ಜಾಗತಿಕ ಆನಂದ ದಿನದ ನಿಮಿತ್ತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ‘ವೆಲ್‌ಬೀಯಿಂಗ್ ರಿಸರ್ಚ್ ಸೆಂಟರ್’ ಮಾರ್ಚ್ ೨೦ ರಂದು ‘ಜಾಗತಿಕ ಆನಂದ ನಿರ್ದೇಶಾಂಕ ೨೦೨೫’ಅನ್ನು ಘೋಷಿಸಿತು. ೧೪೭ ದೇಶಗಳ ಆನಂದದ ಕ್ರಮಾಂಕದಲ್ಲಿ ೧೦ ರಲ್ಲಿ ೭.೭ ಅಂಕ ಪಡೆದು ‘ಫಿನ್‌ಲ್ಯಾಂಡ್’ ದೇಶ ಮೊದಲ ಕ್ರಮಾಂಕದಲ್ಲಿದೆ. ಸತತ ೮ ವರ್ಷಗಳಿಂದ ‘ಫಿನ್‌ಲ್ಯಾಂಡ್’ ಜಾಗತಿಕ ಆನಂದ ನಿರ್ದೇಶಾಂಕ ಕ್ರಮಾಂಕದಲ್ಲಿ ಮೊದಲ ಸ್ಥಾನವನ್ನು ಪಡೆಯುತ್ತಿದೆ. ಇದು ನಿಜವಾಗಿಯೂ ಶ್ಲಾಘನೀಯವಾಗಿದೆ. ೪.೩ ಅಂಕವನ್ನು ಪಡೆದು ‘ಭಾರತ ೧೧೮ ನೆಯ ಸ್ಥಾನದಲ್ಲಿದೆ. ಈ ಹಿಂದೆ ೨೦೨೧ ರಲ್ಲಿ ಭಾರತ ೧೩೯ ನೆಯ, ೨೦೨೨ ರಲ್ಲಿ ೧೩೬ ನೆಯ ಹಾಗೂ ೨೦೨೩ ರಲ್ಲಿ ೧೨೬ ನೆಯ ಸ್ಥಾನದಲ್ಲಿತ್ತು. ಆದ್ದರಿಂದ ಹಿಂದಿನ ಕೆಲವು ವರ್ಷಗಳ ಕ್ರಮಾಂಕಕ್ಕನುಸಾರ ಭಾರತ ಇನ್ನೂ ಆನಂದದ ದಿಕ್ಕಿನಲ್ಲಿ ಪ್ರಯಾಣಿಸುತ್ತಿದೆ, ಎಂದು ಹೇಳಲು ಅಡ್ಡಿಯಿಲ್ಲ; ಆದರೆ ಈ ವರದಿಯಲ್ಲಿನ ಕೆಲವು ವಿಷಯಗಳು ಆಶ್ಚರ್ಯವುಂಟು ಮಾಡುತ್ತವೆ. ಕೇವಲ ಆಶ್ಚರ್ಯ ಮಾತ್ರವಲ್ಲ, ಈ ವರದಿಯ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನೆ ಮೂಡುತ್ತದೆ. ಏಕೆಂದರೆ, ಯುಕ್ರೇನ್, ಮೊಝಾಂಬಿಕ್, ಇರಾನ್, ಇರಾಕ್, ಪಾಕಿಸ್ತಾನ, ಪ್ಯಾಲೆಸ್ಟೈನ್, ಕಾಂಗೋ, ಯುಗಾಂಡಾ, ಗಾಂಬಿಯಾ ಮತ್ತು ವೆನೆಝುಯೆಲಾ ಮುಂತಾದ ಯುದ್ಧದ ಸ್ಥಿತಿ, ರಾಜಕೀಯ ಏರು-ಪೇರು, ಆರ್ಥಿಕ ಸಮಸ್ಯೆಗಳಲ್ಲಿ ಸಿಲುಕಿದ ದೇಶಗಳು ಈ ಕ್ರಮಾಂಕದಲ್ಲಿ ಭಾರತಕ್ಕಿಂತ ಮುಂದಿವೆ. ರಾಜಕೀಯ ಅಸ್ಥಿರತೆಯೊಳಗಾಗಿರುವ, ನಿರುದ್ಯೋಗದಿಂದ ಬಳಲುತ್ತಿರುವ ಬಾಂಗ್ಲಾದೇಶ ೧೩೪ ನೆಯ ಕ್ರಮಾಂಕದಲ್ಲಿದ್ದು ಭಾರತದಿಂದ ಕೇವಲ ೮ ಕ್ರಮಾಂಕದಲ್ಲಿ ಹಿಂದೆ ಉಳಿದಿದೆ. ಎಲ್ಲಿ ನಾಗರಿಕರ ದೈನಂದಿನ ಜೀವನವು ನರಕಮಯವಾಗಿದೆಯೊ, ಬೆಲೆಯೇರಿಕೆಯಿಂದ ನಲುಗಿ ಹೋಗಿರುವ, ಭಯೋತ್ಪಾದಕ ಚಟುವಟಿಕೆಗಳಿಂದ ಅಲ್ಲೋಲಕಲ್ಲೋಲವಾಗಿರುವ ಪಾಕಿಸ್ತಾನವೂ ಭಾರತದಿಂದ ಮುಂದೆ ಅಂದರೆ ೧೦೯ ನೆಯ ಕ್ರಮಾಂಕದಲ್ಲಿದೆ. ಯಾವ ಯರೋಪಿಯನ್ ದೇಶಗಳಿಂದ ಪ್ರತಿವರ್ಷ ಸಾವಿರಾರು ನಾಗರಿಕರು ಆನಂದಪ್ರಾಪ್ತಿಗಾಗಿ ಭಾರತಕ್ಕೆ ಬಂದು ಭಾರತೀಯ ಸಂಸ್ಕೃತಿಯನ್ನು ಅವಲಂಬಿಸುತ್ತಾರೋ, ಆ ಯುರೋಪ್ ದೇಶಗಳು ಜಾಗತಿಕ ಆನಂದದ ಮೊದಲನೆಯ ೨೦ ಕ್ರಮಾಂಕದಲ್ಲಿವೆ. ಆದ್ದರಿಂದ ಆಕ್ಸ್‌ಫರ್ಡ್‌ನ ‘ವೆಲ್‌ಬೀಯಿಂಗ್ ರಿಸರ್ಚ್ ಸೆಂಟರ್’ನ ಸದಸ್ಯರು ಈ ಸಮೀಕ್ಷೆಯನ್ನು ಯಾವ ‘ಆನಂದಾವಸ್ಥೆ ಯಲ್ಲಿ’ (ಮಾನದಂಡದಲ್ಲಿ) ಮಾಡಿದ್ದಾರೆ ? ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ.
ಆನಂದದ ಸಮೀಕ್ಷೆಯಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ, ಚೀನಾ, ಯುರೋಪಿಯನ್ ದೇಶಗಳು ಅಥವಾ ಇನ್ನಿತರ ಯಾವುದೇ ದೇಶಗಳು ಭಾರತಕ್ಕಿಂತ ಮುಂದೆ ಹೋದರೆ ಅದರಿಂದ ಭಾರತಕ್ಕೆ ಆನಂದವೇ ಆಗುತ್ತದೆ; ಏಕೆಂದರೆ ಭಾರತ ಯಾವಾಗಲೂ ವಿಶ್ವಕಲ್ಯಾಣದ ವಿಚಾರವಿಟ್ಟಿದೆ, ಅದರ ಪರಿಚಯ ಭಾರತದ ಆಧ್ಯಾತ್ಮಿಕ ಸಂಸ್ಕೃತಿಯಲ್ಲಿದೆ. ಆನಂದವಾಗಿರುವುದರ ಹಿಂದಿನ ಅತಿ ದೊಡ್ಡ ಕಾರಣವೆಂದರೆ, ಅದು ಇತರರ ಬಗ್ಗೆ ದ್ವೇಷ, ಅಸೂಯೆ ಪಡದಿರುವುದು ! ಆನಂದದ ಮೂಲ ಇದರಲ್ಲಿ ಅಡಗಿದೆ. ಪಾಕಿಸ್ತಾನ ಮತ್ತು ಚೀನಾ ಇವುಗಳನ್ನು ಭಾರತವು ಶತ್ರು ರಾಷ್ಟ್ರವೆಂದು ತಿಳಿಯುತ್ತದೆ; ಆದರೆ ಅವರೊಂದಿಗಿನ ಶತ್ರುತ್ವವು ಅವರ ಅಹಿತ ಸಾಧಿಸಲಿಕ್ಕಲ್ಲ, ಅದು ಅವರ ಭಾರತವಿರೋಧಿ ಕೃತ್ಯಗಳಿಗೆ ಮಾತ್ರ ಸೀಮಿತವಾಗಿದೆ. ತದ್ವಿರುದ್ಧ ಪಾಕಿಸ್ತಾನದ ಭಾರತದ್ವೇಷವು ಭಾರತೀಯರನ್ನು ನಷ್ಟಗೊಳಿಸುವ ಸಲುವಾಗಿದೆ. ಇದು ಭಾರತ ಮತ್ತು ಇತರ ರಾಷ್ಟ್ರಗಳಲ್ಲಿನ ವ್ಯತ್ಯಾಸವಾಗಿದೆ. ಆದರೂ ಪಾಕಿಸ್ತಾನದಂತಹ ರಾಷ್ಟ್ರಗಳು ಆನಂದದ ಕ್ರಮಾಂಕದಲ್ಲಿ ಭಾರತಕ್ಕಿಂತ ಮುಂದೆ ಇರುವುದೇ ಈ ಸಮೀಕ್ಷೆಯ ವಿಷಯ ದಲ್ಲಿರುವ ಪ್ರಶ್ನಾರ್ಥಕ ಚಿಹ್ನೆಯಾಗಿದೆ.
ಪಾಶ್ಚಾತ್ಯರು ಆನಂದಪ್ರಾಪ್ತಿಗಾಗಿ ಭಾರತಕ್ಕೆ ಬರುತ್ತಾರೆ !
ಜಗತ್ತಿನಲ್ಲಿ ಭಾರತವನ್ನು ಇತರ ದೇಶಗಳಿಗಿಂತ ಭಿನ್ನವೆಂದು ತಿಳಿಯಲಾಗುತ್ತದೆ, ಅದು ಇಲ್ಲಿನ ಆಧ್ಯಾತ್ಮಿಕತೆಯಿಂದಾಗಿ ! ಇತರ ರಾಷ್ಟ್ರಗಳು ತಮ್ಮ ಉತ್ಕರ್ಷಕ್ಕಾಗಿ ಮಾತ್ರ ಸೀಮಿತವಾಗಿವೆ; ಆದರೆ ಭಾರತದ ಪರಂಪರೆ ವಿಶ್ವಕಲ್ಯಾಣದ್ದಾಗಿದೆ. ನಾವು ಸುಖಿಯಾಗಬೇಕು ಹಾಗೂ ನೆರೆಯವರು ದುಃಖಿಯಾಗಬೇಕೆಂಬುದು ಭಾರತದ ಸಂಸ್ಕೃತಿಯಲ್ಲ. ಭಗವದ್ಗೀತೆಯಿರಲಿ, ವೇದ-ಉಪನಿಷತ್ತು ಇರಲಿ, ರಾಮಾಯಣ, ಭಾಗವತ ಇರಲಿ, ಭಾರತದ ಯಾವುದೇ ಆಧ್ಯಾತ್ಮಿಕ ಗ್ರಂಥಗಳು ವಿಶ್ವಕ್ಕೆ ದುಃಖದಿಂದ ಹೊರಬಂದು ಆನಂದಿತರಾಗುವ ಮಾರ್ಗವನ್ನು ತೋರಿಸುತ್ತದೆ. ಇಂತಹ ಒಂದೇಒಂದು ಗ್ರಂಥವೂ ಪಾಶ್ಚಾತ್ಯರ ಇತಿಹಾಸದಲ್ಲಿ ಹುಡುಕಿದರೂ ಸಿಗಲಿಕ್ಕಿಲ್ಲ. ಭಾರತದ ಆಧ್ಯಾತ್ಮಿಕ ವಂಶಾಧಿಕಾರ ಎಷ್ಟು ಶ್ರೇಷ್ಠವಾಗಿದೆಯೆಂದರೆ, ಅದನ್ನು ಖಡ್ಗ ಅಥವಾ ಯಾವುದೇ ಆಮಿಷದಿಂದ ಯಾರ ಮೇಲೆ ಕೂಡ ಹೇರುವ ಅವಶ್ಯಕತೆಯಿಲ್ಲ. ಇತ್ತಿಚೆಗಷ್ಟೇ ಪ್ರಯಾಗರಾಜದಲ್ಲಿ ನೆರವೇರಿದ ಮಹಾಕುಂಭಪರ್ವದಲ್ಲಿ ನೂರಾರು ಪಾಶ್ಚಾತ್ಯರು ಹಿಂದೂ ಧರ್ಮವನ್ನು ಸ್ವೀಕರಿಸಿದರು. ಪ್ರತಿವರ್ಷ ಅನೇಕ ಪಾಶ್ಚಾತ್ಯರು ಹಿಂದೂ ಸಂಸ್ಕೃತಿಯ ಅಧ್ಯಯನಕ್ಕಾಗಿ ಭಾರತಕ್ಕೆ ಬರುತ್ತಾರೆ. ಆನಂದದ ಸಮೀಕ್ಷೆಗಾಗಿ ‘ವೆಲ್‌ಬೀಯಿಂಗ್ ರಿಸರ್ಚ್ ಸೆಂಟರ್’ ಯಾವ ಮಾನದಂಡವನ್ನು ಅವಲಂಬಿಸಿದೆಯೋ, ಅದನ್ನು ತ್ಯಜಿಸಿ ಪ್ರತಿವರ್ಷ ಅನೇಕ ಪಾಶ್ಚಾತ್ಯರು ಆನಂದವನ್ನು ಹುಡುಕಲು ಭಾರತಕ್ಕೆ ಬರುತ್ತಾರೆ ಹಾಗೂ ಹಿಂದೂ ಧರ್ಮವನ್ನು ಸ್ವೀಕರಿಸುತ್ತಾರೆ. ಇದರಿಂದ ಆನಂದವು ಸಂಪತ್ತು, ಸ್ವಾತಂತ್ರ್ಯ, ಆರೋಗ್ಯ ಇತ್ಯಾದಿಗಳ ಆಚೆಗಿದೆ, ಎಂಬುದನ್ನು ‘ವೆಲ್‌ಬೀಯಿಂಗ್ ರಿಸರ್ಚ್ ಸೆಂಟರ್’ ಗಮನಿಸಬೇಕು. ಅವರು ಮಾಡುವ ಎಲ್ಲ ಸಮೀಕ್ಷೆಗಳು ಭೌತಿಕ ಸುಖಕ್ಕಾಗಿ ಮಾತ್ರ ಸೀಮಿತವಾಗಿವೆ.
ಆನಂದದ ಮಾಪನವಲ್ಲ, ಸುಖಭೋಗದ ಮಾಪನ !
‘ವೆಲ್‌ಬೀಯಿಂಗ್ ರಿಸರ್ಚ್ ಸೆಂಟರ್’ನಿಂದ ೨೦೧೨ ರಿಂದ ಜಾಗತಿಕ ಆನಂದದ ಕ್ರಮಾಂಕವನ್ನು ಘೋಷಣೆ ಮಾಡಲಾಗುತ್ತದೆ. ಇದಕ್ಕಾಗಿ ವಿವಿಧ ದೇಶಗಳಲ್ಲಿನ ೧ ಸಾವಿರ ನಾಗರಿಕರ ಸಮೀಕ್ಷೆ ಮಾಡಲಾಗುತ್ತದೆ. ಆರೋಗ್ಯ, ಸಂಪತ್ತು, ಸ್ವಾತಂತ್ರ್ಯ, ಔದಾರ್ಯ, ಭ್ರಷ್ಟಾಚಾರಮುಕ್ತ ಜೀವನ ಇತ್ಯಾದಿ ವಿವಿಧ ಘಟಕಗಳ ಆಧಾರದಲ್ಲಿ ನಾಗರಿಕರ ಜೀವನವನ್ನು ಆವಲೋಕಿಸಿ ಅವರ ಆನಂದದ ಸ್ಥಿತಿಯನ್ನು ಅಳೆಯಲಾಗುತ್ತದೆ ಹಾಗೂ ೧೦ ರಲ್ಲಿ ಅಂಕವನ್ನು ನೀಡಲಾಗುತ್ತದೆ. ‘ವೆಲ್‌ಬೀಯಿಂಗ್ ರಿಸರ್ಚ್ ಸೆಂಟರ್’, ‘ಗೆಲಪ್’ ಹಾಗೂ ‘ಯುನೈಟೆಡ್ ನ್ಯಾಶನಲ್ ಸಸ್ಟೈನೇಬಲ್ ಡೆವಲಪ್‌ಮೆಂಟ್ ಸೊಲ್ಯುಶನ್ಸ್ ನೆಟ್ವರ್ಕ್’ ಇವರ ಪಾಲುದಾರಿಕೆಯೊಂದಿಗೆ ಅಂದರೆ ಆರ್ಥಿಕ ಸಹಾಯ ಪಡೆದು ಈ ಸಮೀಕ್ಷೆ ಮಾಡುತ್ತದೆ. ‘ಗೆಲಪ್’ನ ವಿಶೇಷ ಕಾರ್ಯಕಾರಿ ಅಧಿಕಾರಿ ಜಾನ್ ಕ್ಲಿಫ್ಟನ್ ಇವರು ಆನಂದದ ಈ ಕ್ರಮಾಂಕದ ಬಗ್ಗೆ ಅಭಿಪ್ರಾಯ ನೀಡುವಾಗ ‘ಆನಂದವನ್ನು ಕೇವಲ ಹಣವನ್ನು ಕೇಂದ್ರವಾಗಿಟ್ಟುಕೊಂಡು ಮಾಪನ ಮಾಡುತ್ತಿಲ್ಲ’, ಎಂದು ಹೇಳಿದರು. ಜಾನ್ ಕ್ಲಿಫ್ಟನ್ ಇವರ ಅಭಿಪ್ರಾಯ ಯೋಗ್ಯವಿದೆ. ಆನಂದದ ಮಾಪನ ಹಣದಿಂದ ಆಗುತ್ತಿದ್ದರೆ, ಜಗತ್ತಿನ ಶ್ರೀಮಂತರೆಲ್ಲರೂ ಆನಂದದಲ್ಲಿರುತ್ತಿದ್ದರು. ಸಂಪತ್ತು, ಆರೋಗ್ಯ, ಸ್ವಾತಂತ್ರ್ಯ ಇತ್ಯಾದಿ ಆನಂದದ ಸಮೀಕ್ಷೆಗಾಗಿ ಅವರು ಮಾನದಂಡ ವನ್ನು ಆರಿಸಿದ್ದಾರೆ, ಅದು ಅತ್ಯಂತ ಅಯೋಗ್ಯ ಪದ್ಧತಿಯಾಗಿದೆ. ಇದು ಆನಂದದ್ದಲ್ಲ; ಸುಖದ ನಿರ್ದೇಶಾಂಕವಾಗಿದೆ.
ಜೀವನದಲ್ಲಿನ ಈ ಘಟಕಗಳು ಏರು-ಪೇರಾಗುತ್ತಾ ಇರುತ್ತವೆ. ಯಾವಾಗ ಅದು ಇರುತ್ತದೋ, ಆಗ ಮನುಷ್ಯ ತನ್ನನ್ನು ಸುಖಿಯೆಂದು ತಿಳಿಯುತ್ತಾನೆ ಹಾಗೂ ಇಲ್ಲದಿದ್ದರೆ ಅವನು ದುಃಖಿಯಾಗುತ್ತಾನೆ. ಜನಸಾಮಾನ್ಯರ ಜೀವನದಲ್ಲಿನ ಈ ಸುಖ-ದುಃಖದ ಆಚೆಗೆ ಆನಂದವಿರುತ್ತದೆ. ಪಾಶ್ಚಾತ್ಯ ದೇಶಗಳ ಸುಖದ ಕಲ್ಪನೆ ಭೌತಿಕ ವಿಷಯವನ್ನು ಅವಲಂಬಿಸಿರುತ್ತದೆ; ಆದರೆ ಆನಂದ ಇದು ಭೌತಿಕ ವಿಷಯಗಳನ್ನು ತ್ಯಜಿಸುವುದರಿಂದ ಸಿಗುತ್ತದೆ. ಭಗವಂತನು ಮಾತ್ರ ಶಾಶ್ವತನಾಗಿದ್ದಾನೆ ಹಾಗೂ ‘ಸಚ್ಚಿದಾನಂದ’ವು ಅದರ ಗುಣವೈಶಿಷ್ಟ್ಯವಾಗಿದೆ. ಭಾರತದಲ್ಲಿ ಅನೇಕ ಸಂತರು ಭೌತಿಕ ಸುಖವನ್ನು ತ್ಯಜಿಸಿ ಈಶ್ವರಪ್ರಾಪ್ತಿಗಾಗಿ ಸಾಧನೆ ಮಾಡುತ್ತಿದ್ದಾರೆ ಹಾಗೂ ಸದಾ ಆನಂದದಲ್ಲಿರುತ್ತಾರೆ. ಪಾಶ್ಚಾತ್ಯರಿಗೆ ನಿಜವಾಗಿಯೂ ಆನಂದದ ಕ್ರಮಾಂಕವನ್ನು ಹುಡುಕಲಿಕ್ಕಿದ್ದರೆ, ಅವರು ಮೊದಲು ಭಾರತೀಯ ಸಂಸ್ಕೃತಿಯ ಅಧ್ಯಯನ ಮಾಡಬೇಕು. ಸಾಧನೆಯನ್ನು ತಿಳಿದುಕೊಳ್ಳಬೇಕು. ಸ್ವತಃ ಸಾಧನೆ ಮಾಡಿ ಆನಂದದ ಆತ್ಮಾನುಭೂತಿ ಪಡೆಯಬೇಕಾಗುತ್ತದೆ. ಜೀವನದಲ್ಲಿ ಆನಂದದ ಅನುಭೂತಿಯನ್ನು ಪಡೆಯದೆಯೆ ಆನಂದದ ಸಮೀಕ್ಷೆ ಮಾಡುವುದು ಮೂಲತಃ ಹಾಸ್ಯಾಸ್ಪದವಾಗಿದೆ. ಸದ್ಯ ಭೌತಿಕ ಸುಖವನ್ನು ಆನಂದವೆಂದು ತಿಳಿದು ಅದರ ಸಮೀಕ್ಷೆ ನಡೆಯುತ್ತಿದೆ. ಇದರಲ್ಲಿ ಪಾಶ್ಚಾತ್ಯರ ತಪ್ಪೇನಿಲ್ಲ; ಏಕೆಂದರೆ ಅವರ ಪಂಥ ಅಷ್ಟಕ್ಕೇ ಮಾತ್ರ ಸೀಮಿತವಾಗಿದೆ; ಆದರೆ ಇದರಿಂದ ಭಾರತದ ಮಹಾನ್ ಸಂಸ್ಕೃತಿಯ ಶ್ರೇಷ್ಠತೆಯು ಇನ್ನಷ್ಟು ಪ್ರಜ್ವಲಿಸುತ್ತದೆ !