ಶೇಖ್ ಹಸೀನಾರನ್ನು ನಮ್ಮ ವಶಕ್ಕೆ ನೀಡಿ ! – ಬಾಂಗ್ಲಾದೇಶದಿಂದ ಭಾರತಕ್ಕೆ ಅಧಿಕೃತ ಬೇಡಿಕೆ

ಈ ಬಗ್ಗೆ ಭಾರತ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವಿದೇಶಾಂಗ ಸಚಿವಾಲಯದಿಂದ ಮಾಹಿತಿ

ನವ ದೆಹಲಿ – ಬಾಂಗ್ಲಾದೇಶದ ಮಧ್ಯಂತರ ಸರಕಾರ ಭಾರತ ಸರಕಾರಕ್ಕೆ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವಂತೆ ಅಧಿಕೃತವಾಗಿ ಮನವಿ ಮಾಡಿದೆ. ಈ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಭಾರತ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಶೇಖ್ ಹಸೀನಾ ಅವರು ಆಗಸ್ಟ್ 5 ರಂದು ಬಾಂಗ್ಲಾದೇಶದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ನಂತರ ದೇಶದಿಂದ ಪಲಾಯನ ಮಾಡಿ ಭಾರತದಲ್ಲಿ ವಾಸಿಸುತ್ತಿದ್ದಾರೆ.

1. ಬಾಂಗ್ಲಾದೇಶದ ವಿದೇಶಾಂಗ ಸಚಿವ ತೌಹೀದ್ ಹುಸೇನ ಅವರು ಢಾಕಾದಲ್ಲಿರುವ ತಮ್ಮ ಕಚೇರಿಯಲ್ಲಿ ಒಂದು ದಿನದ ಹಿಂದೆ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಭಾರತ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಕಳುಹಿಸಿದ್ದಾರೆ ಎಂದು ಹೇಳಿದರು.

2. ಢಾಕಾದಲ್ಲಿರುವ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಮಂಡಳಿಯಿಂದ ಹಸೀನಾ ಮತ್ತು ಹಲವಾರು ಮಾಜಿ ಕೇಂದ್ರ ಸಚಿವರು, ಸಲಹೆಗಾರರು, ಮಿಲಿಟರಿ ಮತ್ತು ನಾಗರಿಕ ಅಧಿಕಾರಿಗಳ ವಿರುದ್ಧ ಮಾನವೀಯತೆ ಮತ್ತು ನರಮೇಧದ ವಿರುದ್ಧದ ಅಪರಾಧಗಳಿಗಾಗಿ ಬಂಧನ ವಾರಂಟ್ ಹೊರಡಿಸಿದೆ.

3. ಗೃಹಸಚಿವಾಲಯದ ಸಲಹೆಗಾರ ಜಹಾಂಗೀರ್ ಆಲಂ ಮಾತನಾಡಿ, “ಬಾಂಗ್ಲಾದೇಶ ಮತ್ತು ಭಾರತದ ನಡುವೆ ಈಗಾಗಲೇ ಹಸ್ತಾಂತರ ಒಪ್ಪಂದವಿದೆ ಮತ್ತು ಈ ಒಪ್ಪಂದದ ಅಡಿಯಲ್ಲಿ ಹಸೀನಾಳನ್ನು ಬಾಂಗ್ಲಾದೇಶಕ್ಕೆ ಮರಳಿ ಕರೆತರಬಹುದು” ಎಂದು ಹೇಳಿದ್ದಾರೆ.

ಭಾರತ ಹಸ್ತಾಂತರವನ್ನು ನಿರಾಕರಿಸಬಹುದು !

ಭಾರತ-ಬಾಂಗ್ಲಾದೇಶ ಹಸ್ತಾಂತರ ಒಪ್ಪಂದದ ನಿಬಂಧನೆಗಳ ಪ್ರಕಾರ, ಅಪರಾಧ `ರಾಜಕೀಯ’ ಸ್ವರೂಪದ್ದಾಗಿದ್ದರೆ ಹಸ್ತಾಂತರವನ್ನು ನಿರಾಕರಿಸಬಹುದು. ಇಂತಹ ಪರಿಸ್ಥಿತಿಯಲ್ಲಿ, ಶೇಖ್ ಹಸೀನಾ ತನ್ನ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತ ಎಂದು ಭಾರತಕ್ಕೆ ಮನವರಿಕೆ ಮಾಡಿದರೆ, ಭಾರತವು ಅವರ ಹಸ್ತಾಂತರವನ್ನು ನಿರಾಕರಿಸಬಹುದು. ಒಪ್ಪಂದದ ಒಂದು ಕಲಂ ನಲ್ಲಿ ಅಪರಾಧಕ್ಕಾಗಿ ದೋಷಿಯೆಂದು ನಿರ್ಧರಿಸಿದ ಯಾವುದೇ ವ್ಯಕ್ತಿಯನ್ನು 4 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಶಿಕ್ಷೆಗೆ ಒಳಪಡಿಸದ ಹೊರತು ಅವರನ್ನು ಹಸ್ತಾಂತರಿಸಲಾಗುವುದಿಲ್ಲ’, ಎಂದು ಇದೆ.

2013ರಲ್ಲಿ ಮಾಡಿಕೊಂಡ ಭಾರತ-ಬಾಂಗ್ಲಾ ಒಪ್ಪಂದ ಯಾವುದು ?

ಭಾರತ ಮತ್ತು ಬಾಂಗ್ಲಾದೇಶದ ನಡುವೆ ಜನವರಿ28, 2013 ರಂದು ಹಸ್ತಾಂತರ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಭಾರತದ ಗೃಹ ಸಚಿವರ ಬಾಂಗ್ಲಾದೇಶದ ಪ್ರವಾಸದ ಸಂದರ್ಭದಲ್ಲಿ ಢಾಕಾದಲ್ಲಿ ಸಹಿ ಹಾಕಲಾಯಿತು. ಎರಡು ದೇಶಗಳ ಕಾನೂನು ಜಾರಿಗೊಳಿಸುವ ಸಂಸ್ಥೆಗಳ ನಡುವೆ ಸಹಕಾರವನ್ನು ಉತ್ತೇಜಿಸಲು ಮತ್ತು ಅಪರಾಧ ಚಟುವಟಿಕೆಗಳನ್ನು ನಿಗ್ರಹಿಸಲು ಹಸ್ತಾಂತರ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಈ ಒಪ್ಪಂದದಲ್ಲಿ 13 ಕಲಂಗಳಿವೆ.