ಆನ್‌ ಲೈನ್ ‘ರಿಯಲ್ ಮನಿ ಗೇಮಿಂಗ್’ ನಿಷೇಧಿಸಿ, ಅದನ್ನು ನಿಯಂತ್ರಿಸಲು ಕಾನೂನು ರೂಪಿಸುವಂತೆ ಬೇಡಿಕೆ! – Online Money Games Ban

‘ಸುರಾಜ್ಯ ಅಭಿಯಾನ’ದಿಂದ ಭಾರತ ಸರಕಾರದ ಬಳಿ ಆಗ್ರಹ

(‘ರಿಯಲ್ ಮನಿ ಗೇಮಿಂಗ್’ ಎಂದರೆ ಯಾವುದೇ ರೀತಿಯ ಆನ್‌ ಲೈನ್ ಸ್ಪರ್ಧೆಯಲ್ಲಿ ಪಣ ಕಟ್ಟುವ ಅಥವಾ ಹೂಡಿಕೆ ಮಾಡುವ ಪ್ರಕ್ರಿಯೆ. ಇದರಲ್ಲಿ ಒಂದು ಪಕ್ಷ ಪಣ ಗೆಲ್ಲುತ್ತದೆ, ಇನ್ನೊಂದು ಸೋಲುತ್ತದೆ. ಇಲ್ಲಿ ಪಣ ಗೆದ್ದವರಿಗೆ ಭಾರಿ ಮೊತ್ತದ ಹಣ ಸಿಗುತ್ತದೆ.)

ಮುಂಬಯಿ – ಆನ್‌ ಲೈನ್ ಗೇಮ್‌ ಗಳು, ಹಾಗೆಯೇ ‘ರಿಯಲ್ ಮನಿ ಗೇಮಿಂಗ್’ ಎಂಬ ಒಂದು ರೀತಿಯ ಆನ್‌ ಲೈನ್ ಜೂಜಾಟ, ಜೂಜಾಟದ ಆಪ್‌ ಗಳಿಗೆ ಜಾಹೀರಾತು ನೀಡುವವರು ಮತ್ತು ಈ ಆಟಗಳನ್ನು ಪ್ರಾಯೋಜಿಸುವವರ ಮೇಲೆ ನಿಷೇಧ ಹೇರಲು ಹಾಗೂ ಇಂತಹ ಆಟಗಳನ್ನು ನಿಯಂತ್ರಿಸಲು ಕೇಂದ್ರ ಸರಕಾರವು ತಕ್ಷಣವೇ ಕಾನೂನು ರೂಪಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಉಪಕ್ರಮವಾದ ‘ಸುರಾಜ್ಯ ಅಭಿಯಾನ’ವು ಕೇಂದ್ರ ಸರಕಾರಕ್ಕೆ ಆಗ್ರಹಿಸಿದೆ. ‘ಸುರಾಜ್ಯ ಅಭಿಯಾನ’ದ ಮಹಾರಾಷ್ಟ್ರ ರಾಜ್ಯ ಸಂಯೋಜಕ ಶ್ರೀ. ಅಭಿಷೇಕ ಮುರುಕಟೆ ಅವರು ಈ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಶ್ರೀ. ಅಭಿಷೇಕ ಮುರುಕಟೆ

ಈ ಪತ್ರದಲ್ಲಿ,

1. ಆನ್‌ ಲೈನ್ ‘ರಿಯಲ್ ಮನಿ ಗೇಮಿಂಗ್’ ಉದ್ಯಮದಿಂದ ಸರಕಾರಕ್ಕೆ ವಾರ್ಷಿಕ 30 ಸಾವಿರ ಕೋಟಿ ರೂಪಾಯಿಗಳ ಆದಾಯ ಬರುತ್ತದೆ. ಭಾರತದಲ್ಲಿ ಅಂತಹ ಆಪ್‌ ಗಳನ್ನು ಬಳಸುವವರ ಸಂಖ್ಯೆ 50 ಕೋಟಿಗೂ ಹೆಚ್ಚಾಗಿದೆ. ಈ ಕ್ಷೇತ್ರವು ಡಿಜಿಟಲ್ ನಾವೀನ್ಯತೆಗಳನ್ನು ಪ್ರೋತ್ಸಾಹಿಸುತ್ತಿದ್ದರೂ, ಇದರಿಂದ ವ್ಯಸನ, ಆಟಗಾರರ ಮೇಲೆ ಆರ್ಥಿಕ ಸಂಕಷ್ಟ, ಕ್ರಿಮಿನಲ್ ಕೃತ್ಯಗಳಲ್ಲಿ ಹೆಚ್ಚಳ, ಹಾಗೂ ಯುವಜನರಲ್ಲಿ ಆತ್ಮಹತ್ಯೆಗಳು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿರುವುದು ಕಂಡುಬಂದಿದೆ.

2. ಭಾರತದಲ್ಲಿ ಶೇ.19.9ಕಿಶೋರಾವಸ್ಥೆಯ ಮಕ್ಕಳಲ್ಲಿ ಆನ್‌ ಲೈನ್ ಆಟದ ವ್ಯಸನದ ಲಕ್ಷಣಗಳು ಕಂಡುಬಂದಿದ್ದು, ಇದರಿಂದ ಸಾಲಕ್ಕೆ ಸಿಲುಕಿ ಕನಿಷ್ಠ 25 ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

3. ಇಂತಹ ಆನ್‌ ಲೈನ್ ಆಟಗಳಿಗೆ ‘ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ’ (ಬಿಸಿಸಿಐ) ಯಂತಹ ಸಂಸ್ಥೆಗಳು ಅಥವಾ ‘ಡ್ರೀಮ್ 11’ ನಂತಹ ಕಂಪನಿಗಳು ಪ್ರಾಯೋಜಕತ್ವ ನೀಡುತ್ತಿದ್ದರೂ, ಅವುಗಳನ್ನು ನಿಯಂತ್ರಿಸಲು ಯಾವುದೇ ಕೇಂದ್ರೀಯ ನಿಗಾ ವ್ಯವಸ್ಥೆ ಇಲ್ಲದಿರುವುದು ದೊಡ್ಡ ಅಪಾಯವನ್ನು ಸೃಷ್ಟಿಸಿದೆ.

4. ಪ್ರಸಿದ್ಧ ಕ್ರೀಡಾಪಟುಗಳು, ಚಲನಚಿತ್ರ ನಟರು ಜೂಜು ಆಪ್‌ ಗಳ ಭ್ರಮಾತ್ಮಕ ಜಾಹೀರಾತುಗಳನ್ನು ಮಾಡುವುದನ್ನು ನಿರ್ಬಂಧಿಸುವುದು ಅವಶ್ಯಕವಾಗಿದೆ. ಈ ಜಾಹೀರಾತುಗಳ ಮೂಲಕ ಗ್ರಾಹಕರನ್ನು ವಂಚಿಸಲಾಗುತ್ತಿದೆ ಎಂದು ಬೆಳಕಿಗೆ ಬಂದಿದೆ.

5. ನಾಗರಿಕರ ಎಲ್ಲಾ ಸ್ತರಗಳಲ್ಲಿ ಆಗುತ್ತಿರುವ ನಷ್ಟವನ್ನು ತಡೆಯಲು ಕೇಂದ್ರ ಸರಕಾರವು ಕಾನೂನನ್ನು ರೂಪಿಸುವುದು ಅವಶ್ಯಕವಾಗಿದೆ.

ಸಂಪಾದಕೀಯ ನಿಲುವು

ವಾಸ್ತವವಾಗಿ ಇಂತಹ ಬೇಡಿಕೆ ಇಡುವ ಸಮಯ ಬರಬಾರದು. ಜನರನ್ನು ಜೂಜುಕೋರರನ್ನಾಗಿ ಮಾಡುವ ಇಂತಹ ಆನ್‌ ಲೈನ್ ಆಟಗಳು ಮತ್ತು ಜೂಜಾಟಗಳ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರವು ಹೆಜ್ಜೆಗಳನ್ನು ಇಡಬೇಕೆಂದು ಜನರು ನಿರೀಕ್ಷಿಸುತ್ತಾರೆ!