‘ವಂದೇ ಮಾತರಂ’ ಈ ರಾಷ್ಟ್ರಗೀತೆಗೆ 150 ವರ್ಷಗಳು ಪೂರ್ಣಗೊಂಡಿವೆ. ತನ್ನಿಮಿತ್ತ…
‘ವಂದೇ ಮಾತರಂ’ ಈ ರಾಷ್ಟ್ರಮಂತ್ರದ ಹುಟ್ಟಿನ ಬಗ್ಗೆ ಅನೇಕ ದಂತಕಥೆಗಳು ಪ್ರಚಲಿತದಲ್ಲಿವೆ; ಆದರೆ ಅವುಗಳಲ್ಲಿ ಲಿಖಿತ ಪುರಾವೆಗಳು, ಬಂಕಿಮಚಂದ್ರರ ನಿಕಟವರ್ತಿಗಳ ಪತ್ರಗಳ ಆಧಾರದ ಮೇಲೆ ‘ವಂದೇ ಮಾತರಂ’ನ ಹುಟ್ಟಿನ ನಿರ್ದಿಷ್ಟ ಕಥೆಯನ್ನು ಹೇಳಬಹುದು.
ಮಹಾಪುರುಷರ, ಶ್ರೇಷ್ಠ ವ್ಯಕ್ತಿಗಳ ಜಯಂತಿ ಅಥವಾ ಸ್ಮರಣ ದಿನಗಳನ್ನು ನಾವು ಗೌರವದಿಂದ ಆಚರಿಸುತ್ತೇವೆ; ಆದರೆ ಇತಿಹಾಸದಲ್ಲಿ ಅತ್ಯಂತ ದೊಡ್ಡ ಬದಲಾವಣೆಗಳನ್ನು ತಂದ ಸಾಹಿತ್ಯ ಕೃತಿಯ ನಿರ್ಮಾಣ ದಿನವನ್ನು ಆಚರಿಸುವುದು ವಿರಳವಾದ ಘಟನೆಯಾಗಿದೆ. ಈ ವಿಷಯದಲ್ಲಿ ‘ವಂದೇ ಮಾತರಂ’ ಏಕೈಕ ಉದಾಹರಣೆಯಾಗಿದೆ; ಏಕೆಂದರೆ ಇದು ಕೇವಲ ಸಾಹಿತ್ಯ ಕೃತಿಯಲ್ಲ, ಬದಲಾಗಿ ಅದರ 26 ಸಾಲುಗಳಲ್ಲಿ ಮತ್ತು ವಿಶೇಷವಾಗಿ ಮೊದಲ 2 ಪದಗಳಲ್ಲಿ ಅಮೋಘವಾದ ಸಾಮರ್ಥ್ಯವಿದೆ. ಇದು ನಮಗೆ ಸದಾ ಪ್ರೇರಣೆ ನೀಡುವಂತಹದ್ದಾಗಲಿದೆ.

1. ‘ವಂದೇ ಮಾತರಂ’ ಪದಗಳ ಬೀಜ ಬಿತ್ತನೆ
ಕ್ರಿ.ಶ. 1870 ರ ಸುಮಾರಿಗೆ ಬಂಕಿಮಚಂದ್ರ ಚಟ್ಟೋಪಾಧ್ಯಾಯರು ತಮ್ಮ ಬಿಡುವಿಲ್ಲದ ನೌಕರಿಯಿಂದ ಸ್ವಲ್ಪ ಕಾಲ ರಜೆ ತೆಗೆದುಕೊಂಡು ತಮ್ಮ ಹುಟ್ಟೂರಾದ ನೈಹಾಟಿಗೆ ಬಂದಿದ್ದರು; ಆದರೆ ಈ ಸಮಯದಲ್ಲಿ ನೈಹಾಟಿಯಲ್ಲಿ ಉಳಿಯದೆ, ಅದಕ್ಕೆ ಹೊಂದಿಕೊಂಡಿರುವ ಗಂಗಾ, ಅಂದರೆ ಹೂಗ್ಲಿ ನದಿಯ ಆಚೆ ದಡದಲ್ಲಿರುವ ಚಿಚುಡಾ ಎಂಬ ಹಳ್ಳಿಯಲ್ಲಿ ತಮ್ಮ ಸ್ನೇಹಿತ ಜೋಗೇಂದ್ರಚಂದ್ರ ಘೋಷ್ ಅವರ ಮನೆಗೆ ಹೋಗಿದ್ದರು. ಈ ಮನೆಯು ನದಿಯ ದಂಡೆಯಲ್ಲಿ ಒಂದು ದಡಕ್ಕೆ ಹೊಂದಿಕೊಂಡಿತ್ತು. ಒಂದು ಸಂಜೆ ತಮ್ಮ ಸ್ನೇಹಿತನ ನದಿಯ ಕಡೆಗಿರುವ ಮನೆಯ ವರಾಂಡದಲ್ಲಿ ಕುಳಿತಿದ್ದರು. ಎದುರಿನ ವಿಶಾಲವಾದ ನದಿಪಾತ್ರವನ್ನು ನೋಡುತ್ತಾ, ಆ ವರ್ಷಾ ಋತುವಿನ ಸಂಜೆಯಲ್ಲಿ ತಮಗೆ ಕೆಲವು ಕವಿತೆಗಳು ಹೊಳೆಯಬೇಕೆಂದು ಅವರು ಬಯಸುತ್ತಿದ್ದರು; ಆದರೆ ಕವಿತೆಗಳು ಹೊಳೆಯಲಿಲ್ಲ. ಅಂತಹ ಸಮಯದಲ್ಲಿ ಅಸ್ವಸ್ಥರಾದ ಬಂಕಿಮಚಂದ್ರರಿಗೆ ಎದುರಿನ ನದಿಪಾತ್ರದಿಂದ ಮೀನು ಹಿಡಿಯುವವರ ಶಬ್ದಗಳು ಕೇಳಿಬಂದವು.
‘ಸಾಧೋ ಆಛೇ, ಮಾ, ಮನೇ ದುರ್ಗಾಬಲೇ ಪ್ರಾಣ ತ್ಯಜಿಬ ಜಾನ್ಹವೀ ಜಿಬನೇ ||’
ಆ ಸ್ವರಗಳನ್ನು ಕೇಳಿದ ತಕ್ಷಣ ಬಂಕಿಮಚಂದ್ರರು ಹೇಳುತ್ತಾರೆ, ‘ಪ್ರಾಣವು ತೃಪ್ತಿಯಾಯಿತು. ಮನಸ್ಸಿಗೆ ಸ್ವರ ಸಿಕ್ಕಿತು. ಬಂಗಾಳಿ ಹೃದಯದ ಆಕಾಂಕ್ಷೆ ಬಂಗಾಳಿ ಭಾಷೆಯಲ್ಲಿಯೇ ಕೇಳಲು ಸಿಕ್ಕಿತು. ಈ ಗಂಗೆಯ (ಜಾನ್ಹವಿಯ) ಜಲಪ್ರವಾಹವನ್ನು ದುರ್ಗಾ ಸ್ವರೂಪವೆಂದು ಭಾವಿಸಿ, ಅದಕ್ಕಾಗಿ ನಾವು ಮನುಷ್ಯರು ಪ್ರಾಣತ್ಯಾಗ ಮಾಡುವ ಅರ್ಹತೆಯನ್ನು ಹೊಂದಿದ್ದೇವೆ ಎಂದು ಗಮನಕ್ಕೆ ಬಂದಿತು ಮತ್ತು ಆಗ ಆ ಸುಶೋಭಿತ ಜಾನ್ಹವೀ-ಗಂಗಾ ಮತ್ತು ಸಂಪೂರ್ಣ ಸೌಂದರ್ಯ ಸಂಪನ್ನವಾದ ಜಗತ್ತು ನನಗೆ ನನ್ನದೆಂದು ಅನ್ನಿಸಿತು.’
ಇಲ್ಲಿಯೇ ‘ವಂದೇ ಮಾತರಂ’ ಎಂಬ ಪದಗಳ ಬೀಜ ಬಿತ್ತನೆಯಾಯಿತು; ಆದರೆ ಹಾಡು ಮಾತ್ರ ಈ ಸಮಯದಲ್ಲಿ ಬರೆಯಲ್ಪಟ್ಟಿಲ್ಲ.
2. ಬಂಕಿಮಚಂದ್ರರು ಬರೆದ ‘ವಂದೇ ಮಾತರಂ’ನ ಗದ್ಯ ರೂಪ
ಕ್ರಿ.ಶ. 1875 ರ ಆಶ್ವಿನ ಮಾಸದಲ್ಲಿ ಬಂಕಿಮಚಂದ್ರರು ನೈಹಾಟಿಯಲ್ಲಿ ತಮ್ಮ ಮನೆಯಲ್ಲಿ ನಡೆಯುವ ದೊಡ್ಡ ದುರ್ಗೋತ್ಸವಕ್ಕಾಗಿ ಹೋಗಿದ್ದರು. ಅವರ ಮನೆಯಲ್ಲಿ ನಡೆಯುವ ದುರ್ಗೋತ್ಸವವು ಸುತ್ತಮುತ್ತಲಿನ ಪಂಚಕ್ರೋಷಿಯಲ್ಲಿ ವಿಶೇಷವಾಗಿ ಪ್ರಸಿದ್ಧವಾಗಿತ್ತು. ಅಷ್ಟಮಿಯ ರಾತ್ರಿ ದೇವಿಯ ಮೂರ್ತಿಯ ಮುಂದೆ ಕೀರ್ತನೆ ಮುಗಿದ ನಂತರ ಬಂಕಿಮಚಂದ್ರರು ಕುಳಿತಿದ್ದರು. ಅವರ ಹಿರಿಯ ಸಹೋದರರೂ ಅವರೊಂದಿಗೆ ಇದ್ದರು. ಆ ಶಾಂತ ವಾತಾವರಣದಲ್ಲಿ ಅವರಿಗೆ ಆ ದೇವಿಯ ಮೂರ್ತಿಯಲ್ಲಿ ಭಾರತಮಾತೆಯು ಕಾಣತೊಡಗಿದಳು. ಮಹಿಷಾಸುರನ ಜಾಗದಲ್ಲಿ ಇಂಗ್ಲಿಷರು ಕಾಣತೊಡಗಿದರು ಮತ್ತು ಆ ವಿಲಕ್ಷಣ ಸ್ಥಿತಿಯಲ್ಲಿ ಅವರು ತಮ್ಮ ಕೋಣೆಗೆ ಬಂದು ‘ಆಮಾರ್ ದುರ್ಗೋತ್ಸವ’ (ನಮ್ಮ ದುರ್ಗೋತ್ಸವ) ಎಂಬ ಲೇಖನವನ್ನು ಬರೆದು ಪೂರ್ಣಗೊಳಿಸಿದರು. ಈ ಲೇಖನವೇ ‘ವಂದೇ ಮಾತರಂ’ನ ಗದ್ಯ ರೂಪವಾಗಿತ್ತು. ಬಂಕಿಮಚಂದ್ರರ ಸಾಹಿತ್ಯದಲ್ಲಿನ ಮಾನಸಪುತ್ರ ಕಮಲಾಕಾಂತ ಎನ್ನುವ ಒಂದು ಅದ್ಭುತ ವ್ಯಕ್ತಿತ್ವವನ್ನು ಚಿತ್ರಿಸಲಾಗಿದೆ. ಈ ಚಿತ್ರಿಸಲಾದ; ಆದರೆ ಬುದ್ಧಿವಂತ ಕಮಲಾಕಾಂತನು ಗಂಗಾ ನದಿಯ ದಡದಲ್ಲಿ ಕುಳಿತಿರುವಾಗ ಅವನಿಗೆ ಅಕಸ್ಮಾತ್ ಒಂದು ದೇವಿಯ ಸುವರ್ಣಮಯ ಪ್ರತಿಮೆಯು ನದಿಪಾತ್ರದಿಂದ ಮೇಲೆ ಬರುತ್ತಿರುವುದು ಕಂಡಿತು. ಅವನು ವಿಪರೀತವಾಗಿ ಸಂತೋಷಪಡುತ್ತಾನೆ. ಅವಳನ್ನು ಕರೆಯಲು ಪ್ರಾರಂಭಿಸುತ್ತಾನೆ; ಆದರೆ ಅಕಸ್ಮಾತ್ ಆ ಪ್ರತಿಮೆಯು ನದಿಪಾತ್ರದಲ್ಲಿ ಮಾಯವಾಗುತ್ತದೆ ಮತ್ತು ದುಃಖಿತನಾದ ಕಮಲಾಕಾಂತನು ಅವಳನ್ನು ಮತ್ತೆ ಮೇಲೆ ತರಲು ತನ್ನ ದೇಶಬಾಂಧವರನ್ನು ಕರೆಯಲು ಪ್ರಾರಂಭಿಸುತ್ತಾನೆ. ಪದಗಳ ದೃಷ್ಟಿಯಿಂದ ಚಿಕ್ಕದಾದರೂ, ವಿಷಯದ ದೃಷ್ಟಿಯಿಂದ ಬಹಳ ದೊಡ್ಡದಾಗಿರುವ ಅತ್ಯಂತ ಸುಂದರವಾದ ಲೇಖನವಾಗಿದೆ. ಇದು ತಕ್ಷಣವೇ ‘ಬಂಗದರ್ಶನ’ದ ಸಂಚಿಕೆಯಲ್ಲಿ ಪ್ರಕಟವಾಯಿತು. ಆ ಸಮಯದಲ್ಲಿ ಬಂಕಿಮಚಂದ್ರರು ‘ಬಂಗದರ್ಶನ’ದ ನೈಹಾಟಿಯಿಂದಲೇ ಸಂಗ್ರಹಿಸುತ್ತಿದ್ದರು.
3. ಒಂದು ಅಭೂತಪೂರ್ವ ರಾಷ್ಟ್ರಮಂತ್ರದ ಉಗಮ
ನಿರಂತರ ಸ್ಥಳಾಂತರಗಳಿಂದಾಗಿ ವಿಶ್ರಾಂತಿಯ ಅಗತ್ಯವಿದ್ದ ಬಂಕಿಮಚಂದ್ರರು ಆ ಸಮಯದಲ್ಲಿ ದೀರ್ಘಾವಧಿಯ ರಜೆಯನ್ನು ತೆಗೆದುಕೊಂಡಿದ್ದರು. ಒಂದು ತಿಂಗಳ ಕಾಲ ಅವರು ನೈಹಾಟಿಯಲ್ಲಿಯೇ ಉಳಿದಿದ್ದರು. ‘ಆಮಾರ ದುರ್ಗೋತ್ಸವ’ದ ಒಂದು ತಿಂಗಳ ನಂತರ ಕಾರ್ತಿಕ ಶುದ್ಧ ನವಮಿ, ನವೆಂಬರ್ 7, 1875 ರ ದಿನವಾಗಿತ್ತು. ಸಂಜೆಯ ಸಮಯದಲ್ಲಿ ಬಂಕಿಮಚಂದ್ರರು ಒಂದು ಸುತ್ತು ವಾಯುವಿಹಾರ ಮಾಡಿ ಮನೆಗೆ ಮರಳಿದರು ಮತ್ತು ಒಂದು ಅಸೀಮ ಶಕ್ತಿಯಿಂದ ಅವರು ಒಂದೇ ಏಟಿಗೆ 5 ಚರಣಗಳ ‘ವಂದೇ ಮಾತರಂ’ ಅನ್ನು ಬರೆದು ಪೂರ್ಣಗೊಳಿಸಿದರು. ಒಂದು ಅಭೂತಪೂರ್ವ ರಾಷ್ಟ್ರಮಂತ್ರದ ಜನನವಾಯಿತು.
4. ಬಂಕಿಮಚಂದ್ರರ ‘ವಂದೇ ಮಾತರಂ’ ವಿಷಯದ ಶಬ್ದಗಳು ಸಾರ್ಥಕವಾಗುವುದು
ಬಂಕಿಮಚಂದ್ರರು ಸಮಾಧಾನದಿಂದ ಕಣ್ಣು ಮುಚ್ಚಿ ಕೊಂಡು ಕುಳಿತಿರುವಾಗ, ‘ಬಂಗದರ್ಶನ’ದ ಸಹಾಯಕ ಸಂಪಾದಕ ರಾಮಚಂದ್ರ ಬಂದೋಪಾಧ್ಯಾಯರು ಒಳಗೆ ಬಂದರು ಮತ್ತು ಮೇಜಿನ ಮೇಲಿನ ಆ ಕವಿತೆಯನ್ನು ಎತ್ತಿಕೊಂಡು ನೋಡುತ್ತಾ ಹೇಳಿದರು, ‘ವಾ! ಅತ್ಯಂತ ಸುಂದರ ಕವಿತೆಯಾಗಿದೆ. ‘ಬಂಗದರ್ಶನ’ದ ಹೊಸ ಸಂಚಿಕೆಯಲ್ಲಿ ಸ್ವಲ್ಪ ಜಾಗ ಖಾಲಿಯಿದೆ. ಅಲ್ಲಿ ಈ ಗೀತೆ ಹೊಂದಿಕೆಯಾಗುತ್ತದೆ ಮತ್ತು ಈಗಿನ ಸಮಯ ಸಾಗುತ್ತದೆ.’
ಇದನ್ನು ಕೇಳಿದ ಕೂಡಲೇ ಬಂಕಿಮಚಂದ್ರರು ಅವರ ಕೈಯಿಂದ ಆ ಕವಿತೆಯನ್ನು ತೆಗೆದುಕೊಂಡು ಒಳಗೆ ಇಟ್ಟು, ‘ಈ ಕವಿತೆ ಜಾಗ ತುಂಬಲು ಬರೆದಿದ್ದಲ್ಲ. ಒಂದು ಕಾಲ ಬರುತ್ತದೆ, ಇನ್ನೂ 30-35 ವರ್ಷಗಳ ನಂತರ ಬಹುಶಃ ನೀನೂ ಇರಲಿಕ್ಕಿಲ್ಲ, ನಾನೂ ಇರಲಿಕ್ಕಿಲ್ಲ; ಆದರೆ ಕೇವಲ ಬಂಗಾಳ ಮಾತ್ರವಲ್ಲ, ಇಡೀ ದೇಶವೇ ಈ ಗೀತೆಯ ಪದಗಳನ್ನು ತಲೆಯ ಮೇಲೆ ಹೊತ್ತು ಕುಣಿಯುತ್ತದೆ.’ ಮುಂದೆ ನಿಜವಾಗಿಯೂ ಬಂಕಿಮಚಂದ್ರರ ಮಾತುಗಳು ಸಾರ್ಥಕವಾದವು. ವರ್ಷ 1875 ರಲ್ಲಿ ‘ವಂದೇ ಮಾತರಂ’ನ ಜನನದ ನಂತರ ಸರಿಯಾಗಿ 30 ವರ್ಷಗಳ ನಂತರ 1905 ರ ‘ವಂಗಭಂಗ ವಿರೋಧಿ ಆಂದೋಲನ’ದ ನಿಮಿತ್ತ ಈ ಪದಗಳು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಯುದ್ಧಘೋಷವಾಗಿ ಮಾರ್ಪಟ್ಟಿತು.
– ಮಿಲಿಂದ ಪ್ರಭಾಕರ ಸಬನೀಸ, ಪುಣೆ
(ಆಧಾರ: ‘ವಿವೇಕರತ್ನಾಕರ’ ಕಾರ್ಯದರ್ಶಿಕಾ 2025, ವಿವೇಕಾನಂದ ಕೇಂದ್ರ ಕನ್ಯಾಕುಮಾರಿ, ಮಹಾರಾಷ್ಟ್ರ ಪ್ರಾಂತ, ಮರಾಠಿ ಪ್ರಕಾಶನ ವಿಭಾಗ, ಪುಣೆ.)
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು