ಇರಾನ್‌ ನ ಚಾಬಹಾರ ಬಂದರಿನ ಮೇಲೆ ಅಮೆರಿಕಾದಿಂದ ದಾಳಿ : US Iran War

ಇರಾನ್‌ ನ ೯೦ ಸೈನಿಕರು ಮತ್ತು ಕಡಲ ನೆಲೆಗಳನ್ನು ಗುರಿಯಾಗಿಸಿದ ಅಮೆರಿಕಾ

ಟೆಹರಾನ್ (ಇರಾನ್) – ಅಮೆರಿಕಾ ಮತ್ತು ಇರಾನ್ ನಡುವಿನ ‘ಶಾಂತಿ ಒಪ್ಪಂದ’ ಮುರಿದುಬಿದ್ದಿದ್ದು, ಕೊಲ್ಲಿ ರಾಷ್ಟ್ರಗಳಲ್ಲಿ ಮತ್ತೊಮ್ಮೆ ಯುದ್ಧದ ಕಿಡಿ ಹೊತ್ತಿಕೊಂಡಿದೆ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕದನ ವಿರಾಮ ಕೊನೆಗೊಂಡಿರುವುದಾಗಿ ಘೋಷಿಸಿದ ಬೆನ್ನಲ್ಲೇ, ಜುಲೈ ೯ ರಂದು ಮುಂಜಾನೆ ಅಮೆರಿಕಾದ ಸೈನ್ಯವು ಇರಾನ್‌ ನ ಆಗ್ನೇಯ ಭಾಗದಲ್ಲಿರುವ ಅತ್ಯಂತ ಆಯಕಟ್ಟಿನ ಚಾಬಹಾರ್ ಬಂದರಿನ ಮೇಲೆ ಕ್ಷಿಪಣಿಗಳ ಮೂಲಕ ಭೀಕರ ದಾಳಿ ನಡೆಸಿದೆ. ಉಭಯ ದೇಶಗಳು ಸತತ ಎರಡನೇ ದಿನವೂ ಪರಸ್ಪರರ ಮೇಲೆ ದಾಳಿಗಳನ್ನು ಮುಂದುವರಿಸಿದ್ದು, ಇದರಿಂದಾಗಿ ಕೊಲ್ಲಿ ಪ್ರದೇಶದಲ್ಲಿ ಮತ್ತೊಮ್ಮೆ ಮಹಾಯುದ್ಧ ಭುಗಿಲೇಳುವ ಲಕ್ಷಣಗಳು ಗೋಚರಿಸುತ್ತಿವೆ.

ಇರಾನ್‌ ನ ಮಾಧ್ಯಮಗಳು ನೀಡಿರುವ ಮಾಹಿತಿಯ ಪ್ರಕಾರ, ಚಾಬಹಾರ್ ನಗರದಲ್ಲಿ ಜುಲೈ ೯ ರಂದು ಸರಣಿ ಸ್ಫೋಟಗಳು ಸಂಭವಿಸಿವೆ. ಈ ದಾಳಿಗಳ ನಂತರ ಇಡೀ ನಗರದ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ದಾಳಿಯ ಬೆನ್ನಲ್ಲೇ ಸ್ಥಳೀಯ ತುರ್ತು ಸೇವೆಗಳು ಮತ್ತು ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿವೆ.

ಇರಾನ್‌ ನ ಶಕ್ತಿಯನ್ನು ನಾಶಮಾಡಲು ದಾಳಿ ! – ಅಮೆರಿಕಾ

ಅಮೆರಿಕಾ ಸೈನ್ಯವು ನೀಡಿರುವ ಮಾಹಿತಿಯ ಪ್ರಕಾರ, ಅಮೆರಿಕಾದ ಪಡೆಗಳು ಇರಾನ್‌ ನ ೯೦ ಸೈನಿಕ ಮತ್ತು ಕಡಲ ನೆಲೆಗಳನ್ನು ಅತ್ಯಂತ ನಿಖರವಾಗಿ ಗುರಿಯಾಗಿಸಿಕೊಂಡು ದಾಳಿ ನಡೆಸಿವೆ. ಹಾರ್ಮುಜ್ ಜಲಸಂಧಿಯಲ್ಲಿ ಅಂತರರಾಷ್ಟ್ರೀಯ ನೌಕೆಗಳ ಸಂಚಾರಕ್ಕೆ ಅಡ್ಡಿಪಡಿಸುವ ಇರಾನ್‌ ನ ಸಾಮರ್ಥ್ಯವನ್ನು ಸಂಪೂರ್ಣವಾಗಿ ನಾಶಮಾಡಲು ಅಮೆರಿಕಾ ಈ ದಾಳಿಯನ್ನು ಮಾಡಿದೆ ಎಂದು ಹೇಳಿದೆ. ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಂಚರಿಸುವ ವಾಣಿಜ್ಯ ನೌಕೆಗಳು ಮತ್ತು ನಿರಪರಾಧಿ ಸಿಬ್ಬಂದಿಗಳ ಮೇಲೆ ನಡೆದ ದಾಳಿಗೆ ಇರಾನ್ ನೇರ ಹೊಣೆಯಾಗಿದೆ ಎಂದು ಅಮೆರಿಕಾ ಆರೋಪಿಸಿದೆ.

ವಿವಾದದ ಕಿಡಿ ಹೊತ್ತಿಕೊಂಡಿದ್ದು ಹೇಗೆ?

ಜುಲೈ ೭ ರಂದು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುತ್ತಿದ್ದ ೩ ವಾಣಿಜ್ಯ ನೌಕೆಗಳ ಮೇಲೆ ಅಪರಿಚಿತರು ದಾಳಿ ನಡೆಸಿದ್ದರು. ಈ ದಾಳಿಯ ಹಿಂದೆ ಇರಾನ್ ಕೈವಾಡವಿದೆ ಎಂದು ಅಮೆರಿಕಾ ನೇರವಾಗಿ ಆರೋಪಿಸಿತ್ತು. ಇದಕ್ಕೆ ಪ್ರತೀಕಾರವಾಗಿ ಅಮೆರಿಕಾ ಈಗ ಇರಾನ್ ಮೇಲೆ ಸೈನಿಕ ಕಾರ್ಯಾಚರಣೆ ನಡೆಸಿದೆ. ಇದರಿಂದ ತೀವ್ರ ಆಕ್ರೋಶಗೊಂಡಿರುವ ಇರಾನ್, ಕುವೈತ್, ಬಹ್ರೇನ್ ಮುಂತಾದ ದೇಶಗಳಲ್ಲಿರುವ ಅಮೆರಿಕಾದ ಸೈನಿಕ ನೆಲೆಗಳ ಮೇಲೆ ದಾಳಿ ನಡೆಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಟ್ರಂಪ್ ಅವರು, ‘ಇರಾನ್‌ ನ ಪ್ರತಿಯೊಂದು ದಾಳಿಗೆ ಪ್ರತಿಯಾಗಿ ನಾವು ೨೦ ದಾಳಿಗಳನ್ನು ನಡೆಸಿ ತಕ್ಕ ಪ್ರತ್ಯುತ್ತರ ನೀಡಲಿದ್ದೇವೆ’, ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.

ಭಾರತಕ್ಕೆ ತಟ್ಟಲಿರುವ ಭಾರಿ ಪೆಟ್ಟು!

ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿರುವ ಚಾಬಹಾರ್ ಬಂದರನ್ನು ಅಭಿವೃದ್ಧಿಪಡಿಸಲು ಮತ್ತು ನಿರ್ವಹಿಸಲು ಭಾರತವು ಇರಾನ್‌ ನೊಂದಿಗೆ ೧೦ ವರ್ಷಗಳ ಒಪ್ಪಂದವನ್ನು ಮಾಡಿಕೊಂಡಿದೆ. ಇದು ಸುಮಾರು ೪ ಸಾವಿರದ ೨೦೦ ಕೋಟಿ ರೂಪಾಯಿಗಳ ಬೃಹತ್ ಯೋಜನೆಯಾಗಿದೆ. ಒಂದು ವೇಳೆ ಈ ಆಕ್ರಮಣದಿಂದ ಚಾಬಹಾರ್ ಬಂದರಿಗೆ ದೊಡ್ಡ ಮಟ್ಟದ ಹಾನಿಯಾದರೆ, ಅದರಿಂದ ಭಾರತಕ್ಕೆ ಭಾರಿ ಪೆಟ್ಟು ಬೀಳಲಿದೆ.