ಬಾಂಗ್ಲಾದೇಶೀ ಹಿಂದೂಗಳ ರಕ್ಷಣೆಗಾಗಿ ಕೇಂದ್ರ ಸರಕಾರ ತಕ್ಷಣ ಧಾವಿಸಬೇಕು ! – ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಆಗ್ರಹ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ಆಕ್ರಮಣಗಳನ್ನು ಖಂಡಿಸಿ ಫ್ರೀಡಂ ಪಾರ್ಕ್ ನಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನ

ಬೆಂಗಳೂರು : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ಅಕ್ರಮಣಗಳನ್ನು ಖಂಡಿಸಿ, ಅಲ್ಲಿನ ಹಿಂದೂಗಳ ರಕ್ಷಣೆಗಾಗಿ ಆಗ್ರಹಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ವತಿಯಿಂದ ನಗರದ ಫ್ರೀಡಂ ಪಾರ್ಕ್ ನಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನವನ್ನು ಆಯೋಜಿಸಲಾಗಿತ್ತು, ಈ ಆಂದೋಲನದಲ್ಲಿ ಹಿಂದೂ ಜನಜಾಗೃತಿ ಸಮಿತಿ, ರಾಷ್ಟ್ರಧರ್ಮ ಸಂಘಟನೆ, ರಾಷ್ಟ್ರ ರಕ್ಷಣಾ ಪಡೆ, ರಾಷ್ಟ್ರೀಯ ಅಸಂಘಟಿತ ಪುರೋಹಿತ ಕಾರ್ಮಿಕ ಪರಿಷತ್, ಫೌಂಡೇಶನ್ ಇಂಡಿಯಾ, ಅಜಾದ್  ಬ್ರಿಗೇಡ್, ಶಿವಘರ್ಜನೆ ಯುವಸೇನೆ, ಸಮಸ್ತ ವಿಶ್ವಧರ್ಮ ರಕ್ಷಾ ಸೇವಾ ಸಂಸ್ಥಾನಂ ಸೇರಿದಂತೆ ಸಮಸ್ತ ಹಿಂದೂ ಸಂಘಟನೆಗಳ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಸೌ. ಭವ್ಯ ಗೌಡ ಇವರು ಮಾತನಾಡಿ, ಬಾಂಗ್ಲಾದೇಶದಲ್ಲಿ ಇತ್ತೀಚಿಗೆ ಮೀಸಲಾತಿಯಿಂದ ಪ್ರಾರಂಭವಾದ ವಿದ್ಯಾರ್ಥಿಗಳ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ ಅಲ್ಲಿನ ಪ್ರಧಾನಮಂತ್ರಿಯಾಗಿದ್ದ ಶೇಖ್ ಹಸೀನಾ ಇವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಯಿತು. ಈ ಸಂದರ್ಭದಲ್ಲಿ ಇಂದು ಇಡೀ ಬಾಂಗ್ಲಾದೇಶದಲ್ಲಿ ಅರಾಜಕತೆ ನಿರ್ಮಾಣವಾಗಿದೆ, ಸರಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಅಲ್ಲಿನ ಹಿಂದೂಗಳನ್ನು ಗುರಿಯಾಗಿಸಲಾಗುತ್ತಿದೆ. ಇಡೀ ಮನುಕುಲ ಕೇಳುಕಂಡರಿಯದ ರೀತಿಯಲ್ಲಿ ಇಸ್ಲಾಮಿಕ್ ಜಿಹಾದಿಗಳು ಭಯಾನಕವಾಗಿ ಹಿಂದೂ ವೃದ್ಧರು, ಸ್ತ್ರೀಯರು ಮಕ್ಕಳ ಮೇಲೆ ಅತ್ಯಾಚಾರ ಮಾಡಿದ್ದಾರೆ. 1971 ರಲ್ಲಿ ಬಾಂಗ್ಲಾದೇಶವು ಸ್ವಾತಂತ್ರ್ಯಗೊಂಡಾಗ ಅಲ್ಲಿನ ಮಿಲಿಟರಿ ಇಸ್ಲಾಮಿಕ್ ಆಕ್ರಮಣಕಾರರು ಲಕ್ಷಾಂತರ ಹಿಂದೂಗಳನ್ನು ಹತ್ಯೆ ಮಾಡಿದ್ದರು. 2024 ನಲ್ಲಿ ಅದೇ ರೀತಿ ಹಿಂದೂಗಳ ಮೇಲಿನ ಆಕ್ರಮಣವು ಅತ್ಯಂತ ಅಪಾಯಕಾರಿಯಾಗಿದೆ. ದುರ್ದೈವವೆಂದರೆ ಗಾಜಾ ಪಟ್ಟಿಯಲ್ಲಿ ಪ್ಯಾಲೆಸ್ತೈನ್ ನಲ್ಲಿ ಏನಾದರೂ ಘಟಿಸಿದರೆ ಅದರ ಬಗ್ಗೆ ಇಂದು ವಿಶ್ವಸಂಸ್ಥೆಯಲ್ಲಿ ಚರ್ಚಿಸಲಾಗುತ್ತದೆ, ಆದರೆ ಬಾಂಗ್ಲಾದೇಶದ ಹಿಂದೂಗಳ ಮೇಲಾಗುತ್ತಿರುವ ಆಕ್ರಮಣಗಳ ಬಗ್ಗೆ ಜಗತ್ತಿನಲ್ಲಿ ಯಾರೂ ಧ್ವನಿಯೆತ್ತುವುದಿಲ್ಲ, ಅಲ್ಪಸಂಖ್ಯಾತ ಹಿಂದೂಗಳು, ದಲಿತರ ಮೇಲೆ ದೌರ್ಜನ್ಯ ನಡೆದಿದ್ದರೂ ಸಹ ಯಾರೂ ಮಾತನಾಡಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ, ಹಾಗಾಗಿ ಕೇಂದ್ರ ಸರಕಾರವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಧಾವಿಸಬೇಕು, ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಬೇಕು, ಈ ಅಕ್ರಮಣದಲ್ಲಿ ತಮ್ಮ ಮನೆ, ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡಿರುವ ಹಿಂದೂಗಳಿಗೆ ವಸತಿಯನ್ನು ಕಲ್ಪಿಸಿ ಅವರಿಗೆ ಪರಿಹಾರವನ್ನು ಒದಗಿಸಬೇಕು, ಹಿಂದೂಗಳ ರಕ್ಷಣೆ ಮಾಡಲು ಅಲ್ಲಿನ ಮಿಲಿಟರಿಗೆ ಕಠಿಣ ಆದೇಶವನ್ನು ಹೊರಡಿಸಬೇಕು, ಬಾಂಗ್ಲಾದೇಶೀ ಹಿಂದೂಗಳ ಮೇಲಾಗಿರುವ ಅತ್ಯಾಚಾರದ ಕುರಿತು ವಿಶೇಷ ನ್ಯಾಯಾಂಗ ತನಿಖೆ ನಡೆಸಿ ಆಕ್ರಮಣಕಾರರಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಬಾಂಗ್ಲಾದೇಶೀ ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆಗಾಗಿ ವಿಶೇಷವಾದ ಹಿಂದೂ ಕಲ್ಯಾಣ ನಿಧಿಯನ್ನು ಸ್ಥಾಪಿಸಬೇಕು, ಭಾರತದಲ್ಲಿ ಅಲ್ಪಸಂಖ್ಯಾತ ಆಯೋಗವಿರುವಂತೆ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಆಯೋಗದ ಸ್ಥಾಪನೆ ಮಾಡಿ ಅಲ್ಲಿನ ಹಿಂದೂಗಳಿಗೆ ನ್ಯಾಯವನ್ನು ನೀಡಬೇಕು, ಇದಕ್ಕಾಗಿ ಭಾರತ ಸರಕಾರವು ಬಾಂಗ್ಲಾದೇಶ ಸರಕಾರದ ಮೇಲೆ ಒತ್ತಡ ಹೇರಬೇಕು ಮತ್ತು ವಿಶ್ವ ಸಂಸ್ಥೆಯಲ್ಲಿ ಈ ವಿಷಯವನ್ನು ಮಂಡನೆ ಮಾಡಿ ವಿಶ್ವ ಸಂಸ್ಥೆಯ ವಿಶೇಷ ನಿಯೋಗವು ಬಾಂಗ್ಲಾದೇಶಕ್ಕೆ ಭೇಟಿ ನೀಡಿ ಅಲ್ಲಿನ ಪೀಡಿತ ಹಿಂದೂ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಶ್ರೀ. ಸಂತೋಷ್ ಕೆಂಚಾಂಬಾ ಇವರು ಮಾತನಾಡಿ, `ಭಾರತದಲ್ಲಿರುವ ತಥಾಕಥಿತ ಸೆಕ್ಯುಲರ್ ವಾದಿಗಳು, ಬುದ್ಧಿಜೀವಿಗಳು ಟರ್ಕಿಯಲ್ಲಿ ಗಲಾಟೆಯಾದರೆ ಅದರ ವಿರುದ್ಧ ಧ್ವನಿಯೆತ್ತುತ್ತಾರೆ, ಪ್ಯಾಲಿಸ್ಟೈನ್ ನಲ್ಲಿ ಭಯೋತ್ಪಾದಕರನ್ನು ಹತ್ಯೆ ಮಾಡಿದರೆ ಧ್ವನಿಯೆತ್ತುತ್ತಾರೆ, ಆದರೆ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಾಗುತ್ತಿರುವ ಆಕ್ರಮಣಗಳ ಬಗ್ಗೆ ಯಾರೂ ತುಟಿಬಿಚ್ಚುವುದಿಲ್ಲ, ಇದು ಅವರ ಢೋಂಗಿ ಮಾನಸಿಕತೆಯನ್ನು ತೋರಿಸುತ್ತದೆ, ಡಾ. ಬಿ.ಆರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶವಿಭಜನೆಯ ಸಮಯದಲ್ಲಿ ಒಟ್ಟು ಜನಸಂಖ್ಯೆಯ ವಿನಿಮಯದ ಬಗ್ಗೆ ಹೇಳಿದ್ದರು, ಅದು ಸಾಧ್ಯವಾಗಿದ್ದರೆ ಇಂದು ಈ ನೋವನ್ನು ಅನುಭವಿಸುವ ಪರಿಸ್ಥಿತಿ ಬರುತ್ತಿರಲಿಲ್ಲ, ಪ್ರಪಂಚದಾದ್ಯಂತ ಯಹೂದಿಗಳಿಗಿಂತ ಹೆಚ್ಚು ಅತ್ಯಾಚಾರ ಹಿಂದೂಗಳ ಮೇಲಾಗಿದೆ, ಕೇಂದ್ರ ಸರಕಾರ ಕೂಡಲೇ ಎಚ್ಚೆತ್ತುಕೊಂಡು ಬಾಂಗ್ಲಾದ ಹಿಂದೂಗಳ ನೆರವಿಗೆ ಮುಂದಾಗಬೇಕು, ಮುಂದೆ ಈ ಸ್ಥಿತಿ ಭಾರತದಲ್ಲಿಯೂ ನಿರ್ಮಾಣವಾಗುವ ಸಾಧ್ಯತೆ ಇರುವುದರಿಂದ ಎಲ್ಲಾ ಹಿಂದೂಗಳು ಸಂಘಟಿತರಾಗಬೇಕು’ ಎಂದು ಕರೆ ನೀಡಿದರು.

ಈ ವೇಳೆ ರಾಷ್ಟ್ರಧರ್ಮ ಸಂಘಟನೆಯ ಶ್ರೀ. ಸಂತೋಷ್ ಕೆಂಚಾಂಬ, ರಾಷ್ಟ್ರೀಯ ಅಸಂಘಟಿತ ಪುರೋಹಿತ ಕಾರ್ಮಿಕ ಪರಿಷತ್ ನ ಕಾರ್ಯದರ್ಶಿಗಳಾದ ಡಾ. ಮಹೇಶ್ ಕುಮಾರ್ ಬಿ.ಎನ್, ರಾಷ್ಟ್ರ ರಕ್ಷಣಾ ಪಡೆಯ ಶ್ರೀ. ಪುನೀತ್ ಕೆರೆಹಳ್ಳಿ, ಹಿಂದವೀ ಜಟ್ಕಾ ಮೀಟ್ ಸಂಸ್ಥಾಪಕರಾದ ಶ್ರೀ. ಮುನೇಗೌಡ, ಅಜಾದ್  ಬ್ರಿಗೇಡ್ ನ ಶ್ರೀ. ಗಜೇಂದ್ರ ಸಿಂಗ್, ಶಿವಘರ್ಜನೆ ಯುವಸೇನೆಯ ಅಧ್ಯಕ್ಷರಾದ ಶ್ರೀ. ಪ್ರವೀಣ್ ಮಾನೆ, ಸಮಸ್ತ ವಿಶ್ವಧರ್ಮ ರಕ್ಷಾ ಸೇವಾ ಸಂಸ್ಥಾನಮ್ ನ ಯೋಗಿ ಸಂಜೀತ್ ಸುವರ್ಣ ಸೇರಿದಂತೆ 450 ಕ್ಕೂ ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು.