ಋಷಿಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನ !

ಆಗಸ್ಟ್ ೨೮ ರಂದು ಇರುವ ‘ಋಷಿಪಂಚಮಿ’ಯ ನಿಮಿತ್ತ…

‘ಶ್ರೀ ಗಣೇಶಚತುರ್ಥಿಯ ನಂತರ ಕೂಡಲೇ ಋಷಿಪಂಚಮಿ ಬರುತ್ತದೆ. ಇದು ಋಷಿಗಳನ್ನು ಸ್ಮರಿಸುತ್ತಾ ಅವರ ಹಾಗೆಯೆ ಆಹಾರ ಮಾಡುವ ದಿನ. ಆ ದಿನ ಎತ್ತುಗಳ ಶ್ರಮದಿಂದ ಉತ್ಪಾದಿಸಿದ ಆಹಾರವನ್ನು ಸೇವಿಸಬಾರದು. ಕೃಷಿಗೆ ಎತ್ತುಗಳನ್ನು ಉಪ ಯೋಗಿಸಲು ಆರಂಭಿಸುವ ಮೊದಲೂ ಕೃಷಿ ಮಾಡ ಲಾಗುತ್ತಿತ್ತು. ಹಿಂದಿನ ಕಾಲದಲ್ಲಿ ಋಷಿಮುನಿಗಳು ನಗರಗಳಿಂದ ದೂರವಿದ್ದು ವಿವಿಧ ಪ್ರಕಾರದ ಅಧ್ಯಯನ ಮಾಡುತ್ತಿದ್ದರು. ಅವರಲ್ಲಿ ಅನೇಕರಿಗೆ ಮನೆಮಠ, ಮಕ್ಕಳು-ಮರಿ ಹಾಗೂ ಸಂಸಾರ ಇರುತ್ತಿರಲಿಲ್ಲ. ಆದ್ದರಿಂದ ಅವರು ಆಹಾರಕ್ಕಾಗಿ ವಿವಿಧ ಪ್ರಕಾರದ ಅನ್ನಪದಾರ್ಥಗಳನ್ನು ಹುಡುಕು ತ್ತಿದ್ದರು. ಋಷಿಮುನಿಗಳು ಕಂಡುಹಿಡಿದ ವನಸ್ಪತಿ ಗಳ ಜ್ಞಾನವನ್ನು ನಮಗೆ ನೀಡಿದರು. ಈಗ ನಮಗೆ ಅವರ ಈ ಜ್ಞಾನ ಉಪಯೋಗವಾಗುತ್ತಿದೆ. ಋಷಿಗಳು ಸಮಾಜಕ್ಕಾಗಿ ಮಾಡಿದ ಶ್ರೇಷ್ಠ ಕಾರ್ಯಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸುವ ದಿನವೆಂದರೆ, ಋಷಿಪಂಚಮಿ !

ಋಷಿಗಳ ಉಪಾಸನೆ ಮಾಡ ಲಿಕ್ಕಿದ್ದರೆ, ಸ್ವಲ್ಪಮಟ್ಟಿಗಾದರೂ ಅವರ ಆಚರಣೆಯನ್ನು ಅನುಸರಿಸಬೇಕಾಗುತ್ತದೆ. ಋಷಿಮುನಿಗಳು ತಾವೇ ಶ್ರಮಪಟ್ಟು ಬೆಳೆಸಿದ ಗೆಡ್ಡೆಗೆಣಸು ಗಳಿಂದ ಜೀವನ ನಡೆಸುತ್ತಿದ್ದರು. ನಾವು ಅದನ್ನು ಒಂದು ದಿನವಾದರೂ ಆಚರಿಸಲು ಅಡಚಣೆಯೇನಿದೆ. ಇದರಿಂದ ನಿಸರ್ಗದೊಂದಿಗೆ ನಮ್ಮ ಸಂಬಂಧ ಜೋಡಿಸಲ್ಪಡುತ್ತದೆ, ಎನ್ನುವ ಉದಾರ ಉದ್ದೇಶವಿದೆ. ಇಂದು ನಾವು ಋಷಿಗಳ ಸ್ಮರಣೆ ಮಾಡಿ ಸಮಾಜದಲ್ಲಿ ಋಷಿತುಲ್ಯ ಜೀವನ ನಡೆಸುವ ವ್ಯಕ್ತಿಗಳ ಸತ್ಕಾರ ಮಾಡಬೇಕು. ಅವರು ಗಳಿಸಿದ ಜ್ಞಾನದ ಲಾಭ ಪಡೆಯಬೇಕು. ಜೀವನದ ನಿಜವಾದ ಉದ್ದೇಶವನ್ನು ತಿಳಿದುಕೊಳ್ಳಬೇಕು. ಸಮಾಜದ ನೈತಿಕ ಹಾಗೂ ಆಧ್ಯಾತ್ಮಿಕ ಉನ್ನತಿಗಾಗಿ ಪ್ರಯತ್ನಿಸಬೇಕು. ಈ ರೀತಿ ಋಷಿಪಂಚಮಿಯನ್ನು ಅರ್ಥಮಾಡಿಕೊಂಡು ಆಚರಿಸಬೇಕು.

೧. ಋಷಿಪಂಚಮಿ ವ್ರತದ ಆಹಾರ

ಆದಷ್ಟು ಕಚ್ಚಾ ತರಕಾರಿಗಳಿರಬೇಕು. ಅದರಲ್ಲಿ ಉಪ್ಪನ್ನು ಉಪಯೋಗಿಸಬಾರದು ನೈಸರ್ಗಿಕ ಹಾಗೂ ಶುದ್ಧ ಸಾತ್ತ್ವಿಕ ಆಹಾರವನ್ನು ಸೇವಿಸ ಬೇಕು. ನಿಸರ್ಗದ ಪ್ರಸಾದದ ತಿಂಡಿತಿನಸು ಗಳನ್ನು ಮಾಡುವುದು. ಕಪ್ಪುಪ್ಪು; ಆದರೆ ಅದಕ್ಕೆ ಯಾವುದೇ ಪ್ರಕ್ರಿಯೆ ಮಾಡಿರಬಾರದು, ಹೀಗೆ ರೂಢಿಯಿದೆ. ಕೀಟನಾಶಕ ಹಾಗೂ ಬುರುಸುನಾಶಕ ಉಪಯೋಗಿಸಿದ ಹಾಯಬ್ರಿಡ್‌ ಸೊಪ್ಪುತರಕಾರಿ ಮತ್ತು ಹಣ್ಣುಗಳು ಬೇಡ.

೨. ವ್ರತವನ್ನು ಹೇಗೆ ಮಾಡಬೇಕು ?

ಭಾದ್ರಪದ ಶುಕ್ಲ ಪಂಚಮಿಯಂದು ರಜಸ್ವಲೆಯನ್ನು ಸ್ಪರ್ಶಿಸಿದ ದೋಷವನ್ನು ದೂರ ಗೊಳಿಸಲು ಹಾಗೂ ಈ ‘ನೈವಸ್ತನ ಮನ್ವಂತರ’ ದಲ್ಲಿನ ಸಪ್ತರ್ಷಿ ಕಶ್ಯಪ, ಅತ್ರೀ, ಭಾರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ವಶಿಷ್ಠ ಹಾಗೂ ಅವರ ಪತ್ನಿ ಆರುಂಧತಿ ಈ ೮ ಜನರ ಪೂಜೆಯನ್ನು ಈ ದಿನ ಮಾಡಲಾಗುತ್ತದೆ. ಈ ವ್ರತವನ್ನು ಕೇವಲ ಸ್ತ್ರಿಯರೇ ಮಾಡಬೇಕು’, ಎನ್ನುವ ತಪ್ಪು ಅಭಿಪ್ರಾಯವಿದೆ. ಈ ವ್ರತವನ್ನು ಎಲ್ಲರೂ ಮಾಡಬಹುದು. ‘ಋಷಿಮುನಿಗಳು ಏನೆಲ್ಲ ನಿಯಮಗಳನ್ನು ಹೇಳಿದ್ದಾರೆಯೋ, ಅವು ನಮ್ಮ ಒಳಿತಿಗಾಗಿಯೆ ಇವೆ’, ಎಂದು ಋಷಿಗಳನ್ನು ಅಂತಃಕರಣಪೂರ್ವಕ ಸ್ಮರಿಸಿ ಮುಂದಿನ ಶ್ಲೋಕವನ್ನು ಹೇಳಬೇಕು.

ನಮೋಸ್ತು ಋಷಿವೃನ್ದೇಭ್ಯೋ ದೇವರ್ಷಿಭ್ಯೋ ನಮೋ ನಮಃ |
ಸರ್ವಪಾಪಹರೇಭ್ಯೋ ಹಿ ವೇದವಿದ್‌ಭ್ಯೋ ನಮೋ ನಮಃ ||

ಅರ್ಥ : ಎಲ್ಲ ಪಾಪಹರಣ ಮಾಡುವ ಹಾಗೂ ವೇದವಿದ್ಯೆಗಳನ್ನು ತಿಳಿದಿರುವ ಎಲ್ಲ ಋಷಿವರ್ಯರು ಮತ್ತು ದೇವರ್ಷಿಗಳಿಗೆ ನಮಸ್ಕರಿಸುತ್ತೇನೆ.

ಕಶ್ಯಪೋತ್ರಿರ್ಭರದ್ವಾಜೋ ವಿಶ್ವಾಮಿತ್ರಸ್ತು ಗೌತಮಃ |
ಜಮದಗ್ನಿರ್ವಸಿಷ್ಠಶ್ಚ ಸಪ್ತೈತೆ ಋಷಯಃ ಸ್ಮೃತಾಃ ||

ಅರ್ಥ : ಕಶ್ಯಪ, ಅತ್ರಿ, ಭಾರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ ಹಾಗೂ ವಶಿಷ್ಠ ಇವರನ್ನು ಸಪ್ತರ್ಷಿಗಳೆಂದು ಪರಿಗಣಿಸಲಾಗುತ್ತದೆ. ಈ ವ್ರತದಂದು ಆಯುರ್ವೇದದ ದಂತಮಂಜನ ಉಪಯೋಗಿಸಬೇಕು. ತಣ್ಣೀರಿನಿಂದ ಸ್ನಾನ ಮಾಡಬೇಕು. ಒಂದು ಮಣೆಯ ಮೇಲೆ ೯ ಅಡಿಕೆಗಳನ್ನಿಟ್ಟು ಪೂಜೆ ಮಾಡಬೇಕು. ತಮ್ಮ ಗೋತ್ರಕ್ಕೆ ಸಂಬಂಧಿಸಿದ ಋಷಿಯ ಛಾಯಾಚಿತ್ರ, ಅಥವಾ ಶ್ರೀ ಗುರುದೇವ ದತ್ತಾತ್ರೇಯರ ಚಿತ್ರದ ಪೂಜೆಯನ್ನು ಮಾಡಬೇಕು. ಗಣಪತಿ ಉತ್ಸವ ಇರುವುದರಿಂದ, ‘ಶ್ರೀ ಗಣೇಶ ಪುರಾಣ’ ಓದಬೇಕು. ಉಳದಿರುವ ಭೂಮಿಯಲ್ಲಿ ಬೆಳೆದ ಧಾನ್ಯ, ಗೆಡ್ಡೆ ಗೆಣಸು, ಫಲಗಳನ್ನು ಸೇವಿಸಬೇಕು. ಈ ವಾಸ್ತವವನ್ನು ಆಧರಿಸಿ ‘ಭವಿಷ್ಯ ಪುರಾಣ’ ದಲ್ಲಿ ಋಷಿ ಪಂಚಮಿಯ ರೂಪಕಾತ್ಮಕ ಕಥೆ ಯಿದೆ. ಒಂದು ಕುಟುಂಬದ ಮನೆಯಲ್ಲಿ ಮೈಲಿಗೆ ಯಾಗುವುದರಿಂದ ಪತ್ನಿಗೆ ಶುನಿ (ನಾಯಿ) ಹಾಗೂ ಪತಿಗೆ ವೃಷಭದ (ಎತ್ತು) ಜನ್ಮಸಿಗುತ್ತದೆ. ಅವರ ಮಗ ಈ ಪಾಪದ ಪರಿಹಾರಕ್ಕಾಗಿ ಋಷಿಪಂಚಮಿಯ ವ್ರತ ಮಾಡುವುದರಿಂದ ಅವರಿಗೆ ಸದ್ಗತಿ ಪ್ರಾಪ್ತವಾಗುತ್ತದೆ. ಈ ದಿನ ವಿಡೀ ಉಪವಾಸವಿದ್ದು ವ್ರತಸ್ಥರಾಗಿ ಪರಮೇಶ್ವರ ಹಾಗೂ ಋಷಿ ಗಳ ಚಿಂತನೆಯಲ್ಲಿ ಸಮಯ ಕಳೆಯಬೇಕು. ಹೀಗೆ ಸತತ ೭ ವರ್ಷ ವ್ರತ ಮಾಡಿ ೮ ನೇ ವರ್ಷ ಉದ್ಯಾಪನ ಮಾಡಬೇಕು. ಋಷಿಪಂಚಮಿಯ ಉಪವಾಸ ದಲ್ಲಿ ಗೆಡ್ಡೆಗೆಣಸು, ಕುಂಬಳಕಾಯಿ, ಸೌತೆಕಾಯಿ, ಕೋಸಂಬರಿ, ಕಾಳು ಹಾಗೂ ರಾಗಿಯೂ ನಡೆಯುತ್ತದೆ. ಋಷಿಮುನಿಗಳನ್ನು ಸ್ಮರಿಸಿ ಕೃತಜ್ಞತೆ ವ್ಯಕ್ತಪಡಿಸಬೇಕು. ಸಮಾಜದ ನೈತಿಕ ಆಧ್ಯಾತ್ಮಿಕ ಉನ್ನತಿಗಾಗಿ ಪ್ರಯತ್ನಿಸÀಬೇಕು. ಈ ರೀತಿ ಋಷಿಪಂಚಮಿ ಆಚರಿಸಬೇಕು. ಮೈಲಿಗೆ ನಿವಾರಣೆಯಾಗದ ಸ್ತ್ರೀಯರು ಸಹ ಮೇಲಿನಂತೆ ಉಪವಾಸ ಮಾಡಬಹುದು. ಅಂದರೆ ಮನೆಯಲ್ಲಿ ವರ್ಷವಿಡೀ ಅಪ್ಪಿ- ತಪ್ಪಿ ಮೈಲಿಗೆ ಆಗಿದ್ದರೆ ಆ ಪಾಪದ ಪರಿಮಾರ್ಜನೆಯಾಗುತ್ತದೆ.

೩. ಸಪ್ತರ್ಷಿಗಳ ಮಂತ್ರ

ಯಾರಿಗೆ ಪ್ರತಿಯೊಬ್ಬ ಋಷಿಯ ಬೇರೆಯೆ ಮಂತ್ರವನ್ನು ಹೇಳುವುದಿದೆಯೋ, ಅವರು ಈ ಮುಂದಿನ ಶ್ಲೋಕಗಳನ್ನು ಹೇಳಬಹುದು.

ಅ. ಕಶ್ಯಪ ಋಷಿ :

ಕಶ್ಯಪಃ ಸರ್ವಲೋಕಾದ್ಯಃ ಸರ್ವಭೂತೇಷು ಸಂಸ್ಥಿತಃ |
ನರಾಣಾಂ ಪಾಪನಾಶಾಯ ಋಷಿರೂಪೇಣ ತಿಷ್ಠತಿ || ೧ ||
ಅರ್ಥ : ಎಲ್ಲ ಪ್ರಾಣಿಮಾತ್ರರಲ್ಲಿ ವಾಸಿಸುವ ಕಶ್ಯಪ ಋಷಿಗಳು ಮನುಷ್ಯರ ಪಾಪಗಳನ್ನು ನಾಶಗೊಳಿಸಲು ಋಷಿರೂಪದಲ್ಲಿರುತ್ತಾರೆ.

ಆ. ಅತ್ರಿ ಋಷಿ :

ಅತ್ರೇಯ ಚ ನಮಸ್ತುಭಂ ಸರ್ವಭೂತಹಿತೈಷಿಣೆ |
ತಪೋರೂಪಾಯ ಸತ್ಯಾಯ ಬ್ರಹ್ಮಣೇ ಮಿತತೇಜಸೆ || ೨ ||
ಅರ್ಥ : ಎಲ್ಲ ಭೂತಮಾತ್ರರ ಹಿತ ಇಚ್ಛಿಸವ, ತಪೋರೂಪ, ಸತ್ಯಪ್ರಿಯ, ಬ್ರಹ್ಮರೂಪ ಹಾಗೂ ಅತ್ಯಂತ ತೇಜಸ್ವಿಯಾದ ಅತ್ರಿ ಋಷಿಗೆ ನಮಸ್ಕಾರ

ಇ. ಭಾರದ್ವಾಜ ಋಷಿ :

ಭಾರದ್ವಾಜ ನಮಸ್ತುಭ್ಯಂ ಸದಾ ಧ್ಯಾನಪಾರಾಯಣಃ |
ಮಹಾಜಟಿಲ ಧರ್ಮಾತ್ಮನ್‌ ಪಾಪಂ ಮೆ ಹರ ಸರ್ವದಾ || ೩ ||
ಅರ್ಥ : ನಿತ್ಯ ಧ್ಯಾನಮಗ್ನ, ಮಹಾಜಟಿಲ, ಧರ್ಮಾತ್ಮ ಭಾರದ್ವಾಜ ಋಷಿಗಳಿಗೆ ನಮಸ್ಕಾರ. ನೀವು ನನ್ನ ಪಾಪವನ್ನು ದೂರಗೊಳಿಸಿರಿ.

ಈ. ವಿಶ್ವಾಮಿತ್ರ ಋಷಿ :

ವಿಶ್ವಾಮಿತ್ರ ನಮಸ್ತುಭ್ಯಂ ಜ್ವಲನ್ಮುಖ ಮಹಾವ್ರತ |
ಪ್ರತ್ಯಕ್ಷೀಕೃತಗಾಯತ್ರಿ ತಪೋಪೇಣ ಸಂಸ್ಥಿತಃ || ೪ ||
ಅರ್ಥ : ಅತ್ಯಂತ ತೇಜಸ್ವಿ, ಕಠೋರ ವ್ರತಪಾಲಕ, ತಪರೂಪೀ ಹಾಗೂ ಗಾಯತ್ರಿಮಂತ್ರದ ದೃಷ್ಟಾಂತ ವಿಶ್ವಾಮಿತ್ರ ಋಷಿಗಳಿಗೆ ನಮಸ್ಕಾರ.

ಉ. ಗೌತಮ ಋಷಿ :

ಗೌತಮಃ ಸರ್ವಭೂತಾನಾಂ ಋಷೀಣಾಂ ಚ ಮಹಾಪ್ರಿಯಃ |
ಶ್ರೌತಾನಾಂ ಕರ್ಮಣಾಂ ಚೈವ ಸಮ್ಪ್ರದಾಯಪ್ರವರ್ತಕಃ || ೫ ||
ಅರ್ಥ : ಗೌತಮ ಋಷಿಗಳು ಎಲ್ಲ ಪ್ರಾಣಿಮಾತ್ರರ ಹಾಗೂ ಋಷಿಗಳ ಅತ್ಯಂತ ಪ್ರಿಯ ಋಷಿ, ಹಾಗೂ ಶ್ರೌತಕರ್ಮ ಸಂಪ್ರದಾಯದ ಪ್ರವರ್ತಕರಾಗಿದ್ದರು.

ಊ. ಜಮದಗ್ನಿ ಋಷಿ :

ಜಮದಗ್ನಿರ್ಮಹಾತೇಜಾಸ್ತಪಸಾ ಜ್ವಲಿತಪ್ರಭಃ |
ಲೋಕೇಷು ಸರ್ವಸಿದ್ಧ್ಯರ್ಥ ಸರ್ವಪಾಪನಿವರ್ತಕಃ || ೬ ||

ಅರ್ಥ : ತಮ್ಮ ಶ್ರೇಷ್ಠತಮ ತಪಸ್ಸಿನಿಂದ ತೇಜಸ್ವಿಯಾದ ಜಮದಗ್ನಿ ಋಷಿ ಈ ಜಗತ್ತಿನಲ್ಲಿ ಎಲ್ಲ ಸಿದ್ಧಿಗಳನ್ನು ಪ್ರಾಪ್ತಿ ಮಾಡಿಕೊಡುವ ಹಾಗೂ ಪಾಪವನ್ನು ನಾಶಗೊಳಿಸುವವರಾಗಿದ್ದಾರೆ.

ಎ. ವಸಿಷ್ಠ ಋಷಿ :

ನಮಸ್ತುಭ್ಯಂ ವಸಿಷ್ಠಾಯ ಲೋಕಾಂನಾ ವರದಾಯ ಚ |
ಧರ್ಮರೂಪಾಯ ಸತ್ಯಾಯ ಸೂರ್ಯಾನ್ವಯ ಹಿತೈಷಿಣೆ || ೭ ||

ಅರ್ಥ : ಜನರಿಗೆ ವರ ನೀಡುವ, ಧರ್ಮರೂಪ, ಸತ್ಯರೂಪ ಹಾಗೂ ಸೂರ್ಯವಂಶಿ ರಾಜರ ಹಿತಸಾಧಿಸುವ ವಸಿಷ್ಠ ಋಷಿಗಳಿಗೆ ನಮಸ್ಕಾರ.

ಐ. ಆರುಂಧತಿ ಋಷಿಪತ್ನಿ :

ಆರುಂಧತಿ ನಮಸ್ತುಭ್ಯಂ ಮಹಾಪಾಪಪ್ರಣಾಶಿನಿ |
ಪ್ರತಿವೃತಾನಾಂ ಸರ್ವಾಸಾಂ ಧರ್ಮಶೀಲಪ್ರವರ್ತಕೆ || ೮ ||

ಅರ್ಥ : ಮಹಾಪಾಪಗಳನ್ನು ನಾಶಗೊಳಿಸುವ, ಎಲ್ಲ ಪತಿವ್ರತೆಯರಿಗೆ ಧರ್ಮಾಚರಣೆಗೆ ಉತ್ತೇಜಿಸುವ ದೇವೀ ಆರುಂಧತಿ ನಿಮಗೆ ನಮಸ್ಕಾರವಿರಲಿ. ಈ ಪೂಜೆಯಲ್ಲಿ ಷೋಡಶೋಪಚಾರದಲ್ಲಿ ‘ಆರುಂಧತಿಸಹಿತ ಕಶ್ಯಪಾದಿ ಋಷಿಭ್ಯೋ ನಮಃ | ಸಮರ್ಪಯಾಮಿ |’ ಅಂದರೆ ‘ಆರುಂಧತಿ ಸಹಿತ ಕಶ್ಯಪ ಮುಂತಾದ ಋಷಿಗಳಿಗೆ ನಮಸ್ಕಾರ | ಅವರಿಗೆ ನಾನು (ಉಪಚಾರ) ಅರ್ಪಿಸುತ್ತೇನೆ’, ಎಂದು ಹೇಳಿ ಈ ಪೂಜೆಯನ್ನು ಮುಗಿಸಬೇಕು. ಷೋಡಶೋಪಚಾರಗಳಲ್ಲಿ ನೈವೇದ್ಯವು ಶುದ್ಧ ಫಲಗಳು ಮತ್ತು ಶಾಕಾ ಹಾರವಾಗಿರಬೇಕು. (ಅದಕ್ಕಾಗಿ ಅನೇಕ
ಗೆಡ್ಡೆಗೆಣಸುಗಳನ್ನು ಒಟ್ಟಿಗೆ ಬೇಯಿಸಲಾಗುತ್ತದೆ.)

೪. ವ್ರತದ ಕಾಲಾವಧಿ

ಸಾಮಾನ್ಯವಾಗಿ ಮನೆಯಲ್ಲಿನ ಅಶುಚಿತ್ವ ಉದಕಶಾಂತಿ ಹಾಗೂ ಮನೆಯಲ್ಲಿನ ಜನರ ಅಶುಚಿತ್ವವು ವಿವಿಧ ವ್ರತಗಳಿಂದ ಕಡಿಮೆಯಾಗುತ್ತದೆ. ಇಂತಹ ವ್ರತಗಳಲ್ಲಿ ಋಷಿಪಂಚಮಿ, ಕಾಲಾಷ್ಟಮಿ ಇತ್ಯಾದಿ ವ್ರತಗಳ ಸಮಾವೇಶ ವಾಗುತ್ತದೆ. ರಜಸ್ವಲೆಯ ಕೈಯಲ್ಲಿನ ಅನ್ನ ಗ್ರಹಣ, ಅವಳ ಸ್ಪರ್ಶ ಇತ್ಯಾದಿ ದೋಷ ಪುರುಷರಿಂದಲೂ ಆಗುತ್ತಿದ್ದರೆ ಶಾಸ್ತ್ರಾನುಸಾರ ಪುರುಷರಿಗೂ ಋಷಿಪಂಚಮಿ ಅನಿವಾರ್ಯವಾಗಿದೆ. ಋಷಿಪಂಚಮಿಯು ವೈಯಕ್ತಿಕ ವ್ರತ ಆಗಿರುವುದರಿಂದ ೧೨ ವರ್ಷ ಅಥವಾ ೫೦ ವರ್ಷಗಳ ನಂತರ ಅದನ್ನು ಉದ್ಯಾಪನ ಮಾಡಬೇಕು. ಈ ವ್ರತವನ್ನು ತಾರುಣ್ಯದಲ್ಲಿ ಮಾಡುವುದು ಯೋಗ್ಯವಾಗಿದೆ ಏಕೆಂದರೆ ಅದೇ ಕಾಲದಲ್ಲಿ ಹೆಚ್ಚು ದೋಷಗಳಾಗು ತ್ತವೆ. ಸುಮಾರು ೫೦ ವರ್ಷಗಳ ನಂತರ ಸ್ತ್ರೀಯ ರಜೋನಿವೃತ್ತಿ ಆಗುತ್ತದೆ; ಆದ್ದರಿಂದ ಋಷಿಪಂಚಮಿ ವ್ರತದ್ದೂ ವ್ರತನಿವೃತ್ತಿ ಆಗುವುದು ಯೋಗ್ಯವೆನಿಸುತ್ತದೆ. ಇಚ್ಛೆ ಹಾಗೂ ಅನುಕೂಲವಿದ್ದರೆ ಉದ್ಯಾಪನದ ನಂತರವೂ ಋಷಿಪಂಚಮಿಯ ವ್ರತ ಮಾಡಬಹುದು.’

– ಜ್ಯೋತಿಷ್ಯ ಬ.ವಿ. ತಥಾ ಚಿಂತಾಮಣಿ ದೇಶಪಾಂಡೆ (ಗುರೂಜಿ), ವಾರಜೆ ಪುಣೆ (ಆಧಾರ : ಮಾಸಿಕ ‘ಲಲನಾ’, ಅಗಸ್ಟ್ ೨೦೧೭)