ತುಳಸಿ ವಿವಾಹ

ನವೆಂಬರ 2  ತುಳಸಿ ವಿವಾಹ ಪ್ರಾರಂಭ ಮತ್ತು ಚಾತುರ್ಮಾಸ ಸಮಾಪ್ತ ಈ ನಿಮಿತ್ತ…

ಕಾರ್ತಿಕ ಶುಕ್ಲ ಏಕಾದಶಿಯಿಂದ ಕಾರ್ತಿಕ ಹುಣ್ಣಿಮೆಯ ವರೆಗೆ ತುಳಸಿ ವಿವಾಹವನ್ನು ಆಚರಿಸಲಾಗುತ್ತದೆ.

ಧ್ಯಾಯೇಚ್ಚ ತುಲಸೀಂ ದೇವೀಂ ಶ್ಯಾಮಾಂ ಕಮಲಲೋಚನಾಮ್ |

ಪ್ರಸನ್ನಾಂ ಪದ್ಮಕಲ್ಹಾರ ವರಾಭಯ ಚತುರ್ಭುಜಾಮ್ ||

ಕಿರೀಟಹಾರಕೇಯೂರಕುಂಡಲಾದಿವಿಭೂಷಿತಾಮ್ |

ಧವಲಾಂಶುಕಸಭ್ಯುಕ್ತಾಂ ಪದ್ಮಾಸನನಿಷೇದುಷೀಮ್ ||

ಅರ್ಥ : ಶ್ಯಾಮವರ್ಣದ, ಕಮಲದಂತಹ ಕಣ್ಣುಗಳನ್ನು ಹೊಂದಿದ, ಪ್ರಸನ್ನಳಾದ, ಕೈಯಲ್ಲಿ ಕಮಲಪುಷ್ಪವನ್ನು ಧರಿಸಿದ, ವರ ಮತ್ತು ಅಭಯ ಮುದ್ರೆಯಲ್ಲಿರುವ, ಚತುರ್ಭುಜೆಯಾದ, ಕಿರೀಟ-ಹಾರ-ಕೇಯೂರ-ಕುಂಡಲ ಇತ್ಯಾದಿ ಆಭರಣಗಳಿಂದ ಶೋಭಿತಳಾದ, ಶುಭ್ರ ವಸ್ತ್ರಗಳನ್ನು ಧರಿಸಿ ಪದ್ಮಾಸನದಲ್ಲಿ ಕುಳಿತಿರುವ ತುಳಸೀದೇವಿಯನ್ನು ಧ್ಯಾನಿಸಬೇಕು.

ಪೂಜನೀಯ ಮತ್ತು ವಂದನೀಯವಾದ ತುಳಸಿಯು ಪವಿತ್ರ, ಗುಣಕಾರಿ ಮತ್ತು ಔಷಧೀಯ ಸಸ್ಯವೆಂದು ಗುರುತಿಸಲ್ಪಟ್ಟಿದೆ. ಭಗವಾನ್ ಶ್ರೀವಿಷ್ಣುವಿಗೆ ತುಳಸಿ ಅತ್ಯಂತ ಪ್ರಿಯವಾಗಿದೆ; ಆದ್ದರಿಂದ ತುಳಸಿಯನ್ನು ‘ಹರಿಪ್ರಿಯಾ’ ಎಂದು ಕರೆಯುತ್ತಾರೆ. ಶ್ರೀವಿಷ್ಣುವು ಆಷಾಢ ಶುಕ್ಲ ಏಕಾದಶಿಯಂದು ಶಯನಕ್ಕೆ ತೆರಳಿ ಕಾರ್ತಿಕ ಶುಕ್ಲ ಏಕಾದಶಿಯಂದು ಜಾಗೃತರಾಗುತ್ತಾರೆ. ಈ ದಿನವೇ ‘ಚಾತುರ್ಮಾಸ ಸಮಾಪ್ತಿ’ಯಾಗುತ್ತದೆ.

ಶ್ರೀವಿಷ್ಣುವಿನ ಜಾಗೃತಿಯ ಉತ್ಸವವೇ ಪ್ರಬೋಧೋತ್ಸವ. ತುಳಸಿ ವಿವಾಹ ಮತ್ತು ಪ್ರಬೋಧೋತ್ಸವ ಈ ಎರಡೂ ಉತ್ಸವಗಳನ್ನು ಒಟ್ಟಾಗಿ ಆಚರಿಸುವ ಸಂಪ್ರದಾಯವಿದೆ. ಇದರ ಹಿಂದಿನ ಒಂದು ಕಥೆ ಹೀಗಿದೆ, ಜಾಲಂಧರ ಎಂಬ ಅತ್ಯಂತ ಪರಾಕ್ರಮಿ ರಾಕ್ಷಸನಿದ್ದ. ಅವನು ಅನೇಕರನ್ನು ಗೆದ್ದು ವೈಭವವನ್ನು ಪಡೆದಿದ್ದನು. ಅವನ ಪತ್ನಿ ವೃಂದಾ ಮಹಾನ್ ಪತಿವ್ರತೆ ಸ್ತ್ರೀ ಆಗಿದ್ದಳು. ಅವಳ ಪಾತಿವ್ರತ್ಯದ ಬಲದಿಂದಲೇ ಅವನು ಅಜೇಯನಾಗಿದ್ದನು. ಇದರಿಂದ ಅವನಿಗೆ ಅಹಂಕಾರ ಬಂದಿತ್ತು. ಜಾಲಂಧರನ ಅಹಂಕಾರವನ್ನು ನಿವಾರಿಸಲು, ಶ್ರೀವಿಷ್ಣುವು ಜಾಲಂಧರನ ರೂಪವನ್ನು ಧರಿಸಿ ವೃಂದಾಳ ಬಳಿ ಇರಲು ಪ್ರಾರಂಭಿಸಿದನು. ವೃಂದಾಳ ಪಾತಿವ್ರತ್ಯ ಭಂಗವಾಯಿತು ಮತ್ತು ಜಾಲಂಧರ ಯುದ್ಧದಲ್ಲಿ ಮರಣ ಹೊಂದಿದನು. ಇದು ವೃಂದಾಳಿಗೆ ತಿಳಿದ ತಕ್ಷಣ ಅವಳು ಶ್ರೀವಿಷ್ಣುವಿಗೆ ಶಾಪವಿತ್ತಳು ಮತ್ತು ತಾನು ಅಗ್ನಿಕಾಷ್ಠಗಳನ್ನು ಭಕ್ಷಿಸಿ ಸತಿ ಹೋದಳು. ಅವಳ ಮರಣ ಸ್ಥಳದಲ್ಲಿ ಒಂದು ಸಸ್ಯ ಬೆಳೆಯಿತು. ಆ ಸಸ್ಯವೇ ‘ತುಳಸಿ’ಯಾಗಿದೆ. ಇದರಿಂದಲೇ ಶ್ರೀವಿಷ್ಣುವಿಗೆ ತುಳಸಿ ಅತ್ಯಂತ ಪ್ರಿಯವಾಯಿತು. ತುಳಸಿ ಪತಿವ್ರತಾ ಸ್ತ್ರೀಯ ಪ್ರತೀಕವಾಗಿದೆ. ಈ ನಿಮಿತ್ತ ನಾವು ಪತಿವ್ರತಾ ಧರ್ಮವನ್ನು ಸ್ಮರಿಸಬೇಕು ಮತ್ತು ಪವಿತ್ರತೆಯನ್ನೇ ಪೂಜಿಸಬೇಕು.

– ಸೌ. ಪ್ರಜ್ಞಾ ಕುಲಕರ್ಣಿ, ಡೊಂಬಿವಲಿ

(ಸೌಜನ್ಯ : ಮಾಸಿಕ ‘ಆದಿಮಾತಾ’, ದೀಪಾವಳಿ ವಿಶೇಷಾಂಕ)