‘ಅಬೂ ಆಜ್ಮಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ!’ – ಮೈತ್ರೀಕೂಟ

  • ಆಜ್ಮಿ ಅವರ ಅಮಾನತ್ತಿಗೆ ವಿಧಾನಸಭೆಯಲ್ಲಿ ಮೈತ್ರೀಕೂಟ ಆಕ್ರಮಣಕಾರಿ

  • ಔರಂಗಜೇಬ್‌ ಹೊಗಳಿದ ಕುರಿತು ವಿಧಾನಮಂಡಳದಲ್ಲಿ ಗದ್ದಲ, ಸಂಪೂರ್ಣ ದಿನ ಕಾರ್ಯ ಸ್ಥಗಿತ!

ಮುಂಬಯಿ, ಮಾರ್ಚ್ 4 (ವಾರ್ತಾ): ಔರಂಗಜೇಬ್‌ನನ್ನು ಹೊಗಳಿದ ಸಮಾಜವಾದಿ ಪಕ್ಷದ ಶಾಸಕ ಅಬೂ ಆಜ್ಮಿ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಅಮಾನತುಗೊಳಿಸಬೇಕು ಎಂದು ಮಾರ್ಚ್ 4 ರಂದು ವಿಧಾನಸಭೆಯಲ್ಲಿ ಮಹಾಯುತಿಯ ಶಾಸಕರು ಬಲವಾಗಿ ಪ್ರತಿಭಟನೆ ನಡೆಸಿದರು. ಸಭಾಧ್ಯಕ್ಷರ ಆಸನದ ಎದುರಿಗೆ ಬಂದು ಮಹಾಯುತಿಯ ಶಾಸಕರು ‘ಛತ್ರಪತಿ ಶಿವಾಜಿ ಮಹಾರಾಜ ಕೀ ಜೈ!’, ‘ಧರ್ಮವೀರ ಸಂಭಾಜಿ ಮಹಾರಾಜ ಕೀ ಜೈ!’, ‘ಹರ ಹರ ಮಹಾದೇವ್!’ ಮುಂತಾದ ಘೋಷಣೆಗಳನ್ನು ಕೂಗಿದರು. ಅಬೂ ಆಜ್ಮಿ ಅವರ ವಿರುದ್ಧ ಮಹಾಯುತಿ ಘೋಷಣೆಗಳನ್ನು ನೀಡಿದ ಪರಿಣಾಮ, ವಿಧಾನಸಭೆ ಕಾರ್ಯವನ್ನು 10 ನಿಮಿಷ, ಅರ್ಧ ಗಂಟೆ, 15 ನಿಮಿಷ, ನಂತರ ಸಂಪೂರ್ಣ ದಿನದವರೆಗೆ ಸ್ಥಗಿತಗೊಳಿಸಲಾಯಿತು.

ಬೆಳಗ್ಗೆ 11 ಗಂಟೆಗೆ ವಿಧಾನಸಭೆ ಕಾರ್ಯಾರಂಭವಾಗುತ್ತಿದ್ದಂತೆ ಮಹಾಯುತಿಯ ಶಾಸಕರು ಅಬೂ ಆಜ್ಮಿ ಅವರ ವಿರುದ್ಧ ಪ್ರಕರಣ ದಾಖಲಿಸಿ, ಅವರನ್ನು ಅಮಾನತು ಮಾಡಲು ಆಗ್ರಹಿಸಿದರು. ಈ ಸಂದರ್ಭ ಉದ್ಧವ ಬಾಳಾಸಾಹೇಬ ಠಾಕ್ರೆ ಗುಂಪಿನ ಭಾಸ್ಕರ್ ಜಾಧವ ಅವರು ಸಹ ಅಬೂ ಆಜ್ಮಿ ಅವರನ್ನು ಅಮಾನತು ಮಾಡಲು ಒತ್ತಾಯಿಸಿದರು. ಈ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷ ರಾಹುಲ್ ನಾರ್ವೇಕರ್ ಎಲ್ಲಾ ಸದಸ್ಯರಿಗೆ ಶಾಂತವಾಗಿರಲು ಮನವಿ ಮಾಡಿದರು; ಆದರೆ ಗದ್ದಲ ಮುಂದುವರೆದ ಕಾರಣ, ಅಧ್ಯಕ್ಷರು ದಿನಪೂರ್ತಿ ವಿಧಾನಸಭಾ ಕಾರ್ಯವನ್ನು ಸ್ಥಗಿತಗೊಳಿಸಿದರು.

“ಈ ದೇಶದ್ರೋಹಿಗೆ ವಿಧಾನಮಂಡಳದಲ್ಲಿ ಕುಳಿತುಕೊಳ್ಳುವ ಹಕ್ಕಿಲ್ಲ!” – ಉಪಮುಖ್ಯಮಂತ್ರಿ ಏಕನಾಥ್ ಶಿಂದೆ

ಔರಂಗಜೇಬನು 40 ದಿನಗಳ ಕಾಲ ಧರ್ಮವೀರ ಸಂಭಾಜಿ ಮಹಾರಾಜರಿಗೆ ಚಿತ್ರಹಿಂಸೆ ನೀಡಿದನು. ಅವರ ಧರ್ಮ ಬದಲಿಸಲು ಪ್ರಯತ್ನಿಸಿದ. ಔರಂಗಜೇಬನು ಹಲವಾರು ಮಂದಿರಗಳನ್ನು ಧ್ವಂಸಗೊಳಿಸಿದ. ಮಹಿಳೆಯರ ಮೇಲೂ ಅತ್ಯಾಚಾರ ಮಾಡಿದ. ತನ್ನ ತಂದೆಯನ್ನು ಕಾರಾಗೃಹದಲ್ಲಿ ಹಾಕಿ ತಮ್ಮ ಸಹೋದರನನ್ನು ಕೊಂದ. ಧರ್ಮವೀರ ಸಂಭಾಜಿ ಮಹಾರಾಜ ಇವರ ಹಂತಕನನ್ನು ಅಬೂ ಆಜ್ಮಿ ಹೊಗಳಿದ್ದಾರೆ. ಈ ಹಿಂದೆಯೂ ಅಬೂ ಆಜ್ಮಿ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಅಪಮಾನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಅಬೂ ಆಜ್ಮಿ ನಿರಂತರವಾಗಿ ಛತ್ರಪತಿ ಶಿವಾಜಿ ಮಹಾರಾಜ ಮತ್ತು ಧರ್ಮವೀರ ಸಂಭಾಜಿ ಮಹಾರಾಜರನ್ನು ಉದ್ದೇಶಪೂರ್ವಕವಾಗಿ ಅವಮಾನ ಮಾಡಿದ್ದಾನೆ. ಈ ದೇಶದ್ರೋಹಿಗೆ ವಿಧಾನಸಭೆಯಲ್ಲಿ ಕುಳಿತುಕೊಳ್ಳುವ ಹಕ್ಕಿಲ್ಲ.

ಔರಂಗಜೇಬನ ಗೋರಿ ಕೆಡವಲು ತಕ್ಷಣ ನಿರ್ಧಾರ ಕೈಗೊಳ್ಳಬೇಕು! – ಭಾಜಪ ನಾಯಕ ಸುಧೀರ್ ಮುನಗಂಟಿವಾರ್

ಮತಗಳ ಓಲೈಕೆಗಾಗಿ ಅಬು ಆಜ್ಮಿ ಔರಂಗಜೇಬನ ವೈಭವೀಕರಣ ಮಾಡುತ್ತಿದ್ದಾರೆ. ಅಧ್ಯಕ್ಷರ ಆಸನದ ಮೇಲೆ ‘ಧರ್ಮಚಕ್ರ ಪ್ರವರ್ತನಾಯ’ ಎಂದು ಬರೆಯಲಾಗಿದೆ ಮತ್ತು ಸಭಾಂಗಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ತೈಲಚಿತ್ರವಿದೆ. ಆದ್ದರಿಂದ, ಅಧ್ಯಕ್ಷರು ಸಂವಿಧಾನದ ಅಧಿಕಾರ ಬಳಸಿ ಅಬು ಆಜ್ಮಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಸರಕಾರವು ಔರಂಗಜೇಬನ ಗೋರಿ ಕೆಡವಲು ಈಗಲೇ ನಿರ್ಧಾರ ತೆಗೆದುಕೊಳ್ಳಬೇಕು, ಎಂದು ಹೇಳಿದರು.

ಔರಂಗಜೇಬನ ಸಂತತಿಯನ್ನು ಮಟ್ಟಹಾಕಿ! – ಶಾಸಕ ಮಹೇಶ ಲಾಂಡಗೆ

ಭಾಜಪದ ಶಾಸಕ ಮಹೇಶ್ ಲಾಂಡಗೆ ಇವರು, “ಮುಸ್ಲಿಂ ಸಮುದಾಯದ ಮತಗಳನ್ನು ಪಡೆಯಲು ಅಬು ಆಜ್ಮಿ ಔರಂಗಜೇಬನ ವೈಭವೀಕರಣ ಮಾಡುತ್ತಿದ್ದಾರೆ. ಅಂತಹ ಔರಂಗಜೇಬನ ಸಂತತಿಯನ್ನು ಮಟ್ಟಹಾಕಬೇಕು” ಎಂದು ಹೇಳಿದರು.

ಅಬು ಆಜ್ಮಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ! – ಶಾಸಕ ಅತುಲ್ ಭಾತಖಳ್ಕರ್

ಭಾಜಪದ ಶಾಸಕ ಅತುಲ್ ಭಾತಖಳ್ಕರ್ ಇವರು, “ಔರಂಗಜೇಬ ತುಳಜಾಪುರದ ಶ್ರೀ ಭವಾನಿ ಮಾತೆಯ ದೇವಾಲಯವನ್ನು ನಾಶಮಾಡಲು ಪ್ರಯತ್ನಿಸಿದನು. ಹಿಂದೂಗಳ ಮೇಲೆ ಜಜಿಯಾ ತೆರಿಗೆ ವಿಧಿಸಿದನು. ಕಾಶಿ ವಿಶ್ವನಾಥನ ದೇವಾಲಯವನ್ನು ನಾಶಮಾಡಿದನು. ಅಂತಹ ಔರಂಗಜೇಬನ ವೈಭವೀಕರಣ ಮಾಡುವ ಅಬು ಆಜ್ಮಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಮತ್ತು ಅಧಿವೇಶನದವರೆಗೆ ಅಮಾನತುಗೊಳಿಸಬೇಕು” ಎಂದು ಹೇಳಿದರು.

ಅಬು ಆಜ್ಮಿ ಅವರಿಗೆ ವಿಧಾನಸಭೆಯಲ್ಲಿ ಕುಳಿತುಕೊಳ್ಳುವ ಹಕ್ಕಿಲ್ಲ! – ಸಚಿವ ಗುಲಾಬರಾವ್ ಪಾಟೀಲ್

ಸಚಿವ ಗುಲಾಬರಾವ್ ಪಾಟೀಲ್ ಇವರು, “ಔರಂಗಜೇಬನ ವೈಭವೀಕರಣ ಮಾಡುವ ಅಬು ಆಜ್ಮಿ ಅವರಿಗೆ ವಿಧಾನಸಭೆಯಲ್ಲಿ ಕುಳಿತುಕೊಳ್ಳುವ ಹಕ್ಕಿಲ್ಲ” ಎಂದು ಹೇಳಿದರು.

ವಿಧಾನ ಪರಿಷತ್ತಿನ ಕಲಾಪವೂ ದಿನವಿಡೀ ಸ್ಥಗಿತ!

ವಿಧಾನ ಪರಿಷತ್ತಿನಲ್ಲಿಯೂ ಮಹಾಯುತಿ ಶಾಸಕರು ಅಬು ಆಜ್ಮಿ ಅವರ ಅಮಾನತಿಗೆ ಆಗ್ರಹಿಸಿದರು. ಈ ವೇಳೆ ಗದ್ದಲ ಉಂಟಾದ ಕಾರಣ ಮೊದಲು 15 ನಿಮಿಷ, ನಂತರ ಅರ್ಧ ಗಂಟೆ, ನಂತರ ದಿನವಿಡೀ ವಿಧಾನ ಪರಿಷತ್ತಿನ ಕಲಾಪವನ್ನು ಸ್ಥಗಿತಗೊಳಿಸಲಾಯಿತು.