ಪ್ರಾಚೀನ ಕಾಲದಲ್ಲಿ ಯುದ್ದದಲ್ಲಿ ಹೋರಾಡಲು ಪಕ್ಷದವರು ಅಥವಾ ವಿರೋಧಿಪಕ್ಷದವರು ವಿವಿಧ ವ್ಯೂಹಗಳನ್ನು ರಚಿಸುತ್ತಿದ್ದರು. ತಾವು ಮಹಾಭಾರತದಲ್ಲಿ ಕೇವಲ ಚಕ್ರವ್ಯೂಹದ ಬಗ್ಗೆಯೇ ಕೇಳಿರಬಹುದು; ಆದರೆ ಈ ಯುದ್ಧದಲ್ಲಿ ಅನೇಕ ರೀತಿಯ ವ್ಯೂಹರಚನೆಗಳನ್ನು ಮಾಡಿದ ಉಲ್ಲೇಖವಿದೆ. ಇಂತಹ ೧೦ ಮುಖ್ಯ ರಚನೆಗಳ ಮಾಹಿತಿಯನ್ನು ನೋಡೋಣ.
೧. ಗರುಡವ್ಯೂಹ
ಯುದ್ಧದಲ್ಲಿ ಸೈನಿಕರನ್ನು ಎದುರಾಳಿನ ಸೈನ್ಯದ ಮುಂದೆ ಯಾವ ರೀತಿ ನಿಲ್ಲಿಸುತ್ತಿದ್ದರೆಂದರೆ, ಆಕಾಶದಿಂದ ನೋಡಿದಾಗ ಅದು ಗರುಡಪಕ್ಷಿಯಂತೆ ಕಾಣಿಸುತ್ತಿತ್ತು. ಇದಕ್ಕೇ ‘ಗರುಡವ್ಯೂಹ’ ಎನ್ನುತ್ತಾರೆ. ಮಹಾಭಾರತದಲ್ಲಿ ಭೀಷ್ಮ ಪಿತಾಮಹರು ಈ ವ್ಯೂಹವನ್ನು ರಚಿಸಿದ್ದರು.
೨. ಕ್ರೌಂಚವ್ಯೂಹ
ಕ್ರೌಂಚ ಇದು ಬಕಪಕ್ಷಿಯ (ಕೊಕ್ಕರೆ) ಒಂದು ಪ್ರಜಾತಿಯಾಗಿದೆ. ಈ ವ್ಯೂಹದ ಆಕಾರವು ಕ್ರೌಂಚ ಪಕ್ಷಿಯಂತೆ ಇರುತ್ತದೆ. ಮಹಾಭಾರತದಲ್ಲಿ ಈ ವ್ಯೂಹರಚನೆಯನ್ನು ಯುಧಿಷ್ಠಿರನು ರಚಿಸಿದ್ದನು.
೩. ಅರ್ಧಚಂದ್ರಾಕಾರವ್ಯೂಹ
ಅರ್ಧಚಂದ್ರದ ಅರ್ಥವು ನಮಗೆ ತಿಳಿದಿರುವಂತೆ ಸೈನ್ಯದ ರಚನೆಯು ಯಾವಾಗ ಅರ್ಧ ಚಂದ್ರನಂತೆ ಇರುತ್ತದೆಯೋ, ಆಗ ಅದಕ್ಕೆ ‘ಅರ್ಧಚಂದ್ರಾಕಾರವ್ಯೂಹ’, ಎನ್ನುತ್ತಾರೆ. ಈ ವ್ಯೂಹರಚನೆಯನ್ನು ಅರ್ಜುನನು ಕೌರವರ ಗರುಡವ್ಯೂಹಕ್ಕೆ ಪ್ರತ್ಯುತ್ತರಿಸಲು ರಚಿಸಿದ್ದನು.
೪. ಚಕ್ರವ್ಯೂಹ
ಆಕಾಶದಿಂದ ಸೈನ್ಯರಚನೆಯನ್ನು ನೋಡಿದರೆ ತಿರುಗುವ ಚಕ್ರದಂತೆ ಕಾಣಿಸುತ್ತದೆ. ಈ ಚಕ್ರವ್ಯೂಹವನ್ನು ನೋಡಿದಾಗ ಒಳಗೆ ಹೋಗಲು ದಾರಿಯಿದೆ; ಆದರೆ ಹೊರಗೆ ಬರಲು ದಾರಿಯಿಲ್ಲ. ಸುತ್ತಿದ ಸ್ಪ್ರಿಂಗ್‌ನಂತಿರುವ ತಂತಿಯನ್ನು ತಾವು ನೋಡಿರಬಹುದು, ಇದೂ ಅದೇ ರೀತಿ ಇರುತ್ತದೆ. ಮಹಾಭಾರತದಲ್ಲಿ ದ್ರೋಣಾಚಾರ್ಯರು ಈ ವ್ಯೂಹರಚನೆಯನ್ನು ರಚಿಸಿದ್ದರು.
೫. ಮಂಡಲಾಕಾರವ್ಯೂಹ
ಮಂಡಲದ ಅರ್ಥವು ವರ್ತುಲಾಕಾರ ಅಥವಾ ಚಕ್ರಾಕಾರ ಎಂದಾಗುತ್ತದೆ. ಮಹಾಭಾರತದಲ್ಲಿ ಮಂಡಲಾಕಾರ ವ್ಯೂಹವನ್ನು ಭೀಷ್ಮ ಪಿತಾಮಹರು ರಚಿಸಿದ್ದರು. ಅದಕ್ಕೆ ಪ್ರತ್ಯುತ್ತರವೆಂದು ಪಾಂಡವರು ವ್ರಜವ್ಯೂಹವನ್ನು ರಚಿಸಿ ಅದನ್ನು ಭೇದಿಸಿದ್ದರು.
೬. ವಜ್ರವ್ಯೂಹ
ವಜ್ರ ಇದು ಒಂದು ರೀತಿಯ ಶಸ್ತ್ರವಾಗಿದೆ. ಅದರಲ್ಲಿ ಕುಲಿಶ ಮತ್ತು ಅಶಾನಿ ಎಂಬ ಎರಡು ವಿಧಗಳಿರುತ್ತವೆ. ಅದರ ಮೇಲಿನ ಮೂರು ಭಾಗಗಳು ವಕ್ರವಾಗಿದ್ದು. ಮಧ್ಯದ ಭಾಗವು ತೆಳುವಾಗಿರುತ್ತದೆ; ಆದರೆ ಇದು ತುಂಬಾ ಗಟ್ಟಿಯಾಗಿರುತ್ತದೆ. ಅದರ ಆಕಾರವು ಇಂದ್ರನ ವಜ್ರದಂತೆ ಕಾಣಿಸುತ್ತದೆ. ಮಹಾಭಾರತದಲ್ಲಿ ಅರ್ಜುನನು ಈ ವ್ಯೂಹವನ್ನು ರಚಿಸಿದ್ದನು.
೭. ಆಮೆವ್ಯೂಹ
ಇಲ್ಲಿ ಆಮೆಯಂತೆ ಸೈನ್ಯ ರಚಿಸಲಾಗುತ್ತದೆ.
೮. ಔರಮಿವ್ಯೂಹ
ಪಾಂಡವರ ವ್ರಜವ್ಯೂಹದ ರಚನೆಗೆ ಪ್ರತ್ಯುತ್ತರವನ್ನು ನೀಡಲು ಭೀಷ್ಮರು ಔರಮಿವ್ಯೂಹವನ್ನು ರಚಿಸಿದ್ದರು. ಈ ವ್ಯೂಹದಲ್ಲಿ ಪೂರ್ಣ ಸೈನ್ಯವನ್ನು ಸಮುದ್ರದಂತೆ ಅಲಂಕರಿಸಲಾಗುತ್ತಿತ್ತು. ಸಮುದ್ರದ ಅಲೆಗಳು ಕಾಣಿಸುವ ಆಕಾರದಲ್ಲಿ ಕೌರವ ಸೈನ್ಯವು ಪಾಂಡವರ ಮೇಲೆ ದಾಳಿ ಮಾಡಿತ್ತು.
೯. ಶ್ರೀನ್ಗಾತಕಾವ್ಯೂಹ
ಕೌರವರ ಔರಮಿವ್ಯೂಹಕ್ಕೆ ಪ್ರತ್ಯುತ್ತರವನ್ನು ನೀಡಲು ಅರ್ಜುನನು ಶ್ರೀನ್ಗಾತಕಾವ್ಯೂಹವನ್ನು ನಿರ್ಮಿಸಿದ್ದನು. ಈ ವ್ಯೂಹವು ಕಟ್ಟಡದಂತೆ ಕಾಣಿಸುತ್ತಿತ್ತು. ಬಹುಶಃ ಇದಕ್ಕೇ ೩ ಶಿಖರಗಳಿರುವ ವ್ಯೂಹರಚನೆ ಅನ್ನುತ್ತಿರಬಹುದು. ಇದರ ಹೊರತು ಸರ್ವತೋಭಧ್ರ ಮತ್ತು ಸುಪರ್ಣ ವ್ಯೂಹರಚನೆಗಳ ಉಲ್ಲೇಖವೂ ಇದೆ.
೧೦. ಚಕ್ರಶಕಟವ್ಯೂಹ
ಮಹಾಭಾರತದ ಯುದ್ಧದಲ್ಲಿ ಅಭಿಮನ್ಯುವನ್ನು ಕ್ರೂರವಾಗಿ ವಧಿಸಿದ ನಂತರ ಅರ್ಜುನನು ‘ನಾಳೆ ಸೂರ್ಯಾಸ್ತದ ಮೊದಲು ಜಯದ್ರಥನನ್ನು ವಧಿಸುವೆನು’, ಎಂಬ ಪ್ರತಿಜ್ಞೆ ಮಾಡಿದ್ದನು. ಆಗ ಗುರು ದ್ರೋಣಾಚಾರ್ಯರು ಜಯದ್ರಥನನ್ನು ರಕ್ಷಿಸಲು ಈ ವ್ಯೂಹರಚನೆಯನ್ನು ನಿರ್ಮಿಸಿದ್ದರು; ಆದರೆ ಭಗವಾನ ಶ್ರೀಕೃಷ್ಣನ ಚಾಣಾಕ್ಷತನದಿಂದ ಜಯದ್ರಥನು ಈ ವ್ಯೂಹರಚನೆಯಿಂದ ಹೊರಗೆ ಬಂದನು ಮತ್ತು ಆಗ ಅವನನ್ನು ವಧಿಸಲಾಯಿತು.
– ಶ್ರೀ. ಜಿತೇಂದ್ರ ಶರ್ಮಾ, ಇಂದೂರ, ಮಧ್ಯಪ್ರದೇಶ. (ಆಧಾರ : ಶ್ರೀ. ಜಿತೇಂದ್ರ ಶರ್ಮಾ ಇವರ ‘ಎಕ್ಸ್’ ಖಾತೆಯಿಂದ)