ವ್ಯಾಯಾಮ ಮಾಡಲು ಬೇಸರವಾಗುತ್ತಿದೆಯೇ ? ಹಾಗಿದ್ದರೆ ಇದನ್ನು ಮಾಡಿ !

ಆರೋಗ್ಯಪೂರ್ಣ ಜೀವನಕ್ಕಾಗಿ ವ್ಯಾಯಾಮ – ಭಾಗ ೨೨

ಜಗತ್ತಿನ ಆಧುನಿಕರಣದೊಂದಿಗೆ ಸಂಭವಿಸಿದ ದೈಹಿಕ ಸಮಸ್ಯೆಗಳಿಗೆ ‘ವ್ಯಾಯಾಮ’ವು ಒಂದು ಪರಿಣಾಮಕಾರಿ ಉಪಾಯವಾಗಿದೆ. ಇತ್ತೀಚೆಗೆ ಈ ಬಗ್ಗೆ ಬಹಳ ಚರ್ಚೆಯಾಗುತ್ತಿದೆ ಮತ್ತು ಆ ಬಗ್ಗೆ ಜಾಗರೂಕತೆ ಮೂಡಿದ್ದರೂ, ವ್ಯಾಯಾಮ ಮಾಡುವ ಪ್ರಮಾಣ ಅಲ್ಪವಿರುವುದು ಕಂಡುಬರುತ್ತದೆ. ಇನ್ನೂ ಅನೇಕರಿಗೆ ಮನಸ್ಸಿನಲ್ಲಿ ವ್ಯಾಯಾಮ ವಿಷಯದ ಬಗ್ಗೆ ಕೆಲವು ಸಂದೇಹಗಳಿರುತ್ತವೆ. ಸದ್ಯ ಆಗುತ್ತಿರುವ ಅನೇಕ ದೈಹಿಕ ಸಮಸ್ಯೆಗಳಿಗೆ ಉದಾ. ಬೆನ್ನುಮೂಳೆಯ ಕಾಯಿಲೆ, ಮಧುಮೇಹ, ಸ್ಥೂಲಕಾಯಗಳಿಗೆ ಉಪಾಯವೆಂದು ಔಷಧೋಪಚಾರ, ಪಥ್ಯ, ಉಪವಾಸ, ಹೀಗೆ ಅನೇಕ ಮಾರ್ಗಗಳನ್ನು ಆರಿಸುತ್ತಾರೆ. ಈ ಅಂಕಣದಿಂದ ನಾವು ವ್ಯಾಯಾಮದ ಬಗ್ಗೆ ಜಾಗರೂಕತೆಯನ್ನು ಮೂಡಿಸಲಿದ್ದೇವೆ. ಇದರ ಆವಶ್ಯಕತೆ ಮತ್ತು ಮಹತ್ವವನ್ನು ತಿಳಿದುಕೊಳ್ಳಲಿದ್ದೇವೆ, ಹಾಗೂ ವ್ಯಾಯಾಮದ ಕುರಿತಾದ ಸಂದೇಹ ನಿವಾರಣೆ ಮಾಡಲಿದ್ದೇವೆ.

ಶ್ರೀ. ನಿಮಿಷ ಮ್ಹಾತ್ರೆ

‘ಅನೇಕ ಸಲ ವ್ಯಾಯಾಮ ಮಾಡುವಾಗ, ನಾವು ‘ತೂಕ ಕಡಿಮೆಯಾಗು ವುದು, ಹೊಟ್ಟೆಯನ್ನು ಕಡಿಮೆ ಮಾಡುವುದು’ ಇತ್ಯಾದಿ ದೊಡ್ಡ ಬದಲಾವಣೆಗಳತ್ತ ಗಮನ ನೀಡುತ್ತೇವೆ; ಆದರೆ ನಮ್ಮಲ್ಲಾದ ಇತರ ಅನೇಕ ಸಣ್ಣ ಪುಟ್ಟ ಬದಲಾವಣೆಗಳು ನಮ್ಮ ಗಮನಕ್ಕೆ ಬರುವುದಿಲ್ಲ ಮತ್ತು ಇದರಿಂದ ನಮ್ಮ ವ್ಯಾಯಾಮ ಮಾಡುವ ಉತ್ಸಾಹ ಕಡಿಮೆಯಾಗತೊಡಗುತ್ತದೆ. ನಮ್ಮಲ್ಲಾಗುತ್ತಿರುವ ಇಂತಹ ಸಣ್ಣ ಬದಲಾವಣೆಗಳತ್ತ ಗಮನ ನೀಡಿ, ಅವುಗಳನ್ನು ಆಗಾಗ ನೆನಪಿಸಿಕೊಂಡರೆ, ವ್ಯಾಯಾಮ ಮಾಡಲು ಪ್ರೋತ್ಸಾಹ ಸಿಗುತ್ತಾ ಇರುತ್ತದೆ ಮತ್ತು ವ್ಯಾಯಾಮದ ಗುಣಮಟ್ಟವೂ ಹೆಚ್ಚಾಗುತ್ತದೆ. ಚಿಕ್ಕದಾದರೂ ಮಹತ್ವಪೂರ್ಣ ವಾಗಿರುವ ಬದಲಾವಣೆಗಳ ಕೆಲವು ಉದಾಹರಣೆಗಳನ್ನು ಮುಂದೆ ಕೊಡಲಾಗಿದೆ.

೧. ಸ್ನಾಯುಗಳ ಸಾಮರ್ಥ್ಯದಲ್ಲಿ ಸುಧಾರಣೆಯಾಗುವುದು

ಹಿಂದೆ ೧೫ ನಿಮಿಷಗಳ ಕಾಲ ಕುಳಿತುಕೊಂಡಾಗ ಬೆನ್ನು ನೋಯುತ್ತಿತ್ತು; ಆದರೆ ವ್ಯಾಯಾಮ ಆರಂಭಿಸಿದಾಗಿನಿಂದ ಸತತವಾಗಿ ೧ ಗಂಟೆ ಕುಳಿತುಕೊಳ್ಳಲು ಸಾಧ್ಯವಾಗುತ್ತಿದೆ.

೨. ಶರೀರದ ನಮ್ಯತೆ ಹೆಚ್ಚುವುದು

ಹಿಂದೆ ‘ಪಶ್ಚಿಮೋತ್ತಾಸನ’ ಮಾಡುವಾಗ ಕಾಲಿನ ಹೆಬ್ಬೆರಳಿನವರೆಗೆ ಕೈಗಳು ತಲುಪುತ್ತಿರಲಿಲ್ಲ; ಆದರೆ ವ್ಯಾಯಾಮ ಆರಂಭಿಸಿದ ನಂತರ ಅದು ತಲುಪಲು ಸಾಧ್ಯವಾಗುತ್ತಿದೆ.

೩. ಸ್ನಾಯುಗಳ ಶಕ್ತಿ ಹೆಚ್ಚುವುದು

ವ್ಯಾಯಾಮ ಮಾಡುವಾಗ ಶರೀರದ ಯಾವುದಾದರೊಂದು ಸ್ಥಿತಿಯನ್ನು ಮೊದಲಿನದ್ದಕ್ಕಿಂತ ಹೆಚ್ಚು ಹೊತ್ತು ನಿಲ್ಲಿಸಿ ಇಟ್ಟುಕೊಳ್ಳಲು ಸಾಧ್ಯವಾಗುವುದು.

೪. ಶರೀರದ ಸಾಮರ್ಥ್ಯ ಸುಧಾರಿಸುವುದು

ಹಿಂದೆ ಕಟ್ಟಡದ ಒಂದು ಅಂತಸ್ತನ್ನು ಹತ್ತಿದ ಕೂಡಲೇ ಹೆಚ್ಚು ಸುಸ್ತಾಗುತ್ತಿತ್ತು ಮತ್ತು ಕಾಲುಗಳು ಜಡವಾಗುತ್ತಿದ್ದವು; ಆದರೆ ವ್ಯಾಯಾಮ ಆರಂಭಿಸಿದಾಗಿನಿಂದ ಇದು ಕಡಿಮೆಯಾಗಿ ಸುಲಭವಾಗಿ ಒಂದು ಅಂತಸ್ತನ್ನು ಹತ್ತಲು ಸಾಧ್ಯವಾಗುತ್ತಿದೆ. ವ್ಯಾಯಾಮ ಮಾಡಿದ್ದರಿಂದ ಆಗಿರುವ ಈ ಬದಲಾವಣೆಗಳ ಮಾಧ್ಯಮದಿಂದ ಸಿಕ್ಕಿರುವ ಯಶಸ್ಸು, ನಿಮ್ಮ ಗುರಿಯನ್ನು ತಲುಪಲು ಸ್ಫೂರ್ತಿ ನೀಡಬಲ್ಲದು.’

– ಶ್ರೀ. ನಿಮಿಷ ಮ್ಹಾತ್ರೆ, ಭೌತಿಕಚಿಕಿತ್ಸಕ (ಫಿಸಿಯೋಥೆರಪಿಸ್ಟ್‌), ಫೋಂಡಾ, ಗೋವಾ. (೩೦.೧೦.೨೦೨೪)