ಪುಣ್ಯದ (ಸಾಧನೆಯ) ಜಮಾ-ಖರ್ಚು

ಇಂದು ಪರಮಹಂಸ ಪರಿವಾಜ್ರಕಾಚಾರ್ಯ ಶ್ರೀಧರಸ್ವಾಮಿಗಳ ಪುಣ್ಯತಿಥಿ. ಆ ನಿಮಿತ್ತ ಕೋಟಿ ಕೋಟಿ ಪ್ರಣಾಮಗಳು!

ಪ.ಪ. ಭಗವಾನ್ ಶ್ರೀಧರಸ್ವಾಮಿ

ಒಬ್ಬ ಸಾತ್ವಿಕ ಪ್ರವೃತ್ತಿಯ ಮನುಷ್ಯನಿಗೆ ಪ್ರಭು ಶ್ರೀರಾಮಚಂದ್ರನ ದರ್ಶನವಾಗಬೇಕೆಂದು ೨೫ ಕೋಟಿ ರಾಮನಾಮ ಜಪಿಸಿದನು; ಆದರೆ ಅವನಿಗೆ ಪ್ರಭುವಿನ ದರ್ಶನವಾಗಲಿಲ್ಲ. ಇಷ್ಟು ಜಪವನ್ನು ಪೂರ್ಣಗೊಳಿಸಲು ಅವನಿಗೆ ಸುಮಾರು ೩೦ ವರ್ಷಗಳು ಬೇಕಾದವು. ‘ಪ್ರಭು ಶ್ರೀರಾಮನು ದರ್ಶನ ನೀಡಲಿಲ್ಲ’ ಎಂಬ ಅರಿವಿನಿಂದ ಆ ಮನುಷ್ಯನು ಬಹಳ ಬೇಸರಗೊಂಡು ಸಜ್ಜನಗಡಕ್ಕೆ ಹೋದನು. ಅಲ್ಲಿ ಸಮರ್ಥ ರಾಮದಾಸಸ್ವಾಮಿಗಳ ಸಮಾಧಿಯ ಬಳಿ ಹೋಗಿ ಮನಬಂದಂತೆ ಮಾತನಾಡಲು ಪ್ರಾರಂಭಿಸಿದನು. ಅಲ್ಲಿ ಪಕ್ಕದಲ್ಲೇ ಪ.ಪ. ಶ್ರೀಧರಸ್ವಾಮಿಗಳು ಕುಳಿತಿದ್ದರು. ತಮ್ಮ ಸದ್ಗುರುಗಳ ಬಗ್ಗೆ ಹೀಗೆ ಮಾತನಾಡುತ್ತಿರುವುದನ್ನು ನೋಡಿ ಅವರಿಗೆ ಸ್ವಲ್ಪ ಬೇಸರವಾಯಿತು ಮತ್ತು ಅವರು ಆ ಮನುಷ್ಯನನ್ನು, ‘ಏನಾಯಿತು? ನೀವು ನನ್ನ ಸದ್ಗುರುಗಳ ಬಗ್ಗೆ ಹೀಗೆ ಏಕೆ ಮಾತನಾಡುತ್ತಿದ್ದೀರಿ?’, ಎಂದು ಕೇಳಿದರು.

ಅದಕ್ಕೆ ಆ ಮನುಷ್ಯನು, ‘ನಿಮ್ಮ ಈ ರಾಮದಾಸಸ್ವಾಮಿಗಳು ರಾಮನಾಮದ ೧೩ ಕೋಟಿ ಜಪದ ನಂತರ ಸಾಕ್ಷಾತ್ ಪ್ರಭು ಶ್ರೀರಾಮನ ದರ್ಶನವಾಗುತ್ತದೆ ಎಂದು ಹೇಳಿದ್ದರು; ಆದರೆ ನಿಮ್ಮ ಸದ್ಗುರುಗಳು ಸುಳ್ಳು ಹೇಳಿದರು. ನನ್ನ ೨೫ ಕೋಟಿ ರಾಮನಾಮದ ಜಪವಾಗಿದೆ, ಆದರೂ ಇಲ್ಲಿಯವರೆಗೆ ಶ್ರೀರಾಮನು ದರ್ಶನ ನೀಡಿಲ್ಲ. ನನ್ನ ಜೀವನದ ೩೦ ವರ್ಷಗಳು ವ್ಯರ್ಥವಾದವು ಮತ್ತು ನನ್ನ ಕೈಗೆ ಏನೂ ಸಿಗಲಿಲ್ಲ. ಈ ರೀತಿಯಾಗಿ ಸುಳ್ಳು ಹೇಳಿ ಜನರ ದಾರಿ ತಪ್ಪಿಸುವುದು ತಪ್ಪು.’ ಪ.ಪ. ಶ್ರೀಧರಸ್ವಾಮಿಗಳು ಕೆಲವು ಕ್ಷಣ ಕಣ್ಣು ಮುಚ್ಚಿ ಮಂದಹಾಸ ಬೀರುತ್ತಾ, ‘೧೩ ಕೋಟಿ ರಾಮನಾಮದ ಜಪ ಮಾಡಿದ ನಂತರ ಪ್ರಭು ಶ್ರೀರಾಮನ ದರ್ಶನವಾಗುತ್ತದೆ ಎಂಬುದು ನಿಜ ಮತ್ತು ನನ್ನ ಸದ್ಗುರುಗಳು ಎಂದಿಗೂ ಸುಳ್ಳು ಹೇಳುವುದಿಲ್ಲ.’ ಆ ಮನುಷ್ಯನು, ‘ಅರೇ, ಹಾಗಾದರೆ ನನ್ನ ೨೫ ಕೋಟಿ ಜಪವಾಗಿದೆ ಎಂಬುದು ಸುಳ್ಳೇ?’ ಎಂದು ಮರು ಪ್ರಶ್ನಿಸಿದನು.

ಪ.ಪ. ಶ್ರೀಧರಸ್ವಾಮಿಗಳು ಅಲ್ಲಿ ಸೇವೆ ಮಾಡುತ್ತಿದ್ದ ಒಬ್ಬ ಶಿಷ್ಯನಿಗೆ ಕಾಗದ ಮತ್ತು ಪೆನ್ನು ತರಲು ಹೇಳಿದರು. ಅದನ್ನು ಆ ಮನುಷ್ಯನಿಗೆ ಕೊಟ್ಟು, ‘ಒಂದು ಕಡೆ ರಾಮನಾಮದ ಜಪವನ್ನು ನಿಮ್ಮ ಜಮೆ ಎಂದು ಬರೆಯಿರಿ ಮತ್ತು ಅದರ ಇನ್ನೊಂದು ಬದಿಯಲ್ಲಿ ನಿಮ್ಮ ಪುಣ್ಯದ ಖರ್ಚನ್ನು ಬರೆಯಿರಿ.’ ಅವರು ಹೇಳಿದರು.

ಜಮೆ: ಶ್ರೀರಾಮನ ಜಪ ೨೫ ಕೋಟಿ

ಖರ್ಚು:

೧. ಮಗಳ ಮದುವೆ ನೆರವೇರುತ್ತಿರಲಿಲ್ಲ; ಆದ್ದರಿಂದ ಮದುವೆ ನೆರವೇರಿಸಲು ಶ್ರೀರಾಮನಿಗೆ ಪ್ರಾರ್ಥನೆ ಮಾಡಿದೆ. ಅದರಲ್ಲಿ ನಾಲ್ಕೂವರೆ ಕೋಟಿ ಜಪದ ಪುಣ್ಯ ಖರ್ಚಾಯಿತು. ಮಗಳ ಮದುವೆ ಒಳ್ಳೆಯ ಮನೆಯಲ್ಲಿ ನೆರವೇರಿತು.

೨. ಮಗ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಬಹಳ ಸಲ ಅನುತ್ತೀರ್ಣನಾಗುತ್ತಿದ್ದನು. ಅವನು ಉತ್ತೀರ್ಣನಾಗಲು ರಾಮನಿಗೆ ಪ್ರಾರ್ಥಿಸಿದೆ. ಅದರಲ್ಲಿ ಎರಡೂವರೆ ಕೋಟಿ ಜಪದ ಪುಣ್ಯ ಖರ್ಚಾಯಿತು. ಮಗ ಒಳ್ಳೆಯ ಅಂಕಗಳೊಂದಿಗೆ ಉತ್ತೀರ್ಣನಾದನು.

೩. ಮಗನಿಗೆ ಕೆಲಸ ಸಿಗಬೇಕೆಂದು ರಾಮನಿಗೆ ಪ್ರಾರ್ಥಿಸಿದೆ, ಅದರಲ್ಲಿ ೫ ಕೋಟಿ ಜಪದ ಪುಣ್ಯ ಖರ್ಚಾಯಿತು. ಮಗನಿಗೆ ಒಳ್ಳೆಯ ಸಂಬಳದ ಕೆಲಸ ಸಿಕ್ಕಿತು.

೪. ಹೆಂಡತಿ ಬಹಳ ಅನಾರೋಗ್ಯದಿಂದಿದ್ದಾಗ. ವೈದ್ಯರು ಸಹ ಕೈ ಮೆಲೆತ್ತಿದರು. ಅಂತಹ ಸಮಯದಲ್ಲಿ ರಾಮನಿಗೆ ಬಹಳ ಪ್ರಾರ್ಥನೆ ಮತ್ತು ಬೇಡಿಕೆ ಇಟ್ಟೆ. ಅದರಲ್ಲಿ ೫ ಕೋಟಿ ಜಪದ ಪುಣ್ಯ ಖರ್ಚಾಯಿತು.

೫. ಕೋಪದ ಭರದಲ್ಲಿ, ನಿರಾಶೆಯ ಸಮಯದಲ್ಲಿ ಮತ್ತು ಉದ್ವಿಗ್ನ ಮನಃಸ್ಥಿತಿಯಲ್ಲಿ ಅನೇಕ ಸಂತ ಪುರುಷರಿಗೆ ನಿಂದಿಸಿದೆ; ಅವರ ಬಗ್ಗೆ ಕೆಟ್ಟ ಮಾತುಗಳನ್ನಾಡಿದೆ. ಅದರಲ್ಲಿ ೧ ಕೋಟಿ ಪುಣ್ಯ ಖರ್ಚಾಯಿತು.

ಒಟ್ಟು ಖರ್ಚು ೧೮ ಕೋಟಿ. ಉಳಿದಿರುವುದು ೭ ಕೋಟಿ. ನಿಮ್ಮಲ್ಲಿ ಇನ್ನೂ ೭ ಕೋಟಿ ಪುಣ್ಯ ಉಳಿದಿದೆ. ‘ಶ್ರೀರಾಮನ ದರ್ಶನ ಬೇಕಾಗಿದ್ದಲ್ಲಿ ಯಾವುದೇ ಆಸೆ ಪಡದ ಭಾವನೆಯಿಂದ ಇನ್ನೂ ೬ ಕೋಟಿ ಜಪ ಮಾಡಿರಿ’, ಆಗ ನಿಮಗೆ ಪ್ರಭು ಶ್ರೀರಾಮನ ದರ್ಶನ ಖಂಡಿತವಾಗಿಯೂ ಆಗುತ್ತದೆ.’, ಎಂದು ಹೇಳಿದರು.

ಪ.ಪ. ಶ್ರೀಧರಸ್ವಾಮಿಗಳ ಈ ಉಪದೇಶದಿಂದ ಆ ಮನುಷ್ಯನಿಗೆ ಸಮಾಧಾನವಾಯಿತು ಮತ್ತು ಅವನು ಅತ್ಯಂತ ಯಾವುದೇ ಆಸೆ ಪಡದ ಭಾವನೆಯಿಂದ ಉಳಿದ ೬ ಕೋಟಿ ಜಪವನ್ನು ಕೆಲವು ವರ್ಷಗಳಲ್ಲಿ ಪೂರ್ಣಗೊಳಿಸಿದನು ಮತ್ತು ಅವನಿಗೆ ಪ್ರಭು ಶ್ರೀರಾಮನು ಪ್ರತ್ಯಕ್ಷವಾಗಿ ದರ್ಶನ ನೀಡಿದನು.

– ಮಂದಾರ ದೇಶಪಾಂಡೆ, ಒಬ್ಬ ಧರ್ಮಪ್ರೇಮಿ.