ಪ್ರಾಣಶಕ್ತಿವಹನ ಉಪಾಯಪದ್ಧತಿಗನುಸಾರ ನಾಮಜಪಾದಿ ಉಪಾಯಗಳನ್ನು ಕಂಡು ಹಿಡಿಯುವಾಗ ಬಂದ ಸಂದೇಹಗಳ ಬಗ್ಗೆ ಓರ್ವ ಸಾಧಕಿಯು ಕೇಳಿದ ಪ್ರಶ್ನೆಗಳಿಗೆ ಡಾ. ಮುಕುಲ ಗಾಡಗೀಳ ಇವರು ನೀಡಿದ ಉತ್ತರಗಳು !

(ಸದ್ಗುರು) ಡಾ. ಮುಕುಲ ಗಾಡಗೀಳ

‘ಮೊದಲು ನನ್ನ ಮನಸ್ಸಿನಲ್ಲಿ ನಾಮಜಪಾದಿ ಉಪಾಯಗಳನ್ನು ಮಾಡುವಾಗ ಅನೇಕ ಪ್ರಶ್ನೆಗಳು ಬರುತ್ತಿದ್ದವು; ಆದ್ದರಿಂದ ‘ನನ್ನ ನಾಮಜಪಾದಿ ಉಪಾಯಗಳು ಸರಿಯಾಗಿ ಆಗುವುದಿಲ್ಲ’, ಎಂಬುದರ ಬಗ್ಗೆ ನನಗೆ ಒತ್ತಡವಿರುತ್ತಿತ್ತು ಮತ್ತು ನಾಮಜಪ ಮಾಡಿದ ನಂತರವೂ ನನಗೆ ಸಮಾಧಾನವಾಗುತ್ತಿರಲಿಲ್ಲ. ೧೮.೮.೨೦೨೪ ರಂದು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ನನಗೆ ಸದ್ಗುರು ಡಾ. ಮುಕುಲ ಗಾಡಗೀಳರವರ ಮಾರ್ಗದರ್ಶನ ಲಭಿಸಿತು. ಅವರ ಮಾರ್ಗದರ್ಶನವನ್ನು ಕೇಳಿ ನನ್ನ ಮನಸ್ಸು ಸಕಾರಾತ್ಮಕವಾಯಿತು. ಆದುದರಿಂದ ನನಗೆ ದೇವರ ಕೃಪೆಯಿಂದ ನಾಮಜಪಾದಿ ಉಪಾಯಗಳ ಪರಿಣಾಮ ಸ್ವಲ್ಪ ಪ್ರಮಾಣದಲ್ಲಿ ಅನುಭವಿಸಲು ಸಾಧ್ಯವಾಗತೊಡಗಿತು. ನಾನು ನಾಮಜಪಾದಿ ಉಪಾಯಗಳ ಬಗ್ಗೆ ಸದ್ಗುರು ಡಾ. ಮುಕುಲ ಗಾಡಗೀಳ ಇವರಿಗೆ ಕೇಳಿದ ಪ್ರಶ್ನೆಗಳು ಮತ್ತು ಅವರು ನೀಡಿದ ಉತ್ತರಗಳನ್ನು ೨೬/೪೬ ನೇ ಸಂಚಿಕೆಯಲ್ಲಿ ಕೆಲವು ಭಾಗ ನೋಡಿದೆವು ಇಂದು ಅದರ ಮುಂದಿನ ಭಾಗವಿದೆ.

ಕು. ಪ್ರಿಯಾಂಕಾ ಪ್ರಭುದೇಸಾಯಿ

೪. ಪ್ರಾಣಶಕ್ತಿವಹನ ಉಪಾಯಪದ್ಧತಿಗನುಸಾರ ಕಂಡುಹಿಡಿದ ನಾಮಜಪವು ಅಯೋಗ್ಯವಾಗಿದ್ದರೆ ಅದನ್ನು ಮಾಡಿದಾಗ ಒತ್ತಡ ಕಡಿಮೆಯಾಗಲು ಬಹಳ ಸಮಯ ಬೇಕಾಗುವುದು ಅಥವಾ ಆ ಸಮಯದಲ್ಲಿ ಯಾವುದೇ ಒತ್ತಡ ಅನುಭವಕ್ಕೆ ಬಾರದಿರುವುದು

೪ ಅ. ಪ್ರಶ್ನೆ : ‘ಕಂಡು ಹಿಡಿದ ನಾಮಜಪವು ಅಯೋಗ್ಯವಾಗಿದೆ’, ಎಂದು ಹೇಗೆ ತಿಳಿಯುತ್ತದೆ ?
೪ ಆ. ಉತ್ತರ

೧. ನಿರ್ಗುಣ ಸ್ತರದ ನಾಮಜಪಗಳಾದ ‘ಶೂನ್ಯ, ಮಹಾಶೂನ್ಯ, ನಿರ್ಗುಣ ಮತ್ತು ಓಂ’ ಇವು ಸ್ತರಕ್ಕನುಸಾರ ಏರಿಕೆ ಕ್ರಮದಲ್ಲಿವೆ. ಮೇಲಿನ ಸ್ತರದ ನಾಮಜಪ, ಉದಾ. ‘ನಿರ್ಗುಣ’ ಈ ನಾಮಜಪದ ಅವಶ್ಯಕತೆ ಇದ್ದಾಗ ‘ಮಹಾಶೂನ್ಯ’ ನಾಮಜಪವನ್ನು ಮಾಡಿದರೆ, ನಮ್ಮ ಮೇಲಿನ ಒತ್ತಡವು ೧೦ ನಿಮಿಷಗಳಲ್ಲಿ ಕಡಿಮೆಯಾಗುವ ಬದಲು, ಅದು ಕಡಿಮೆಯಾಗಲು ಹೆಚ್ಚು ಸಮಯ ತೆಗೆದುಕೊಳ್ಳು ತ್ತದೆ. ಆಗ ‘ಮೇಲಿನ ಸ್ತರದ ನಾಮಜಪವನ್ನು ಮಾಡುವ ಅವಶ್ಯಕತೆ ಇದೆ’, ಎಂದು ಗಮನದಲ್ಲಿಟ್ಟುಕೊಂಡು ಮೇಲಿನ ಸ್ತರದ ನಾಮಜಪವನ್ನು ಮಾಡಿ ನೋಡಬೇಕು.

೨. ಕೆಳಗಿನ ಸ್ತರದ ನಾಮಜಪ (ಉದಾ. ‘ಮಹಾಶೂನ್ಯ’) ಅವಶ್ಯಕವಿರುವಾಗ ಮೇಲಿನ ಸ್ತರದ ‘ನಿರ್ಗುಣ’ ಈ ನಾಮಜಪವನ್ನು ಮಾಡಿದರೆ ನಮಗೆ ಒತ್ತಡ ಅನಿಸುವುದೇ ಇಲ್ಲ. ಇದರ ಅರ್ಥ ನಮ್ಮ ಮೇಲೆ ನಾಮಜಪದಿಂದ ಯಾವುದೇ ಪರಿಣಾಮವಾಗುತ್ತಿಲ್ಲ. ಆಗ ‘ಕೆಳಗಿನ ಸ್ತರದ ನಾಮಜಪವನ್ನು ಮಾಡುವುದು ಆವಶ್ಯಕವಾಗಿದೆ’, ಎಂಬುದನ್ನು ಗಮನದಲ್ಲಿಡಬೇಕು.

೩. ‘ನಾಮಜಪವು ಅಯೋಗ್ಯವಾಗಿದೆ’, ಎಂದು ಗಮನಕ್ಕೆ ಬಂದರೆ ನಾಮಜಪವನ್ನು ಮತ್ತೊಮ್ಮೆ ಹುಡುಕಿ ಯೋಗ್ಯ ನಾಮಜಪವನ್ನು ಮಾಡಬೇಕು.

೫. ಯೋಗ್ಯ ನಾಮಜಪವನ್ನು ಹುಡುಕುವ ಪ್ರಕ್ರಿಯೆ

೫ ಅ. ಪ್ರಶ್ನೆ : ಯಾವುದಾದರೊಂದು ನಾಮಜಪವನ್ನು ಸ್ವಲ್ಪ ಕಾಲಾವಧಿಯ ತನಕ ಮಾಡಿಯೂ ನಮ್ಮ ತೊಂದರೆಯ ಪ್ರಮಾಣ ಸ್ವಲ್ಪವೂ ಕಡಿಮೆಯಾಗದಿದ್ದರೆ, ಏನು ಮಾಡಬೇಕು ?

೫ ಆ. ಉತ್ತರ : ಕೆಲವೊಮ್ಮೆ ೧೦-೧೫ ನಿಮಿಷಗಳ ಕಾಲ ಯಾವುದಾದರೊಂದು ನಾಮಜಪವನ್ನು ಮಾಡಿದರೂ ನಮ್ಮ ತೊಂದರೆ ಸ್ವಲ್ಪವೂ ಕಡಿಮೆಯಾಗುವುದಿಲ್ಲ. ಆಗ ನಮ್ಮಲ್ಲಿ ಅಡಗಿರುವ ಅವ್ಯಕ್ತ ಕಪ್ಪು ಶಕ್ತಿ ವ್ಯಕ್ತವಾಗುತ್ತಿರುತ್ತದೆ ಮತ್ತು ನಮ್ಮ ತೊಂದರೆ ಹೆಚ್ಚಾಗಿರುತ್ತದೆ; ಆದುದರಿಂದ ‘ಆ ನಾಮಜಪದಿಂದ ನಮ್ಮ ತೊಂದರೆ ಸ್ವಲ್ಪವೂ ಕಡಿಮೆಯಾಗುವುದಿಲ್ಲ’, ಎಂದು ನಮಗೆ ತಿಳಿಯುತ್ತದೆ. ಈ ಸಮಯದಲ್ಲಿ ನಾವು ಮಾಡುತ್ತಿರುವ ನಾಮಜಪಕ್ಕಿಂತ ಮೇಲಿನ ಮಟ್ಟದ ನಾಮಜಪವನ್ನು (ನಮ್ಮ ಹೆಚ್ಚಾಗಿರುವ ತೊಂದರೆಗೆ ಅವಶ್ಯಕವಾಗಿರುವ ಮೇಲಿನ ಸ್ತರದ ನಾಮಜಪವನ್ನು) ಮಾಡಬೇಕು (ಉದಾ. ನಾವು ‘ಶೂನ್ಯ ನಾಮಜಪವನ್ನು ಮಾಡುತ್ತಿದ್ದರೆ, ಅದಕ್ಕಿಂತಲೂ ಮೇಲಿನ ಸ್ತರದ ‘ಮಹಾಶೂನ್ಯ’ ನಾಮಜಪವನ್ನು ಮಾಡಬೇಕು) ಮತ್ತು ‘ಏನು ಪರಿಣಾಮವಾಗುತ್ತಿದೆ’, ಎಂಬುದನ್ನು ನೋಡಬೇಕು. ಪ್ರತಿಯೊಂದು ಪ್ರಸಂಗದಿಂದ ಮತ್ತು ಅನುಭೂತಿಯಿಂದ ಕಲಿಯಬೇಕು. ಹೀಗೆ ಕಲಿತರೆ ಮಾತ್ರ ಈಶ್ವರನು ಸಹಾಯ ಮಾಡುವನು.

ಛಾಯಾಚಿತ್ರ ೧

ಛಾಯಾಚಿತ್ರ ೨

೬. ಉಪಾಯಕ್ಕಾಗಿ ಮುದ್ರೆಗಳನ್ನು ಹುಡುಕುವಾಗ ‘ಸತತವಾಗಿ ಬರುವ ೨ ಮುದ್ರೆಗಳಲ್ಲಿ ನಿರ್ದಿಷ್ಟವಾಗಿ ಯಾವುದು ಸರಿಯಾದ ಮುದ್ರೆ ಎಂದು ನಿಮಗೆ ಸಂದೇಹವಿದ್ದರೆ’, ಆಗ ಏನು ಮಾಡಬೇಕು ?

ಆ ಸಮಯದಲ್ಲಿ ಆ ಎರಡೂ ಮುದ್ರೆಗಳ ಪ್ರತ್ಯಕ್ಷ ಉಪಾಯ ಮಾಡಿ ನೋಡಬೇಕು. ಮೊದಲು ಕನಿಷ್ಠ ಸ್ತರದ (ಉದಾ. ‘ಹೆಬ್ಬೆರಳಿನ ತುದಿಯನ್ನು ತೋರುಬೆರಳಿನ ಬುಡಕ್ಕೆ ತಾಗಿಸುವುದು’, ಈ ವಾಯುತತ್ತ್ವದ (ಛಾಯಾಚಿತ್ರ ೧)) ಮುದ್ರೆಯನ್ನು ನ್ಯಾಸಸ್ಥಾನದಲ್ಲಿ ಹಿಡಿದು ೧-೨ ನಿಮಿಷಗಳ ಕಾಲ ನಾಮಜಪವನ್ನು ಮಾಡಬೇಕು ಮತ್ತು ‘ಎಷ್ಟು ಪ್ರಮಾಣದಲ್ಲಿ ತೊಂದರೆಯಾಗುತ್ತಿದೆ’, ಎಂಬುದನ್ನು ಗಮನಿಸಬೇಕು. ಅನಂತರ ಹಿಂದಿನ ಮುದ್ರೆಗಿಂತ ಮೇಲಿನ ಸ್ತರದ (ಉದಾ. ‘ತೋರುಬೆರಳಿನ ತುದಿಯನ್ನು ಹೆಬ್ಬೆರಳಿನ ಬುಡಕ್ಕೆ ತಾಗಿಸುವುದು’, ಈ ಆಕಾಶತತ್ತ್ವದ (ಛಾಯಾಚಿತ್ರ ೨)) ಮುದ್ರೆಯನ್ನು ನ್ಯಾಸಸ್ಥಾನದ ಮೇಲೆ ಹಿಡಿದು ೧-೨ ನಿಮಿಷಗಳ ಕಾಲ ನಾಮಜಪವನ್ನು ಮಾಡಬೇಕು ಮತ್ತು ‘ಎಷ್ಟು ಪ್ರಮಾಣದಲ್ಲಿ ತೊಂದರೆಯಾಗುತ್ತಿದೆ’, ಎಂಬುದನ್ನು ನೋಡಬೇಕು. ‘ಯಾವ ಮುದ್ರೆಯಿಂದ ಎಲ್ಲಕ್ಕಿಂತ ಹೆಚ್ಚು ತೊಂದರೆಯಾಗುತ್ತದೆಯೋ, ಅದೇ ಆ ಸಮಯದಲ್ಲಿ ಉಪಾಯ ಮಾಡಲು ನಿಮಗಾಗಿ ಇರುವ ಯೋಗ್ಯ ಮುದ್ರೆ’, ಆಗಿದೆ ಎಂದು ತಿಳಿಯಬೇಕು.

೭. ನಾಮಜಪಾದಿ ಉಪಾಯಗಳನ್ನು ಮಾಡುವಾಗ ಕಂಡು ಹಿಡಿದ ಸ್ಥಾನವನ್ನು ಹೊರತುಪಡಿಸಿ ಬೇರೆ ಸ್ಥಳದಲ್ಲಿ ಒತ್ತಡ ಅರಿವಾದರೆ ಏನು ಮಾಡಬೇಕು ?

ನಾಮಜಪಾದಿ ಉಪಾಯಗಳನ್ನು ಮಾಡುವಾಗ ಬೇರೆ ಸ್ಥಳದಲ್ಲಿ ಒತ್ತಡದ ಅರಿವಾದರೆ, ಎದೆ ಬಡಿತ ಹೆಚ್ಚಾದರೆ, ಕಣ್ಣುಗಳ ಮುಂದೆ ಕತ್ತಲು ಕವಿದರೆ, ಆ ಸಮಯದಲ್ಲಿ ‘ಅಂಗೈಗಳ ಹಿಮ್ಮುಖ-ಮುಮ್ಮುಖ ಮುದ್ರೆ’ಯನ್ನು ತೊಂದರೆಯಾಗುತ್ತಿರುವ ಸ್ಥಳದಲ್ಲಿ ೨-೩ ನಿಮಿಷಗಳ ಕಾಲ ಹಿಡಿದು ನಾಮಜಪವನ್ನು ಮಾಡಬೇಕು. ಆ ತೊಂದರೆ ಕಡಿಮೆಯಾದ ನಂತರ ತೊಂದರೆಯಾಗುತ್ತಿರುವ ಮೊದಲಿನ ಸ್ಥಳದಲ್ಲಿ ಮೊದಲಿನಂತೆ ನಾಮಜಪಾದಿ ಉಪಾಯಗಳನ್ನು ಮುಂದುವರೆಸಬೇಕು.

೮. ನಾಮಜಪಾದಿ ಉಪಾಯಗಳನ್ನು ಮಾಡುವಾಗ ತಲೆಯ ಮೇಲೆ ಒತ್ತಡದ ಅರಿವಾದರೆ ಏನು ಮಾಡಬೇಕು ?

ನಾಮಜಪಾದಿ ಉಪಾಯಗಳನ್ನು ಆರಂಭಿಸಿದ ಮೇಲೆ ಶರೀರದ ಕೆಳಗಿನ ಸ್ಥಾನಗಳಲ್ಲಿನ (ಉದಾ. ಸ್ವಾಧಿಷ್ಠಾನಚಕ್ರ ಅಥವಾ ಮಣಿಪುರಚಕ್ರ) ಕಪ್ಪು ಶಕ್ತಿಯು ಸಡಿಲವಾಗಿ ಮೇಲೆ ಮೇಲೆ ಬರಲಾರಂಭಿಸುತ್ತದೆ. ಸಡಿಲವಾದ ಈ ತೊಂದರೆದಾಯಕ ಶಕ್ತಿಯು ಆಜ್ಞಾಚಕ್ರದಲ್ಲಿ ಮತ್ತು ತಲೆಯ ಮೇಲೆ ಸಂಗ್ರಹವಾಗುತ್ತದೆ. ಎಲ್ಲಿಯವರೆಗೆ ಉಪಾಯ ಪೂರ್ಣಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ಇದು ನಡೆಯುತ್ತಲೇ ಇರುತ್ತದೆ. ಆದುದರಿಂದ ಉಪಾಯ ಪೂರ್ಣಗೊಳ್ಳುವವರೆಗೆ ತಲೆಯ ಮೇಲೆ ಒತ್ತಡ ಇದ್ದೇ ಇರುತ್ತದೆ; ಆದುದರಿಂದ ಆ ಸಮಯದಲ್ಲಿ ತಲೆಯ ಮೇಲಿನ ಒತ್ತಡದ ಕಡೆಗೆ ಗಮನ ಕೊಡದೇ ಉಪಾಯವನ್ನು ಪೂರ್ಣಗೊಳಿಸುವುದರ ಕಡೆಗೆ ಗಮನ ಕೊಡಬೇಕು.

೯. ನಾಮಜಪಾದಿ ಉಪಾಯಗಳನ್ನು ಮಾಡುವಾಗ ಭಾವವಿಡುವುದರ ಮಹತ್ವ ನಾಮಜಪಾದಿ ಉಪಾಯಗಳನ್ನು ಮಾಡುವಾಗ ಆಧ್ಯಾತ್ಮಿಕ

ಭಾವವನ್ನು ಇಟ್ಟುಕೊಂಡರೆ ಉಪಾಯಗಳು ಹೆಚ್ಚು ಪರಿಣಾಮಕಾರಿ ಯಾಗುತ್ತವೆ. ಉಪಾಯ ಮಾಡುವಾಗ ಕೆಲವೊಮ್ಮೆ ಕೃತಜ್ಞತಾಭಾವ ಮತ್ತು ಕೆಲವೊಮ್ಮೆ ಶರಣಾಗತಭಾವವನ್ನು ಇಡಬೇಕು. ಕೆಲವೊಮ್ಮೆ ಯಾವುದಾದರೂ ದೇವತೆಯನ್ನು ಸ್ಮರಿಸಬೇಕು. ಕೆಲವೊಮ್ಮೆ ಗುರುದೇವರನ್ನು ಸ್ಮರಿಸಬೇಕು. ಪ್ರತಿ ಬಾರಿಯೂ ಬೇರೆ ಬೇರೆ ಭಾವವನ್ನು ಇಡಲು ಪ್ರಯತ್ನಿಸಬೇಕು. ಇದರಿಂದ ಉಪಾಯಗಳಲ್ಲಿ ಹೊಸತನವಿರುತ್ತದೆ, ಹಾಗೆಯೇ ಪ್ರತಿ ಬಾರಿಯೂ ವಿಭಿನ್ನ ಭಾವವನ್ನಿಟ್ಟುಕೊಳ್ಳುವುದರಿಂದ ಕೆಟ್ಟ ಶಕ್ತಿಗಳಿಗೆ ಉಪಾಯ ಮಾಡುವವರ ಮೇಲೆ ಸುಲಭವಾಗಿ ಆಕ್ರಮಣ ಮಾಡಲು ಸಾಧ್ಯವಾಗುವುದಿಲ್ಲ.

೧೦. ರಜ-ತಮಾತ್ಮಕ ವಾತಾವರಣದಲ್ಲಿ ನಾಮಜಪಾದಿ ಉಪಾಯಗಳನ್ನು ಮಾಡುವಾಗ ಭಾವವನ್ನು ಇಟ್ಟುಕೊಂಡರೆ ಆಗುವ ಲಾಭ

೧೦. ಅ. ಪ್ರಶ್ನೆ : ಮುಂಬಯಿಯ ಠಾಣೆಯಲ್ಲಿ ಬಹಳ ರಜ-ತಮವಿದೆ. ಅಲ್ಲಿ ನಾಮಜಪಾದಿ ಉಪಾಯಗಳು ಪರಿಣಾಮಕಾರಿಯಾಗಬಲ್ಲದೇ ?
೧೦ ಆ. ಉತ್ತರ : ‘ಮುಂಬಯಿಯ ಠಾಣೆಯಲ್ಲಿ ರಜ-ತಮ’, ಇದೆ’, ಎಂಬ ವಿಚಾರವನ್ನೇ ಮಾಡಬಾರದು. ನಾವು ಎಲ್ಲಿದ್ದರೂ ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದ ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೋಣೆಯಲ್ಲಿದ್ದೇವೆ’, ಎಂಬ ಭಾವವನ್ನೇ ಇಡಬೇಕು. ಹೀಗೆ ಮಾಡಿದರೆ ನಮ್ಮ ಸುತ್ತಲೂ ಕೂಡಲೇ ಚೈತನ್ಯ ನಿರ್ಮಾಣವಾಗುತ್ತದೆ. ಚೈತನ್ಯವು ಎಲ್ಲಿಯೂ ಕಡಿಮೆ ಇಲ್ಲ. ಅದು ನಮ್ಮೊಳಗಿನ ಭಾವವನ್ನು ಅವಲಂಬಿಸಿರುತ್ತದೆ; ಏಕೆಂದರೆ ಈಶ್ವರನು ಎಲ್ಲ ಕಡೆಗೆ ಇದ್ದಾನೆ. (ಮುಂದುವರಿಯುವುದು)

– ಕು. ಪ್ರಿಯಾಂಕಾ ಪ್ರಭುದೇಸಾಯಿ, ಠಾಣೆ (೨೯.೧೨.೨೦೨೪)