ಪೂ. (ಶ್ರೀಮತಿ) ರಾಧಾ ಪ್ರಭು (ವಯಸ್ಸು ೮೬ ವರ್ಷ) ಇವರು ಶ್ರೀಕೃಷ್ಣ ಮತ್ತು ಶ್ರೀರಾಮನಲ್ಲಿ ಮಾಡಿದ ವೈಶಿಷ್ಟ್ಯಪೂರ್ಣ ಪ್ರಾರ್ಥನೆ !

ಪೂ. (ಶ್ರೀಮತಿ) ರಾಧಾ ಪ್ರಭು

೧. ಗೋವಂಶದ ರಕ್ಷಣೆಗಾಗಿ ಸರ್ವಜ್ಞನಾದ ಶ್ರೀಕೃಷ್ಣನಲ್ಲಿ ಮಾಡಿದ ಪ್ರಾರ್ಥನೆ

೧ ಅ. ಹೇ ಶ್ರೀಕೃಷ್ಣ, ಗೋಮಾತೆಯರ ಸಹಾಯಕ್ಕಾಗಿ ನಿನ್ನ ಆಗಮನದ ದಾರಿ ಕಾಯುತ್ತಿದ್ದೇನೆ ! : ಹೇ ಶ್ರೀಕೃಷ್ಣ, ನೀನು ದ್ವಾಪರಯುಗದಲ್ಲಿ ಜನ್ಮತಾಳಿ ಅನೇಕ ಲೀಲೆಗಳನ್ನು ನಿನ್ನ ಬಾಲ್ಯದಲ್ಲಿಯೇ ಮಾಡಿ ತೋರಿಸಿದೆ. ಕ್ರೂರಿ ಔರಂಗಜೇಬನು ನಿನ್ನ ಮಥುರಾವನ್ನು ಮಸೀದಿಯನ್ನಾಗಿ ಮಾಡಿದ್ದಾನೆ. ಈ ಘೋರ ಅವಮಾನವನ್ನು ವಿರೋಧಿಸಲು ಪ್ರತ್ಯಕ್ಷನಾಗು ! ನಿನ್ನ ನೆಚ್ಚಿನ ಬಾಲಗೋಪಾಲರು ಹಸುಗಳನ್ನು ಮೇಯಿಸಲು ಕರೆದೊಯ್ಯಲು ನಿನಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಅನಂತ ಕೋಟಿ ಸೂರ್ಯನಂತೆ ಪ್ರಕಾಶವಿರುವ ಹೇ ಶ್ರೀಕೃಷ್ಣ ನೀನು ನಿನ್ನ ಸ್ವರೂಪವನ್ನು ನಮ್ಮೆಲ್ಲರಿಗೂ ತೋರಿಸು. ಗೋಮಾತೆಯ ಹೊಟ್ಟೆಯಲ್ಲಿ ೩೩ ಕೋಟಿ ದೇವತೆಗಳ ತತ್ತ್ವಗಳಿವೆ. ಅದರಲ್ಲಿ ನಿನ್ನ ತತ್ತ್ವವೂ ಇದೆ; ಆದರೆ ಗೋಮಾತೆ ಇಂದು ದುಷ್ಟರಿಂದ ಆಗುವ ಹಿಂಸೆಯನ್ನು ಸಹಿಸಲಾಗದೆ ಸಹಾಯಕ್ಕಾಗಿ ನಿನಗಾಗಿ ಕಾಯುತ್ತಿದ್ದಾಳೆ. ಭೂಲೋಕದಲ್ಲಿನ ಎಲ್ಲಾ ಜೀವಜಂತುಗಳು, ಮರಗಳು, ನದಿಗಳು, ವನಸ್ಪತಿ, ಪರ್ವತ ಇವೆಲ್ಲದರ ಉತ್ಪತ್ತಿ ಮತ್ತು ಲಯ ಮಾಡುವವನು ನೀನೇ ಆಗಿದ್ದೀಯ. ಪ್ರತಿಯೊಬ್ಬರ ಪ್ರಾರಬ್ಧಕ್ಕನುಸಾರ ಮನಸ್ಸಿನಲ್ಲಿನ ಒಳ್ಳೆಯ ಮತ್ತು ಕೆಟ್ಟ ವಿಚಾರಗಳ ಫಲವನ್ನು ನೀಡುವವನು ನೀನೇ ಆಗಿರುವೆ. ಸಾತ್ತ್ವಿಕ ಪ್ರಕೃತಿಯ ಗೋವುಗಳ (ಹಾಲು, ಮೊಸರು ಇತ್ಯಾದಿ ಸ್ವರೂಪದಲ್ಲಿ) ಸಂಪೂರ್ಣ ಲಾಭ ಪಡೆದು ಮತ್ತು ಅದಕ್ಕೆ ಕಷ್ಟವನ್ನು ಕೊಟ್ಟು ತನ್ನ ನಾಲಿಗೆಯ ಚಪಲವನ್ನು ತೀರಿಸಿಕೊಳ್ಳಲು ಅದನ್ನು ಕೊಲ್ಲುವ ಮನುಷ್ಯರನ್ನು ಕೃತಘ್ನ ಎನ್ನಬೇಕಲ್ಲವೇ ? ಈ ಪಾಪಗಳನ್ನು ತೊಲಗಿಸಲು ಅವರು ಅನೇಕ ಜನ್ಮಗಳನ್ನು ತೆಗೆದುಕೊಳ್ಳಬೇಕಾಗುವುದು. ಹೇ ಶ್ರೀಕೃಷ್ಣ, ಅವರಿಂದ ಇದು ಹೀಗೇ ಮುಂದುವರಿದರೆ, ಗೋವಂಶವೇ ನಾಶವಾಗಬಹುದು.

೧ ಆ. ಹೇ ಶ್ರೀಕೃಷ್ಣ, ಗೋವನ್ನು ವಧಿಸುವವರ ಮನಸ್ಸಿನಲ್ಲಿ ಗೋವಿನ ಬಗ್ಗೆ ಪ್ರೀತಿಯನ್ನು ಮೂಡಿಸು ! : ಹೇ ಶ್ರೀಕೃಷ್ಣ ನೀನು ಭಗವದ್ಗೀತೆಯಲ್ಲಿ ಅರ್ಜುನನಿಗೆ ಕರ್ಮಯೋಗದ ಮೂಲಕ ವಿವರವಾಗಿ ಉಪದೇಶವನ್ನು ಮಾಡಿರುವೆ. ಮನುಷ್ಯನು ಜ್ಞಾನ ಮತ್ತು ಉತ್ತಮ ಸ್ಥಾನವನ್ನು ಪಡೆಯಲು ಏನು ಮಾಡಬೇಕು ? ಪಂಚ ಜ್ಞಾನೇಂದ್ರಿಯ, ಪಂಚ ಕರ್ಮೇಂದ್ರಿಯ, ದೇಹ, ಮನಸ್ಸು, ಬುದ್ಧಿ ಮತ್ತು ಷಡ್ರಿಪುಗಳನ್ನು ಹೇಗೆ ನಿಯಂತ್ರಿಸಬೇಕೆಂದು ಸಹ ಹೇಳಿರುವೆ. ಹೇ ಸರ್ವಜ್ಞನಾಗಿರುವ ಶ್ರೀಕೃಷ್ಣ, ನಾಲಿಗೆಯ ಚಪಲಕ್ಕಾಗಿ ಮತ್ತು ಹೊಟ್ಟೆ ತುಂಬಿಸಲು ಗೋವಿನ ಹತ್ಯೆ ಮಾಡುವ ವ್ಯಕ್ತಿಗಳಿಗೆ ಸದ್ಬುದ್ಧಿಯನ್ನು ಕೊಟ್ಟು ಗೋವುಗಳ ರಕ್ಷಣೆಯನ್ನು ಮಾಡು. ಅಂತಹ ಜನರು ಸಾಧನೆಯನ್ನು ಮಾಡಿದರೆ, ಅವರಿಗೂ ಗೋವಿನ ಬಗ್ಗೆ ಪ್ರೇಮ ಉತ್ಪನ್ನವಾಗಿ ಉತ್ತಮ ಸಂಸ್ಕಾರವಾಗುವವು. ಅವರಲ್ಲಿ ಗೋವಿನ ಮೇಲೆ ಶ್ರದ್ಧೆ ಮತ್ತು ಪ್ರೀತಿ ಮೂಡಿ ಅವರಲ್ಲಿ ಗೋವಿನ ಸೇವೆಯನ್ನು ಮಾಡುವ ಸಂಸ್ಕಾರವಾಗಲಿ’.

೨. ಪ್ರಭು ಶ್ರೀ ರಾಮಚಂದ್ರನಲ್ಲಿ ಮಾಡಿದ ಪ್ರಾರ್ಥನೆಗಳು

೨ ಅ. ಹೇ ಶ್ರೀರಾಮ, ಹಿಂದೂ ರಾಷ್ಟ್ರ ಬೇಗನೇ ಬರಲಿ ! : ಹೇ ಶ್ರೀರಾಮ, ೫೦೦ ವರ್ಷಗಳ ಪ್ರಯತ್ನ, ಶ್ರದ್ಧೆ, ಬಲಿದಾನ ಹಾಗೆಯೇ ಸಾಧುಸಂತರ ಆಶೀರ್ವಾದ, ಸಹಕಾರ ಮತ್ತು ನಿನ್ನ ಕೃಪಾಶೀರ್ವಾದ ಇವುಗಳಿಂದಾಗಿ ನಿನ್ನ ಜನ್ಮಸ್ಥಳ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ ನಿನ್ನ ಮೂರ್ತಿಯ ಪ್ರಾಣ ಪ್ರತಿಷ್ಠೆಯಾಗಿದೆ. ಈ ಪ್ರಕ್ರಿಯೆಯನ್ನು ಜಗತ್ತಿನ ಎಲ್ಲ ಹಿಂದೂಗಳ ಪರಮಭಾಗ್ಯ ಎಂದು ಹೇಳಬೇಕಾಗುವುದು. ಭಾರತ ಮತ್ತು ವಿದೇಶಗಳಲ್ಲಿರುವ ಎಲ್ಲಾ ಹಿಂದೂಗಳಿಗೆ ಸನಾತನ ಧರ್ಮದ ಶಿಕ್ಷಣ ಸಿಕ್ಕಿದರೆ ಭಾರತವು ಶೀಘ್ರದಲ್ಲಿ ‘ಹಿಂದೂ ರಾಷ್ಟ್ರ’ವಾಗುವುದು. ಪ್ರತಿಯೊಬ್ಬ ಹಿಂದೂವು ಸಾಧನೆಯನ್ನು ಮಾಡತೊಡಗಿದರೆ ರಾಷ್ಟ್ರಕ್ಕೆ ಇನ್ನೂ ಹೆಚ್ಚಿನ ಬಲ ಸಿಗುವುದು. ಪ್ರತಿಯೊಬ್ಬರ ನಿರ್ದೋಷ ಸ್ವಭಾವ, ನಿರಹಂಕಾರ, ಪ್ರೀತಿ ಮತ್ತು ತ್ಯಾಗಗಳಿಂದಾಗಿ ರಾಮರಾಜ್ಯ ಬರಲು ಸಹಾಯವಾಗುವುದು. ಸಮಸ್ತ ಜನತೆಗೆ ಪ್ರಾಚೀನ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ಸಿಕ್ಕಿದರೆ ರಾಮರಾಜ್ಯವು ಬೇಗನೆ ಬರುವುದರಲ್ಲಿ ಸಂದೇಹವಿಲ್ಲ.

೨ ಆ. ಹೇ ಶ್ರೀರಾಮಚಂದ್ರ, ದ್ವೇಷದಿಂದ ಇತರರನ್ನು ನಾಶ ಮಾಡುವವರ ಪ್ರಯತ್ನಗಳು ವಿಫಲವಾಗಲಿ ! : ಭಾರತದಲ್ಲಿ ರಾಜರ್ಷಿ ವಿಶ್ವಾಮಿತ್ರರಂತಹ ಮಹಾಪುರುಷರು ಅಧಿಕಾರದಲ್ಲಿದ್ದರೂ ಅವರ ಮೇಲೆ ದ್ವೇಷದಿಂದ ಭುಸುಗುಟ್ಟಿ ವ್ಯಕ್ತಿಗಳ ಅಸ್ತಿತ್ವವನ್ನಷ್ಟೇ ಅಲ್ಲ ಅವರನ್ನೇ ನಾಶ ಮಾಡುವ ಪ್ರಯತ್ನ ಇಲ್ಲಿ ಆಗುತ್ತದೆ. ಅವರ ಪ್ರಯತ್ನಗಳನ್ನು ವಿಫಲಗೊಳಿಸು ಭಗವಂತಾ !

೨ ಇ. ಹೇ ಶ್ರೀ ರಾಮಚಂದ್ರ, ಭಾರತೀಯರಿಗೆ ಪ್ರಾಚೀನ ಗುರುಕುಲ ಪದ್ಧತಿಯ ಶಿಕ್ಷಣ ದೊರಕಿ ಭಾರತವು ಮತ್ತೆ ವಿಶ್ವಗುರು ಸ್ಥಾನಕ್ಕೇರಲಿ ! : ಭಾರತದ ಮುಂದಿನ ಪೀಳಿಗೆ ಪ್ರಾಚೀನ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ಪಡೆದರೆ ನಮ್ಮ ದೇಶ ಮತ್ತೊಮ್ಮೆ ವಿಶ್ವಗುರುವಾಗುವುದು. ಭಾರತಕ್ಕೆ ಮತ್ತೊಮ್ಮೆ ಗತವೈಭವ ಪ್ರಾಪ್ತವಾಗುವುದು. ಸನಾತನ ಸಂಸ್ಥೆಯ ೩ ಗುರುಗಳು ಅಂದರೆ ಸಚ್ಚಿದಾನಂದ ಪರಬ್ರಹ್ಮ. ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಂತಹ ಉನ್ನತ ಮಟ್ಟದ ಗುರುಗಳು ಎಲ್ಲರಿಗೂ ಸಿಗಲಿ. ಅವರಿಂದ ವಿದ್ಯೆಯನ್ನು ಕಲಿತು ಭಾರತದ ಪ್ರತಿಯೊಂದು ಊರಲ್ಲಿಯೂ ಆದಿ ಶಂಕರಾಚಾರ್ಯ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ರಮಣ ಮಹರ್ಷಿ, ಸಂತ ತುಕಾರಾಮ, ಸಂತ ಜ್ಞಾನೇಶ್ವರ, ಪುರಂದರದಾಸರು ಮತ್ತು ಕನಕದಾಸರು ಇವರಂತಹ ಜ್ಞಾನಿಗಳು ತಯಾರಾಗಲಿ.

೨ ಈ. ಹೇ  ಶ್ರೀರಾಮಚಂದ್ರ, ಸಾವಿರಾರು ವರ್ಷ ನೀನು ರಾಜ್ಯ ಆಳಿದ ಈ ಭರತವರ್ಷದ ಗತವೈಭವವನ್ನು ಅನುಭವಿಸಲು ನಮಗೆ ಸಾಧ್ಯವಾಗಲಿ.

೨ ಉ. ಹೇ ಶ್ರೀರಾಮಚಂದ್ರ, ಹನುಮಂತನಂತಹ ಅನುಗ್ರಹ ಮತ್ತು ಭಾಗ್ಯ ನಮಗೆ ಲಭಿಸಲಿ ! : ಸದಾ ನಿಮ್ಮ ಅಜ್ಞಾಪಾಲನೆಗಾಗಿ ಕಾಯುತ್ತಿದ್ದ ವೀರ ಮಾರುತಿಯು ನಿಮ್ಮ ಚರಣದ ಬಳಿಯೇ ಇರುತ್ತಿದ್ದನು. ಎಷ್ಟೇ ಕಷ್ಟದ ಸೇವೆಯಿದ್ದರೂ ತತ್ಪರತೆಯಿಂದ ಮಾಡುವ ಚಿರಂಜೀವಿ ಹನುಮಂತನು ನಿಮ್ಮ ಸೇವೆಯಲ್ಲಿಯೇ ಆನಂದ ಎಂದು ತಿಳಿಯುತ್ತಿದ್ದನು. ನಿಮ್ಮಂತಹ ದೇವದೇವತೆಗಳು ಇರುವ ಈ ದೇಶದಲ್ಲಿ ಹುಟ್ಟುವುದೇ ನಮ್ಮ ಪರಮ ಭಾಗ್ಯ. ಹೇಗೆ ಹನುಮಂತನು ತನ್ನ ಎದೆಯನ್ನು ತಾನೇ ಸೀಳಿದಾಗ, ಅಲ್ಲಿ ನಿಮ್ಮ ಮತ್ತು ಸೀತಾಮಾತೆಯ ಶಾಶ್ವತ ಸ್ಥಾನವಿರುವುದನ್ನು ತೋರಿಸಿದನೋ, ಅದರಂತೆಯೇ ಅನುಗ್ರಹ ಮತ್ತು ಭಾಗ್ಯ ನಮಗೆ ಲಭಿಸಲಿ.

ಹೇ ಸಚ್ಚಿದಾನಂದ ಪರಬ್ರಹ್ಮ ಗುರುದೇವ, ನಿಮ್ಮಲ್ಲಿ ಶ್ರೀರಾಮ ಮತ್ತು ಶ್ರೀಕೃಷ್ಣನ ಅಂಶವಿದೆ (ಸಪ್ತರ್ಷಿಗಳು ಇದನ್ನು ಪೂ. ಡಾ. ಓಂ ಉಲಗನಾಥನ್‌ರ ಮೂಲಕ ಹೇಳಿದ್ದಾರೆ.) ನಿಮ್ಮ ಕೃಪೆಯಿಂದ ಅಜ್ಞಾನಿಯಾಗಿರುವ ನನ್ನಿಂದ ನೀವೇ ಇದನ್ನು ಬರೆಸಿಕೊಂಡದ್ದಕ್ಕಾಗಿ ನಿಮ್ಮ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.’

– (ಪೂ.) ಶ್ರೀಮತಿ ರಾಧಾ ಪ್ರಭು (ಸನಾತನದ ೪೪ ನೇ ಸಮಷ್ಟಿ ಸಂತ, ೮೬ ವರ್ಷ), ಮಂಗಳೂರು, ದಕ್ಷಿಣ ಕನ್ನಡ. (೧೭.೪.೨೦೨೪, ರಾಮ ನವಮಿ)