್ರಹ್ಮಾಂಡದಲ್ಲಿ ಮುಕ್ತವಾಗಿ ವಿಹರಿಸುತ್ತಾರೆ. ದತ್ತಾತ್ರೇಯರು ಭಕ್ತರ ಮೇಲೆ ಪ್ರಸನ್ನರಾಗಿ ಅವರಿಗೆ ವೈರಾಗ್ಯದ ಆಶೀರ್ವಾದವನ್ನು ನೀಡುತ್ತಾರೆ. ಜಗತ್ತಿನಲ್ಲಿ ಎಲ್ಲವೂ ಸಿಗಬಹುದು; ಆದರೆ ವೈರಾಗ್ಯವು ಶ್ರೀಗುರು ಕೃಪೆಯಿಂದ ಮಾತ್ರ ಸಿಗುತ್ತದೆ.

ಸುಶ್ರೀ (ಕು.) ಮಧುರಾ ಭೋಸಲೆ

೩. ನಿರಂತರ ಶಿಷ್ಯಭಾವದಲ್ಲಿರುವುದು

ಭಗವಾನ ದತ್ತಾತ್ರೇಯರು ಸದ್ಗುರುಗಳ ಪದವಿಯಲ್ಲಿದ್ದರೂ, ಅವರು ವೃತ್ತಿಯಿಂದ ಸತತವಾಗಿ ‘ಶಿಷ್ಯ’ನಂತೆ ನಡೆದುಕೊಳ್ಳುತ್ತಾರೆ. ‘ಶಿಷ್ಯನೆಂದರೆ ನಿರಂತರ ಕಲಿಯುತ್ತಿರುವುದು.’ ಶಿಷ್ಯನ ಸಾಕಾರ ಮೂರ್ತಿಯೆಂದರೆ ಭಗವಾನ ದತ್ತಾತ್ರೇಯ. ಶ್ರೀಮದ್ಭಾಗವತದ ಹನ್ನೊಂದನೇ ಸ್ಕಂದದಲ್ಲಿ ಯದು ಮತ್ತು ಅವಧೂತರ ಸಂವಾದವಿದೆ. ‘ನಾವು ಯಾವ ಗುರುಗಳನ್ನು ಮಾಡಿಕೊಂಡಿದ್ದೇವೆ ಮತ್ತು ಅವರಿಂದ ಏನು ಕಲಿತೆವು’, ಇದನ್ನೆಲ್ಲ ಅವಧೂತರು ಹೇಳಿದ್ದಾರೆ. ಅವರ ಶಿಷ್ಯಾವಸ್ಥೆಯಿಂದಲೇ ಅವರು ೨೪ ಗುರುಗಳನ್ನು ಮತ್ತು ೨೪ ಉಪಗುರುಗಳನ್ನು ಮಾಡಿಕೊಂಡರು. ಅವರು ಪ್ರತಿಯೊಂದು ಪ್ರಾಣಿಮಾತ್ರರನ್ನು ಗುಣಗುರು ಎಂದು ಪರಿಗಣಿಸುತ್ತಾರೆ ಮತ್ತು ಪ್ರತಿಯೊಬ್ಬರಿಂದಲೂ ಕಲಿಯುತ್ತಿರುತ್ತಾರೆ.

೪. ಅಹಂಕಾರ ಕಡಿಮೆ ಇರುವುದು

ಸನ್ಯಾಸಿ ಜೀವನವನ್ನು ನಡೆಸುವಾಗ ಅವರು ಪ್ರತಿದಿನ ಮಧ್ಯಾಹ್ನ ಕೊಲ್ಹಾಪುರಕ್ಕೆ ಹೋಗಿ ಭಿಕ್ಷೆ ಬೇಡುತ್ತಾರೆ. ಅವರ ಅಹಂ ಕಡಿಮೆ ಇರುವುದರಿಂದ ಅವರು ಜ್ಞಾನಗುರುಗಳ ಪದವಿಯಲ್ಲಿ ಆರೂಢರಾಗಿದ್ದರೂ ಭಿಕ್ಷೆ ಬೇಡುತ್ತಾರೆ. (‘ಕೊಲ್ಹಾಪುರದಲ್ಲಿ ‘ಭಿಕ್ಷಾಪಾತ್ರ ದತ್ತ ಮಂದಿರದಲ್ಲಿ’ ಪ್ರತಿದಿನ ಮಧ್ಯಾಹ್ನ ಸೂಕ್ಷ್ಮದಿಂದ ದತ್ತಾತ್ರೇಯರು ಭಿಕ್ಷೆಯನ್ನು ಸ್ವೀಕರಿಸಲು ಬರುತ್ತಾರೆ’, ಎಂದು ಭಕ್ತರಲ್ಲಿ ಶ್ರದ್ಧೆ ಇದೆ. ಅವರ ಸ್ವಾಗತಕ್ಕಾಗಿ ಮಧ್ಯಾಹ್ನ ೧೨ ಗಂಟೆಗೆ ಆರತಿ ಮಾಡಲಾಗುತ್ತದೆ.)

೫. ‘ಭಕ್ತವತ್ಸಲ’ ಆಗಿರುವುದರಿಂದ ‘ಸ್ಮರ್ತೃಗಾಮಿ’ ಆಗಿರುವುದು

ದತ್ತಾತ್ರೇಯರಲ್ಲಿ ವೈರಾಗ್ಯಭಾವ ಪ್ರಬಲವಾಗಿರುವುದರಿಂದ ಅವರು ಎಲ್ಲ ಮೋಹಮಾಯೆಯಿಂದ ಅಲಿಪ್ತರಾಗಿದ್ದಾರೆ; ಆದರೆ ಅವರು ಭಕ್ತರ ಪ್ರೀತಿಯ ಮಾಯೆಯಲ್ಲಿ ಬಂಧಿತರಾಗಿದ್ದಾರೆ. ಯಾವುದೇ ಭಕ್ತನು ಅವರ ಸ್ಮರಣೆ ಮಾಡಿದ ಕೂಡಲೇ ಅವರು ತಕ್ಷಣ ಪ್ರಕಟವಾಗುತ್ತಾರೆ. ಆದ್ದರಿಂದ ಅವರನ್ನು ‘ಸ್ಮರ್ತೃಗಾಮಿ’ ಎಂದು ಕರೆಯಲಾಗುತ್ತದೆ. ಇದರಿಂದ ಅವರಲ್ಲಿನ ಭಕ್ತವಾತ್ಸಲ್ಯದ ದರ್ಶನವಾಗುತ್ತದೆ. ಶ್ರೀಗುರುಚರಿತ್ರೆಯಲ್ಲಿ ಶ್ರೀಪಾದಶ್ರೀವಲ್ಲಭ ಮತ್ತು ನೃಸಿಂಹ ಸರಸ್ವತಿಯವರು ಭಕ್ತರ ಉದ್ಧರಿಸಿದ ಉಲ್ಲೇಖವಿದೆ.

೬. ಕ್ಷಮಾಶೀಲ

ಶಿಷ್ಯನು ಎಷ್ಟೇ ತಪ್ಪುಗಳನ್ನು ಮಾಡಿದರೂ, ಗುರುಗಳು ಅವನನ್ನು ಕ್ಷಮಿಸಿ ಪುನಃ ಕಲಿಯುವ ಅವಕಾಶವನ್ನು ನೀಡುತ್ತಾರೆ, ಭಗವಾನ ದತ್ತಾತ್ರೇಯರು ಅದರ ಉತ್ತಮ ಉದಾಹರಣೆಯಾಗಿದ್ದಾರೆ. ಅವರು ಶಿಷ್ಯನ ದೋಷಗಳನ್ನು ಮಾತ್ರವಲ್ಲ; ವಿರೋಧಕರ ಅಪರಾಧಗಳನ್ನೂ ಕ್ಷಮಿಸಿ ಅವರನ್ನು ಉದ್ಧರಿಸುತ್ತಾರೆ. ಶ್ರೀಪಾದಶ್ರೀವಲ್ಲಭ ಇವರನ್ನು ದ್ವೇಷಿಸುವ ‘ನರಸಾವಧಾನಿ’ ಎಂಬ ಹೆಸರಿನ ಮನುಷ್ಯನಿಗೆ ಕರ್ಮಫಲನ್ಯಾಯಕ್ಕನುಸಾರ ಕಠಿಣ ಶಿಕ್ಷೆಯನ್ನು ವಿಧಿಸಲಾಗಿತ್ತು. ಆಗ ಅವನು ಶ್ರೀಪಾದವಲ್ಲಭರ ಚರಣ ಹಿಡಿದನು. ಆಗ ಕ್ಷಮಾಶೀಲ ಶ್ರೀಪಾದವಲ್ಲಭರು ನರಸಾವಧಾನಿಯನ್ನು ಕ್ಷಮಿಸಿ ಅವನನ್ನು ಉದ್ಧರಿಸಿದ ಉದಾಹರಣೆಯು ಶ್ರೀಪಾದ ವಲ್ಲಭರ ಜೀವನಚರಿತ್ರೆಯಲ್ಲಿದೆ. ದತ್ತಗುರುಗಳ ಕ್ಷಮಾಶೀಲತೆಯ ಅನೇಕ ಉದಾಹರಣೆಗಳು ಗುರುಚರಿತ್ರೆಯಲ್ಲಿದೆ

– ಕು. ಮಧುರಾ ಭೋಸಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ.