ಸಾಧಕರೇ, ವಿಚಾರಿಸುವ ವೃತ್ತಿಯ ಅಡೆತಡೆ ಅರಿತು ನಿವಾರಿಸಿ, ಶೀಘ್ರ ಆಧ್ಯಾತ್ಮಿಕ ಉನ್ನತಿ ಸಾಧಿಸಿ!

ಸಾಧನೆಯ ಪಂಚಸೂತ್ರಗಳಲ್ಲಿ ಮೊದಲನೆಯ ಸೂತ್ರವಾದ ‘ವಿಚಾರಿಸುವ ವೃತ್ತಿ’, ಈ ಸಂದರ್ಭದಲ್ಲಿ ಭಕ್ತಿಸತ್ಸಂಗದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಮಾಡಿದ ಮಾರ್ಗದರ್ಶನ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

‘ಸಾಧನೆಯೆಂದರೆ ಈಶ್ವರಪ್ರಾಪ್ತಿಗಾಗಿ ನಿರಂತರ ಮಾಡಬೇಕಾದ ಪ್ರಯತ್ನ ! ಸಾಧನೆಯೆಂದರೆ ಈಶ್ವರನೊಂದಿಗೆ ಜೋಡಿಸಲ್ಪಡುವ ನಿರಂತರ ಪ್ರಕ್ರಿಯೆ ! ಅನೇಕ ಬಾರಿ ಗಮನಕ್ಕೆ ಬರುವ ವಿಷಯವೆಂದರೆ, ಅನೇಕ ವರ್ಷಗಳಿಂದ ಸಾಧನೆ ಮಾಡುತ್ತಿದ್ದರೂ ಸಾಧನೆಯಲ್ಲಿ ಮೇಲಿಂದ ಮೇಲೆ ಬರುವ ಅಡೆತಡೆಗಳಿಂದಾಗಿ ಸಾಧಕರು ಒಂದೇ ಹಂತದಲ್ಲಿ ಸಿಲುಕಿರುತ್ತಾರೆ. ಮುಂದೆ ಹೋಗುವ ಮಾರ್ಗವನ್ನು ಭಗವಂತನು ನಮಗೆ ಆಗಾಗ ತೋರಿಸುತ್ತಿದ್ದರೂ ಅದು ಕೆಲವೊಮ್ಮೆ ನಮ್ಮ ಗಮನಕ್ಕೆ ಬರುವುದಿಲ್ಲ. ‘ಸಾಧನೆಯಲ್ಲಿ ಮುಂದೆ ಹೋಗಲು ನಿರ್ದಿಷ್ಟವಾಗಿ ಯಾವ ಪ್ರಯತ್ನ ಮಾಡುವುದು ಅಪೇಕ್ಷಿತವಿದೆ ?’, ಎಂದು ಹೊಳೆಯುವುದಿಲ್ಲ. ಆ ಸಮಯದಲ್ಲಿ ಸಾಧಕರು ‘ಸಾಧನೆಯಲ್ಲಿ ಮುಂದೆ ಹೋಗಲು ಬಯಸಿದರೂ ನಾವು ಒಂದೇ ಹಂತದಲ್ಲಿ ಏಕೆ ಸಿಲುಕಿಕೊಂಡಿದ್ದೇವೆ ?’, ಎಂಬ ಬಗ್ಗೆ ಚಿಂತನೆ ಮಾಡಿ ಪ್ರಯತ್ನಿಸುವುದು ಅಪೇಕ್ಷಿತವಿರುತ್ತದೆ. ‘ಸಾಧನೆಯಲ್ಲಿ ಪ್ರಗತಿ ಮಾಡಿಕೊಳ್ಳಲು ಯಾವ ಅಡಚಣೆಗಳು ಇರಬಹುದು ? ಮತ್ತು ಆ ಅಡಚಣೆಗಳನ್ನು ದೂರÀ ಮಾಡಲು ಏನು ಮಾಡಬೇಕು ?’, ಈ ಬಗೆಗಿನ ಮಾರ್ಗದರ್ಶನವನ್ನು ಪ್ರತಿ ಗುರುವಾರದಂದು ನಡೆಯುವ ಭಕ್ತಿಸತ್ಸಂಗದ ಅಂತರ್ಗತ ‘ವಿಶೇಷ ಭಕ್ತಿಸತ್ಸಂಗ ಶೃಂಖಲೆಯ’ ಮೂಲಕ ಮಾಡಲಾಗುತ್ತಿದೆ. ‘ಈ ಹೊಸ ಭಕ್ತಿಸತ್ಸಂಗ ಶೃಂಖಲೆಯಿಂದ ಸಾಧಕರಿಗೆ ಮತ್ತು ವಾಚಕರಿಗೆ ಹೆಚ್ಚೆಚ್ಚು ಲಾಭ ಆಗಬೇಕೆಂದು ಅದರಲ್ಲಿನ ಅಂಶಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ.

‘ಸಾಧಕರ ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಸದ್ಯ ಕಾಲಾನುಸಾರ ಸಾಕ್ಷಾತ್‌ ಭಗವಂತನ ಇಚ್ಛೆ ಮತ್ತು ಸಚ್ಚಿದಾನಂದ ಪರಬ್ರಹ್ಮ ಗುರುದೇವ ಡಾ. ಆಠವಲೆಯವರ ಕೃಪೆಯಿಂದ ವಿಶೇಷ ಭಕ್ತಿಸತ್ಸಂಗ ಶೃಂಖಲೆಯ ಮೂಲಕ ಸಾಧಕರಿಗೆ ಮಾರ್ಗದರ್ಶನ ಸಿಗುತ್ತಿದೆ. ಈ ಮಾರ್ಗದರ್ಶನ ಸಾಧಕರಿಗಾಗಿ ಅತ್ಯಂತ ಅಮೂಲ್ಯ ಮತ್ತು ಮಹತ್ವಪೂರ್ಣವಾಗಿದೆ. ‘ಭಕ್ತಿಸತ್ಸಂಗದ ಈ ವಿಷಯದಿಂದಾಗಿ ಎಲ್ಲೆಡೆಯ ಸಾಧಕರ ಶುದ್ಧಿಯಾಗಬೇಕು, ಹಾಗೆಯೇ ಅವರ ಅಂತಃಕರಣದಲ್ಲಿನ ಸ್ವಭಾವದೋಷಗಳ ಮಲೀನತೆ ನಾಶವಾಗಿ ಅವರು ಶುದ್ಧ ಮತ್ತು ಪವಿತ್ರರಾಗಬೇಕು’, ಎಂಬುದಕ್ಕಾಗಿ ಇದು ಭಕ್ತಿಯಜ್ಞವೇ ಆಗಿದೆ. ಸಾಧಕರು ಈ ಲೇಖನವನ್ನು ತಮ್ಮ ಬಳಿ ಸಂಗ್ರಹದಲ್ಲಿಟ್ಟುಕೊಳ್ಳಬೇಕು, ಹಾಗೆಯೇ ಈ ಸೂತ್ರಗಳಿಗನುಸಾರ ತಳಮಳದಿಂದ ಪ್ರಯತ್ನಿಸಿ ತಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಅದರ ಹೆಚ್ಚೆಚ್ಚು ಲಾಭ ಪಡೆದುಕೊಳ್ಳಬೇಕು !’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

ಶೀಘ್ರಗತಿಯಲ್ಲಿ ಈಶ್ವರಪ್ರಾಪ್ತಿಯಾಗಲು ದೈವೀ ಕೀಲಿಕೈಯಾಗಿರುವ ಸಾಧನೆಯಲ್ಲಿನ ಪಂಚಸೂತ್ರಗಳು !

ಸಾಧನೆಯು ಯೋಗ್ಯದಿಕ್ಕಿನಲ್ಲಿ ಸಾಗಲು ‘ನಮ್ಮ ಮನಸ್ಸಿನ ವಿಚಾರಪ್ರಕ್ರಿಯೆ ಯೋಗ್ಯದಿಕ್ಕಿನಲ್ಲಿ ನಡೆಯುತ್ತಿದೆಯೇ ?’, ಎಂದು ಅಂತರ್ಮುಖತೆಯಿಂದ ಚಿಂತನೆಯಾಗುವುದು ಆವಶ್ಯಕವಾಗಿರುತ್ತದೆ. ಅದಕ್ಕಾಗಿ ಕೆಲವು ಮೂಲಭೂತತತ್ತ್ವಗಳನ್ನು ಪಾಲಿಸುವುದು ಆವಶ್ಯಕವಾಗಿದೆ. ಈ ಮೂಲಭೂತತತ್ತ್ವಗಳೆಂದರೆ ‘ಸಾಧನೆಯ ಪಂಚಸೂತ್ರಗಳು’ !

೧. ವಿಚಾರಿಸುವುದು

ಸಾಧನೆಯನ್ನು ಮಾಡುವಾಗ ನಮ್ಮ ಮನಸ್ಸಿನಲ್ಲಿನ ಎಲ್ಲ ಸಂದೇಹಗಳನ್ನು ನಮ್ಮ ಜವಾಬ್ದಾರ ಸಾಧಕರಲ್ಲಿ ವಿಚಾರಿಸಬೇಕು.

೨. ಕೇಳುವುದು

ಜವಾಬ್ದಾರ ಸಾಧಕರಲ್ಲಿ ಕೇಳಿದ ನಂತರ ಅವರು ಹೇಳಿದ ಎಲ್ಲವನ್ನೂ ಆಲಿಸಬೇಕು. ಅದು ವ್ಯಷ್ಟಿ ಸಾಧನೆಯ ಬಗ್ಗೆ ಇರಲಿ, ಸಮಷ್ಟಿ ಸಾಧನೆಯ ಪ್ರಯತ್ನವಾಗಿರಲಿ ಅಥವಾ ಸೇವೆಯ ಬಗ್ಗೆ ಕೆಲವು ಅಂಶಗಳಿರಲಿ, ಅವೆಲ್ಲವುಗಳನ್ನು ಕೃತಿಯಲ್ಲಿ ತರಬೇಕು.

೩. ಸ್ವೀಕರಿಸುವುದು

ಜವಾಬ್ದಾರ ಸಾಧಕರು ನೀಡಿದ ನಿರ್ಣಯ ಅಥವಾ ಹೇಳಿದ ಅಂಶಗಳನ್ನು ಮನಃಪೂರ್ವಕ ಸ್ವೀಕರಿಸಬೇಕು.

೪. ಕಲಿಯುವುದು

‘ಜವಾಬ್ದಾರ ಸಾಧಕರ ಮಾಧ್ಯಮದಿಂದ ಗುರುಗಳು ನಮ್ಮನ್ನು ಯಾವ ರೀತಿ ಅಂತರ್ಮುಖಗೊಳಿಸÀÄತ್ತಿದ್ದಾರೆ ?’, ಎಂಬುದನ್ನು ಕಲಿಯಬೇಕು. ‘ಹೇಳಿದ್ದನ್ನು ಸ್ವೀಕರಿಸಿ ಅದಕ್ಕನುಸಾರ ಕೃತಿ ಮಾಡುವುದು’, ಎಂದರೆ ಕಲಿಯುವುದಾಗಿದೆ.

೫. ವರದಿಯನ್ನು ನೀಡುವುದು (ರಿಪೋರ್ಟಿಂಗ್‌ ಮಾಡುವುದು)

ವಿಚಾರಿಸಿದ್ದನ್ನು ಒಪ್ಪಿಕೊಂಡು ಅದರಿಂದ ಕಲಿತು ಕೃತಿ ಮಾಡಿದ ನಂತರ ನಿಮ್ಮ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ವರದಿಯನ್ನು ಜವಾಬ್ದಾರ ಸಾಧಕರಿಗೆ ನೀಡಬೇಕು. ಸ್ವಲ್ಪದರಲ್ಲಿ ‘ವಿಚಾರಿಸುವುದು, ಕೇಳುವುದು, ಸ್ವೀಕರಿಸುವುದು, ಕಲಿಯುವುದು ಮತ್ತು ವರದಿ ಕೊಡುವುದು’, ಇವು ಸಾಧನೆಯ ಪಂಚಸೂತ್ರಗಳಾಗಿವೆ. ನಿಮ್ಮ ಸಾಧನಾಪ್ರವಾಸದಲ್ಲಿ ಮನಸ್ಸು, ಬುದ್ಧಿ ಮತ್ತು ಕೃತಿಗಳ ಸ್ತರದಲ್ಲಿನ ವಿವಿಧ ಅಡಚಣೆಗಳನ್ನು ಜಯಿಸಲು ಈ ಪಂಚಸೂತ್ರಗಳಿಗನುಸಾರ ಶ್ರದ್ಧೆಯಿಂದ ಪ್ರಯತ್ನಿಸಿದರೆ ನಿಮ್ಮಲ್ಲಿ ಅಂತರ್ಮುಖತೆ ಮೂಡಲು, ಹಾಗೆಯೇ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗಲು ಸಹ ಸಹಾಯವಾಗುತ್ತದೆ.

ಈಗ ನಾವು ಮೇಲಿನ ಪಂಚಸೂತ್ರಗಳ ಪೈಕಿ ಎಲ್ಲಕ್ಕಿಂತ ಮೊದಲ ಮತ್ತು ಮಹತ್ವದ ಸೂತ್ರದ ಬಗ್ಗೆ ಎಂದರೆ ‘ವಿಚಾರಿಸುವುದು ಅಥವಾ ವಿಚಾರಿಸಿ ಕೃತಿ ಮಾಡುವುದು’, ಈ ಬಗ್ಗೆ ನೋಡೋಣ.

೧. ವಿಚಾರಿಸುವುದು ಎಂದರೆ ಏನು ?

ವಿಚಾರಿಸುವುದು ಎಂದರೆ ಯೋಗ್ಯವಾದ ಮಾರ್ಗದರ್ಶನ ಪಡೆದು ನಮ್ಮ ಬುದ್ಧಿಯನ್ನು ಪರಿಪೂರ್ಣತೆಯ ಕಡೆಗೆ ಹೋಗಲು ಬಳಸುವುದು. ವಿಚಾರಿಸುವುದು ಎಂದರೆ ಮಾರ್ಗ ದರ್ಶನ ಪಡೆಯಲು ವಿನಮ್ರತೆಯಿಂದ ಮುಂದೆ ಇಟ್ಟ ಹೆಜ್ಜೆ. ವಿಚಾರಿಸುವುದು ಎಂದರೆ ಕಡಿಮೆತನವನ್ನು ತೆಗೆದುಕೊಳ್ಳುವುದಲ್ಲ, ಬದಲಾಗಿ ವಿಚಾರಿಸಿ ಮಾಡುವುದರಲ್ಲಿ ಆತ್ಮಸಮರ್ಪಣೆ ಇದೆ. ಶಾಸ್ತ್ರದಲ್ಲಿ, ಸಂತವಾಙ್ಮಯದಲ್ಲಿ ಮತ್ತು ಗುರು-ಶಿಷ್ಯ ಪರಂಪರೆಯಲ್ಲಿ ಇದರ ಅನೇಕ ಉದಾಹರಣೆಗಳು ನಮಗೆ ಕಾಣಿಸುತ್ತದೆ. ‘ವಿಚಾರಿಸದೇ ವಿವೇಕ ಸಾಧಿಸಲಾಗದು’, ಎಂದು ಶಾಸ್ತ್ರವು ಹೇಳುತ್ತದೆ.

೨. ‘ವಿಚಾರಿಸುವುದು’, ಈ ಸೂತ್ರದ ವ್ಯಾಪ್ತಿ

ಅ. ಸಾಧನೆಯನ್ನು ಮಾಡುವಾಗ ಮನಸ್ಸಿನಲ್ಲಿ ಬರುವ ಸಂದೇಹ ಅಥವಾ ಪ್ರಶ್ನೆಗಳನ್ನು ವಿಚಾರಿಸುವುದು

ಆ. ಸಾಧನೆಯಲ್ಲಿನ ಅಡಚಣೆಗಳ ಮೇಲಿನ ಉಪಾಯಯೋಜನೆ ಗಳನ್ನು ವಿಚಾರಿಸುವುದು

ಇ. ಪ್ರಸಂಗಗಳ ಸಂದರ್ಭದಲ್ಲಿ ಯೋಗ್ಯ ದೃಷ್ಟಿಕೋನ ತಿಳಿಯದಿದ್ದರೆ ಆ ಬಗ್ಗೆ ವಿಚಾರಿಸುವುದು

ಈ. ಸೇವೆಯ ಸಂದರ್ಭದಲ್ಲಿ ಏನಾದರೂ ಪ್ರಶ್ನೆಗಳಿದ್ದರೆ ಅದನ್ನು ವಿಚಾರಿಸುವುದು

ಈ ರೀತಿ ‘ವಿಚಾರಿಸುವುದು’ ಈ ಸೂತ್ರದ ವ್ಯಾಪ್ತಿ ಬಹಳ ದೊಡ್ಡದಾಗಿದೆ. ಈ ಸೂತ್ರಗಳ ಅಂತರ್ಗತ ಅನೇಕ ಸೂಕ್ಷ್ಮ ವಿಷಯಗಳೂ ಬರುತ್ತವೆ. ‘ನಿಮ್ಮಲ್ಲಿ ವಿಚಾರಿಸಿ ಸಾಧನೆಯನ್ನು ಮಾಡಬೇಕಿದೆ’, ಎಂಬ ತಳಮಳವಿದ್ದರೆ, ಗುರುಗಳೇ ಈ ಸೂಕ್ಷ್ಮ ವಿಷಯಗಳನ್ನು ಜವಾಬ್ದಾರ ಸಾಧಕರು ಅಥವಾ ವರದಿಸೇವಕರ ಮಾಧ್ಯಮದಿಂದ ನಿಮ್ಮ ಗಮನಕ್ಕೆ ತಂದು ಕೊಡುತ್ತಾರೆ.

೩. ‘ವಿಚಾರಿಸಿ ಮಾಡುವುದು’, ಇದು ಸಾಧಕತ್ವದ ಲಕ್ಷಣವಾಗಿದೆ

‘ವಿಚಾರಿಸುವುದು’, ಈ ಒಂದು ಕೃತಿಯಲ್ಲಿ ಸಾಧಕತ್ವದ ಅನೇಕ ಗುಣಗಳು ಅಡಗಿವೆ; ಏಕೆಂದರೆ ಸಾಧನೆ ಮಾಡುವಾಗ ‘ವಿಚಾರಿಸುವುದು’ ಎಂದರೆ ‘ಕೇವಲ ಸಂದೇಹ ಪರಿಹರಿಸುವುದು’ ಅಷ್ಟೇ ಅಲ್ಲ, ಆದರೆ ‘ಯಾವುದೇ ಕೃತಿ ಮಾಡುವಾಗ ಅಥವಾ ನಿರ್ಣಯ ತೆಗೆದುಕೊಳ್ಳುವಾಗ ವಿಚಾರಿಸುವುದು’, ಇದು ವಿನಯ ಅಥವಾ ನಮ್ರತೆಯ ಲಕ್ಷಣವಾಗಿದೆ. ವಿಚಾರಿಸಿ ಮಾಡುವಲ್ಲಿ ಆಂತರಿಕ ಜಿಜ್ಞಾಸೆ ಇರುತ್ತದೆ. ಅದರ ಜೊತೆಗೆ ನಾವು ಮಾಡುವ ಕೃತಿಗೆ ಸರಿಯಾದ ದಿಶೆ ಸಿಗುವ ಪ್ರಬಲ ಇಚ್ಛೆ ಎಂದರೆ ಆಕ್ಷಾಂಕ್ಷೆಯೂ ಅಡಗಿರುತ್ತದೆ. ‘ವಿಚಾರಿಸುವುದು’ ಅಥವಾ ‘ವಿಚಾರಿಸಿ ಮಾಡುವುದು’, ಇದರಲ್ಲಿ ಸಾಧಕರ ಅಂತಃಕರಣದಲ್ಲಿ ಇರುವ ಶರಣಾಗತಿ ಕಂಡು ಬರುತ್ತದೆ. ‘ವಿಚಾರಿಸಿ ಮಾಡುವುದು’, ಇದು ಸಾಧಕತ್ವದ ಲಕ್ಷಣವಾಗಿದೆ; ಆದುದರಿಂದಲೇ ಅಧ್ಯಾತ್ಮದಲ್ಲಿ ವಿಚಾರಿಸಿ ಮತ್ತು ಮಾರ್ಗದರ್ಶನ ಪಡೆದು ಕೃತಿ ಮಾಡಲು ಮಹತ್ವವಿದೆ.

೪. ವಿಚಾರಿಸದೇ ಇರುವುದು ಈ ಸಂದರ್ಭದಲ್ಲಿ ಸಾಧಕರಿಂದಾಗುವ ತಪ್ಪುಗಳು

೪ ಅ. ಕಾರ್ಯಪದ್ಧತಿಯನ್ನು ಪಾಲಿಸದೇ, ಮನಸ್ಸಿಗನುಸಾರ ಕೃತಿ ಮಾಡುವುದು : ಅನೇಕ ಬಾರಿ ಸೇವೆಗೆ ಸಂಬಂಧಿಸಿದ ಮಹತ್ವದ ಸೂತ್ರಗಳನ್ನು ಜವಾಬ್ದಾರ ಸಾಧಕರಲ್ಲಿ ವಿಚಾರಿಸದೇ ಸೇವೆಯನ್ನು ಮಾಡಲಾಗುತ್ತದೆ. ಸಾಧಕರು ತಮ್ಮ ಮನಸ್ಸಿಗನುಸಾರ, ಅಂದರೆ ಸ್ವೇಚ್ಛೆಯಿಂದ ಸೇವೆಯನ್ನು ಮಾಡುತ್ತಿರುತ್ತಾರೆ. ತಾವೇ ನಿರ್ಣಯ ತೆಗೆದುಕೊಂಡು ಕೃತಿ ಮಾಡುವುದರಿಂದ ಸೇವೆಯಲ್ಲಿ ತಪ್ಪುಗಳಾಗುತ್ತವೆ.ಸ್ವಾಭಾವಿಕವಾಗಿಯೇ ಅವರ ಸಾಧನೆಯ ಅಪಾರ ಹಾನಿಯಾಗುತ್ತದೆ. ಇಲ್ಲಿ ‘ಸ್ವೇಚ್ಛೆಯಿಂದ’ ಕೃತಿ ಮಾಡಿದರೆ ಸಾಧನೆಯಲ್ಲಿ ಪ್ರಗತಿಯಾಗದೇ ವಿಚಾರಿಸಿ ಯೋಗ್ಯ ಸಾಧನೆಯನ್ನು ಮಾಡಿದಾಗಲೇ ಪ್ರಗತಿಯಾಗುತ್ತದೆ’, ಎಂಬುದನ್ನು ಗಮನದಲ್ಲಿಡಬೇಕು. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ನಾವೆಲ್ಲರೂ ಕಾರ್ಯನಿರತರಾಗಿದ್ದೇವೆ. ‘ನಮ್ಮಲ್ಲಿ ಗುಣವೃದ್ಧಿಯಾಗಬೇಕು ಮತ್ತು ಗುರುಕಾರ್ಯವು ಒಳ್ಳೆಯ ರೀತಿಯಲ್ಲಿ ಆಗಬೇಕು’, ಎಂಬುದಕ್ಕಾಗಿ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಕೆಲವು ಕಾರ್ಯಪದ್ಧತಿಗಳನ್ನು ಹಾಕಿ ಕೊಟ್ಟಿದ್ದಾರೆ; ಆದರೆ ಅನೇಕ ಬಾರಿ ಕಾರ್ಯಪದ್ಧತಿಗಳಿಗನುಸಾರ ನಡೆದುಕೊಳ್ಳದೇ ಮನಸ್ಸಿಗನುಸಾರ ಮಾಡಲಾಗುತ್ತದೆ.

೪ ಆ. ಕೆಲವೊಮ್ಮೆ ನಮ್ಮ ಸ್ವಂತ ಅನುಕೂಲಕ್ಕಾಗಿ ಕಾರ್ಯಪದ್ಧತಿ ಗಳನ್ನು ತಪ್ಪಿಸಲಾಗುತ್ತದೆ.

೫. ಸಾಧನೆಯಲ್ಲಿ ಆಗುವ ಮೂಲಭೂತ ತಪ್ಪುಗಳು – ಸ್ವಂತ ಮನಸ್ಸಿನಂತೆ ಸಾಧನೆ ಮಾಡುವುದು

ಸಚ್ಚಿದಾನಂದ ಪರಬ್ರಹ್ಮ ಗುರುದೇವರು ನಮಗೆ ‘ವ್ಯಕ್ತಿಗಳೆಷ್ಟೋ ಅಷ್ಟು ಪ್ರಕೃತಿಗಳು, ಅಷ್ಟು ಸಾಧನಾಮಾರ್ಗಗಳು’, ಎಂಬ ಸಾಧನೆಯ ಮೂಲಭೂತ ಸಿದ್ಧಾಂತವನ್ನು ಹೇಳಿದ್ದಾರೆ, ಹಾಗೆಯೇ ‘ಸಾಧನೆಯ ಮೂಲಭೂತ ತತ್ತ್ವಗಳು ಯಾವುವು ?’, ಎಂಬ ಬಗ್ಗೆ ಮಾರ್ಗದರ್ಶನವನ್ನೂ ಮಾಡಿದ್ದಾರೆ. ಅಷ್ಟೇ ಅಲ್ಲ, ‘ಸಾಧನೆ ಮಾಡುವಾಗ ಯಾವ ವಿಷಯವನ್ನು ತಡೆಗಟ್ಟಬೇಕು ? ಸಾಮಾನ್ಯವಾಗಿ ‘ಸಾಧನೆಯಲ್ಲಾಗುವ ಮೂಲಭೂತ ತಪ್ಪುಗಳು’, ಯಾವ ಪ್ರಕಾರದ್ದಾಗಿರುತ್ತವೆ ?’, ಈ ಬಗ್ಗೆಯೂ ಮಾರ್ಗದರ್ಶನ ಮಾಡಿದ್ದಾರೆ. ಆ ಸೂತ್ರಗಳ ಬಗ್ಗೆ ಇಂದು ನಾವು ಸ್ವಲ್ಪದರಲ್ಲಿ ಅವಲೋಕನ ಮಾಡೋಣ.

ಇಂದು ವ್ಯವಹಾರದಲ್ಲಿ ಅನೇಕ ಸ್ಥಳಗಳಲ್ಲಿ ‘ Dos And Don’ts , ಅಂದರೆ ‘ಯಾವ ವಿಷಯ ಮಾಡಬೇಕು ಮತ್ತು ಯಾವುದನ್ನು ಮಾಡಬಾರದು ?’, ಎಂದು ಬರೆದಿರುತ್ತದೆ. ಈ Dos And Don’ts’, ನ ಮಾಹಿತಿ ವ್ಯಕ್ತಿಗೆ ಇರುವುದು ಉಪಯುಕ್ತವೆನಿಸಿಕೊಳ್ಳುತ್ತದೆ. ಅದೇ ರೀತಿ ಸಾಧನೆಯನ್ನು ಮಾಡುವಾಗ ಸಾಧಕನಿಗೆ ‘ಯಾವ ವಿಷಯ ಮಾಡಬೇಕು ಮತ್ತು ಯಾವ ವಿಷಯವನ್ನು ತಡೆಗಟ್ಟಬೇಕು ?’, ಎಂಬುದರ ಜ್ಞಾನ ಇರುವುದು ಆವಶ್ಯಕವಾಗಿದೆ. ಗುರುದೇವರು ಸಾಧನೆಯಲ್ಲಿ ಯಾವ ಮೂಲಭೂತ ತಪ್ಪುಗಳನ್ನು ಹೇಳಿರುವರೋ, ಅವುಗಳಲ್ಲಿನ ಒಂದು ಎಂದರೆ ಸ್ವಂತ ಮನಸ್ಸಿನಂತೆ ಸಾಧನೆ ಮಾಡುವುದು. ಸ್ವಂತ ಮನಸ್ಸಿನಂತೆ ಸಾಧನೆ ಮಾಡುವುದರಿಂದ ಅನೇಕ ವರ್ಷ ಸಾಧನೆ ಮಾಡಿದರೂ ಅಪೇಕ್ಷಿತ ರೀತಿಯಲ್ಲಿ ಸಾಧಕರ ಆಧ್ಯಾತ್ಮಿಕ ಉನ್ನತಿಯಾಗುವುದಿಲ್ಲ. ಆದುದರಿಂದ ಈ ತಪ್ಪನ್ನು ತಡೆಗಟ್ಟುವುದು ಮಹತ್ವದ್ದಾಗಿದೆ. ಈ ಬಗ್ಗೆ ನಾವು ವಿವರವಾಗಿ ತಿಳಿದುಕೊಳ್ಳೋಣ.

‘ಸ್ವಂತ ಮನಸ್ಸಿನಂತೆ ಸಾಧನೆ ಮಾಡುವುದು’, ಈ ಬಗ್ಗೆ ಪ.ಪೂ ಗುರುದೇವರು, ”ಹೆಚ್ಚಿನ ಬಾರಿ ಸಮಾಜದಲ್ಲಿ ಏನು ಕಂಡು ಬರುತ್ತದೆಯೆಂದರೆ, ಅನೇಕ ಜನರು ಸ್ವಂತ ಮನಸ್ಸಿನಂತೆ ಸಾಧನೆಯನ್ನು ಮಾಡಲು ಆರಂಭಿಸುತ್ತಾರೆ. ಯಾರೋ ತೀರ್ಥಯಾತ್ರೆ ಮಾಡುತ್ತಾರೆ, ಯಾರೋ ಪುರಾಣ ಗ್ರಂಥಗಳನ್ನು ಓದುತ್ತಾರೆ ಅಥವಾ ಪಾರಾಯಣವನ್ನು ಆರಂಭಿಸುತ್ತಾರೆ, ಕೆಲವರು ಉಪವಾಸ ಮತ್ತು ಕೆಲವರು ಕೆಲವೊಂದನ್ನು ಮಾಡುವುದನ್ನು ಆರಂಭಿಸುತ್ತಾರೆ. ಸ್ವಲ್ಪದರಲ್ಲಿ, ಯಾರಿಗೆ ಏನು ಬೇಕೋ ಅಥವಾ ಏನು ಮನಸ್ಸಿನಲ್ಲಿ ಬರುತ್ತದೆಯೋ, ಆ ರೀತಿ ಉಪಾಸನೆ ಮಾಡಲು ಪ್ರಯತ್ನಿಸುತ್ತಾರೆ. ನಮಗೆ ವ್ಯವಹಾರದಲ್ಲಿ ಏನಾದರೂ ಸಮಸ್ಯೆ ಇದ್ದರೆ, ನಾವು ಆ ಬಗ್ಗೆ ಆಯಾ ತಜ್ಞರ ಸಲಹೆ ಪಡೆಯುತ್ತೇವೆ, ಅಂದರೆ ಕೆಲವೊಮ್ಮೆ ನಮ್ಮ ಸಂಚಾರವಾಣಿ ಅಥವಾ ದೂರಚಿತ್ರವಾಣಿಯ ಉಪಕರಣ ಕೆಟ್ಟರೆ, ನಾವು ಆ ಕ್ಷೇತ್ರದ ತಜ್ಞರ ಬಳಿಗೆ ಹೋಗುತ್ತೇವೆ. ಅನಾರೋಗ್ಯಕ್ಕೆ ಒಳಗಾದರೆ ನಾನು ಆಧುನಿಕ ವೈದ್ಯರ ಬಳಿಗೆ ಹೋಗುತ್ತೇವೆ. ನ್ಯಾಯಾಲಯದ ಕೆಲಸವಿದ್ದರೆ, ನ್ಯಾಯವಾದಿಗಳ ಬಳಿ ಹೋಗುತ್ತೇವೆ. ಸ್ವಲ್ಪದರಲ್ಲಿ ನಾವು ಆಯಾ ಕ್ಷೇತ್ರದ ತಜ್ಞರ ಮಾರ್ಗದರ್ಶನಕ್ಕನುಸಾರ ಕೃತಿ ಮಾಡುತ್ತೇವೆ; ಆದರೆ ಯಾವಾಗ ಅಧ್ಯಾತ್ಮದ ಅಥವಾ ಸಾಧನೆಯ ವಿಷಯ ಬರುತ್ತದೆಯೋ, ಆಗ ಮಾತ್ರ ನಾವು ಅಧ್ಯಾತ್ಮದಲ್ಲಿನ ಅಧಿಕಾರಿ ವ್ಯಕ್ತಿಗಳ ಮಾರ್ಗದರ್ಶನ ಪಡೆಯದೇ ಸ್ವಂತ ಮನಸ್ಸಿನಂತೆ ಸಾಧನೆ ಮಾಡುತ್ತಿರುತ್ತೇವೆ’, ಎಂದು ಹೇಳುತ್ತಾರೆ.

ಭಗವಂತನ ಕೃಪೆಯಿಂದ ನಮಗೆ ಸಾಧನೆಯ ಬಗ್ಗೆ ಸರಿಯಾದ ಮಾರ್ಗದರ್ಶನ ನೀಡುವ ಸಾಕ್ಷಾತ್‌ ಮೋಕ್ಷ ಗುರು ಎಂದರೆ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಲಭಿಸಿದ್ದಾರೆ. ಅವರ ಮಾರ್ಗದರ್ಶನಕ್ಕನುಸಾರ ನಾವು ಸಾಧನೆಯನ್ನು ಆರಂಭಿಸಿದೆವು; ಆದರೆ ಸಾಧನೆ ಮಾಡುವಾಗ ಮುಂದೆ ಮುಂದೆ ಸಾಧಕರು ‘ಸಾಧನೆಯಲ್ಲಿನ ಈ ಮೂಲಭೂತ ತಪ್ಪುಗಳನ್ನು ತಡೆಗಟ್ಟಲು ನಾವು ಪ್ರಯತ್ನನಿರತರಾಗಿದ್ದೇವೆಯೇ ? ಸಾಧನೆಯ ಮುಂದುಮುಂದಿನ ಹಂತಕ್ಕೆ ಹೋಗುವಾಗ ಪ್ರತಿಯೊಂದು ಹಂತದಲ್ಲಿ ನಾವು ಜವಾಬ್ದಾರ ಸಾಧಕರ ಮಾರ್ಗದರ್ಶನ ಪಡೆಯುತ್ತಿದ್ದೇವೆಯೇ ?’, ಎಂಬುದರ ಆತ್ಮನಿರೀಕ್ಷಣೆಯನ್ನು ಮಾಡಬೇಕು.

೬. ‘ವಿಚಾರಿಸಿ ಕೃತಿ ಮಾಡುವುದು’, ಈ ಗುಣವು ಬೇರೂರಲು ಹೇಗೆ ಪ್ರಯತ್ನಿಸಬೇಕು ?

ಗುರುದೇವರು ನೀಡಿದ ಮಾರ್ಗದರ್ಶನಕ್ಕನುಸಾರ ಸಾಧಕರು ‘ವಿಚಾರಿಸಿ ಮಾಡುವುದು’, ಈ ಗುಣವು ತಮ್ಮ ಅಂತರಂಗದಲ್ಲಿ ಎಷ್ಟು ಪ್ರಮಾಣದಲ್ಲಿ ಬೇರೂರಿದೆ ?’, ಎಂಬುದರ ಚಿಂತನೆ ಮಾಡಬೇಕು. ಅದು ಆಳವಾಗಿ ಬೇರೂರಲು ಮುಂದಿನ ಸೂತ್ರಗಳ ಧ್ಯೇಯವನ್ನಿಟ್ಟುಕೊಂಡು ಸಾಧಕರು ಪ್ರಯತ್ನಗಳನ್ನು ಆರಂಭಿಸಬಹುದು.

ಅ. ಸಾಧನೆಯ ಸಂದರ್ಭದಲ್ಲಿ ಸಂದೇಹ ಅಥವಾ ಅಡಚಣೆ ಗಳಿಂದಾಗಿ ನಾವು ಒಂದೇ ಹಂತದಲ್ಲಿ ಸಿಲುಕಿದ್ದರೆ, ಆ ಬಗ್ಗೆ ಚಿಂತನೆ ಮಾಡಿ ಅವುಗಳನ್ನು ನಿಮ್ಮ ಜವಾಬ್ದಾರ ಸಾಧಕರು ಅಥವಾ ವರದಿಸೇವಕರಿಗೆ ಹೇಳಬೇಕು ಮತ್ತು ಆ ಬಗ್ಗೆ ಅವರಲ್ಲಿ ವಿಚಾರಿಸಿ ಅವರಿಂದÀ ಮಾರ್ಗದರ್ಶನ ಪಡೆಯಬೇಕು.

ಆ. ಅಡಚಣೆಗಳನ್ನು ಅಥವಾ ಸಂದೇಹಗಳನ್ನು ವಿಚಾರಿಸಿದ ನಂತರ ಅವುಗಳಿಗೆ ಪರಿಹಾರ ಸಿಕ್ಕ ನಂತರ ‘ನಿಮ್ಮ ಮನಸ್ಸಿಗೆ ಏನೆನಿಸುತ್ತದೆ ? ಏನು ಅನುಭವಕ್ಕೆ ಬರುತ್ತದೆ ? ಮತ್ತು ಮುಂದಿನ ಸಾಧನೆ ಹೇಗಾಗುತ್ತದೆ ?’, ಎಂಬುದರ ನಿರೀಕ್ಷಣೆ ಮಾಡಬೇಕು.

ಇ. ಪ್ರತಿಯೊಂದು ಸೇವೆಯಲ್ಲಿ ಯಾವಾಗಲೂ ಕಾರ್ಯಪದ್ಧತಿಗಿಂತ ಬೇರೆ ಏನಾದರೂ ಹೊಳೆದರೆ ‘ನನಗೆ ಹೀಗೆ ಅನಿಸುತ್ತದೆ. ನನ್ನ ವಿಚಾರ ಹೀಗಿದೆ’, ಎಂಬ ವಿಚಾರ ಮಾಡುವುದಕ್ಕಿಂತ ಜವಾಬ್ದಾರ ಸಾಧಕರಲ್ಲಿ ವಿಚಾರಿಸಬೇಕು. ‘ನನ್ನ ವಿಚಾರ ಹೀಗಿದೆ; ಆದರೆ ಯಾವುದು ಹೆಚ್ಚು ಯೋಗ್ಯವಿದೆ ?’ ಮತ್ತು ನಂತರ ಅವರು ಹೇಳಿದಂತೆ ಕೃತಿ ಮಾಡಬೇಕು.

ಈ. ನಮಗೆ ಜವಾಬ್ದಾರ ಸಾಧಕರು ಸೇವೆಯ ಸಂದರ್ಭದಲ್ಲಿ ಹಾಕಿ ಕೊಟ್ಟ ಆಯೋಜನೆಯ ಹೊರತಾಗಿ ಬೇರೆ ಮಾಡುವುದಿದ್ದರೆ ಅವರ ಬಳಿ ವಿಚಾರಿಸಬೇಕು ಮತ್ತು ಆ ಮೂಲಕ ನಮ್ಮ ಸೇವೆಯ ಫಲನಿಷ್ಪತ್ತಿ ಹೇಗೆ ಹೆಚ್ಚಾಗುತ್ತದೆ ?’, ಎಂಬುದನ್ನು ಅನುಭವಿಸಬೇಕು.

‘ವಿಚಾರಿಸಿ ಮಾಡಿದ ಕೃತಿ’ ಇದೇ ನಿಜವಾದ ಶಿಷ್ಯನ ಪರಿಚಯವಾಗಿದೆ. ಭಕ್ತಿಸತ್ಸಂಗದಲ್ಲಿನ ಮಾರ್ಗದರ್ಶನದಂತೆ ನೀವು ಒಂದೊಂದು ಸೂತ್ರಗಳನ್ನು ವಿಚಾರಿಸಿ ಮಾಡಲು ಪ್ರಯತ್ನಿಸಿದರೆ, ನಿಮ್ಮಲ್ಲಿ ಅಲ್ಪಾವಧಿಯಲ್ಲಿ ವಿಚಾರಿಸುವ ವೃತ್ತಿ ನಿರ್ಮಾಣವಾಗುತ್ತದೆ. ವಿಚಾರಿಸದಿರುವ ಹಿಂದಿನ ಅಯೋಗ್ಯ ಮಾನಸಿಕತೆ ಅಥವಾ ಅದರಲ್ಲಿನ ಅಡಚಣೆಗಳ ಚಿಂತನೆ ಮಾಡಿ ತಮ್ಮಲ್ಲಿ ‘ವಿಚಾರಿಸುವ ವೃತ್ತಿ’ಯನ್ನು ನಿರ್ಮಿಸಲು ಸಾಧಕರು ಪ್ರಯತ್ನಿಸಬೇಕು.’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (೧೭.೭.೨೦೨೫)