ಶತ್ರುಗಳ ಜಲಾಂತರ್ಗಾಮಿ ನೌಕೆಗಳನ್ನು ಪತ್ತೆ ಹಚ್ಚಲು ಅಮೇರಿಕಾದಿಂದ ‘ಸೋನೊಬಾಯ್’ ಉಪಕರಣಗಳನ್ನು ಖರೀದಿಸಲಿರುವ ಭಾರತ !

ನ್ಯೂಯಾರ್ಕ್ (ಅಮೇರಿಕಾ) – ಅಮೇರಿಕಾವು ಭಾರತಕ್ಕೆ ‘ಸೋನೊಬಾಯ್’ ಉಪಕರಣಗಳನ್ನು ಮಾರಾಟ ಮಾಡಲು ಅನುಮೋದನೆ ನೀಡಿದೆ. ‘ಸೋನೊಬಾಯ್’ ಜಲಾಂತರ್ಗಾಮಿ ವಿರೋಧಿ (ಆಂಟೀ ಸಬ್ ಮೆರಿನ್) ಉಪಕರಣವಾಗಿದೆ. ಇದರಿಂದ ಭಾರತೀಯ ನೌಕಾಪಡೆಯ ಶಕ್ತಿ ಇನ್ನಷ್ಟು ಹೆಚ್ಚಾಗಲಿದೆ. ಈ ಉಪಕರಣಕ್ಕಾಗಿ ಭಾರತಕ್ಕೆ ಅಂದಾಜು 52.8 ಮಿಲಿಯನ್ ಡಾಲರ್ (443 ಕೋಟಿ ರೂ.) ವೆಚ್ಚವಾಗಲಿದೆ. ಈ ಉಪಕರಣದ ಸಹಾಯದಿಂದ ಭಾರತೀಯ ನೌಕಾಪಡೆಗೆ ಸಮುದ್ರದಲ್ಲಿ ಶತ್ರು ಜಲಾಂತರ್ಗಾಮಿ ನೌಕೆಗಳನ್ನು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗಲಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಮೇರಿಕಾ ಪ್ರವಾಸದ ವೇಳೆ ಈ ಒಪ್ಪಂದವಾಗಿತ್ತು. ಭಾರತ-ಅಮೇರಿಕಾ ದ್ವಿಪಕ್ಷೀಯ ಸಂಬಂಧಗಳನ್ನು ಅಧಿಕ ಬಲಪಡಿಸಲು ಸಿಂಗ್ ಅವರು ಅಮೇರಿಕಾದ ರಕ್ಷಣಾ ಸಚಿವ ಲಾಯ್ಡ್ ಆಸ್ಟಿನ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಈ ಮಾತುಕತೆಯ ವೇಳೆ ರಕ್ಷಣಾ ಸಹಕಾರ, ಪ್ರಾದೇಶಿಕ ಭದ್ರತೆ, ಕೈಗಾರಿಕಾ ಸಹಕಾರ, ಇಂಡೋ-ಪೆಸಿಫಿಕ್ ಪ್ರದೇಶ ಮತ್ತಿತರ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆದಿತ್ತು.