ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರಿಗೆ ಹಾವೇರಿ ಜಿಲ್ಲೆಗೆ ಪ್ರವೇಶ ನಿಷೇಧ !

ಭಾಷಣಗಳಿಂದ ಕಾನೂನು-ಸುವ್ಯವಸ್ಥೆಗೆ ಧಕ್ಕೆಯಾಗಬಹುದು ಎಂದು ಆಡಳಿತಕ್ಕೆ ಭಯ

ಮಂಗಳೂರು – ಹಾವೇರಿ ನಗರದಲ್ಲಿರುವ ಹುಕ್ಕೆರಿ ಮಠದ ಆವರಣದಲ್ಲಿ ಸಪ್ಟೆಂಬರ್ ೮ ರಿಂದ ೧೪ ರವರೆಗೆ ಒಂದು ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಪೂರ್ವ ತಯಾರಿಗಳನ್ನು ಪರಿಶೀಲಿಸಲು ಸಪ್ಟೆಂಬರ್ ೧ ರಂದು ಮತ್ತು ಸಪ್ಟೆಂಬರ್ ೧೪ ರಂದು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಶ್ರೀ. ಪ್ರಮೋದ್ ಮುತಾಲಿಕ್ ಅವರು ಆಗಮಿಸಬೇಕಿತ್ತು. ಆದರೆ, ‘ಗೌರಿ-ಗಣೇಶ’ ಮತ್ತು ‘ಈದ್-ಎ-ಮಿಲಾದ್’ ಹಬ್ಬಗಳು ಹತ್ತಿರದಲ್ಲಿರುವುದರಿಂದ ಹಾಗೂ ಮುತಾಲಿಕ್ ಅವರ ಭಾಷಣದಿಂದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಬಹುದು ಎಂಬ ಕಾರಣ ನೀಡಿ, ಅವರನ್ನು ಹಾವೇರಿ ಜಿಲ್ಲೆಗೆ ನಿರ್ಬಂಧಿಸಲಾಗಿದೆ.

ಧಾರ್ಮಿಕ ಸಾಮರಸ್ಯ ಮತ್ತು ಸಾರ್ವಜನಿಕ ಆಸ್ತಿಯ ರಕ್ಷಣೆಯ ದೃಷ್ಟಿಯಿಂದ, ಆಗಸ್ಟ್ ೩೧ ರಿಂದ ಸಪ್ಟೆಂಬರ್ ೨೬ ರವರೆಗೆ ೨೭ ದಿನಗಳ ಕಾಲ ಮುತಾಲಿಕ್ ಅವರಿಗೆ ಹಾವೇರಿ ಜಿಲ್ಲೆಗೆ ಪ್ರವೇಶಿಸದಂತೆ ತಡೆಯಲಾಗಿದೆ.

ನನ್ನ ಕಂಡರೆ ರಾಜ್ಯ ಸರಕಾರಕ್ಕೆ ಏಕೆ ಇಷ್ಟು ಭಯ ? – ಪ್ರಮೋದ್ ಮುತಾಲಿಕ್

ಈ ಕುರಿತು ಮಾತನಾಡಿದ ಶ್ರೀ. ಮುತಾಲಿಕ್, ಶ್ರೀರಾಮ ಸೇನೆಯ ಕಾರ್ಯಾಗಾರದ ನಿಮಿತ್ತ ನಾನು ಹಾವೇರಿ ಜಿಲ್ಲೆಗೆ ಭೇಟಿ ನೀಡಬೇಕಿತ್ತು. ಆದರೆ, ರಾಜ್ಯದ ಹಿಂದೂ ವಿರೋಧಿ ಸರಕಾರವು ನನಗೆ ಒಂದು ತಿಂಗಳ ಕಾಲ ಹಾವೇರಿ ಜಿಲ್ಲೆಗೆ ಪ್ರವೇಶ ನಿಷೇಧಿಸಿದೆ. ರಾಜ್ಯ ಸರಕಾರಕ್ಕೆ ನನ್ನ ಕಂಡರೆ ಏಕೆ ಇಷ್ಟು ಭಯ ಎಂದು ನನಗೆ ಅರ್ಥವಾಗುತ್ತಿಲ್ಲ. ಈ ನಿಷೇಧವನ್ನು ನಾನು ಕಾನೂನು ಮೂಲಕ ಪ್ರಶ್ನಿಸುತ್ತೇನೆ ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಇಂತಹ ನಿಷೇಧಗಳನ್ನು ಹಿಂದುತ್ವನಿಷ್ಠರ ಮೇಲೆ ಹೇರುವುದು ಇದು ಭಾರತವೋ ಅಥವಾ ಪಾಕಿಸ್ತಾನವೋ?
  • ಪ್ರಖರ ಹಿಂದುತ್ವನಿಷ್ಠ ಶ್ರೀ. ಪ್ರಮೋದ್ ಮುತಾಲಿಕ್ ಅವರಿಗೆ ಜಿಲ್ಲಾ ನಿರ್ಬಂಧ ಹೇರಿರುವ ಕಾಂಗ್ರೆಸ್, ಜಿಹಾದಿ ಭಯೋತ್ಪಾದಕ ಸಂಘಟನೆಯಾದ PFI ಮೇಲಿನ ನಿಷೇಧವನ್ನು ಹಿಂಪಡೆಯಲು ಉತ್ಸುಕವಾಗಿದೆ ಎಂಬುದನ್ನು ಗಮನಿಸಿ!