ಮಧ್ಯಂತರ ಸರಕಾರದಿಂದ ಶೇಖ್ ಹಸೀನಾರಿಗೆ ಕರೆ
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಮಧ್ಯಂತರ ಸರಕಾರವು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಮರಳಿ ಬಾಂಗ್ಲಾದೇಶಕ್ಕೆ ಬರುವಂತೆ ಕರೆ ನೀಡಿದೆ; ಆದರೆ ದೇಶಕ್ಕೆ ಮರಳಿ ಬಂದ ಬಳಿಕ ಪ್ರಕ್ಷುಬ್ಧ ವಾತಾವರಣವನ್ನು ಸೃಷ್ಟಿಸಬಾರದೆಂದು ಸಲಹೆ ನೀಡಿದೆ. ಮಧ್ಯಂತರ ಸರಕಾರದ ಗೃಹಸಚಿವಾಲಯದ ಸಲಹೆಗಾರ, ಬ್ರಿಗೇಡಿಯರ್ ಜನರಲ್ (ನಿವೃತ್ತ) ಎಂ. ಶಖಾವತ ಹುಸೈನ ಅವರು ಶೇಖ್ ಹಸೀನಾರನ್ನು ಉದ್ದೇಶಿಸಿ, ನೀವು ಸ್ವ ಇಚ್ಛೆಯಿಂದ ಹೋಗಿದ್ದೀರಿ. ನೀವು ಪುನಃ ನಿಮ್ಮ ದೇಶಕ್ಕೆ ಮರಳಬಹುದು; ಆದರೆ ಯಾವುದೇ ಪ್ರಕ್ಷುಬ್ಧ ವಾತಾವರಣವನ್ನು ಸೃಷ್ಟಿ ಮಾಡಬೇಡಿ, ಯಾಕೆಂದರೆ ಜನರು ಮತ್ತಷ್ಟು ಉದ್ರಿಕ್ತರಾಗಬಹುದು. ನೀವು ಮರಳಿ ಬರಬಹುದು; ಆದರೆ ದೇಶವನ್ನು ಅರಾಜಕತೆಗೆ ತಳ್ಳಬೇಡಿ. ಹೊಸ ನಾಯಕರೊಂದಿಗೆ ನಿಮ್ಮ ಪಕ್ಷವನ್ನು ಪುನಃ ನಿರ್ಮಿಸಿ ಎನ್ನುವ ಸಲಹೆಯನ್ನೂ ಅವರು ನೀಡಿದ್ದಾರೆ.
ಢಾಕೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಮಹಮ್ಮದ್ ಯೂನಸ್
ಮಧ್ಯಂತರ ಸರಕಾರದ ಮುಖ್ಯಸ್ಥರಾದ ಮಹಮ್ಮದ್ ಯೂನಸ್ ಅವರು ಆಗಸ್ಟ 13ರಂದು ಬೆಳಿಗ್ಗೆ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ಢಾಕೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಅಲ್ಲಿ ಅವರು ಹಿಂದೂಗಳೊಂದಿಗೆ ಚರ್ಚೆ ನಡೆಸಿದರು. ಅದೇ ವೇಳೆ ‘ಮೈನಾರಿಟಿ ರೈಟ್ಸ ಮೂವಮೆಂಟ್’ ಸಂಘಟನೆಯ 5 ಸದಸ್ಯರ ನಿಯೋಗ ಮಹಮ್ಮದ್ ಯೂನಸ್ ಅವರನ್ನು ಭೇಟಿಯಾಗಿ 8 ಬೇಡಿಕೆಗಳ ಮನವಿಯನ್ನು ಸಲ್ಲಿಸಿತು.
ಸಂಪಾದಕೀಯ ನಿಲುವುಮರಳಿ ಬಾಂಗ್ಲಾದೇಶಕ್ಕೆ ಹೋದರೆ ಅಲ್ಲಿ ಶೇಖ್ ಹಸೀನಾ ಸುರಕ್ಷಿತವಾಗಿರುವರು ಎಂಬುದರ ಭರವಸೆಯನ್ನು ಮಧ್ಯಂತರ ಸರಕಾರ ನೀಡುವುದೇ? ಮತ್ತು ಅವರ ಮೇಲೆ ನಂಬಿಕೆ ಇಡಬಹುದೇ? |