ಚೀನಾ: ಮೋದಿ ಮತ್ತು ಪುಟಿನ್ 45 ನಿಮಿಷಗಳ ಕಾಲ ಕಾರಿನಲ್ಲಿ ರಹಸ್ಯ ಮಾತುಕತೆ!

ಡಾಲರ್ ಅವಲಂಬನೆ ಕಡಿಮೆ ಮಾಡಲು ಉಭಯ ರಾಷ್ಟ್ರಗಳ ಬಹಿರಂಗ ಒಪ್ಪಿಗೆ!

ತಿಯಾನಜಿನ್ (ಚೀನಾ) – ಇಲ್ಲಿ ನಡೆಯುತ್ತಿರುವ ಎರಡು ದಿನಗಳ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ನಂತರ, ಭಾರತ-ರಷ್ಯಾ ದ್ವಿಪಕ್ಷೀಯ ಮಾತುಕತೆ ಆಯೋಜಿಸಲಾಗಿತ್ತು. ಇದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಒಂದೇ ಕಾರಿನಲ್ಲಿ ಹೊರಟರು. ಈ ಚಿತ್ರ ಜಗತ್ತಿನ ಗಮನ ಸೆಳೆದಿದೆ. ಇದಕ್ಕೆ ಕಾರಣ, ಭಾರತವು ರಷ್ಯಾದಿಂದ ತೈಲ ಖರೀದಿಸಿದ ಕಾರಣ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇ. 50%ರಷ್ಟು ಆಮದು ಸುಂಕ ವಿಧಿಸಿದ್ದಾರೆ. ಪ್ರಸಾರ ಮಾಧ್ಯಮಗಳಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, ಮೋದಿ ಮತ್ತು ಪುಟಿನ್ ಕಾರಿನಲ್ಲಿ ಕುಳಿತು ಸುಮಾರು 45 ನಿಮಿಷಗಳ ಕಾಲ ಗೌಪ್ಯ ಮಾತುಕತೆ ನಡೆಸಿದ್ದಾರೆ. ಕಾರಿನಲ್ಲಿ ನಡೆದ ಈ ಚರ್ಚೆಯ ಚಿತ್ರವನ್ನು ಸ್ವತಃ ಮೋದಿ ಅವರು ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿದ್ದಾರೆ.
ಒಂದು ಅಂತರಾಷ್ಟ್ರೀಯ ಮಾಧ್ಯಮದ ಪ್ರಕಾರ, ಪುಟಿನ್ ಅವರು ಪ್ರಧಾನಿ ಮೋದಿ ಅವರ ಆಗಮನಕ್ಕಾಗಿ ಸುಮಾರು 10 ನಿಮಿಷಗಳ ಕಾಲ ಕಾಯುತ್ತಿದ್ದರು. ನಿಗದಿತ ಸ್ಥಳ ತಲುಪಿದ ನಂತರವೂ ಅವರು ಬಹಳ ಸಮಯದವರೆಗೆ ಕಾರಿನಲ್ಲಿ ಮಾತನಾಡುತ್ತಿದ್ದರು. ಈ ನಡೆಯ ಮೂಲಕ, ಇಬ್ಬರೂ ನಾಯಕರು ಟ್ರಂಪ್‌ಗೆ ಸ್ಪಷ್ಟ ಮತ್ತು ಕಠಿಣ ಸಂದೇಶ ನೀಡಿದ್ದಾರೆ.

ಭಾರತ ಮತ್ತು ಚೀನಾ ನಡುವಿನ ಹೆಚ್ಚುತ್ತಿರುವ ಬಾಂಧವ್ಯದ ಪ್ರಯತ್ನಗಳನ್ನು ಪುಟಿನ್ ಬಹಿರಂಗವಾಗಿ ಶ್ಲಾಘಿಸಿದರು!

1. ಕಾರಿನೊಳಗಿನ ಸಂಭಾಷಣೆಯ ಹೊರತಾಗಿ, ಮೋದಿ ಮತ್ತು ಪುಟಿನ್ ನಡುವೆ ದ್ವಿಪಕ್ಷೀಯ ಸಭೆಯೂ ನಡೆಯಿತು.

2. ಇದರಲ್ಲಿ ಉಭಯ ರಾಷ್ಟ್ರಗಳು ವ್ಯಾಪಾರ, ರಸಗೊಬ್ಬರ, ಇಂಧನ, ಸಂಸ್ಕೃತಿ ಮತ್ತು ರಕ್ಷಣಾ ಸಹಕಾರವನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಿದವು. ವಿಶೇಷವಾಗಿ, ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ರೂಪಾಯಿ-ರೂಬಲ್ ವ್ಯಾಪಾರ ವ್ಯವಸ್ಥೆಯನ್ನು ಸರಳೀಕರಿಸುವಂತೆ ಒಪ್ಪಿಗೆ ಸೂಚಿಸಲಾಯಿತು.

3. ಪುಟಿನ್ ಅವರು ಈ ಸಂದರ್ಭದಲ್ಲಿ, ಉಕ್ರೇನ್ ಯುದ್ಧದಂತಹ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಭಾರತ ಮತ್ತು ಚೀನಾದಂತಹ ಏಷ್ಯಾದ ದೇಶಗಳು ಪ್ರಮುಖ ಪಾತ್ರ ವಹಿಸಬಹುದು ಎಂದು ಹೇಳಿದರು. ಭಾರತ ಮತ್ತು ಚೀನಾ ನಡುವಿನ ಸ್ನೇಹ ಹೆಚ್ಚಿಸಲು ನಡೆಯುತ್ತಿರುವ ಪ್ರಯತ್ನಗಳನ್ನು ಅವರು ಬಹಿರಂಗವಾಗಿ ಶ್ಲಾಘಿಸಿದರು.

4. ಪ್ರಧಾನಿ ಮೋದಿ ಅವರು ‘ಎಕ್ಸ್’ ನಲ್ಲಿನ ಪೋಸ್ಟ್‌ ಮಾಡಿ ಈ ಸಭೆಯ ಬಗ್ಗೆ ಹೀಗೆ ಹೇಳಿದ್ದಾರೆ: “ನಾವು ಸ್ಥಳೀಯ ಮತ್ತು ಜಾಗತಿಕ ಸಮಸ್ಯೆಗಳ ಬಗ್ಗೆ ವಿಚಾರಗಳನ್ನು ವಿನಿಮಯ ಮಾಡಿಕೊಂಡೆವು. ಇದರಲ್ಲಿ ಉಕ್ರೇನ್‌ ನಲ್ಲಿನ ಸಮಸ್ಯೆಗೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ ಬಗ್ಗೆಯೂ ಗಮನಹರಿಸಲಾಯಿತು. ನಮ್ಮ ಕಾರ್ಯತಂತ್ರದ ಮತ್ತು ವಿಶೇಷ ಪಾಲುದಾರಿಕೆಯು ಸ್ಥಳೀಯ ಮತ್ತು ಜಾಗತಿಕ ಸ್ಥಿರತೆಗೆ ಅತ್ಯಂತ ಅವಶ್ಯಕವಾಗಿದೆ.”

ರಷ್ಯಾ-ಭಾರತ-ಚೀನಾ (‘ರಿಚ್’ ರಾಷ್ಟ್ರಗಳು) ಮುಖ್ಯಸ್ಥರ ಸೌಹಾರ್ದಯುತ ಭೇಟಿಯ ಚಿತ್ರಗಳು ಜಾಗತಿಕ ಚರ್ಚೆಯ ವಿಷಯವಾಗಿವೆ!

ಅಮೇರಿಕಾ ಭಾರತದ ಮೇಲೆ ಹೇರಿರುವ ಆಮದು ಸುಂಕದ ಬಿಕ್ಕಟ್ಟು ಮತ್ತು ಉಕ್ರೇನ್ ಯುದ್ಧದಿಂದಾಗಿ ರಷ್ಯಾದ ಮೇಲಿನ ಒತ್ತಡವನ್ನು ಗಮನಿಸಿದರೆ, ಈ ವರ್ಷದ ‘ಶಾಂಘೈ ಸಹಕಾರ ಸಂಘಟನೆ’ಯ ಶೃಂಗಸಭೆಯು ಒಂದು ಪ್ರಮುಖ ವಿಷಯದಿಂದ ಗಮನ ಸೆಳೆದಿದೆ. ರಷ್ಯಾ, ಭಾರತ ಮತ್ತು ಚೀನಾ (ಇವುಗಳನ್ನು ‘ರಿಚ್’ ರಾಷ್ಟ್ರಗಳು ಎಂದು ಕರೆಯಲಾಗಿದೆ) ದೇಶಗಳ ಮುಖ್ಯಸ್ಥರ ಸೌಹಾರ್ದಯುತ ಭೇಟಿಯ ಚಿತ್ರಗಳು! ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಆ ಚಿತ್ರಗಳನ್ನು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಚಿತ್ರಗಳಲ್ಲಿ ಮೋದಿ, ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಬಹಳ ಆತ್ಮೀಯವಾಗಿ ಪರಸ್ಪರ ಮಾತನಾಡುತ್ತಿರುವುದು ಮತ್ತು ತಮಾಷೆ ಮಾಡುತ್ತಿರುವುದು ಕಂಡುಬರುತ್ತದೆ.

ಈ ಎಲ್ಲದರ ನಡುವೆ, ಸಂಘಟನೆಯ ಸದಸ್ಯ ರಾಷ್ಟ್ರವಾದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಈ ಚಟುವಟಿಕೆಗಳಿಂದ ಏಕಾಂಗಿಯಾಗಿ ಉಳಿದಿರುವುದು ಗಮನಕ್ಕೆ ಬಂದಿದೆ. ಒಂದು ಸಂದರ್ಭದಲ್ಲಿ ಮೋದಿ ಮತ್ತು ಪುಟಿನ್ ಇಬ್ಬರೂ ಮಾತನಾಡುತ್ತಾ ಹೋಗುತ್ತಿದ್ದಾಗ ಷರೀಫ್ ತಮ್ಮ ಕಣ್ಣಂಚಿನಿಂದ ಅವರನ್ನು ನೋಡುತ್ತಿರುವುದು ಕಂಡುಬಂದಿದೆ. ಈ ಎಲ್ಲಾ ವಿಷಯಗಳು ಅಮೇರಿಕಾ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡುತ್ತವೆ ಎಂದೂ ಸಹ ಹೇಳಲಾಗುತ್ತಿದೆ.