‘ಡಿಜೆ’ಗೆ ಅನುಮತಿ ಸಿಗುವವರೆಗೆ ಗಣೇಶ ಮೂರ್ತಿಗಳನ್ನು ವಿಸರ್ಜಿಸದಿರಲು ಗ್ರಾಮಸ್ಥರಿಂದ ನಿರ್ಧಾರ!

ಡಿಜೆ ಬಳಸದಂತೆ ಪೊಲೀಸರು ನಿರ್ಬಂಧಿಸಿದ ಪ್ರಕರಣ

ಬ್ಯಾಡಗಿ – ‘ಡಿಜೆ’ ಬಳಸಲು ಅನುಮತಿ ಸಿಗುವವರೆಗೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ ಹಿಂದೂಗಳು ಗ್ರಾಮದ ಯಾವುದೇ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ವಿಸರ್ಜಿಸದಿರಲು ನಿರ್ಧರಿಸಿದ್ದಾರೆ.

1. ನಿಯಮದಂತೆ ಗಣೇಶೋತ್ಸವದ ಐದನೇ ದಿನವಾದ ಆಗಸ್ಟ್ 31 ರಂದು ಗಣೇಶ ಮೂರ್ತಿಗಳನ್ನು ವಿಸರ್ಜಿಸಬೇಕಿತ್ತು; ಆದರೆ ಪೊಲೀಸರು ‘ಡಿಜೆ ಸೌಂಡ್ ಸಿಸ್ಟಮ್’ ಅನ್ನು ಮೋಟೆಬೆನ್ನೂರು ಗ್ರಾಮಕ್ಕೆ ಪ್ರವೇಶಿಸದಂತೆ ತಡೆದರು. ಇದರಿಂದಾಗಿ, ಆಕ್ರೋಶಗೊಂಡ ಗ್ರಾಮಸ್ಥರು ಒಗ್ಗೂಡಿ ಗ್ರಾಮದ ಗಣೇಶ ಮೂರ್ತಿಗಳನ್ನು ವಿಸರ್ಜಿಸದಿರಲು ನಿರ್ಧರಿಸಿದರು.

2. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು, ಶ್ರೀ ಗಣಪತಿಯು ಹಿಂದೂ ಧರ್ಮದ ಸಂಕೇತವಾಗಿದೆ. ರಾಜ್ಯ ಸರಕಾರವು ಹಬ್ಬಗಳಲ್ಲಿ ‘ಡಿಜೆ’ ನುಡಿಸಲು ಅನುಮತಿ ನಿರಾಕರಿಸುವ ಮೂಲಕ ಹಿಂದೂಗಳ ಹಬ್ಬಗಳ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸಿದೆ, ಎಂದು ಹೇಳಿದರು.

3. ಹಿಂದೂ ನಾಯಕ ಶಿವಬಸಪ್ಪ ಕುಳೆನೂರು ಅವರು ಮಾತನಾಡಿ, ರಾಜ್ಯದಲ್ಲಿ ಅಲ್ಪಸಂಖ್ಯಾತರನ್ನು ಓಲೈಸುವ ಸರಕಾರದ ಸರ್ವಾಧಿಕಾರಿ ಧೋರಣೆ ಹೆಚ್ಚಿದೆ. ಹಿಂದೂ ಧರ್ಮ ಮತ್ತು ಹಿಂದೂ ಹಬ್ಬಗಳನ್ನು ನಾಶಪಡಿಸುವ ಇದೊಂದು ಪಿತೂರಿಯಾಗಿದೆ. ಗಣೇಶೋತ್ಸವದಲ್ಲಿ ‘ಡಿಜೆ’ ಮೇಲೆ ನಿರ್ಬಂಧ ಹೇರಿದ್ದೇ ಇದಕ್ಕೆ ಉದಾಹರಣೆ, ಎಂದು ಹೇಳಿದರು.

4. ನಾಯಕ ನಾಗರಾಜ ಆನವೇರಿ ಅವರು ಜಿಲ್ಲಾಧಿಕಾರಿಗಳು ‘ಡಿಜೆ’ ನಿಷೇಧದ ಆದೇಶವನ್ನು ಮರುಪರಿಶೀಲಿಸಬೇಕು, ಎಂದು ಒತ್ತಾಯಿಸಿದರು.

5. ನಾಯಕ ಎನ್.ಎಸ್. ನಿಂಗಪ್ಪ ಬಟ್ಟಲಕಟ್ಟಿ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಬಂದಾಗಿನಿಂದ ಹಿಂದೂ ವಿರೋಧಿ ನಿಲುವು ತಳೆದಿದೆ. ಹಿಂದೂ ಧರ್ಮವನ್ನು ನಾಶಮಾಡಲು ಪಿತೂರಿ ನಡೆಯುತ್ತಿದೆ, (ಹಿಂದೂ ಧರ್ಮದ ಮೇಲಿನ ಈ ಆಕ್ರಮಣವನ್ನು ತಡೆಯಲು ಹಿಂದೂ ಸಂಘಟನೆ ಅವಶ್ಯಕವಾಗಿದೆ! – ಸಂಪಾದಕರು), ಎಂದು ಹೇಳಿದರು.