
ಆಗಸ್ಟ್ ೨೭ ರಿಂದ ಅಮೆರಿಕ ಭಾರತದ ಮೇಲಿನ ಆಮದು ಸುಂಕವನ್ನು ಶೇ. ೨೫ ರಷ್ಟು ಹೆಚ್ಚಿಸಿದೆ, ಅಂದರೆ ಅಮೆರಿಕದ ಆಮದು ಸುಂಕ ಶೇ. ೫೦ ಕ್ಕೆ ಹೆಚ್ಚಿದೆ. ಇದರಿಂದ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ವಸ್ತುಗಳ ಬೆಲೆ ಗಣನೀಯವಾಗಿ ಹೆಚ್ಚಲಿದೆ. ಪರಿಣಾಮವಾಗಿ, ಅಮೆರಿಕಕ್ಕೆ ಭಾರತದಿಂದ ರಫ್ತಾಗುವ ಸರಕುಗಳ ಪ್ರಮಾಣ ಕಡಿಮೆಯಾಗಲಿದೆ. ಸುಲಭವಾಗಿ ಹೇಳಬೇಕೆಂದರೆ, ಭಾರತದಿಂದ ಅಮೆರಿಕಕ್ಕೆ ಆಗುವ ರಫ್ತಿನಲ್ಲಿ ಭಾರಿ ಕುಸಿತ ಕಾಣಲಿದೆ. ೨೦೨೫ ರ ಪ್ರಸಕ್ತ ಆರ್ಥಿಕ ವರ್ಷದಲ್ಲಿ, ಭಾರತವು ಅಮೆರಿಕಕ್ಕೆ ೮೬.೫ ಶತಕೋಟಿ ಡಾಲರ್ (೭.೫ ಲಕ್ಷ ಕೋಟಿಗೂ ಹೆಚ್ಚು ರೂಪಾಯಿಯ) ಮೌಲ್ಯದ ಸರಕುಗಳನ್ನು ರಫ್ತು ಮಾಡಿದೆ ಮತ್ತು ಅಮೆರಿಕದಿಂದ ೪೫.೭ ಶತಕೋಟಿ ಡಾಲರ್ (೪ ಲಕ್ಷ ಕೋಟಿಗೂ ಹೆಚ್ಚು ರೂಪಾಯಿ) ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದೆ. ಜವಳಿ, ರತ್ನಗಳು, ಆಭರಣಗಳು, ಚರ್ಮ, ಮೀನು, ರಾಸಾಯನಿಕಗಳು, ಅಕ್ಕಿ, ಮಸಾಲೆ ಪದಾರ್ಥಗಳು ಮತ್ತು ಯಂತ್ರೋಪಕರಣಗಳನ್ನು ಭಾರತದಿಂದ ಅಮೆರಿಕಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ಅಮೆರಿಕ ಭಾರತದ ಕೃಷಿ ಉತ್ಪನ್ನಗಳಿಗೆ ದೊಡ್ಡ ಮಾರುಕಟ್ಟೆಯಾಗಿದೆ. ಅಮೆರಿಕದ ಆಮದು ಸುಂಕ ಹೆಚ್ಚಳದಿಂದ ಭಾರತಕ್ಕೆ ನಷ್ಟವಾಗುವುದು ಸಹಜ. ಇದು ಭಾರತೀಯ ಉದ್ಯಮಗಳ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಭಾರತಕ್ಕೆ ಮತ್ತೊಂದು ಸಮರ್ಥ ಮತ್ತು ವಿಶ್ವಾಸಾರ್ಹ ಮಾರುಕಟ್ಟೆ ಲಭ್ಯವಾಗುವವರೆಗೆ ಭಾರತೀಯ ಉತ್ಪನ್ನಗಳ ಮಾರಾಟದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಆದರೆ, ಒಂದು ವಿಷಯ ನೆನಪಿನಲ್ಲಿಡಬೇಕು, ಸಂಕಷ್ಟದಲ್ಲಿ ಅವಕಾಶಗಳು ಹುಟ್ಟಿಕೊಳ್ಳುತ್ತವೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಲ್ಲಿ ಮಾಡಿದ ಭಾಷಣದಲ್ಲಿ ‘ಆತ್ಮನಿರ್ಭರ ಭಾರತ’ ಎಂದು ಘೋಷಿಸಿ, ಸ್ವದೇಶಿಪರ ಒಲವು ತೋರಿಸಿದರು. ಗಣೇಶ ಚತುರ್ಥಿಯ ದಿನದಂದು ಗುಜರಾತ್‌ನಲ್ಲಿ ‘ಮೇಡ್ ಇನ್ ಇಂಡಿಯಾ’ ಸುಜುಕಿ ಕಾರಿನ ಪ್ರದರ್ಶನದೊಂದಿಗೆ ಇದಕ್ಕೆ ಚಾಲನೆ ಸಿಕ್ಕಿದೆ. ಈ ‘ಮೇಡ್ ಇನ್ ಇಂಡಿಯಾ’ ಕಾರು ಜಗತ್ತಿನ ೧೦೦ ದೇಶಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ಈ ಆರ್ಥಿಕ ಸಂಕಷ್ಟವನ್ನು ಎದುರಿಸಲು ಭವಿಷ್ಯದಲ್ಲಿ ಭಾರತವು ಇಂತಹ ಅವಕಾಶಗಳನ್ನು ಹುಡುಕಬೇಕಾಗಿದೆ.
ಅಮೆರಿಕದ ಆಮದು ಸುಂಕ ಹೆಚ್ಚಳಕ್ಕೆ ಅದರ ಪ್ರಾಬಲ್ಯದ ಮನೋಭಾವವೇ ಕಾರಣ. ಉಕ್ರೇನ್ ಮೇಲಿನ ಆಕ್ರಮಣವನ್ನು ನಿಲ್ಲಿಸಲು ರಷ್ಯಾದ ಮೇಲೆ ಅಮೆರಿಕ ನಿರ್ಬಂಧಗಳನ್ನು ಹೇರಿದೆ. ‘ಪಾಶ್ಚಿಮಾತ್ಯ ದೇಶಗಳು ರಷ್ಯಾದೊಂದಿಗಿನ ವ್ಯಾಪಾರ ಸಂಬಂಧವನ್ನು ಕಡಿದುಕೊಳ್ಳಬೇಕು’ ಎಂದು ಅಮೆರಿಕ ಈ ದೇಶಗಳ ಮೇಲೆ ಒತ್ತಡ ಹೇರುತ್ತಿದೆ. ‘ಭಾರತವು ರಷ್ಯಾದಿಂದ ತೈಲವನ್ನು ಖರೀದಿಸಬಾರದು’ ಎಂದು ಕೂಡ ಅಮೆರಿಕ ಮನವಿ ಮಾಡಿತ್ತು. ಭಾರತದಿಂದ ಸಿಗುವ ಹಣದಿಂದಲೇ ರಷ್ಯಾ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದೆ ಎಂದು ಅಮೆರಿಕ ಸುಳ್ಳು ಹೇಳುತ್ತಿದೆ. ಆದರೆ, ಭಾರತ ಅಮೆರಿಕದ ಸಲಹೆಯನ್ನು ಪಾಲಿಸಲಿಲ್ಲ. ‘ಆದ್ದರಿಂದ ಅಮೆರಿಕ ಆಮದು ಸುಂಕವನ್ನು ಹೆಚ್ಚಿಸಿದೆ’ ಎಂದು ಅಮೆರಿಕ ಸುಖಾಸುಮ್ಮನೆ ಕಾರಣ ನೀಡುತ್ತಿದೆ. ಅಮೆರಿಕ ಮೂಲತಃ ಬಂಡವಾಳಶಾಹಿ ಮತ್ತು ವ್ಯಾಪಾರ ಮನೋಭಾವದ ದೇಶ. ‘ಒಂದು ಕಡೆ ಪಾಕಿಸ್ತಾನಕ್ಕೆ ಶಾಂತಿಗಾಗಿ ಕರೆ ನೀಡಿ, ಇನ್ನೊಂದು ಕಡೆ ಭಾರತದ ವಿರುದ್ಧ ಹೋರಾಡಲು ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವುದು’, ಈ ರೀತಿ ದ್ವಿಮುಖ ನೀತಿ ಹೊಂದಿರುವ ಬಂಡವಾಳಶಾಹಿ ದೇಶವೇ ಅಮೆರಿಕ ! ಪಾಕಿಸ್ತಾನಕ್ಕಷ್ಟೇ ಅಲ್ಲ, ಚೀನಾಕ್ಕೂ ಭಾರತದ ವಿರುದ್ಧ ಹೋರಾಡಲು ಅಮೆರಿಕ ಶಸ್ತ್ರಾಸ್ತ್ರಗಳನ್ನು ಮಾರಿದೆ. ಇಂತಹ ವ್ಯಾಪಾರಿ ಮನೋಭಾವದ ಅಮೆರಿಕ, ‘ಭಾರತವು ರಷ್ಯಾದಿಂದ ತೈಲವನ್ನು ಖರೀದಿಸಬಾರದು’ ಎಂದು ಹೇಳುವುದು ಹಾಸ್ಯಾಸ್ಪದ. ಅಮೆರಿಕದ ಆಡಳಿತ ಪಕ್ಷದ ಕೆಲವು ಸಂಸದರು ಆಮದು ಸುಂಕ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಅವರ ಮಾತಿಗೆ ಬೆಲೆ ಕೊಡದೆ ಡೊನಾಲ್ಡ್ ಟ್ರಂಪ್ ಆಮದು ಸುಂಕ ಹೆಚ್ಚಿಸುವ ನಿರ್ಧಾರ ಕೈಗೊಂಡರು. ಸಹಜವಾಗಿ, ಆಮದು ಸುಂಕವನ್ನು ಎಷ್ಟು ಹೆಚ್ಚಿಸಬೇಕು ಮತ್ತು ಯಾವ ದೇಶದೊಂದಿಗೆ ಯಾವ ರೀತಿಯ ವ್ಯಾಪಾರ ಸಂಬಂಧಗಳನ್ನು ಇಟ್ಟುಕೊಳ್ಳಬೇಕು ಎಂಬುದು ಆಯಾ ದೇಶದ ಆಂತರಿಕ ವಿಷಯ. ಆದರೆ, ಮುಂದಿನ ಕೆಲವು ವರ್ಷಗಳಲ್ಲಿ ಇದರ ದುಷ್ಪರಿಣಾಮಗಳು ದೂರಗಾಮಿ ಪರಿಣಾಮ ಬೀರಲಿವೆ ಎಂಬುದು ಖಚಿತ !
ಅಮೆರಿಕಕ್ಕೂ ಹೊಡೆತ ಖಚಿತ !

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಲು ಅಲ್ಲಿನ ಭಾರತೀಯ ಉದ್ಯಮಿಗಳ ಕೊಡುಗೆ ಮಹತ್ತರವಾಗಿತ್ತು. ಭಾರತೀಯ ಮೂಲದ ಉದ್ಯಮಿಗಳು ಟ್ರಂಪ್ ಅವರ ಅಧ್ಯಕ್ಷೀಯ ಚುನಾವಣೆಗೆ ಆರ್ಥಿಕ ನೆರವು ನೀಡಿದ್ದರು. ಭಾರತೀಯ ಮೂಲದ ನಾಗರಿಕರು ಮತ್ತು ಉದ್ಯಮಿಗಳಿಗೆ ಭಾರತದ ಬಗ್ಗೆ ಸಹಾನುಭೂತಿ ಇದೆ. ಭವಿಷ್ಯದಲ್ಲಿ ಭಾರತೀಯ ಮೂಲದ ನಾಗರಿಕರು ಅಮೆರಿಕದ ಆಮದು ಸುಂಕ ಹೆಚ್ಚಳ ನೀತಿಯ ವಿರುದ್ಧ ಅಮೆರಿಕದ ಸರ್ಕಾರಗಳ ಮೇಲೆ ಒತ್ತಡ ಹೇರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಭಾರತೀಯ ಸರಕುಗಳ ಮೇಲೆ ಅವಲಂಬಿತವಾಗಿರುವ ಅಮೆರಿಕದ ಉದ್ಯಮಗಳಿಗೂ ಆಮದು ಸುಂಕ ಹೆಚ್ಚಳದಿಂದ ಹೊಡೆತ ಬೀಳಲಿದೆ. ಭಾರತವು ಪರ್ಯಾಯ ಮಾರುಕಟ್ಟೆಯನ್ನು ಕಂಡುಕೊಳ್ಳಬೇಕಾದಂತೆ, ಅಮೆರಿಕದ ಉದ್ಯಮಿಗಳಿಗೂ ಪರ್ಯಾಯ ರಫ್ತುದಾರರನ್ನು ಹುಡುಕಬೇಕಾಗಿದೆ. ‘ಈ ಎಲ್ಲದರ ಪರಿಣಾಮ ಟ್ರಂಪ್ ವಿರುದ್ಧ ಅಸಮಾಧಾನ ಹೆಚ್ಚಲು ಕಾರಣವಾಗಲಿದೆ’ ಎಂದು ಹೇಳಲು ಭವಿಷ್ಯಕಾರರ ಅಗತ್ಯವಿಲ್ಲ. ಕೊರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಭಾರತದ ಆರ್ಥಿಕತೆ ಸದೃಢವಾಗಿತ್ತು, ಆದರೆ ಅಮೆರಿಕದ ಆರ್ಥಿಕತೆ ಸಂಪೂರ್ಣ ಕುಸಿದಿತ್ತು. ಅಮೆರಿಕದಲ್ಲಿ ಹಣದುಬ್ಬರ ಉಗ್ರ ರೂಪ ತಾಳಿತ್ತು. ಆಮದು ಸುಂಕವನ್ನು ಹೆಚ್ಚಿಸಿ, ಭಾರತದೊಂದಿಗಿನ ವ್ಯಾಪಾರ ಸಂಬಂಧಗಳನ್ನು ಕಡಿದುಕೊಳ್ಳುತ್ತಿರುವ ಅಮೆರಿಕವು ಭವಿಷ್ಯದಲ್ಲಿ ಇದರ ಪರಿಣಾಮ ವನ್ನು ಖಂಡಿತ ಅನುಭವಿಸಲಿದೆ.
ಸ್ವದೇಶಿ ಬಿಟ್ಟು ಬೇರೆ ದಾರಿಯಿಲ್ಲ !

ಆದರೂ, ಭಾರತಕ್ಕೆ ದಾರಿ ಸುಲಭವಿಲ್ಲ. ಅಮೆರಿಕ ಭಾರತದ ಅತಿದೊಡ್ಡ ಆಮದುದಾರ ಆಗಿರುವುದರಿಂದ, ಪರ್ಯಾಯ ಮಾರುಕಟ್ಟೆಗಳನ್ನು ಹುಡುಕುವುದು ಭಾರತದ ಮುಂದಿರುವ ದೊಡ್ಡ ಸವಾಲಾಗಿದೆ. ಅಲ್ಲಿಯವರೆಗೆ, ದೇಶೀಯ ಉದ್ಯಮಿಗಳನ್ನು ಸ್ಥಿರವಾಗಿಡಲು ಮತ್ತು ಅವರಿಗೆ ಆರ್ಥಿಕ ಸ್ಥಿರತೆಯನ್ನು ಒದಗಿಸಲು ಸರ್ಕಾರ ಪ್ರಯತ್ನಿಸಬೇಕಾಗುತ್ತದೆ. ಹೊಸ ಮಾರುಕಟ್ಟೆಗಳನ್ನು ಹುಡುಕಲು ದೇಶೀಯ ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡುವುದು, ಅಮೆರಿಕ ಅಥವಾ ಇತರ ದೇಶಗಳಿಗೆ ರಫ್ತು ಮಾಡಬೇಕಾದ ಉತ್ಪನ್ನಗಳನ್ನು ತಯಾರಿಸುವುದು, ಇವುಗಳ ಮೇಲೆ ಭಾರತವು ಗಮನ ಹರಿಸದೆ ಬೇರೆ ದಾರಿಯಿಲ್ಲ. ಇದರಲ್ಲಿ, ಸರ್ಕಾರವು ಉದ್ಯಮಿಗಳನ್ನು ಪ್ರೋತ್ಸಾಹಿಸುವುದು ಎಷ್ಟು ಮುಖ್ಯವೋ, ಅಷ್ಟೇ ಭಾರತೀಯರು ತಮ್ಮ ಸ್ವಂತ ಉತ್ಪನ್ನಗಳನ್ನು ಖರೀದಿಸಲು ಕೊಡುಗೆ ನೀಡುವುದು ಕೂಡ ಅಮೂಲ್ಯವಾಗಿದೆ. ಇತರ ದೇಶಗಳಿಗೆ ಹೋಲಿಸಿದರೆ ಮಾನವ ಸಂಪನ್ಮೂಲ ಭಾರತದ ದೊಡ್ಡ ಶಕ್ತಿ. ಆದ್ದರಿಂದ, ಜಗತ್ತಿನ ಅನೇಕ ದೇಶಗಳು ಭಾರತದೊಂದಿಗೆ ವ್ಯಾಪಾರ ಮಾಡಲು ಆದ್ಯತೆ ನೀಡುತ್ತವೆ. ಇದು ನಿಜವಾದರೂ, ಭಾರತದಲ್ಲಿ ತಯಾರಿಸಲು ಸಾಧ್ಯವಿಲ್ಲದ ವಸ್ತುಗಳಿಗೆ ಮಾತ್ರ ಭಾರತ ರಫ್ತಿನ ಮೇಲೆ ಅವಲಂಬಿತವಾಗಬೇಕು. ಉಳಿದಂತೆ ಸ್ವದೇಶಿ ಉತ್ಪನ್ನಗಳ ತಯಾರಿಕೆಯ ಮೇಲೆ ಭಾರತವು ಗಮನ ಹರಿಸಬೇಕು. ಇದರಿಂದ ಭಾರತದ ಆರ್ಥಿಕತೆ ವೇಗವಾಗಿ ಬಲಗೊಳ್ಳುತ್ತದೆ.
ಭಾರತದ ಮೇಲೆ ಬಂದಿರುವ ಸಂಕಷ್ಟವನ್ನು ಅವಕಾಶವಾಗಿ ಪರಿವರ್ತಿಸಿ, ಅಮೆರಿಕದ ಪ್ರಾಬಲ್ಯವನ್ನು ಸೋಲಿಸಲು ಭಾರತವು ಹೆಜ್ಜೆ ಇಡಬೇಕು. ಇದರಿಂದ, ‘ಕೇವಲ ತನ್ನ ಆರ್ಥಿಕ ಲಾಭ’ ಎಂಬ ಚಿಂತನೆಯಿಂದ ವ್ಯಾಪಾರ ಮಾಡುವುದಕ್ಕಿಂತ, ‘ದೇಶದ ಆರ್ಥಿಕತೆಯನ್ನು ಬಲಪಡಿಸುವುದು’ ಎಂಬ ರಾಷ್ಟ್ರೀಯ ಚಿಂತನೆ ಭಾರತೀಯರಿಗೆ ಮುಖ್ಯವಾಗಲಿದೆ. ‘ಚಿನ್ನದ ಹಕ್ಕಿ’ ಎಂಬ ಕನಸಿನಂತೆ ಕಾಣುವ ನಮ್ಮ ರಾಷ್ಟ್ರ ಸ್ವಾವಲಂಬಿಯಾದರೆ, ದೇಶದ ಪ್ರತಿಯೊಬ್ಬ ವ್ಯಕ್ತಿಯ ತಲಾ ಆದಾಯ ಹೆಚ್ಚುವುದು ಮಾತ್ರವಲ್ಲದೆ, ಭಾರತೀಯ ರೂಪಾಯಿಯ ಮೌಲ್ಯ ಕುಸಿತವನ್ನೂ ತಡೆಯಬಹುದು. ಸಮಯ ಖಂಡಿತ ಕಷ್ಟಕರವಾಗಿದೆ, ಆದರೆ ಇದು ಭಾರತೀಯರು ರಾಷ್ಟ್ರಕ್ಕೆ ತಮ್ಮ ಕೊಡುಗೆಯನ್ನು ತೋರಿಸುವ ಒಂದು ಅವಕಾಶ ಕೂಡ ಆಗಿದೆ. ಆದ್ದರಿಂದ, ಟ್ರಂಪ್ ಅವರ ನಿರ್ಧಾರ ಭಾರತ ವಿರೋಧಿ ಎಂದು ಅನಿಸಿದರೂ, ಇದು ಭಾರತವನ್ನು ಸ್ವಾವಲಂಬಿಯಾಗಿಸಲು ಕ್ರಾಂತಿಯನ್ನು ತರಬಹುದು ಎಂಬುದು ಖಚಿತ !
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
ಲೆಬನಾನ್: ಹಿಜ್ಬುಲ್ಲಾ ಮೇಲೆ ಇಸ್ರೇಲ್ ದಾಳಿ; ಟ್ರಂಪ್-ನೆತನ್ಯಾಹು ನಡುವೆ ವಾಗ್ವಾದ!
ಯಾವುದೇ ಪರಿಸ್ಥಿತಿಯಲ್ಲೂ ಇರಾನ್ಗೆ ಅಣುಬಾಂಬ್ ತಯಾರಿಸಲು ಬಿಡುವುದಿಲ್ಲ! – ಡೊನಾಲ್ಡ್ ಟ್ರಂಪ್
ಬಾಂಗ್ಲಾದೇಶ: ಬಕ್ರೀದ್ ದಿನದಂದು ‘ಡೊನಾಲ್ಡ್ ಟ್ರಂಪ್’ ಹೆಸರಿನ ಎಮ್ಮೆಯ ಬಲಿ ರದ್ದು !
ಆರ್ಥಿಕ ಶಿಸ್ತು
Abraham Accords : ಡೊನಾಲ್ಡ್ ಟ್ರಂಪ್ ಅವರ ‘ಅಬ್ರಹಾಂ ಅಕಾರ್ಡ್ಸ್’ ಪ್ರಸ್ತಾವನೆಯನ್ನು ತಿರಸ್ಕರಿಸಿದ ಪಾಕಿಸ್ತಾನ