ಕೆನಡಾ: ಖಲಿಸ್ತಾನಿ ಚಳವಳಿಯಲ್ಲಿ ಸಕ್ರಿಯನಾಗಿದ್ಧ ಪಾಕಿಸ್ತಾನಿ ಉದ್ಯಮಿಯನ್ನು ಜೀವಂತ ಸುಡಲು ಯತ್ನ!

ಉದ್ಯಮಿಯು ಪಾಕಿಸ್ತಾನಿ ಗುಪ್ತಚರ ಸಂಸ್ಥೆ `ಐಎಸ್ಐ’ ನ ಗೂಢಾಚಾರಿ ಎಂದು ಶಂಕೆ

ಒಟ್ಟಾವಾ (ಕೆನಡಾ) – ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಗ್ ನಿಜ್ಜರ್ ಸಾವಿನ ನಂತರ, ಖಲಿಸ್ತಾನಿ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ರಾಹತ್ ರಾವ್ ಎಂಬ ಪಾಕಿಸ್ತಾನಿ ಉದ್ಯಮಿಯನ್ನು ಕೆನಡಾದಲ್ಲಿ ಜೀವಂತ ಸುಡಲು ಪ್ರಯತ್ನಿಸಲಾಗಿದೆ. ಅಪರಿಚಿತ ದಾಳಿಕೋರರು ಈ ಕೃತ್ಯವನ್ನು ಎಸಗಿದ್ದು, ಈ ದಾಳಿಯಲ್ಲಿ ರಾಹತ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ರಾಹತ್ ರಾವ್ ‘ಫಾರೆಕ್ಸ್’ (ವಿದೇಶಿ ಕರೆನ್ಸಿ) ವ್ಯವಹಾರವನ್ನು ಹೊಂದಿದ್ದಾನೆ. ಖಲಿಸ್ತಾನಿ ಚಳವಳಿಯಲ್ಲಿ ಅವನ ಬಹುದೊಡ್ಡ ಸಹಭಾಗವಿದ್ದು, ನಿಜ್ಜರ್ ಹತ್ಯೆಯ ನಂತರ ಕೆನಡಾದಲ್ಲಿ ನಡೆದ ಹಲವು ಚಳವಳಿಗಳಲ್ಲಿ ರಾವ್ ಸಕ್ರಿಯವಾಗಿ ಭಾಗವಹಿಸಿದ್ದನು. ರಾವ್ ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐನ ಗೂಢಾಚಾರಿ ಎಂದು ಹೇಳಲಾಗುತ್ತಿದೆ.

ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರನನ್ನು ಕಳೆದ ವರ್ಷ ಜೂನ್‌ನಲ್ಲಿ ಬ್ರಿಟಿಷ್ ಕೊಲಂಬಿಯಾದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಅವನ ಹತ್ಯೆಯ ಹಿಂದೆ ಭಾರತದ ಕೈವಾಡವಿದೆಯೆಂದು ಕೆನಡಾ ಆರೋಪಿಸಿತ್ತು. ಕೆಲವು ದಿನಗಳ ಹಿಂದೆ, ಅಮೇರಿಕಾ ಕೂಡ ಮತ್ತೊಬ್ಬ ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ್ ಸಿಂಗ್ ಪನ್ನು ಎಂಬವನ ಹತ್ಯೆಯ ಸಂಚಿಗಾಗಿ ಭಾರತೀಯ ಅಧಿಕಾರಿಯನ್ನು ಬಂಧಿಸಿರುವುದಾಗಿ ಹೇಳಿಕೆ ನೀಡಿತ್ತು.