ಪಾಕಿಸ್ತಾನದಲ್ಲಿ ಹಿಂದೂ ಯುವತಿಯರ ಬಲವಂತದ ಮತಾಂತರದ ಸಮಸ್ಯೆ ಈಗ ಕಿರುಚಿತ್ರದಲ್ಲಿ! : Rinkle Ki Pukar

‘ರಿಂಕಲ್ ಕೀ ಪುಕಾರ್’ ಕಿರುಚಿತ್ರ ‘ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ’ದ ಕಿರುಚಿತ್ರ ಸ್ಪರ್ಧೆಗೆ ನೋಂದಣಿ!

ಕಿರುಚಿತ್ರದ ಪೋಸ್ಟರ್ ಮತ್ತು ಕಿರುಚಿತ್ರದ ನಿರ್ಮಾಪಕ ಶ್ರೀ ಮಹೇಶ್ ವಾಸು

ನವದೆಹಲಿ – ಪಾಕಿಸ್ತಾನದಲ್ಲಿ ಹಿಂದೂ ಹೆಣ್ಣು ಮಕ್ಕಳ ಅಪಹರಣ, ಬಲವಂತದ ಮತಾಂತರ ಮತ್ತು ಮದುವೆಗಳಂತಹ ಘಟನೆಗಳ ಸಮಸ್ಯೆಯನ್ನು ಬಹಿರಂಗ ಪಡಿಸುವ ‘ರಿಂಕಲ್ ಕೀ ಪುಕಾರ್’ ಹೆಸರಿನ 10 ನಿಮಿಷಗಳ ಕಿರುಚಿತ್ರವನ್ನು ನಿರ್ಮಿಸಲಾಗಿದೆ. ಇದನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ 2025ರ ‘ಕಿರುಚಿತ್ರ ಸ್ಪರ್ಧೆ’ಗೆ ನೋಂದಾಯಿಸಲಾಗಿದೆ. ಈ ಚಲನಚಿತ್ರವು 24 ಫೆಬ್ರವರಿ 2012ರಂದು ಪಾಕಿಸ್ತಾನದಲ್ಲಿ ನಡೆದ ರಿಂಕಲ್ ಕುಮಾರಿ ಎಂಬ ಹಿಂದೂ ಯುವತಿಯ ಅಪಹರಣ ಮತ್ತು ಬಲವಂತದ ಮತಾಂತರದ ನೈಜ ಘಟನೆಯನ್ನು ಆಧರಿಸಿದೆ. ಆಕೆಯ ಮೇಲೆ ಬಲಾತ್ಕಾರ ಮಾಡಿ, ಅವಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ, ಆಕೆಯ ಮದುವೆಯನ್ನು ಪೀರ್ ಅಬ್ದುಲ್ ಹಕ್ ಉರ್ಫ ಮಿಯಾಂ ಮಿಠ್ಠು ಹೆಸರಿನ ಕುಖ್ಯಾತ ರೌಡಿ ಜೊತೆ ಮಾಡಿಸಲಾಗಿತ್ತು. ಪಾಕಿಸ್ತಾನದ ಹಿಂದೂಗಳ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿರುವ ಕಾನೂನು ಸಲಹೆಗಾರ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಶ್ರೀ. ಮಹೇಶ ವಾಸು ಅವರು ಈ ಕಿರುಚಿತ್ರವನ್ನು ನಿರ್ಮಿಸಿದ್ದಾರೆ ಎಂದು ‘ಸನಾತನ ಪ್ರಭಾತ’ಕ್ಕೆ ತಿಳಿಸಿದ್ದಾರೆ.

13 ವರ್ಷಗಳ ಹಿಂದೆ ಏನು ನಡೆದಿತ್ತು?

24 ಫೆಬ್ರವರಿ 2012ರಂದು ಪಾಕಿಸ್ತಾನದ ಮಿಯಾ ಮಿಠ್ಠು ಇವನು ರಿಂಕಲ್‌ ಳನ್ನು ಅಪಹರಿಸಿ ಬಲವಂತವಾಗಿ ಮತಾಂತರಿಸಿದನು. ಈ ಘಟನೆಯಿಂದಾಗಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹಿಂದೂಗಳು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿದರು. ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯವು ಸ್ವತಃ ಈ ವಿಷಯವನ್ನು ದಾಖಲಿಸಿಕೊಂಡಿತ್ತು. ಈ ಘಟನೆ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಸುದ್ದಿಯಾಗಿತ್ತು. ಈ ಎಲ್ಲ ಘಟನೆಗಳಿಂದ, ‘ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ಪ್ರತಿದಿನ ದೌರ್ಜನ್ಯ ನಡೆಯುತ್ತಲೇ ಇದೆ, ಆದರೆ ಅಲ್ಲಿ ಈ ದೌರ್ಜನ್ಯಗಳನ್ನು ಅಪರಾಧವೆಂದು ಪರಿಗಣಿಸುವುದಿಲ್ಲ’ ಎಂಬುದು ಜಗತ್ತಿಗೆ ತಿಳಿಯಿತು. ಈ ಅಪರಾಧದಲ್ಲಿ ಮುಖ್ಯ ಆರೋಪಿ ಮಿಯಾ ಮಿಠ್ಠು ಒಬ್ಬ ಮತಾಂತರ ಕೇಂದ್ರದ ಮುಖ್ಯಸ್ಥನಾಗಿದ್ದು, ಅವನ ವಿರುದ್ಧ ಭಯೋತ್ಪಾದನಾ ಚಟುವಟಿಕೆಗಳ ಗಂಭೀರ ಸ್ವರೂಪದ ಅಪರಾಧಗಳು ದಾಖಲಾಗಿವೆ. ಡಿಸೆಂಬರ್ 9, 2022 ರಂದು ಬ್ರಿಟನ್ ಸರಕಾರವು ಅವನ ಮೇಲೆ ಅಂತರರಾಷ್ಟ್ರೀಯ ನಿರ್ಬಂಧಗಳನ್ನು ಹೇರಿತ್ತು. ಈ ಘಟನೆ ಬೆಳಕಿಗೆ ಬಂದ ನಂತರ 2014ರಲ್ಲಿ ‘ಹ್ಯೂಮನ್ ರೈಟ್ಸ್ ಕಮಿಷನ್ ಆಫ್ ಪಾಕಿಸ್ತಾನ್’ ತನ್ನ ವರದಿಯಲ್ಲಿ, ‘ಪ್ರತಿ ವರ್ಷ ಸುಮಾರು 1000 ಹಿಂದೂ ಯುವತಿಯರನ್ನು ಅಪಹರಿಸಿ ಬಲವಂತವಾಗಿ ಮತಾಂತರಿಸಲಾಗುತ್ತದೆ’ ಎಂದು ಒಪ್ಪಿಕೊಂಡಿದೆ.

‘ರಿಂಕಲ್ ಕೀ ಪುಕಾರ್’ ಕಿರುಚಿತ್ರದಲ್ಲಿ ಏನಿದೆ?

ಈ ಕಿರುಚಿತ್ರದಲ್ಲಿ ಪಾಕಿಸ್ತಾನದ ರಿಂಕಲ್ ಕುಮಾರಿಯ ಅಪಹರಣ, ಪೊಲೀಸ್ ಠಾಣೆಯಲ್ಲಿ ದೂರು, ಹಾಗೆಯೇ ಅಲ್ಲಿನ ಜಿಲ್ಲಾ, ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳಲ್ಲಿ ನಡೆದ ವಿಚಾರಣೆಗಳು, ರಿಂಕಲ್‌ ಳನ್ನು ಆಶ್ರಯ ಗೃಹಕ್ಕೆ ಕಳುಹಿಸುವುದು ಇತ್ಯಾದಿಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಈ ಕಿರುಚಿತ್ರದ ಸಂಶೋಧನೆ, ಚಿತ್ರಕಥೆ ರಚನೆ ಮತ್ತು ಸಹ-ನಿರ್ಮಾಣವನ್ನು ಮಹೇಶ ವಾಸು ಮಾಡಿದ್ದಾರೆ.

 

ಸಂಪಾದಕೀಯ ನಿಲುವು

ಪಾಕಿಸ್ತಾನದ ಸಂತ್ರಸ್ತ ಹಿಂದೂಗಳ ಸಹಾಯಕ್ಕೆ ಭಾರತವು ದೃಢ ಹೆಜ್ಜೆಗಳನ್ನು ಇಡುವುದು ಅವಶ್ಯಕವಾಗಿದೆ. ಇಲ್ಲವಾದರೆ ಇಂದು ಅಲ್ಲಿನ ಹಿಂದೂಗಳಿಗೆ ಏನಾಗಿದೆಯೋ, ಅದು ನಾಳೆ ಭಾರತದ ಹಿಂದೂಗಳಿಗೂ ಆದರೂ ಆಶ್ಚರ್ಯಪಡಬೇಕಾಗಿಲ್ಲ! ಇದು ಆಗಬಾರದು ಎಂದಾದರೆ, ಹಿಂದೂ ರಾಷ್ಟ್ರದ ಸ್ಥಾಪನೆ ಅನಿವಾರ್ಯವಾಗಿದೆ!