ಶಬರಿಮಲೈ ದೇವಸ್ಥಾನದ ಚಿನ್ನದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ನೌಕರನ ಬಂಧನ – Sabarimala Gold Theft Case

ತಿರುವಾಂಕೂರು ದೇವಸ್ವಂ ಮಂಡಳಿಯ ಅಧಿಕಾರಿಗಳ ಮೇಲೂ ಸಂದೇಹ

ತಿರುವನಂತಪುರಂ (ಕೇರಳ) – ಶಬರಿಮಲೈ ದೇವಸ್ಥಾನಕ್ಕೆ ಸಂಬಂಧಿಸಿದ ಚಿನ್ನದ ದುರುಪಯೋಗ ಪ್ರಕರಣದಲ್ಲಿ ಆರೋಪಿ ಉನ್ನಿಕೃಷ್ಣನ್ ಪೋಟಿ ನನ್ನು ಕೇರಳ ಪೊಲೀಸರ ಅಪರಾಧ ವಿಭಾಗವು ಬಂಧಿಸಿದೆ. ಉನ್ನಿಕೃಷ್ಣನ್ ಪೋಟಿ ಈ ಹಿಂದೆ ಶಬರಿಮಲೈ ದೇವಸ್ಥಾನದಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದನು. 2019 ರಲ್ಲಿ, ದೇವಸ್ಥಾನದ ಕೆಲವು ಭಾಗಗಳಿಗೆ ಚಿನ್ನದ ಲೇಪನ ಮಾಡುವ ಕೆಲಸವನ್ನು ಅವನಿಂದ ಮಾಡಿಸಲಾಗಿತ್ತು. ಈ ಕೆಲಸದ ಸಮಯದಲ್ಲಿ 4 ಕೆಜಿ ಚಿನ್ನ ಕಣ್ಮರೆಯಾಗಿದೆ ಎಂದು ತಿಳಿದುಬಂದ ನಂತರ, ನ್ಯಾಯಾಲಯದ ಆದೇಶದ ಮೇರೆಗೆ ತನಿಖೆ ನಡೆಸಲಾಯಿತು. ಚಿನ್ನದ ಲೇಪನದ ಹೆಸರಿನಲ್ಲಿ ಮೂಲ ಚಿನ್ನವನ್ನು ಕಣ್ಮರೆ ಮಾಡಿ, ಅದರ ಬದಲಿಗೆ ನಕಲಿ ಅಥವಾ ಅತ್ಯಲ್ಪ ಪ್ರಮಾಣದ ಚಿನ್ನವನ್ನು ಬಳಸಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

1. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಉಚ್ಚ ನ್ಯಾಯಾಲಯದ ವಿಶೇಷ ತನಿಖಾ ದಳವನ್ನು (SIT) ಸ್ಥಾಪಿಸಲು ಆದೇಶಿಸಿತ್ತು. ಈ ತಂಡದ ತನಿಖೆಯಲ್ಲಿ, ಉನ್ನಿಕೃಷ್ಣನ್ ಪೋಟಿ ಕೆಲಸದಲ್ಲಿ ಅಕ್ರಮ ಎಸಗಿ ದೇವಸ್ಥಾನದ ಆಸ್ತಿಯನ್ನು ವಂಚಿಸಿದ್ದಾನೆ ಎಂಬುದು ಸ್ಪಷ್ಟವಾಯಿತು. ಅವನ ವಿರುದ್ಧ ಭಾರತೀಯ ದಂಡ ಸಂಹಿತೆಯ ನಿಬಂಧನೆಗಳ ಅಡಿಯಲ್ಲಿ ಕಳ್ಳತನ, ವಂಚನೆ ಮತ್ತು ವಿಶ್ವಾಸದ್ರೋಹದ ಅಪರಾಧಗಳನ್ನು ದಾಖಲಿಸಲಾಗಿದೆ. ಅವನನ್ನು ತಿರುವನಂತಪುರಂನಲ್ಲಿರುವ ಅವನ ಮನೆಯಿಂದ ಬಂಧಿಸಲಾಗಿದೆ.

2. ಈ ಪ್ರಕರಣದಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೂ ಸಂದೇಹ ವ್ಯಕ್ತಪಡಿಸಲಾಗಿದೆ. ದೇವಸ್ಥಾನ ಆಡಳಿತದ ಮೇಲ್ವಿಚಾರಣೆಯಲ್ಲಿಯೇ ಈ ಕೃತ್ಯ ನಡೆದ ಕಾರಣ, ಅವರ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ.

ಸಂಪಾದಕೀಯ ನಿಲುವು

ದೇವಸ್ಥಾನಗಳ ಸರಕಾರೀಕರಣದ ದುಷ್ಪರಿಣಾಮಗಳು ನಿರಂತರವಾಗಿ ಹೊರಬರುತ್ತಿರುವುದರಿಂದ, ಈಗ ಹಿಂದೂಗಳು ಒಗ್ಗೂಡಿ ದೇಶಾದ್ಯಂತ ಚಳುವಳಿ ನಡೆಸಿ ದೇವಸ್ಥಾನಗಳ ಸರಕಾರೀಕರಣವನ್ನು ರದ್ದುಗೊಳಿಸುವಂತೆ ಸರಕಾರಗಳಿಗೆ ಒತ್ತಾಯಿಸಬೇಕು!