ಶಾರದೀಯ ನವರಾತ್ರಿ ವ್ರತವನ್ನು ಹೇಗೆ ಪಾಲಿಸಬೇಕು ?

೧. ನವರಾತ್ರಿವ್ರತವನ್ನು ಹೇಗೆ ಪಾಲಿಸಬೇಕು ?

ಅ. ‘ಆಶ್ವಯುಜ ಶುಕ್ಲ ಪ್ರತಿಪದೆಯಿಂದ ನವಮಿ ತಿಥಿಯ ವರೆಗೆ ‘ನವರಾತ್ರಿ ವ್ರತ ಇರುತ್ತದೆ. ಕೆಲವು ಜನರು ಈ ಅವಧಿಯಲ್ಲಿ ಉಪವಾಸ ಮಾಡುತ್ತಾರೆ. ಕೆಲವರು ಒಪ್ಪೊತ್ತು ಊಟ ಮಾಡಿ ಶಕ್ತಿ ಉಪಾಸನೆ ಮಾಡುತ್ತಾರೆ. ಕೆಲವರು ಸಕಾಮ ಅಥವಾ ನಿಷ್ಕಾಮ ಭಾವದಿಂದ ‘ದುರ್ಗಾ ಸಪ್ತಶಕ್ತಿಯ ಪಠಣವನ್ನು ಮಾಡುತ್ತಾರೆ. ಈ ಪಠಣವನ್ನು ಸಂಯಮದಿಂದ ಮಾಡುವುದು ಆವಶ್ಯಕವಾಗಿದೆ; ಆದ್ದರಿಂದ ಯಮ-ನಿಯಮಗಳನ್ನು ಪಾಲಿಸಿ ಭಗವತಿ ದುರ್ಗೆಯ ಆರಾಧನೆ ಅಥವಾ ಪಠಣವನ್ನು ಮಾಡಬೇಕು. ನವರಾತ್ರಿ ವ್ರತದ ಅನುಷ್ಠಾನವನ್ನು ಮಾಡುವವರು ಎಷ್ಟು ಸಂಯಮದಿಂದ, ನಿಯಮಿತವಾಗಿ ಅಂತರ್ಬಾಹ್ಯ ಶುದ್ಧವಾಗಿರುತ್ತಾರೆಯೋ, ಅಷ್ಟು ಪ್ರಮಾಣದಲ್ಲಿ ಅವರಿಗೆ ಫಲ ಸಿಗುತ್ತದೆ, ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಆ. ಅಮಾವಾಸ್ಯೆಯುಕ್ತ ಪ್ರತಿಪದೆಯನ್ನು ಒಳ್ಳೆಯದಿನವೆಂದು ತಿಳಿಯುವುದಿಲ್ಲ. ೯ ರಾತ್ರಿಗಳ ವರೆಗೆ ವ್ರತವನ್ನು ಮಾಡುವುದರಿಂದ ಈ ‘ನವರಾತ್ರಿ ವ್ರತವು ಪೂರ್ಣವಾಗುತ್ತದೆ. ತಿಥಿಯ ಏರಿಳಿಕೆಯಿಂದಾಗಿ ಇದರಲ್ಲಿ ಹೆಚ್ಚುಕಡಿಮೆ ಆಗುವುದಿಲ್ಲ.

೨. ನವರಾತ್ರಿ ವ್ರತಾರಂಭ ಮಾಡುವ ಪ್ರಾಥಮಿಕ ಸಿದ್ಧತೆ

೧ ಅ. ಮೊದಲು ವೇದಿಕೆಯನ್ನು ಸಿದ್ಧಪಡಿಸಿ ದೇವಿಯನ್ನು ಸ್ಥಾಪಿಸುವುದು : ಮೊದಲು ಪವಿತ್ರ ಸ್ಥಳದಲ್ಲಿನ ಮಣ್ಣನ್ನು ತಂದು ವೇದಿಕೆಯನ್ನು ಸಿದ್ಧಪಡಿಸಬೇಕು. ಅದರ ಮೇಲೆ ಅಗಸೆಬೀಜ ಅಥವಾ ಗೋದಿಯನ್ನು ಬಿತ್ತಬೇಕು. ನಂತರ ಅದರ ಮೇಲೆ ತಮ್ಮ ಕ್ಷಮತೆಗನುಸಾರ ಇರುವ ಚಿನ್ನ, ತಾಮ್ರ ಅಥವಾ ಮಣ್ಣಿನ ಕಲಶವನ್ನು ವಿಧಿಪೂರ್ವಕ ಸ್ಥಾಪಿಸಬೇಕು. ಕಲಶದ ಮೇಲೆ ಚಿನ್ನ, ಬೆಳ್ಳಿ, ತಾಮ್ರ, ಮಣ್ಣು, ಕಲ್ಲಿನ ಮೂರ್ತಿಯ ಅಥವಾ ದೇವಿಯ ಚಿತ್ರವನ್ನು ಸ್ಥಾಪಿಸಬೇಕು. ದೇವಿಯ ಮೂರ್ತಿ ಇಲ್ಲದಿದ್ದರೆ, ಕಲಶದ ಹಿಂದೆ ಸ್ವಸ್ತಿಕ ಬಿಡಿಸಬೇಕು ಮತ್ತು ಅದರ ಎರಡೂ ಬದಿಗೆ ತ್ರಿಶೂಲಗಳನ್ನು ಬಿಡಿಸಿ ದುರ್ಗಾದೇವಿಯ ಚಿತ್ರ, ಗ್ರಂಥ ಮತ್ತು ಸಾಲಿಗ್ರಾಮವನ್ನಿಟ್ಟು ಶ್ರೀವಿಷ್ಣುವಿನ ಪೂಜೆ ಯನ್ನು ಮಾಡಬೇಕು. ಪೂಜೆ ಸಾತ್ತ್ವಿಕವಾಗಿರಬೇಕು, ರಾಜಸಿಕ ಅಥವಾ ತಾಮಸಿಕ ಇರಬಾರದು.

೧ ಆ. ವೇದ ಅಥವಾ ಸಂಪ್ರದಾಯಕ್ಕನುಸಾರ ವಿಧಿಪೂರ್ವಕ ಪೂಜೆಯನ್ನು ಮಾಡಬೇಕು : ನವರಾತ್ರಿಯ ವ್ರತದ ಆರಂಭದಲ್ಲಿ ಸ್ವಸ್ತಿ ವಾಚನ-ಶಾಂತಿಪಠಣವನ್ನು ಮಾಡಿ ಸಂಕಲ್ಪವನ್ನು ಮಾಡಬೇಕು. ಮೊತ್ತಮೊದಲು ಗಣಪತಿಯ ಪೂಜೆಯನ್ನು ಮಾಡಿ ಮಾತೃಕಾ, ಲೋಕಪಾಲ, ನವಗ್ರಹ ಮತ್ತು ವರುಣ ಇವರ ವಿಧಿಪೂರ್ವಕ ಪೂಜೆ ಮಾಡಬೇಕು. ನಂತರ ಮುಖ್ಯ ಮೂರ್ತಿಯ ಷೋಡಶೋಪಚಾರ ಪೂಜೆ ಮಾಡಬೇಕು.

ತಮ್ಮ ಇಷ್ಟದೇವ ಶ್ರೀರಾಮ-ಕೃಷ್ಣ, ಲಕ್ಷ್ಮಿ-ನಾರಾಯಣ ಅಥವಾ ಭಗವತಿ ದುರ್ಗಾದೇವಿ ಮೊದಲಾದ ಮೂರ್ತಿಗಳನ್ನು ಮುಖ್ಯ ಮೂರ್ತಿಗಳೆಂದು ನಂಬಲಾಗುತ್ತದೆ. ವೇದ-ವಿಧಿಗನುಸಾರ ಅಥವಾ ಸಂಪ್ರದಾಯ ನಿರ್ದಿಷ್ಟ ಪಡಿಸಿದಂತೆ  ವಿಧಿಪೂರ್ವಕ ಪೂಜೆಯನ್ನು ಮಾಡಬೇಕು. ದುರ್ಗಾ ದೇವಿಯ ಆರಾಧನೆ ಅಥವಾ ಅನುಷ್ಠಾನವನ್ನು ಮಾಡುವಾಗ ಮಹಾಕಾಳಿ, ಮಹಾಲಕ್ಷ್ಮೀ ಮತ್ತು ಮಹಾಸರಸ್ವತಿಯ ಪೂಜೆ ಹಾಗೂ ಮಾರ್ಕಂಡೇಯ ಪುರಾಣದಲ್ಲಿರುವ ‘ಶ್ರೀ ದುರ್ಗಾ ಸಪ್ತಶತಿಯನ್ನು ಪಠಿಸುವುದು, ಇದು ಅನುಷ್ಠಾನದ ಮುಖ್ಯ ಅಂಗವಾಗಿದೆ.

೩. ಪಠಣವನ್ನು ಮಾಡುವ ವಿಧಿ

ದೇವಿಯ ವ್ರತದಲ್ಲಿ ಕುಮಾರಿ ಪೂಜೆಯನ್ನು ಮಾಡುವುದು ಅತ್ಯಂತ ಆವಶ್ಯಕವೆಂದು ಪರಿಗಣಿಸಲಾಗಿದೆ. ಕ್ಷಮತೆಯಿದ್ದರೆ, ನವರಾತ್ರಿಯ ಕಾಲದಲ್ಲಿ ಪ್ರತಿದಿನ ಅಥವಾ ಮುಕ್ತಾಯದ ದಿನದಂದು ೯ ಜನ ಕುಮಾರಿಯರನ್ನು ದೇವಿಯ ರೂಪವೆಂದು ತಿಳಿದು ಅವರ ಚರಣಗಳನ್ನು ತೊಳೆದು ಅವರನ್ನು ಗಂಧ-ಪುಷ್ಪಾದಿಗಳಿಂದ ಪೂಜಿಸಬೇಕು. ಅವರಿಗೆ ಗೌರವದಿಂದ ಮತ್ತು ಅವರ ಇಷ್ಟದಂತೆ ಮೃಷ್ಟಾನ್ನ ಭೋಜನವನ್ನು ನೀಡಬೇಕು. ಅವರಿಗೆ ವಸ್ತ್ರಾಲಂಕಾರವನ್ನು ನೀಡಿ ಸನ್ಮಾನಿಸಬೇಕು. ದಶಮಿಯಂದು ಪೂಜೆಯ ಅಂತರ್ಗತ ದುರ್ಗಾ ಸಪ್ತಶತಿ ಪಠಿಸುವವರ ಪೂಜೆಯನ್ನು ಮಾಡಿ ಅವರಿಗೆ ದಕ್ಷಿಣೆಯನ್ನು ನೀಡಬೇಕು ಮತ್ತು ನಂತರ ದೇವಿಯ ಆರತಿಯನ್ನು ಮಾಡಿ ವಿಸರ್ಜನೆ ಮಾಡಬೇಕು.

(ಆಧಾರ : ಮಾಸಿಕ ‘ಸತ್ಸಂಗ ಪಥ, ಅಕ್ಟೊಬರ್ ೨೦೦೪)

ಕುಮಾರಿಪೂಜೆಯ ಮೊದಲು ಮುಂದಿನ ಮಂತ್ರಗಳಿಂದ ಆಹ್ವಾನಿಸುತ್ತಾರೆ.

ಮನ್ತ್ರಾಕ್ಷರಮಯೀಂ ಲಕ್ಷ್ಮೀಂ ಮಾತೃಣಾಂ ರೂಪಧಾರಿಣೀಮ್ |

ನವದುರ್ಗಾತ್ಮಿಕಾಂ ಸಾಕ್ಷಾತ್ ಕನ್ಯಾಮಾವಾಹಯಾಮ್ಯಹಮ್ || – ನಿರ್ಣಯ

ಸಿನ್ಧು (ಆಧಾರ : ಸನಾತನದ ಗ್ರಂಥ ‘ಶಕ್ತಿಯ ಪ್ರಾಸ್ತಾವಿಕ ವಿವೇಚನೆ)