ಮಹಾಶಿವರಾತ್ರಿಯ ವ್ರತವನ್ನು ಮಾಡುವ ಹಿಂದಿನ ಕಾರಣ

ಶಿವನ ಮಸ್ತಕದಿಂದ ಹರಿಯುವ ಗಂಗೆಯು ಜ್ಞಾನದ ಗಂಗೆಯಾಗಿದೆ. ಮಹಾಶಿವರಾತ್ರಿಯ ವ್ರತವನ್ನು ಹೇಗೆ ಒಳ್ಳೆಯ ಚಿಂತನೆಗಾಗಿ ಮಾಡಬೇಕಾಗಿದೆಯೋ, ಅದೇ ರೀತಿ ಜ್ಞಾನಾಸಕ್ತನಾಗಲೂ ಮಾಡಬೇಕಾಗಿದೆ. ಶಿವನ ಉಪಾಸನೆಯನ್ನು ಮಾಡುವವನು ಜ್ಞಾನಾಸಕ್ತನಾಗಿರಬೇಕು, ಎಂಬ ಷರತ್ತು ಇದೆ. ಇಂತಹ ಷರತ್ತು ಹಾಕುವ ಹಿಂದೆ ಬಹಳ ದೊಡ್ಡ ವಿಚಾರ ಅಡಗಿದೆ. ಮಾನವನ ಜೀವನ ಸರಳ ಸುಲಭವಲ್ಲ. ಮಾನವನ ಜೀವನದಲ್ಲಿ ಅಂತ್ಯವಿಲ್ಲದ ತೊಂದರೆಗಳು ಮತ್ತು ಸಂಕಟಗಳು ಬರುತ್ತವೆ, ದುಃಖಗಳ ಪರ್ವತಗಳು ಕುಸಿಯುತ್ತವೆ. ಇಂತಹ ಸ್ಥಿತಿಯಲ್ಲಿ ಅವನ ಮನಸ್ಸು ಅಲ್ಲೋಲಕಲ್ಲೋಲವಾಗುತ್ತದೆ. ಬುದ್ಧಿ ಇದ್ದರೂ ಅದು ಹೆಪ್ಪುಗಟ್ಟು ತ್ತದೆ. ಏನು ಮಾಡಬೇಕು ? ಎಂದು ಅವನಿಗೆ ತಿಳಿಯುವುದಿಲ್ಲ. ಹತಾಶೆಗೊಂಡ ಮತ್ತು ದುರ್ಬಲವಾದ ಮನಸ್ಸು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತದೆ. ಈ ದುಷ್ಟಚಕ್ರದಿಂದ ಪಾರಾಗಲೆಂದೇ ಮಹಾಶಿವರಾತ್ರಿಯ ವ್ರತವನ್ನು ಮಾಡಬೇಕಾಗಿದೆ. ಈ ವ್ರತದ ಹಿಂದಿನ ನಿಜವಾದ ಉದ್ದೇಶವನ್ನು ನಾವು ತಿಳಿದುಕೊಳ್ಳೋಣ.

ಮಹಾಶಿವರಾತ್ರಿಯ ವ್ರತದ ನಿಜವಾದ ಉದ್ದೇಶ

ಶಿವನ ಜಟೆಯಿಂದ ಯಾವ ರೀತಿಯ ಗಂಗೆಯು ರಭಸದಿಂದ ಹೊರಗೆ ಬರುತ್ತಾಳೆಯೋ, ಅದೇ ರೀತಿ ಜ್ಞಾನಿ ಮನುಷ್ಯನ ವಿಶುದ್ಧ ಬುದ್ಧಿಯಲ್ಲಿ ಕಠಿಣ ಪ್ರಸಂಗಗಳಿಂದ ಮಾರ್ಗವನ್ನು ಕಂಡು ಹಿಡಿಯುವ ಮತ್ತು ಧ್ಯೇಯವನ್ನು ಸಂಪಾದಿಸುವ ಆತ್ಮವಿಶ್ವಾಸವನ್ನು ಪ್ರಾಪ್ತಮಾಡಿ ಕೊಳ್ಳುವುದಕ್ಕಾಗಿ ಶಿವನ ಉಪಾಸನೆಯನ್ನು ಮಾಡಬೇಕಾಗುತ್ತದೆ. ಜ್ಞಾನವು ಬಹಳ ತೇಜಸ್ವಿಯಾಗಿರುತ್ತದೆ. ಭಗವಾನ ಶ್ರೀಕೃಷ್ಣನು ಗೀತೆಯಲ್ಲಿ ಹೇಳುತ್ತಾನೆ, ”ಜ್ಞಾನರೂಪಿ ಅಗ್ನಿಯಿಂದ ಎಲ್ಲ ಕರ್ಮಗಳು ಸುಟ್ಟು ಹೋಗುತ್ತವೆ.’’ ಇದರ ಅರ್ಥ ಹೇಗಿದೆಯೆಂದರೆ, ವಾಸನಾ ಮತ್ತು ಕಾಮನೆಯಂತಹ ಅನೇಕ ವಿಕಾರಗಳು ಮನುಷ್ಯನ
ಮೇಲೆ ಆಕ್ರಮಣ ಮಾಡುತ್ತವೆ. ಈ ವಿಕಾರಗಳನ್ನು ಸುಟ್ಟು ಹಾಕಲು ಅಥವಾ ನಾಶ ಮಾಡಲು ಮನುಷ್ಯನು ಜ್ಞಾನಾಸಕ್ತನಾಗಿರಬೇಕು. ವಾಸನಾಸಕ್ತ ಮತ್ತು ಕಾಮಾಸಕ್ತನಾಗಿ ಯಾವುದೇ ಉಪಾಸನೆ ಯನ್ನು ಮಾಡಲು ಆಗುವುದಿಲ್ಲ. ವಾಸನಾಸಕ್ತ, ಕಾಮಾಸಕ್ತನಾಗಿ ಮಾಡಿದ ಉಪಾಸನೆ ಜ್ಞಾನ, ಪ್ರೇಮ(ಪ್ರೀತಿ), ವೈಭವ ಮತ್ತು ಸೌಂದರ್ಯವನ್ನು ಪ್ರಾಪ್ತಮಾಡಿಕೊಡುವುದಿಲ್ಲ. ಇದೆಲ್ಲವನ್ನು ಗಮನದಲ್ಲಿಟ್ಟು ಕೊಂಡು ನಾವು ಮಹಾಶಿವರಾತ್ರಿಯ ವ್ರತವನ್ನು ಮಾಡಬೇಕಾಗಿದೆ.

ನಿಜವಾದ ಜ್ಞಾನಿ ಯಾರು ?

ಭಗವಾನ ಮಹಾದೇವನು ಸಮುದ್ರ ಮಂಥನದಿಂದ ಹೊರಗೆ ಬಂದ ವಿಷವನ್ನು ಪ್ರಾಶನ ಮಾಡಿದನು. ಪ್ರಾಶನ ಮಾಡಿದ ವಿಷವನ್ನು ಅವನು ಮಸ್ತಕದಲ್ಲಿ ಮತ್ತು ಹೃದಯದೊಳಗೆ ಅಂದರೆ ಅಂತರಂಗದೊಳಗೆ ಪ್ರವೇಶಿಸಲು ಬಿಡಲಿಲ್ಲ. ಅದನ್ನು ಅವನು ತನ್ನ ಕಂಠದಲ್ಲಿಯೇ ಇಟ್ಟುಕೊಂಡನು. ಆದುದರಿಂದ ಅವನ ಕಂಠವು ನೀಲಿಯಾಯಿತೆಂದು ಅವನನ್ನು ‘ನೀಲಕಂಠ’ ಎಂದು ಕರೆಯುತ್ತಾರೆ. ಇದರ ಅರ್ಥ ನಾವು ಸಹ ನಮ್ಮ ಬುದ್ಧಿಯೊಳಗೆ ಮತ್ತು ಅಂತಃಕರಣದೊಳಗೆ ಅಪಾಯಕಾರಿಯಾದ ವಿಷಕಾರಿ ವಿಚಾರಗಳನ್ನು ಒಳಗೆ ಪ್ರವೇಶಿಸಲು ಬಿಡಬಾರದು. ಇಂತಹ ವಿಷಕಾರಿ ವಿಚಾರಗಳು ಸಂಪೂರ್ಣ ಮಾನವ ಸಮಾಜವನ್ನು ನಾಶ ಮಾಡಿಬಿಡುತ್ತವೆ. ಈ ರೀತಿ ಯಾರು ತಮ್ಮ ಬುದ್ಧಿಯಲ್ಲಿ ಮತ್ತು ಅಂತಃಕರಣದಲ್ಲಿ ಅಯೋಗ್ಯ ಮತ್ತು ಅಪಾಯಕಾರಿ ವಿಚಾರಗಳನ್ನು ಮತ್ತು ವಿಕಾರಗಳನ್ನು ನೆಲೆಯೂರಲು ಬಿಡುವುದಿಲ್ಲವೋ, ಅವನಿಗೇ ‘ಜ್ಞಾನಿ’ ಎಂದು ಹೇಳುತ್ತಾರೆ. ಅವನೇ ನಿಜವಾದ ಜ್ಞಾನಿಯಾಗಿದ್ದಾನೆ.

– ಶ್ರೀ ದುರ್ಗೇಶ ಪರೂಳಕರ, ಹಿಂದುತ್ವನಿಷ್ಠ ವ್ಯಾಖ್ಯಾನಕಾರರು ಮತ್ತು ಲೇಖಕರು, ಡೊಂಬಿವಲಿ (೭.೨.೨೦೨೩)