‘ಗ್ರೀನ್‌ ಜಿಡಿಪಿ’ : ಪರಿಸರ ಪ್ರೇಮವೋ ಅಥವಾ ನವ ವಸಾಹತುವಾದದ ಸಾಧನ ?

ಬಿಲ್‌ ಗೇಟ್ಸ್ ಇವರೊಂದಿಗೆ ಚರ್ಚಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ

(ಟಿಪ್ಪಣಿ : ಪರಿಸರಕ್ಕೆ ಅತಿ ಕಡಿಮೆ ಹಾನಿಯಾಗುವಂತೆ ಆರ್ಥಿಕ ವಿಕಾಸಕ್ಕೆ ಆದ್ಯತೆ ನೀಡುವುದೆಂದರೆ, ‘ಗ್ರೀನ್‌ ಜಿಡಿಪಿ’ !)

‘ಮೈಕ್ರೋಸಾಫ್ಟ್‌’ ಕಂಪನಿಯ ಮುಖ್ಯಸ್ಥ ಹಾಗೂ ಜಗತ್ಪ್ರಸಿದ್ಧ ಅಬ್ಜಾಧೀಶ ಬಿಲ್‌ ಗೇಟ್ಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ಇವರಲ್ಲಿ ಇತ್ತೀಚೆಗಷ್ಟೆ ಚರ್ಚೆ ನಡೆಯಿತು. ಅದರಲ್ಲಿ ಅವರು ಒತ್ತಿ ಕೇಳಿದ ಒಂದು ಪ್ರಶ್ನೆ ಏನೆಂದರೆ, ‘ಗ್ರೀನ್‌ ಜಿಡಿಪಿ’ಯ ವಿಷಯದಲ್ಲಿ ಭಾರತದ ವಿಚಾರ ಏನಿದೆ ? ಸದ್ಯ ಭಾರತವು ‘ಗ್ರೀನ್‌ ಜಿಡಿಪಿ’ಯನ್ನು ಅನುಸರಿಸಬೇಕೆಂದು ಪಶ್ಚಿಮ ದೇಶಗಳಿಂದ ಬೇಡಿಕೆ ಬರುತ್ತಿದೆ. ಬಿಲ್‌ ಗೇಟ್ಸ್ ಇವರ ಪ್ರಶ್ನೆಗೆ ಉತ್ತರ ನೀಡುವಾಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದರು, ”ನಿಜವಾಗಿಯೂ ಇದನ್ನು ಪ್ರತಿಯೊಂದು ದೇಶವೂ ಮಾಡಬೇಕು. ನಾವು ಈ ವಿಷಯದಲ್ಲಿ ೨ ಪದ್ಧತಿಗಳಲ್ಲಿ ಕಾರ್ಯವನ್ನು ಮಾಡುತ್ತಿದ್ದೇವೆ. ಒಂದು ಪರಿಸರಸ್ನೇಹಿ ಅಥವಾ ಪರಿಸರಕ್ಕೆ ಅತಿ ಕಡಿಮೆ ಹಾನಿಯಾಗುವಂತಹ ತಂತ್ರಜ್ಞಾನದ ಶೋಧನೆ ಹಾಗೂ ವಿಕಾಸವಾಗಬೇಕೆಂದು ನಾವು ಆಯವ್ಯಯಪಟ್ಟಿಯಲ್ಲಿ ೧ ಲಕ್ಷ ಕೋಟಿ ರೂಪಾಯಿಗಳ ವ್ಯವಸ್ಥೆ ಮಾಡಿದ್ದೇವೆ. ಇನ್ನೊಂದು ವಿಷಯವೆಂದರೆ, ದೇಶದಾದ್ಯಂತದ ವಿದ್ಯಾರ್ಥಿಗಳನ್ನು ಅದಕ್ಕಾಗಿ ಪ್ರೇರೇಪಿಸಲಾಗುತ್ತದೆ. ಯಾವುದೇ ರೀತಿಯ ಆರ್ಥಿಕ ವಿಕಾಸವು ಪರಿಸರಪೂರಕವಾಗಿರಬೇಕು. ಇದು ಭಾರತದ ನಿಲುವಾಗಿದೆ.’’ ಈ ನಿಮಿತ್ತ ‘ಗ್ರೀನ್‌ ಜಿಡಿಪಿ’ಯ ವಿಷಯ ಚರ್ಚೆಯಲ್ಲಿದೆ.

ಡಾ. ಶೈಲೇಂದ್ರ ದೇವಳಾಣಕರ

೧. ಭಾರತದ ಆರ್ಥಿಕ ವಿಕಾಸವನ್ನು ತಡೆಗಟ್ಟುವ ಪಾಶ್ಚಿಮಾತ್ಯ ದೇಶಗಳ ಸಾಧನವೆಂದರೆ ‘ಗ್ರೀನ್‌ ಜಿಡಿಪಿ’ !

ಹಾಗೆ ನೋಡಿದರೆ ‘ಗ್ರೀನ್‌ ಜಿಡಿಪಿ’ಯ ಸಂಕಲ್ಪನೆಯು ಹಳೆಯದಾಗಿದೆ; ಆದರೆ ೨೧ ನೇ ಶತಮಾನದಲ್ಲಿ ಅದನ್ನು ಪುನಃ ಎತ್ತಿ ಹಿಡಿಯಲಾಗಿದೆ. ಇದರ ಕಾರಣ ಅಮೇರಿಕಾ ಮತ್ತು ಪಾಶ್ಚಿಮಾತ್ಯ ಅಭಿವೃದ್ಧಿ ಹೊಂದಿದ ದೇಶಗಳಿಂದ ‘ಗ್ರೀನ್‌ ಜಿಡಿಪಿ’ಗಾಗಿ ಆಗ್ರಹಿಸಲಾಗುತ್ತಿದೆ. ವಿಶೇಷವೆಂದರೆ, ಐತಿಹಾಸಿಕ ಕಾಲದಿಂದಲೂ ಈ ರಾಷ್ಟ್ರಗಳು ಪರಿಸರ ಮತ್ತು ನಿಸರ್ಗವನ್ನು ನಾಶಗೊಳಿಸಿ ತಮ್ಮ ತಮ್ಮ ದೇಶಗಳ ಆರ್ಥಿಕ ಹಾಗೂ ಸಾಧನಸಂಪತ್ತುಗಳ ವಿಕಾಸ ಮಾಡಿಕೊಂಡು ಶ್ರೀಮಂತ ರಾಷ್ಟ್ರಗಳಾದವು. ಅಂದರೆ ಪರಿಸರವನ್ನು ನಾಶಗೊಳಿಸಿ ಈ ರಾಷ್ಟ್ರಗಳು ಪ್ರಗತಿ ಹಾಗೂ ವಿಕಸನಶೀಲ ರಾಷ್ಟ್ರಗಳೆಂದು ಜಾಗತಿಕ ಸ್ತರದಲ್ಲಿ ಹೆಸರು ಗಳಿಸಿದವು. ಆದ್ದರಿಂದ ಈ ರಾಷ್ಟ್ರಗಳು ‘ಹಿಸ್ಟೋರಿಕಲ್‌ ಪೊಲ್ಯುಟರ್ಸ್‌’ (ಇತಿಹಾಸ ಕಾಲದಿಂದಲೂ ದೂಷಿತ) ರಾಷ್ಟ್ರಗಳಾಗಿವೆ. ಅವರು ಪರಿಸರಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿಯನ್ನು ಮಾಡಿದ್ದಾರೆ. ಇಂದು ಈ ರಾಷ್ಟ್ರಗಳ ಆರ್ಥಿಕ ವಿಕಾಸದರ ಕುಸಿದಿದೆ. ಇನ್ನೊಂದೆಡೆ ಏಶಿಯಾ ಖಂಡದ ಭಾರತ, ಚೀನಾದಂತಹ ವಿಕಸನಶೀಲ ರಾಷ್ಟ್ರಗಳು ಆರ್ಥಿಕ ವಿಕಾಸದ ಮಾರ್ಗದಲ್ಲಿದ್ದು ಬೃಹತ್ಪ್ರಮಾಣದಲ್ಲಿ ಸಾಧನಾ ಸಂಪತ್ತಿನ ವಿಕಾಸ ಮತ್ತು ತಮ್ಮ ತಮ್ಮ ರಫ್ತು ಹೆಚ್ಚಿಸಲು ಪ್ರಯತ್ನಿಸುತ್ತಿವೆ. ಇದರೊಂದಿಗೆ ತಮ್ಮ ದೇಶವನ್ನು ಎಕ್ಸ್‌ಪೋರ್ಟ್ ಡೆಸ್ಟಿನೇಶನ್’ (ರಫ್ತಿಗೆ ಯೋಗ್ಯ ಸ್ಥಳ) ಮತ್ತು ಜಾಗತಿಕ ಪೂರೈಕೆಯ ಕೊಂಡಿಯನ್ನಾಗಿ ಮಾಡಲು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಿರುವುದು ಕಾಣಿಸುತ್ತದೆ. ಅದಕ್ಕಾಗಿ ‘ಮೇಕ್‌ ಇನ್‌ ಇಂಡಿಯಾ’, ‘ಆತ್ಮನಿರ್ಭರ ಭಾರತ’ದಂತಹ ಮಹತ್ವಾಕಾಂಕ್ಷಿ ಯೋಜನೆಗಳನ್ನು ಭಾರತ ಹಮ್ಮಿಕೊಳ್ಳುತ್ತಿದೆ. ಈ ದೇಶಗಳಿಗೆ ‘ಎಸ್ಪೀರೇಶನಲ್‌ ಕಂಟ್ರೀಸ್’ (ಮಹತ್ವಾಕಾಂಕ್ಷಿ ದೇಶ) ಎನ್ನುತ್ತಾರೆ.

ಭಾರತದ ವಿಚಾರ ಮಾಡಿದರೆ ಅದು ಮುಂಬರುವ ೨೫ ವರ್ಷಗಳಷ್ಟು ದೀರ್ಘಕಾಲದ ಒಂದು ಕೃತಿಯ ನಕಾಶೆಯನ್ನು ತಯಾರಿಸಿದೆ. ಅದಕ್ಕನುಸಾರ ಮುಂಬರುವ ಎರಡುವರೆ ದಶಕಗಳಲ್ಲಿ ಭಾರತ ‘ವಿಕಸನಶೀಲ ದೇಶದಿಂದ ವಿಕಸಿತ ದೇಶಗಳ ಕಡೆಗೆ’ ಪ್ರಯಾಣಿಸಲಿಕ್ಕಿದೆ. ಇದೇ ಅವಧಿಯಲ್ಲಿ ಭಾರತೀಯ ಅರ್ಥವ್ಯವಸ್ಥೆಯ ಆಕಾರವನ್ನು ಇಂದಿನ ೩.೭೫ ಟ್ರಿಲಿಯನ್‌ ಡಾಲರ್ಸ್‌ನಿಂದ (೩೦೯ ಲಕ್ಷಕೋಟಿ ರೂಪಾಯಿಗಳಿಗಿಂತ ಹೆಚ್ಚು) ೫ ಟ್ರಿಲಿಯನ್‌ ಡಾಲರ್ಸ್‌ಗೆ (೧ ಟ್ರಿಲಿಯನ್‌ ಎಂದರೆ ಒಂದರ ಮುಂದೆ ೧೨ ಸೊನ್ನೆಗಳು) ಒಯ್ಯುವ ಉದ್ದೇಶವನ್ನಿಡಲಾಗಿದೆ. ಜಗತ್ತಿನ ‘ಪ್ರಮುಖ ಉತ್ಪಾದನ ಕೇಂದ್ರ’ವಾಗಿ ಜಾಗತಿಕ ಸ್ತರದ ರಫ್ತು ಹೆಚ್ಚಿಸಲಿಕ್ಕಾಗಿ ಭಾರತ ಪ್ರಯತ್ನಿಸುತ್ತಿದೆ ಹಾಗೂ ಇದರ ಮೂಲಕ ಭಾರತಕ್ಕೆ ವಿಕಸಿತ ದೇಶಗಳ ಸಾಲಿನಲ್ಲಿ ಸ್ಥಾನ ಪಡೆಯಲಿಕ್ಕಿದೆ. ಈಗ ಭಾರತ ಆ ದಿಕ್ಕಿನಲ್ಲಿ ಆತ್ಮವಿಶ್ವಾಸದಿಂದ ಹಾಗೂ ವೇಗವಾಗಿ ದಾಪುಗಾಲಿಡುತ್ತಿದೆ. ಈ ಸಂದರ್ಭದಲ್ಲಿ ಈ ಪಶ್ಚಿಮ ದೇಶಗಳು ಭಾರತದೊಂದಿಗೆ ‘ಗ್ರೀನ್‌ ಜಿಡಿಪಿ’ಯ ವಿಷಯದಲ್ಲಿ ಆಗ್ರಹಿಸುತ್ತಿರುವುದು ಕಾಣಿಸುತ್ತಿದೆ. ಪಾಶ್ಚಿಮಾತ್ಯ ದೇಶಗಳು ‘ಗ್ರೀನ್‌ ಜಿಡಿಪಿ’ಯ ಸಂಕಲ್ಪನೆಯನ್ನು ವಸುಂಧರೆಯ ರಕ್ಷಣೆಗಾಗಿ ವಿಕಸಿತಗೊಳಿಸಿದ್ದರೂ, ಸದ್ಯದ ಸ್ಥಿತಿಯಲ್ಲಿ ಮೂರನೇ ಜಗತ್ತಿನ ವಿಕಸನಶೀಲ ದೇಶಗಳ ಆರ್ಥಿಕ ವಿಕಾಸವನ್ನು ತಡೆಗಟ್ಟುವ ಸಾಧನವೆಂದು ಅದನ್ನು ಉಪಯೋಗಿಸಲಾಗುತ್ತಿದೆ.

೨. ಭಾರತದ ಸರ್ವತೋಮುಖ ರಾಷ್ಟ್ರೀಯ ಉತ್ಪಾದನೆಯಲ್ಲಿ ಆಗುವ ಹೆಚ್ಚಳ

‘ಜಿಡಿಪಿ’ ಎಂದರೆ ‘ಗ್ರಾಸ್‌ ಡೊಮೆಸ್ಟಿಕ್‌ ಪ್ರೊಡಕ್ಶನ್’ ಅಂದರೆ ಒಟ್ಟು ದೇಶಿಯ ಉತ್ಪಾದನೆ. ದೇಶದಲ್ಲಿನ ವಸ್ತು ಮತ್ತು ಸೇವೆಯ ಒಟ್ಟು ಉತ್ಪಾದನೆ. ಭಾರತದಲ್ಲಿ ಆರ್ಥಿಕ ವರ್ಷದ ಪ್ರಾರಂಭದಿಂದ, ಅಂದರೆ ಎಪ್ರಿಲ್‌ ೧ ರಿಂದ ಪ್ರತಿ ೩ ತಿಂಗಳಲ್ಲಿ ‘ಜಿಡಿಪಿ’ಯ ಗಣನೆ ಮಾಡಲಾಗುತ್ತದೆ. ಭಾರತಕ್ಕೆ ಮುಂದಿನ ೫ ವರ್ಷಗಳಲ್ಲಿ ೫ ಟ್ರಿಲಿಯನ್‌ ಡಾಲರ್ಸ್‌ನ ಉದ್ದೇಶವನ್ನು ಸಾಧಿಸಲಿಕ್ಕಿದ್ದರೆ, ಭಾರತ ‘ಜಿಡಿಪಿ’ ಹೆಚ್ಚಳದ ದರವನ್ನು ಶೇ. ೮ ರಿಂದ ೯ ರಷ್ಟು ಇಡಬೇಕಾಗುತ್ತದೆ. ೨೦೦೮ ರಿಂದ ೨೦೧೮ ರ ಅವಧಿಯಲ್ಲಿ ಭಾರತ ಅದನ್ನು ಉಳಿಸಿಕೊಂಡಿತ್ತು; ಆದರೆ ೨೦೨೦ ರಲ್ಲಿ ಬಂದಿರುವ ಕೊರೋನಾ ಮಹಾಮಾರಿಯಿಂದಾಗಿ ಅದು ಕುಸಿಯಿತು. ಆದರೂ ಸದ್ಯದ ಸ್ಥಿತಿಯಲ್ಲಿ ಭಾರತ ಜಗತ್ತಿನ ‘ಅತೀ ಹೆಚ್ಚು ಆರ್ಥಿಕ ವಿಕಾಸ ದರ ಇರುವ ದೇಶ’ವಾಗಿದ್ದು ಶೇ. ೬ ಕ್ಕಿಂತ ಹೆಚ್ಚಾಗಿದೆ. ಇನ್ನು ಮುಂಬರುವ ಕಾಲದಲ್ಲಿ ಅದರಲ್ಲಿ ಶೇ. ೨ ರಿಂದ ೩ ರಷ್ಟು ಹೆಚ್ಚಳ ಮಾಡುವುದು ಆವಶ್ಯಕವಾಗಿದೆ. ಹಾಗೆ ಮಾಡುವಾಗ ಪರಿಸರದ ಬಗ್ಗೆ ಪೂರ್ಣ ಕಾಳಜಿ ವಹಿಸುವುದು ಮಹತ್ವದ್ದಾಗಿದೆ. ಜಗತ್ತಿನಲ್ಲಿ ಪರಿಸರದ ಹಾನಿಯಾಗದೆ ಯಾವುದೇ ಉತ್ಪಾದನೆಯಾಗಲು ಸಾಧ್ಯವೇ ಇಲ್ಲ. ಉದಾ. ಬೇಸಾಯದ ಬಗ್ಗೆ ವಿಚಾರ ಮಾಡಿದರೆ ಅದರಲ್ಲಿ ಉಪಯೋಗಿಸುವ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಂದಾಗಿ ಮಣ್ಣು ಮತ್ತು ನೀರು ಮಲಿನವಾಗುತ್ತದೆ. ಪರಿಸರದ ಈ ಹಾನಿಯ ಬೆಲೆಯನ್ನು ಕಳೆದು ಬರುವ ಮೊತ್ತವೆಂದರೆ, ‘ಗ್ರೀನ್‌ ಜಿಡಿಪಿ’, ಸಂಕ್ಷಿಪ್ತದಲ್ಲಿ ಹೇಳುವುದಾದರೆ ‘ಜಿಡಿಪಿ’ಯಿಂದ ಪರಿಸರದ ಹಾನಿಯನ್ನು ಕಳೆದ ನಂತರ ಬರುವ ಸಂಖ್ಯೆಯೆ ‘ಗ್ರೀನ್‌ ಜಿಡಿಪಿ’. ಆದ್ದರಿಂದ ಪರಿಸರಕ್ಕೆ ಕನಿಷ್ಟ ಹಾನಿ ಮಾಡಿ ಆರ್ಥಿಕ ವಿಕಾಸ ಮಾಡಲು ಪ್ರಾಧಾನ್ಯತೆ ನೀಡುವುದೇ ಇದರ ಹಿಂದಿನ ಉದ್ದೇಶವಾಗಿದೆ.

೩. ಪರಿಸರ ಹಾನಿಯ ಸಂಖ್ಯೆಯನ್ನು ಘೋಷಣೆ ಮಾಡಿದರೆ ಆ ರಾಷ್ಟ್ರದ ಮೇಲೆ ನಿರ್ಬಂಧ ಹೇರಬಹುದೆಂಬ ಭಯ 

ಅಂದರೆ ಪರಿಸರದ ಹಾನಿಯನ್ನು ಅಳೆಯುವುದು ಹೇಗೆ ? ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಯಾವುದೇ ರಾಷ್ಟ್ರ ತಾನಾಗಿ ಪರಿಸರಕ್ಕೆ ಎಷ್ಟು ಹಾನಿಯಾಗಿದೆ ? ಎಂದು ನೇರವಾಗಿ ಹೇಳುವುದಿಲ್ಲ. ಆದರೂ ಪಶ್ಚಿಮ ದೇಶಗಳು ನಿರಂತರವಾಗಿ ”ಗ್ರೀನ್‌ ಜಿಡಿಪಿ’ ಘೋಷಣೆ ಮಾಡಿರಿ’, ಎಂಬ ಬೇಡಿಕೆಯನ್ನು ಮುಂದಿಡುತ್ತಿವೆ. ವಿಶೇಷವಾಗಿ ಭಾರತ ಮತ್ತು ಚೀನಾ ಈ ೨ ದೇಶಗಳನ್ನು ನಿರಂತರ ಇಕ್ಕಳದಲ್ಲಿ ಸಿಲುಕಿಸುವ ಪ್ರಯತ್ನಗಳು ನಡೆಯುತ್ತಿವೆ. ೨೦೦೬ ರಲ್ಲಿ ಚೀನಾ ೨೦೦೪ ರಲ್ಲಿ ‘ಗ್ರೀನ್‌ ಜಿಡಿಪಿ’ ಎಷ್ಟಿದೆ ? ಎಂಬುದನ್ನು ಅಳತೆ ಮಾಡಿ ಅದರ ಲೆಕ್ಕಾಚಾರವನ್ನು ಘೋಷಣೆ ಮಾಡಿತು; ಆದರೆ ಅನಂತರ ಇಂದಿನ ವರೆಗೆ ಚೀನಾ ‘ಗ್ರೀನ್‌ ಜಿಡಿಪಿ’ ಘೋಷಣೆ ಮಾಡಲೇ ಇಲ್ಲ. ಏಕೆಂದರೆ ಪರಿಸರ ಹಾನಿಯ ಲೆಕ್ಕಾಚಾರವನ್ನು ಘೋಷಣೆ ಮಾಡಿದರೆ, ಆ ರಾಷ್ಟ್ರದ ಮೇಲೆ ನಿರ್ಬಂಧ ಹೇರಲಾಗುತ್ತದೆ, ಎಂಬುದು ನಿಶ್ಚಿತವಾಗಿದೆ. ಇಂದು ಜಾಗತಿಕ ವ್ಯಾಪಾರದಲ್ಲಿ ಮಾಡಲ್ಪಡುವ ವಿವಿಧ ಒಪ್ಪಂದಗಳಲ್ಲಿ ಉತ್ಪಾದನೆಗಳ ನಿರ್ಮಾಣದಲ್ಲಿ ಪರಿಸರದ ಹಾನಿಯಾಗುವುದಿಲ್ಲವೇ ? ಎನ್ನುವ ವಿಷಯ ಮುಂದೆ ಬರುತ್ತದೆ. ಆದ್ದರಿಂದ ಭಾರತ ಇಂದಿನ ವರೆಗೆ ಯಾವತ್ತೂ ‘ಗ್ರೀನ್‌ ಜಿಡಿಪಿ’ಯನ್ನು ಅಳೆದಿಲ್ಲ.

೪. ಪಶ್ಚಿಮ ದೇಶಗಳಿಂದ ಒಂದು ರೀತಿಯ ಷಡ್ಯಂತ್ರ !

೨೦೧೩ ರಲ್ಲಿ ಭಾರತವು ಇದಕ್ಕಾಗಿ ಒಂದು ಆಯೋಗವನ್ನು ಸ್ಥಾಪಿಸಿತು. ಪಾರ್ಥ ಗುಪ್ತಾ ಇವರು ಅದರ ಅಧ್ಯಕ್ಷರಾಗಿದ್ದರು. ಈ ಆಯೋಗ ೨೦೧೪ ರಿಂದ ೧೫ ರ ನಡುವೆ ‘ಗ್ರೀನ್‌ ಅಕೌಂಟಿಂಗ್‌ ಫ್ರೇಮ್‌ವರ್ಕ್‌’ (ಪರಿಸರದ ಖರ್ಚಿನ ಕಡೆಗೆ ಗಮನವಿಡುವ ವ್ಯವಸ್ಥೆ) ಹೆಸರಿನ ತನ್ನದೇ ಆದ ವರದಿಯನ್ನು ಪ್ರಸ್ತುತಪಡಿಸಿತ್ತು. ಅದರ ಹೊರತು ಭಾರತ ‘ಗ್ರೀನ್‌ ಜಿಡಿಪಿ’ಯ ಎಣಿಕೆಯ ಬಗ್ಗೆ ಏನೂ ಮಾಡಿಲ್ಲ. ಇದಕ್ಕೆ ಕಾರಣವೆಂದರೆ, ‘ಗ್ರೀನ್‌ ಜಿಡಿಪಿ’ಯ ಮೂಲಕ ಭಾರತದ ಆರ್ಥಿಕ ವಿಕಾಸದ ಪ್ರಕ್ರಿಯೆಯಲ್ಲಿ ಅಡಚಣೆ ನಿರ್ಮಾಣ ಮಾಡಲು ಪಶ್ಚಿಮದ ದೇಶಗಳು ಪ್ರಯತ್ನಿಸುತ್ತಿವೆ. ಇಂದಿನ ವರೆಗೆ ಪರಿಸರದ ಶೋಷಣೆ ಮಾಡಿ ಆರ್ಥಿಕ ವಿಕಾಸ ಮಾಡಿ ಅನಂತರ ಈ ರಾಷ್ಟ್ರಗಳಿಗೆ ನಿಸರ್ಗ ಸಂವರ್ಧನೆಯ ವಿಷಯದಲ್ಲಿ ಬಂದಿರುವ ಜಾಗರೂಕತೆಯೆಂದರೆ ಇದು ಪಶ್ಚಿಮ ದೇಶಗಳ ಒಂದು ರೀತಿಯ ಷಡ್ಯಂತ್ರವಾಗಿದೆ. ಮಾನವಾಧಿಕಾರಗಳ ಸಮಸ್ಯೆಯ ವಿಷಯದಲ್ಲಿ ಪಶ್ಚಿಮ ದೇಶಗಳ ಈ ದ್ವಿಮುಖ ನೀತಿಯು ಅನೇಕ ಬಾರಿ ಬೆಳಕಿಗೆ ಬಂದಿದೆ. ಇನ್ನಿತರ ರಾಷ್ಟ್ರಗಳ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಲು ಈ ರಾಷ್ಟ್ರಗಳು ಅವಕಾಶವನ್ನು ಹುಡುಕುತ್ತಾ ಇರುತ್ತವೆ. ಹೀಗೆ ಮಾಡುವಾಗ ಈ ರಾಷ್ಟ್ರಗಳು ತಮ್ಮ ದೇಶದಲ್ಲಿ ಏನು ನಡೆಯುತ್ತಿದೆ ? ತಮ್ಮ ದೇಶದ ಇತಿಹಾಸ ಹೇಗಿದೆ ? ಎನ್ನುವ ವಿಷಯದಲ್ಲಿ ಆತ್ಮಚಿಂತನೆ ಮಾಡುವುದು ಎಲ್ಲಿಯೂ ಕಾಣಿಸುವುದಿಲ್ಲ.

ಪರಿಸರದ ಹಾನಿಯನ್ನು ಕಡಿಮೆಗೊಳಿಸಿ ವಿಕಾಸದರವನ್ನು ಹೆಚ್ಚಿಸಲಿಕ್ಕಿದ್ದರೆ, ಅದಕ್ಕಾಗಿ ಆವಶ್ಯಕವಿರುವ ಆಧುನಿಕ ತಂತ್ರಜ್ಞಾನವು ತುಂಬಾ ದುಬಾರಿಯಾಗಿದೆ. ಇಂತಹ ತಂತ್ರಜ್ಞಾನದ ಗುತ್ತಿಗೆ ಪಶ್ಚಿಮ ದೇಶಗಳ ವಶದಲ್ಲಿದೆ. ಈ ದೇಶಗಳು ಈ ತಂತ್ರಜ್ಞಾನವನ್ನು ಬಡ ವಿಕಸನಶೀಲ ದೇಶಗಳಿಗೆ ನೀಡುವ ಅವಶ್ಯಕತೆಯಿದೆ; ಆದರೆ ಅದಕ್ಕೆ ಈ ದೇಶಗಳು ಸಿದ್ಧರಿಲ್ಲ, ಅವುಗಳು ಸಿದ್ಧತೆಯನ್ನು ತೋರಿಸಿದರೂ ಅದಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ, ಅದನ್ನು ವಿಕಸನಶೀಲ ದೇಶಗಳು ಕೊಡಲು ಸಾಧ್ಯವಿಲ್ಲ. ಸಂಕ್ಷಿಪ್ತದಲ್ಲಿ ಹೇಳುವುದಾದರೆ, ಎರಡೂ ಕಡೆಗಳಲ್ಲಿ ಅಡಚಣೆಗಳನ್ನು ನಿರ್ಮಾಣ ಮಾಡಿ ವಿಕಸನಶೀಲ ದೇಶಗಳ ಮೇಲೆ ಒತ್ತಡ ಹೇರುವುದೇ ಈ ಪಶ್ಚಿಮದೇಶಗಳ ನಿಲುವಾಗಿದೆ.

೫. ಭಾರತ ಆರ್ಥಿಕ ವಿಕಾಸದಲ್ಲಿ ಮಾರ್ಗಕ್ರಮಿಸುತ್ತಾ ಮುಂದುವರಿಯುವುದು ಮಹತ್ವದ್ದಾಗಿದೆ !

ಭಾರತ ಈಗ ‘ಕಾರ್ಬನ್‌ ಡೈಆಕ್ಸೈಡ್‌’ನ ವಿಸರ್ಜನೆಯನ್ನು ಶೂನ್ಯಗೊಳಿಸಬೇಕೆಂದು ಪಶ್ಚಿಮ ದೇಶಗಳಿಂದ ನಿರಂತರ ಒತ್ತಡ ಹೇರಲಾಗುತ್ತಿದೆ. ಭಾರತವು ಈ ದಿಕ್ಕಿನಲ್ಲಿ ಪ್ರಯತ್ನ ಆರಂಭಿಸಿದೆ. ಪರಿಸರದೊಂದಿಗೆ ಹೊಂದಾಣಿಕೆ ಮಾಡಿಕೊಂಡು ವಿಕಾಸವನ್ನು ಹೇಗೆ ಸಾಧಿಸಬಹುದು ? ಎಂಬುದು ಭಾರತದ ಮುಂದಿರುವ ಸವಾಲಾಗಿರುವುದು. ಪರಿಸರ ರಕ್ಷಣೆಗಾಗಿ ‘ಗ್ರೀನ್‌ ಜಿಡಿಪಿ’ಯನ್ನು ಆಗ್ರಹಿಸುವುದು ತಪ್ಪಲ್ಲ; ಆದರೆ ಸದ್ಯ ವಸಾಹತುವಾದಿ ಮಾನಸಿಕತೆಯಿಂದ ಅದನ್ನು ಉಪಯೋಗಿಸುತ್ತಿರುವುದು ಅಯೋಗ್ಯವಾಗಿದೆ. ಬೆರಳೆಣಿಕೆಯಷ್ಟು ದೇಶಗಳ ವಿಕಾಸವಾಗಬೇಕೆಂದು ಹಾಗೂ ಇನ್ನಿತರ ರಾಷ್ಟ್ರಗಳು ಅವುಗಳನ್ನು ಅವಲಂಬಿಸಿಕೊಂಡು ಪರಾವಲಂಬಿಗಳಾಗಿರಬೇಕು, ಎಂಬುದು ಅದರ ಹಿಂದಿನ ನಿಲುವಾಗಿದೆ. ಇದು ಬಡ ಹಾಗೂ ವಿಕಸನಶೀಲ ದೇಶಗಳ ಆರ್ಥಿಕ ವಿಕಾಸವನ್ನು ತಡೆಗಟ್ಟುವ ಷಡ್ಯಂತ್ರವಾಗಿದೆ. ಭಾರತ ನವವಸಾಹತುವಾದದ ಈ ಒತ್ತಡದ ಬಗ್ಗೆ ತಲೆಕೆಡಿಸಿಕೊಳ್ಳದೆ ಆರ್ಥಿಕ ವಿಕಾಸದ ಉದ್ದೇಶವನ್ನು ಪೂರ್ಣಗೊಳಿಸುವುದರ ಕಡೆಗೆ ಗಮನ ಹರಿಸಿ ಮುಂದುವರಿಯಬೇಕಾಗಿದೆ. ಏಕೆಂದರೆ ಭಾರತವು ವಿಕಾಸ ಹೊಂದಿದ ನಂತರ ಭಾರತದ ‘ಬಾರ್ಗೈನಿಂಗ್‌ ಪಾವರ್’ (ವ್ಯವಹಾರ ಚಾತುರ್ಯ) ಹೆಚ್ಚಾಗಲಿಕ್ಕಿದೆ ಹಾಗೂ ಈ ದೇಶಗಳ ಬಾಯಿ ತನ್ನಿಂತಾನೇ ಮುಚ್ಚಿಕೊಳ್ಳಲಿಕ್ಕಿದೆ.

– ಡಾ. ಶೈಲೇಂದ್ರ ದೇವಳಾಣಕರ, ವಿದೇಶಾಂಗ ನೀತಿಯ ವಿಶ್ಲೇಷಕರು (ಆಧಾರ : ಡಾ. ಶೈಲೇಂದ್ರ ದೇವಳಾಣಕರ್‌ ಇವರ ಫೇಸ್‌ಬುಕ್)