ದೇವಿಮಾತೆಯ ನಿತ್ಯ ಉಪಾಸನೆ ಹೇಗೆ ಮಾಡಬೇಕು ?

ದೇವಿ ಪ್ರತಿಮೆಗೆ ಅನಾಮಿಕಾ ಬೆರಳಿನಿಂದ ಚಂದನವನ್ನು ಹಚ್ಚಿರಿ. ನಂತರ ಅರಿಶಿನ-ಕುಂಕುಮ ಅರ್ಪಿಸಿರಿ. ತೊಟ್ಟಿನ ಭಾಗವು ದೇವಿಯೆಡೆಗೆ ಬರುವಂತೆ ಹೂವನ್ನು ಅರ್ಪಿಸಿರಿ. ಸಾಧ್ಯವಿದ್ದಲ್ಲಿ ಹೂವಿನ ಮಾಲೆಯನ್ನು ಅರ್ಪಿಸಿರಿ. ದೇವಿಗೆ ಒಂದು ಅಥವಾ ಒಂಭತ್ತರ ಪಟ್ಟಿನ ಸಂಖ್ಯೆಯಲ್ಲಿ ಹೂವುಗಳನ್ನು ಅರ್ಪಿಸಿ. ಹೂವುಗಳನ್ನು ಗೋಲಾಕಾರದಲ್ಲಿ ಅರ್ಪಿಸಿ ಮಧ್ಯದಲ್ಲಿ ಟೊಳ್ಳು ಜಾಗವನ್ನು ನಿರ್ಮಿಸಿ. ವಿಶಿಷ್ಟ ದೇವತೆಗೆ ವಿಶಿಷ್ಟ ಹೂವುಗಳನ್ನು ಅರ್ಪಿಸುವುದು ಮಹತ್ವಪೂರ್ಣವಾಗಿದೆ.

ದೇವಿಪೂಜೆಯಲ್ಲಿ ನಿಷಿದ್ಧವಾದ ಹೂವುಗಳು

ಅಪವಿತ್ರ ಸ್ಥಳದಲ್ಲಿ ಬೆಳೆದಿರುವ, ಅರಳದೇ ಇರುವ ಅಂದರೆ ಮೊಗ್ಗುಗಳು, ದಳಗಳು ಉದುರಿರುವ, ನಿರ್ಗಂಧ ಅಥವಾ ತೀವ್ರ ಗಂಧವಿರುವ, ಪರಿಮಳವನ್ನು ಅನುಭವಿಸಲಾದ, ಭೂಮಿಯ ಮೇಲೆ ಉದುರಿದ, ಎಡಗೈಯಲ್ಲಿ ತರಲಾದ, ನೀರಿನಲ್ಲಿ ಅದ್ದಿ ತೊಳೆಯಲಾದ, ಒಳಉಡುಪು ಮಾತ್ರವೇ ಧರಿಸಿ ತಂದ ಹೂವುಗಳನ್ನು ಅರ್ಪಿಸಬೇಡಿ.

ದೀಪ

ಪೂರ್ಣವೃತ್ತಾಕಾರ ಪದ್ಧತಿಯಲ್ಲಿ ದೀಪವನ್ನು ತೋರಿಸಿ.

ನೈವೇದ್ಯ

ಅನಂತರ ದೇವಿಗೆ ನೈವೇದ್ಯವನ್ನು ನಿವೇದಿಸಿರಿ.

ಊದುಬತ್ತಿ

ದೇವಿಯ ತಾರಕ ರೂಪವನ್ನು ಉಪಾಸನೆಯನ್ನು ಮಾಡಲು ಪೂಜೆಯ ಸಮಯದಲ್ಲಿ ಚಂದನ, ಗುಲಾಬಿ, ಮಲ್ಲಿಗೆ, ಕೇದಗೆ, ಚಂಪಾ, ಚಮೇಲಿ, ಜಾಜಿ, ಲಾವಂಚ, ರಾತ್ರಿ ರಾಣಿ ಹಾಗೂ ಕನಕಾಂಬರ ಮುಂತಾದ ಸುಗಂಧ ಭರಿತ ಊದುಬತ್ತಿಯನ್ನು ಉಪಯೋಗಿಸಿ. ದೇವಿಯ ಮಾರಕ ರೂಪದ ಉಪಾಸನೆಗಾಗಿ ಹೀನಾ ಹಾಗೂ ದರಬಾರ ಇಂತಹ ಸುಗಂಧವುಳ್ಳ ಊದುಬತ್ತಿಯನ್ನು ಉಪಯೋಗಿಸಿ.

ದೇವಿಯ ಉಡಿ ತುಂಬುವುದರ ಯೋಗ್ಯ ಪದ್ಧತಿ

ಅ. ದೇವಿಗೆ ಅರ್ಪಣೆ ಮಾಡುವ ಸೀರೆಯು ನೂಲಿನ ಅಥವಾ ರೇಷ್ಮೆಯದ್ದಾಗಿರಬೇಕು, ಏಕೆಂದರೆ ಇತರ ಯಾವುದೇ ದಾರಗಳಿಗಿಂತ ಹತ್ತಿ ಅಥವಾ ರೇಷ್ಮೆಯ ದಾರಗಳಲ್ಲಿ ದೇವತೆಗಳಿಂದ ಬರುವ ಸಾತ್ತ್ವಿಕ ಲಹರಿಗಳನ್ನು ಗ್ರಹಿಸುವ ಹಾಗೂ ಹಿಡಿದಿಟ್ಟುಕೊಳ್ಳುವ ಕ್ಷಮತೆಯು ಹೆಚ್ಚಿಗೆ ಇರುತ್ತದೆ.

ಆ. ಒಂದು ತಟ್ಟೆಯಲ್ಲಿ ಸೀರೆ, ಅದರ ಮೇಲೆ ಖಣ (ರವಕೆಯ ಬಟ್ಟೆ) ಮತ್ತು ಅದರ ಮೇಲೆ ತೆಂಗಿನಕಾಯಿಯನ್ನು ಇಡಬೇಕು. ತೆಂಗಿನ ಕಾಯಿಯ ಜುಟ್ಟು ದೇವಿಯ ಕಡೆಗೆ ಇರಬೇಕು. ನಂತರ ತಟ್ಟೆಯಲ್ಲಿನ ಎಲ್ಲ ವಸ್ತುಗಳು ನಮ್ಮ ಕೈಗಳ ಬೊಗಸೆಯಲ್ಲಿ ತೆಗೆದುಕೊಂಡು, ಅದನ್ನು ನಮ್ಮ ಎದೆಯ ಮುಂದೆ ಬರುವಂತೆ ಹಿಡಿದು ದೇವಿಯೆದುರು ನಿಲ್ಲಬೇಕು.

ಇ. ‘ದೇವಿಯಿಂದ ನಮಗೆ ಚೈತನ್ಯವು ಸಿಗಲಿ ಮತ್ತು ನಮ್ಮ ಆಧ್ಯಾತ್ಮಿಕ ಉನ್ನತಿಯಾಗಲಿ ಎಂದು ಪ್ರಾರ್ಥನೆ ಮಾಡಬೇಕು.

ಈ. ಉಡಿಯ ವಸ್ತುಗಳನ್ನು ದೇವಿಯ ಚರಣಗಳಲ್ಲಿ ಅರ್ಪಿಸಿದ ನಂತರ ಉಡಿಯ ವಸ್ತುಗಳ ಮೇಲೆ ಅಕ್ಷತೆಯನ್ನು ಅರ್ಪಿಸಬೇಕು.

ಉ. ದೇವಿಗೆ ಅರ್ಪಿಸಿದ ಸೀರೆಯನ್ನು ಸಾಧ್ಯವಿದ್ದಲ್ಲಿ ಧರಿಸಬೇಕು ಮತ್ತು ತೆಂಗಿನಕಾಯಿಯ ಕೊಬ್ಬರಿಯನ್ನು ಪ್ರಸಾದವೆಂದು ಸ್ವೀಕರಿಸಬೇಕು