ಮಹಾಕುಂಭ ಮೇಳದಲ್ಲಿ ಭಕ್ತರೊಂದಿಗೆ ಹೇಗೆ ವರ್ತಿಸಬೇಕು ?, ಉತ್ತರ ಪ್ರದೇಶ ಪೊಲೀಸರಿಗೆ ವಿಶೇಷ ತರಬೇತಿ!

  • ಪ್ರಯಾಗರಾಜ ಮಹಾಕುಂಭ ಮೇಳ 2025

  • ಪೊಲೀಸರಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತಿದೆ!

ಪ್ರಯಾಗರಾಜ – ಮಹಾಕುಂಭ ಮೇಳದ ಸಂದರ್ಭದಲ್ಲಿ ಭಕ್ತರ ಸುರಕ್ಷತೆಯ ಬಹುದೊಡ್ಡ ಜವಾಬ್ದಾರಿಯನ್ನು ನಿರ್ವಹಿಸುವ ಪೊಲೀಸರನ್ನು ಎಲ್ಲಾ ರೀತಿಯಿಂದಲೂ ಕರ್ತವ್ಯ ದಕ್ಷರನ್ನಾಗಿ ಮಾಡಲು ಉತ್ತರ ಪ್ರದೇಶ ಸರಕಾರ ಟೊಂಕ ಕಟ್ಟಿ ನಿಂತಿದೆ. ಪೊಲೀಸರಿಗೆ ದೈಹಿಕವಾಗಿ ಸುದೃಢಗೊಳಿಸುವುದರೊಂದಿಗೆ ಮಾನಸಿಕ ಸ್ತರದಲ್ಲಿಯೂ ಸಕ್ಷಮಗೊಳಿಸಲು ಲಿಖಿತ ಪರೀಕ್ಷೆ ನಡೆಸಲಾಗುತ್ತಿದೆ. ಉತ್ತರ ಪ್ರದೇಶ ರಾಜ್ಯ ಪೊಲೀಸ ಮಹಾನಿರೀಕ್ಷಕ ಪ್ರಶಾಂತ ಕುಮಾರ್ ಅವರ ಆದೇಶದಂತೆ ಈ ಉಪಕ್ರಮವನ್ನು ಜಾರಿಗೊಳಿಸಲಾಗುತ್ತಿದೆ. ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಈ ಪ್ರಯೋಗ ಮಾಡಲಾಗುತ್ತಿದೆ. ಪೊಲೀಸರು ಎಷ್ಟು ಸಿದ್ಧವಾಗಿದ್ದಾರೆ ಎಂಬುದನ್ನು ಪರಿಶೀಲಿಸಲು ಜೊತೆಗೆ ಎಲ್ಲಾ ಸವಾಲುಗಳನ್ನು ನಿಭಾಯಿಸಲು ಅವರನ್ನು ಸಮರ್ಥರನ್ನಾಗಿ ಮಾಡಲು ವಿಶೇಷ ತರಬೇತಿಗಳು ಮತ್ತು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ, ಈ ತರಬೇತಿಯಲ್ಲಿ ಪೊಲೀಸರಿಗೆ ತುರ್ತು ನಿರ್ವಹಣೆ, ಸಂಚಾರ ನಿರ್ವಹಣೆ, ಭಕ್ತರೊಂದಿಗೆ ಹೇಗೆ ವರ್ತಿಸಬೇಕು ಸೇರಿದಂತೆ ಮಹಾಕುಂಭ ಮೇಳದ ಕುರಿತು ಆಧ್ಯಾತ್ಮಿಕ ಪಾಠಗಳನ್ನು ನೀಡಲಾಗುತ್ತಿದೆ. ಈ ತರಬೇತಿಯ ನಂತರ ಲಿಖಿತ ಪರೀಕ್ಷೆ ನಡೆಸಲಾಗುತ್ತಿದೆ. ಇದರಲ್ಲಿ 100 ಅಂಕಗಳ ಪ್ರಶ್ನೆ ಪತ್ರಿಕೆಯನ್ನು ಪರಿಹರಿಸಲು ನೀಡಲಾಗಿದ್ದು, ಅದರಲ್ಲಿ 20 ಪ್ರಶ್ನೆಗಳನ್ನು ಕೇಳಲಾಗಿದೆ. ಈ ಪ್ರಶ್ನೆ ಪತ್ರಿಕೆಯನ್ನು ಉತ್ತರಿಸಲು 1 ಗಂಟೆ ಸಮಯ ನಿಗದಿಪಡಿಸಲಾಗಿದೆ. ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಪೊಲೀಸರಿಗೆ 3 ದಿನಗಳ ತರಬೇತಿ ಅವಧಿಯ ನಂತರ ಮರು ಪರೀಕ್ಷೆಗೆ ಅವಕಾಶ ನೀಡಲಾಗುತ್ತದೆ. ಈ ಪರೀಕ್ಷೆಯು ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕಡ್ಡಾಯವಾಗಿದೆ.

ಭಕ್ತರ ಸುರಕ್ಷತೆಗೆ 7 ಹಂತದ ಪೊಲೀಸ್ ಭದ್ರತೆ !

ಮಹಾಕುಂಭ ಮೇಳಕ್ಕೆ ಬರುವ ಭಕ್ತರ ಸುರಕ್ಷತೆಗಾಗಿ 7 ಹಂತದ ಪೊಲೀಸ್ ಭದ್ರತೆ ವ್ಯವಸ್ಥೆ ಇರಲಿದೆ ಎಂದು ಉಪ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ ಕುಮಾರ ಮಾಹಿತಿ ನೀಡಿದರು. ಮಹಾಕುಂಭದ ಒಳಭಾಗದಲ್ಲಿ 4 ಹಂತದ ಭದ್ರತೆ ಇರಲಿದೆ. ಭದ್ರತೆಗಾಗಿ ಅಂತರಾಷ್ಟ್ರೀಯ ಮತ್ತು ಅಂತರರಾಜ್ಯ ವಿಮಾನಗಳನ್ನು ಪರಿಶೀಲಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಎ.ಐ. ಆಧಾರಿತ ಸಿಸಿಟಿವಿ ಕ್ಯಾಮೆರಾಗಳು, ಡ್ರೋನ್‌ಗಳು ಮತ್ತು ಎಂಟಿ ಡ್ರೋನ್ ವ್ಯವಸ್ಥೆಗಳನ್ನು ಸಹ ಬಳಸಲಾಗುವುದು. ಸಾಮಾಜಿಕ ಮಾಧ್ಯಮಗಳನ್ನು ಬಳಸುವವರ ಮೇಲೂ ಪೊಲೀಸರು ನಿಗಾ ವಹಿಸಲಿದ್ದಾರೆ.